ಹುಬ್ಬಳ್ಳಿ: ಸಂವಿಧಾನದಲ್ಲಿ ಎಲ್ಲ ಸಂಘಟನೆಗಳಿಗೆ ಪ್ರತಿಭಟನೆ ಮಾಡುವ ಅಧಿಕಾರವಿದೆ. ಎಲ್ಲರ ಅಜೆಂಡಾಗಳಿಗೆ ನಾವು ಮನ್ನಣೆ ನೀಡಲು ಆಗುವುದಿಲ್ಲ ಎಂದು ಶ್ರೀರಾಮಸೇನೆಯ ಧ್ವನಿವರ್ಧಕ ನಿಷೇಧ ಅಭಿಯಾನದ ಬಗ್ಗೆ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ನಗರದಲ್ಲಿ ಸೋಮವಾರ ಮಾತನಾಡಿದ ಅವರು, ಹಿಂದೂಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿದ್ದೇವೆ. ಅದಕ್ಕೆ ಬದ್ಧವಾಗಿ ದೇಶದಲ್ಲಿ ಹಲವಾರು ಕಾಯ್ದೆಗಳನ್ನು ತಂದಿದ್ದೇವೆ. ನಮ್ಮದು ಸರ್ವೇ ಜನಾಃ ಸುಖಿನೋ ಭವಂತು ಎನ್ನುವ ತತ್ವ. ಸಂವಿಧಾನಬದ್ಧವಾಗಿ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ಸಂವಿಧಾನದಲ್ಲಿ ಎಲ್ಲ ಸಂಘಟನೆಗಳಿಗೆ ಪ್ರತಿಭಟನೆ ಮಾಡುವ ಅಧಿಕಾರವಿದೆ. ಅವರ ಕೆಲಸ ಅವರು ಮಾಡಲಿ, ಆದರೆ ಎಲ್ಲರ ಅಜೆಂಡಾಗಳಿಗೆ ನಾವು ಮನ್ನಣೆ ನೀಡಲು ಆಗುವುದಿಲ್ಲ ಎಂದು ಹೇಳಿದರು.
ಇದನ್ನೂ ಓದಿ | ಮಳಲಿ ಮಸೀದಿಯ ಹಿಡಿ ಮಣ್ಣನ್ನೂ ಮುಟ್ಟಲು ಬಿಡುವುದಿಲ್ಲ: SDPI ಅಧ್ಯಕ್ಷ ಅಬ್ದುಲ್ ಮಜೀದ್
ರಾಜ್ಯದಲ್ಲಿ ನಡೆದ ಹತ್ತಾರು ಗಲಭೆಗಳ ಹಿಂದೆ ಕಾಂಗ್ರೆಸ್ ಕೈವಾಡ ಇದೆ. ಶಿವಮೊಗ್ಗ ಮತ್ತು ಹುಬ್ಬಳ್ಳಿ ಗಲಭೆಗಳ ಹಿಂದೆಯೂ ಕಾಂಗ್ರೆಸ್ ಇದ್ದು, ಬೆಂಕಿ ಹಾಕುವ ಕೆಲಸವನ್ನು ಮಾಡುತ್ತಿದೆ. ಆರ್‌ಎಸ್‌ಎಸ್ ಒಂದು ಸ್ವಯಂ ಸೇವಾ ಸಂಸ್ಥೆಯಾಗಿದ್ದು, ಅದು ದೇಶಭಕ್ತರನ್ನು ನಿರ್ಮಾಣ ಮಾಡುವ ಕೆಲಸ ಮಾಡುತ್ತಿದೆ. ಇದಕ್ಕೆ ಕೈ ಹಾಕಿದ ನೆಹರು ಹಾಗೂ ಇಂದಿರಾ ಗಾಂಧಿ ಸುಟ್ಟು ಹೋಗಿದ್ದಾರೆ. ಸಿದ್ದರಾಮಯ್ಯ ಚಡ್ಡಿಗೆ ಬೆಂಕಿ ಹಾಕಲು ಹೇಳಿದ್ದಾರೆ, ಆದರೆ ಅವರೇ ಸುಟ್ಟು ಹೋಗಲಿದ್ದಾರೆ. ಕಾಂಗ್ರೆಸ್‌ಗೆ ಹಿಂದುಗಳ ಮತ ಬೇಡ ಎನ್ನುವ ಹಂತಕ್ಕೆ ಬಂದು ನಿಂತಿದೆ. ಜೆಡಿಎಎಸ್‌ನ ಮುಸ್ಲಿಂ ಮತಗಳನ್ನು ಓಲೈಕೆ ಮಾಡಲಿಕ್ಕೆ ಸಿದ್ದರಾಮಯ್ಯ ನಿಂತಿದ್ದಾರೆ ಎಂದು ಕಿಡಿ ಕಾರಿದರು.
ಪಠ್ಯ ವಿಚಾರದ ಕುರಿತು ಪ್ರತಿಕ್ರಿಯಿಸಿದ ಕಟೀಲ್, ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ. ಪಠ್ಯ ಪುಸ್ತಕಗಳಲ್ಲಿ ತಪ್ಪುಗಳಿದ್ದರೆ ತಿದ್ದುವುದಾಗಿ ಸರ್ಕಾರ ಹೇಳಿದೆ. ಆದರೂ ಕಾಂಗ್ರೆಸ್‌ನವರು ಸುಖಾಸುಮ್ಮನೆ ವಿವಾದ ಉಂಟುಮಾಡುತ್ತಿದ್ದಾರೆ ಎಂದರು.
ಇದನ್ನೂ ಓದಿ | BBMP Election | ಬೆಂಕಿ ಬಿದ್ದ ಮೇಲೆ ಬಾವಿ ತೋಡಲು ಪ್ರಾರಂಭಿಸಿದ BJP