ವಿಜಯಪುರ: ಸಿದ್ದರಾಮಣ್ಣನ ಆಡಳಿತದಲ್ಲಿ 3 ಸಾವಿರ ಜನ ರೈತರ ಆತ್ಮಹತ್ಯೆಯಾಗಿದೆ. ಆಗ ಅವರು ಕಣ್ಣೀರು ಹಾಕಿಲ್ಲ. ಗೋ ಹಂತಕರಿಗೆ ಸಿದ್ದರಾಮಯ್ಯ ರಕ್ಷಕರಾಗಿದ್ದರು, ಅವರೊಬ್ಬ ನರಹಂತಕ ಸಿಎಂ ಎಂದು ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ನಾಗಠಾಣದಲ್ಲಿ ಮಂಗಳವಾರ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಎಸ್‌ಡಿಪಿಐ, ಪಿಎಫ್‌ಐ ಸಂಘಟನೆಗಳಿಂದ ಭಯೋತ್ಪಾದನಾ ಚಟುವಟಿಕೆ ಪ್ರಾರಂಭವಾಗಿವೆ. ಇದಕ್ಕೆ ಕಾರಣ ಸಿದ್ದರಾಮಯ್ಯ, ಅವರ ಆಡಳಿತದಲ್ಲಿ ಜೈಲಲ್ಲಿರಬೇಕಿದ್ದ 2 ಸಾವಿರ ಮಂದಿಯನ್ನು ಬಿಡುಗಡೆ ಮಾಡಿದರು. ಮೈಸೂರಲ್ಲಿ ಶಾಸಕನಿಗೆ ಚೂರಿ ಹಾಕಿದಾಗ ಅವರನ್ನು ಬಂಧಿಸಲಿಲ್ಲ ಎಂದು ಆರೋಪಿಸಿದರು.
ಇದನ್ನೂ ಓದಿ | ಸರ್ಕಾರಿ ಶಾಲೆಯಲ್ಲಿ ಪೈಗಂಬರ್ ಪ್ರಬಂಧ ಸ್ಪರ್ಧೆ ಆಕ್ಷೇಪಿಸಿ ಶ್ರೀರಾಮ ಸೇನೆ ಮುತ್ತಿಗೆ, ಹೆಡ್ ಮಾಸ್ಟರ್‌ಗೆ ಬಿಇಒ ತರಾಟೆ
ಪಿಎಫ್‍ಐ, ಕೆಎಫ್‍ಡಿ, ಎಸ್‍ಡಿಪಿಐಗಳು ಈ ರಾಜ್ಯದಲ್ಲಿ ಆತಂಕ ಸೃಷ್ಟಿಸುತ್ತಿವೆ. ಇದು ಗಂಭೀರವಾಗಲು ಸಿದ್ದರಾಮಣ್ಣ ಕಾರಣ. ಈ ದೇಶವಿರೋಧಿ ಸಂಘಟನೆಗಳ ನಿಷೇಧ ಕುರಿತಂತೆ ಅಗತ್ಯ ದಾಖಲೆ ಸಂಗ್ರಹಿಸಲಾಗುತ್ತಿದೆ. ಪೂರಕ ದಾಖಲೆಗಳು ಸಿಕ್ಕಿದರೆ ಭವಿಷ್ಯದಲ್ಲಿ ನಿಷೇಧ ಕುರಿತು ತೀರ್ಮಾನ ಕೈಗೊಳ್ಳಲಿದೆ ಎಂದು ಹೇಳಿದರು.
ಪೇಮೆಂಟ್ ಸಿಎಂ: ತಾನು ಜೈಲಿಗೆ ಹೋಗಬಾರದೆಂದು ಲೋಕಾಯುಕ್ತವನ್ನು ಸಿದ್ದರಾಮಣ್ಣ ಮುಚ್ಚಿಹಾಕಿದ್ದರು. ಲೋಕಾಯುಕ್ತಕ್ಕೆ ಮತ್ತೆ ಶಕ್ತಿ ತುಂಬುವ ಕೆಲಸವನ್ನು ನಮ್ಮ ಸರ್ಕಾರ ಮಾಡಲಿದೆ. ಈ ರಾಜ್ಯದಲ್ಲಿ ಪೇಮೆಂಟ್ ಮುಖ್ಯಮಂತ್ರಿ ಇದ್ದರೆ ಅದು ಸಿದ್ದರಾಮಣ್ಣ ಎಂದು ಟೀಕಿಸಿದರು.
ಪೇಸಿಎಂ ಕಾಂಗ್ರೆಸ್, ಭ್ರಷ್ಟಾಚಾರದ ಇನ್ನೊಂದು ಹೆಸರು ಕಾಂಗ್ರೆಸ್: ದೇಶ ಮತ್ತು ರಾಜ್ಯವನ್ನು ಲೂಟಿ ಮಾಡಿದ್ದು ಕಾಂಗ್ರೆಸ್ ಎಂದು ಆರೋಪಿಸಿದರು. ಹಗರಣ, ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಕಾಂಗ್ರೆಸ್‍ನವರಿಗೆ ನೈತಿಕತೆ ಇಲ್ಲ. ಖರ್ಗೆ, ಪರಮೇಶ್ವರ್ ಅವರಂತಹ ಹಿರಿಯ ನಾಯಕರಿದ್ದರು. ದಲಿತ ಸಿಎಂ ವಿಚಾರ ಆಗ ಜೋರಾಗಿ ಚರ್ಚೆಯಲ್ಲಿತ್ತು. ಡಿ.ಕೆ.ಶಿವಕುಮಾರ್, ದೇಶಪಾಂಡೆ ಅವರಂತಹ ಪ್ರಮುಖರ ಮಧ್ಯೆ ಸಿದ್ದರಾಮಣ್ಣ ಮುಖ್ಯಮಂತ್ರಿ ಆಗಿದ್ದಾರೆ ಎಂದರೆ ಹಣ ಕೊಟ್ಟೇ ಆಗಿದ್ದಾರೆ. 5 ವರ್ಷ ಮೇಡಂಗೆ ಹಣ ಕೊಟ್ಟೇ ಆ ಸ್ಥಾನವನ್ನು ಉಳಿಸಿಕೊಂಡಿದ್ದಾರೆ ಎಂದು ಆಪಾದಿಸಿದರು.
ಪೇಮೆಂಟ್ ಮೂಲಕ ಸಿದ್ದರಾಮಣ್ಣ ಸೀಟು ಗಟ್ಟಿ ಮಾಡಿಕೊಂಡರು. ಪೇ ಕಾಂಗ್ರೆಸ್ ಮೇಡಂ ಎಂಬ ಅರ್ಥ ಪೇಸಿಎಂ ಎಂಬುದರಲ್ಲಿ ಅಡಗಿದೆ. ಇದನ್ನು ಬುದ್ಧಿವಂತಿಕೆಯಿಂದ ಡಿ.ಕೆ.ಶಿವಕುಮಾರ್ ‘ಪೇಸಿಎಂ’ ಮಾಡಿದ್ದಾರೆ. ಸಿದ್ದರಾಮಣ್ಣನನ್ನು ಉದ್ದೇಶಿಸಿ ಈ ಶಬ್ದ ತಂದಿದ್ದಾರೆ. ನಮ್ಮ ಬಾಯಲ್ಲಿ ಇದನ್ನು ಹೇಳಿಸಲು ಡಿ.ಕೆ.ಶಿವಕುಮಾರ್ ಇದನ್ನು ಮಾಡಿದ್ದಾರೆ ಎಂದು ವಿವರಿಸಿದರು.
ಎಷ್ಟು ಕೋಟಿ ಎಂದು ಡಿಕೆಶಿಯೇ ಹೇಳುವರು
ಸಿಎಂ ಆಗಲು ಎಷ್ಟು ಕೋಟಿ ರೂಪಾಯಿ ಕೊಟ್ಟಿರಬಹುದು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಮೇಡಂ ಚಿಲ್ಲರೆ ತೆಗೆದುಕೊಳ್ಳಲಾರರು. ದೊಡ್ಡ ಮೊತ್ತ ಕೊಟ್ಟಿರಬಹುದು ಎಂದ ಅವರು, ನೋಡೋಣ ಒಂದಲ್ಲ ಒಂದು ದಿನ ಡಿ.ಕೆ.ಶಿವಕುಮಾರ್ ಇದನ್ನು ಹೇಳುತ್ತಾರೆ. ಅವರ ಬಾಯಿಂದಲೇ ಕೇಳೋಣ, ನಮ್ಮ ಹತ್ತಿರ ಯಾಕೆ ಹೇಳಿಸುತ್ತೀರಿ ಎಂದರು.
ಸರ್ಕಾರ ಭ್ರಷ್ಟರನ್ನು ಜೈಲಿಗೆ ಕಳುಹಿಸುತ್ತಿದೆ
ಬಿಜೆಪಿ ಸರ್ಕಾರದ ನಿರ್ಧಾರಗಳಿಂದ ಎನ್‌ಐಎ ಮೂಲಕ ದೇಶ ವಿರೋಧಿ ಕೃತ್ಯ ಎಸಗುತ್ತಿರುವವರ ಬಂಧನ ಮಾಡಲಾಗುತ್ತಿದೆ. ಪಿಎಸ್‍ಐ ಹಗರಣ ಸಿದ್ದರಾಮಣ್ಣನ ಕಾಲದಲ್ಲೂ ಇತ್ತು. ಅವರು ಕ್ರಮ ಕೈಗೊಳ್ಳಲಿಲ್ಲ. ನಾವು ಎಡಿಜಿಪಿಯನ್ನು ಬಂಧಿಸಿದ್ದೇವೆ. ಶಿಕ್ಷಕರ ನೇಮಕಾತಿಯಲ್ಲೂ ಹಗರಣ ಇದ್ದರೂ ಅವರು ಏನೂ ಕ್ರಮ ತೆಗೆದುಕೊಳ್ಳಲಿಲ್ಲ. ನಾವು ಕ್ರಮ ಕೈಗೊಂಡಿದ್ದೇವೆ. ಡ್ರಗ್ ಮತ್ತು ಸ್ಯಾಂಡ್ ಮಾಫಿಯಾ ಅಡಿಯಲ್ಲೇ ಕಾಂಗ್ರೆಸ್ ಬದುಕಿತ್ತು. ಇವೆರಡು ಮಾಫಿಯಾದಿಂದ ಹಣ ಸಂಗ್ರಹಿಸಿ ಸೋನಿಯಾ ಗಾಂಧಿ ಮೇಡಂಗೆ ಕೊಟ್ಟಿದ್ದರು. ಯಡಿಯೂರಪ್ಪ, ಬೊಮ್ಮಾಯಿ ಸರ್ಕಾರ ಬಂದ ಮೇಲೆ ಡ್ರಗ್ ಮಾಫಿಯಾವನ್ನು ನಿಯಂತ್ರಿಸಲಾಯಿತು. ಪಾರದರ್ಶಕ ಮರಳು ನೀತಿಯನ್ನೂ ತರುತ್ತಿದ್ದೇವೆ. ನೀವು ಯಾವ ತನಿಖೆಯನ್ನೂ ಪಾರದರ್ಶಕವಾಗಿ ಮಾಡಲಿಲ್ಲ, ಯಾವ ಆದೇಶಗಳನ್ನೂ ಮಾಡಿಲ್ಲ. ನಮ್ಮ ಸರ್ಕಾರ ಭ್ರಷ್ಟರನ್ನು ಜೈಲಿಗೆ ಕಳುಹಿಸುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದರು.
ಇದನ್ನೂ ಓದಿ | Durga Idol | ಹೈದರಾಬಾದ್‌ನಲ್ಲಿ ದುರ್ಗಾ ಮಾತೆಯ ವಿಗ್ರಹ ಒಡೆದ ಬುರ್ಖಾಧಾರಿ ಮಹಿಳೆಯರು