Site icon Vistara News

Namma Clinic: ಬಸ್‌ ನಿಲ್ದಾಣ ಸೇರಿದಂತೆ 254 ಕಡೆ ʼನಮ್ಮ ಕ್ಲಿನಿಕ್‌ʼ ಸ್ಥಾಪನೆ

Namma Clinic

ಬೆಂಗಳೂರು: ಬಸ್ ನಿಲ್ದಾಣಗಳು ಸೇರಿದಂತೆ (Namma Clinic) ಸಾರ್ವಜನಿಕ ಸ್ಥಳಗಳಲ್ಲಿ ʼನಮ್ಮ ಕ್ಲಿನಿಕ್‌ʼಗಳನ್ನು ಪ್ರಾರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಗುರುವಾರ ವಿವಿಧ ಆರೋಗ್ಯ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು, ನೂತನ ನಮ್ಮ ಕ್ಲಿನಿಕ್‌ಗಳನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಸ್ಥಳ ಗುರುತಿಸಿ 15 ದಿನಗಳ ಒಳಗಾಗಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ 503 ನಮ್ಮ ಕ್ಲಿನಿಕ್‌ಗಳನ್ನು ಸದೃಢಗೊಳಿಸುವತ್ತ ಗಮನ ಹರಿಸಬೇಕು. ಪ್ರಸಕ್ತ ಸಾಲಿನಲ್ಲಿ ಹೊಸದಾಗಿ 254 ನಮ್ಮ ಕ್ಲಿನಿಕ್‌ಗಳನ್ನು ಪ್ರಾರಂಭಿಸಲು ಅವಕಾಶವಿದ್ದು, ಸ್ಥಳ ಗುರುತಿಸುವ ಕಾರ್ಯ ಶೀಘ್ರದಲ್ಲಿ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: Glasses or Lenses?: ಕನ್ನಡಕವೋ ಕಾಂಟ್ಯಾಕ್ಟ್‌ ಲೆನ್ಸ್‌ ಬೇಕೋ? ಇದನ್ನು ಓದಿ, ನೀವೇ ನಿರ್ಧರಿಸಿ!

ಸ್ಥಳ ಗುರುತಿಸುವ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಆದ್ಯತೆ ನೀಡುವಂತೆ ತಿಳಿಸಿದ ಸಚಿವರು, ವಿಶೇಷವಾಗಿ ಜೈಲುಗಳು ಹಾಗೂ ಬಸ್ ನಿಲ್ದಾಣಗಳಲ್ಲಿ, ನಮ್ಮ ಕ್ಲಿನಿಕ್‌ಗಳನ್ನ ಆರಂಭಿಸುವ ಕುರಿತು ಸ್ಥಳ ಗುರುತಿಸುವ ಕಾರ್ಯ 15 ದಿನಗಳ ಒಳಗಾಗಿ ಪೂರ್ಣಗೊಳಿಸಿ ಕ್ಯಾಬಿನೆಟ್ ಒಪ್ಪಿಗೆ ಪಡೆಯುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವಂತೆ ಇಲಾಖೆ ಪ್ರಧಾನ ಕಾರ್ಯದರ್ಶಿ ಅನೀಲ್ ಕುಮಾರ್ ಎನ್.ಎಚ್.ಎಂ ಎಂ.ಡಿ ನವೀನ್ ಭಟ್ ಹಾಗೂ ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಅವರಿಗೆ ಸೂಚಿಸಿದರು.

15 ನೇ ಹಣಕಾಸಿನಲ್ಲಿ ಆರೋಗ್ಯ ಯೋಜನೆಗಳ ಸ್ಥಿತಿಗತಿಗಳ ಕುರಿತು ಹಿರಿಯ ಆರೋಗ್ಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಸಚಿವರು, ಯೋಜನೆಗಳ ಶೀಘ್ರ ಕಾರ್ಯಗತಗೊಳ್ಳುವ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಬೇಕಾಗಿದೆ. ವಿಳಂಬ ನೀತಿಯನ್ನು ಅನುಸರಿಸುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ: SSLC Examination 2 : 700ಕ್ಕೂ ಹೆಚ್ಚು ಕೇಂದ್ರಗಳಲ್ಲಿ ನಾಳೆಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ-2 ಶುರು

ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕಟ್ಟಡ ದುರಸ್ತಿ ಕಾರ್ಯಗಳು, ಆಸ್ಪತ್ರೆಗಳ ಮೂಲಸೌಕರ್ಯ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ 15ನೇ ಹಣಕಾಸಿನಲ್ಲಿ ಸಿಗುವ ಅನುದಾನವನ್ನು ಸಂಪೂರ್ಣವಾಗಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಇದೇ ವೇಳೆ ಆರೋಗ್ಯ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

Exit mobile version