ಬೆಂಗಳೂರು: ರಾಜಧಾನಿಯ ನಾಗವಾರ ಬಳಿ ಮೆಟ್ರೊ ಕಾಮಗಾರಿ (Namma Metro) ವೇಳೆ ಪಿಲ್ಲರ್ ರಾಡ್ ರಸ್ತೆ ಮೇಲೆ ಬಿದ್ದು ತಾಯಿ ಮತ್ತು ಮಗು ಮೃತಪಟ್ಟ ದುರಂತದ ನೆನಪು ಮಾಡುವ ಮುನ್ನವೇ ಇನ್ನೊಂದು ದುರಂತ ಸಂಭವಿಸಿದೆ. ಆದರೆ, ಈ ಬಾರಿ ಯಾವುದೇ ಸಾವು ನೋವು ಸಂಭವಿಸಿಲ್ಲ. ಮಡಿವಾಳ ಸಿಲ್ಕ್ ಬೋರ್ಡ್ ಬಳಿ ನಡೆಯುತ್ತಿರುವ ಮೆಟ್ರೊ ಕಾಮಗಾಗಿ ಸಂದರ್ಭ ಶುಕ್ರವಾರ ರಾತ್ರಿ 7 ಗಂಟೆಯ ಸುಮಾರಿಗೆ ಮೆಟ್ರೋ ಕಾಮಗಾರಿಯ ವೇಳೆ ಕ್ರೇನ್ (Crane overturns) ಒಂದು ಉರುಳಿ ಬಿದ್ದಿದೆ. ಅತಿಯಾದ ಭಾರದ ವಸ್ತು ಎತ್ತುವಾಗ ಒಂದು ಕಡೆ ಭಾರಕ್ಕೆ ಮತ್ತು ಸರಿಯಾದ ಆಧಾರವಿಲ್ಲದೆ ಅದು ಒಂದು ಕಡೆ ವಾಲಿ ಬಳಿಕ ಉರುಳಿಬಿದ್ದಿದೆ.
ಇದರಿಂದಾಗಿ ಕೋರಮಂಗಲ, ಮಡಿವಾಳ, ಬಿಟಿಎಂ, ಹೆಚ್ ಎಸ್ ಆರ್ ಲೇಔಟ್, ಎಲೆಕ್ಟ್ರಾನಿಕ್ ಸಿಟಿ ಭಾಗದಲ್ಲಿ ಫುಲ್ ಟ್ರಾಫಿಕ್ ಜಾಮ್ ಸಂಭವಿಸಿತ್ತು. ಕ್ರೇನ್ ಸರ್ವಿಸ್ ರಸ್ತೆಯ ಮೇಲೆಯೇ ಉರುಳಿಬಿದ್ದಿದೆ. ಅಷ್ಟೇ ಅಲ್ಲ. ಕ್ರೇನ್ ಪಲ್ಟಿ ಹೊಡೆದ ರಭಸಕ್ಕೆ ರಾಜಕಾಲುವೆಗೆ ಅಡ್ಡಲಾಗಿ ಹಾಕಿದ್ದ ಕಬ್ಬಿಣದ ಬೇಲಿ ನುಚ್ಚುನೂರಾಗಿದೆ.
ಕ್ರೇನ್ ಬಿದ್ದ ಸರ್ವಿಸ್ ರಸ್ತೆಯಲ್ಲಿ ಅತ್ಯಂತ ಹೆಚ್ಚು ವಾಹನ ದಟ್ಟಣೆ ಇರುತ್ತದೆ. ಒಂದು ಸೆಕೆಂಡ್‌ಗೆ ಕನಿಷ್ಠ 10 ವಾಹನಗಳು ದಾಟಿ ಹೋಗುತ್ತವೆ. ಆದರೆ, ಅದೃಷ್ಟವಶಾತ್ ಈ ಕ್ರೇನ್ ಉರುಳಿದ ಸಂದರ್ಭದಲ್ಲಿ ಯಾವುದೆ ವಾಹನಗಳು ಇರಲಿಲ್ಲ. ಒಂದು ವೇಳೆ ಎಂದಿನಂತೆ ಇರುತ್ತಿದ್ದರೆ ಕನಿಷ್ಠ 10 ಮಂದಿಗೆ ಗಂಭೀರ ಗಾಯವಾಗುವ ಅಪಾಯವಿತ್ತು ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಮೆಟ್ರೋ ಕಾಮಗಾರಿಯ ವೇಳೆ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದಿರುವುದು ಇಂಥ ದುರಂತಕ್ಕೆ ಕಾರಣ ಎನ್ನುವುದು ಸ್ಥಳೀಯರ ಆರೋಪ. ಜನರ ಜೀವದ ಜತೆ ಚೆಲ್ಲಾಟವಾಡಲಾಗುತ್ತಿದೆ ಎನ್ನುತ್ತಾರೆ ಅವರು. ಘಟನೆಯ ಬಳಿಕ ರಸ್ತೆಯಲ್ಲಿ ಬಿದ್ದಿದ್ದ ಕ್ರೇನ್‌ನ್ನು ಎತ್ತಿ ನಿಲ್ಲಿಸಲಾಗಿದೆ.
ಅಂದು ನಾಗವಾರದಲ್ಲಿ ಏನಾಗಿತ್ತು?
ಜನವರಿ 10ರಂದು ನಾಗವಾರ ಬಳಿ ಮೆಟ್ರೋ ಕಾಮಗಾರಿಯ ವೇಳೆ ಮೆಟ್ರೋ ಪಿಲ್ಲರ್ ಕುಸಿದು ಬಿದ್ದು, ಮಹಿಳೆ ಮತ್ತು ಎರಡು ವರ್ಷದ ಮಗು ಸಾವನ್ನಪ್ಪಿ ಘಟನೆ ನಡೆದಿತ್ತು. ಕಲ್ಯಾಣ್ ನಗರದಿಂದ ಹೆಚ್ಆರ್ಬಿಆರ್ ಲೇಔಟ್ಗೆ ಹೋಗುವ ರಸ್ತೆಯಲ್ಲಿ ನಿರ್ಮಿಸಲಾಗುತ್ತಿದ್ದ ಮೆಟ್ರೊ ರೈಲ್ವೆ ಪಿಲ್ಲರ್ನ ರಾಡ್ಗಳು ರಸ್ತೆ ಮೇಲೆ ಕುಸಿದು ಬಿದ್ದ ಪರಿಣಾಮ ತಾಯಿ ಹಾಗೂ ಮಗು ಸಾವನ್ನಪ್ಪಿದ್ದರು.
ಜನವರಿ 10ರಂದು ಬೆಳಗ್ಗೆ 10.30ರ ಹೊತ್ತಿಗೆ ನಾಗವಾರ ರಿಂಗ್ ರಸ್ತೆಯ ಎಚ್‌ಬಿಆರ್ ಲೇಔಟ್‌ನಲ್ಲಿ ಗದಗ ಮೂಲದ ಸಿವಿಲ್ ಎಂಜಿನಿಯರ್ ಲೋಹಿತ್ ಅವರು ತಮ್ಮ ಪತ್ನಿ ತೇಜಸ್ವಿನಿ ಮತ್ತು ಅವಳಿ ಮಕ್ಕಳೊಂದಿಗೆ ಬೈಕ್‌ನಲ್ಲಿ ಹೋಗುತ್ತಿದ್ದರು. ಪತ್ನಿಯನ್ನು ಕೆಲಸಕ್ಕೆ ಮತ್ತು ಇಬ್ಬರು ಮಕ್ಕಳನ್ನು ಡೇ ಕೇರ್‌ನಲ್ಲಿ ಬಿಡಲು ಮಾನ್ಯತಾ ಟೆಕ್ ಪಾರ್ಕ್ ಕಡೆಗೆ ತೆರಳುತ್ತಿದ್ದಾಗ ಹೆಣ್ಣೂರು ಬಳಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ದಿಢೀರನೆ ಕುಸಿದಿತ್ತು. ಬೈಕ್‌ನಲ್ಲಿ ಸಾಗುತ್ತಿದ್ದಾಗ ಮೆಟ್ರೋ ಪಿಲ್ಲರ್ ಲೋಹಿತ್ ಮತ್ತು ತೇಜಸ್ವಿನಿ ಅವರ ನಡುವೆ ಬಿದ್ದಿತ್ತು. ಇದರಿಂದ ತೇಜಸ್ವಿನಿ ಮತ್ತು ಒಂದು ಮಗು ಎರಡೂವರೆ ವರ್ಷದ ವಿಹಾನ್ ಮೃತಪಟ್ಟಿದ್ದರು. ಇನ್ನೊಂದು ಮಗು ವಿಸ್ಮಿತಾ ಮತ್ತು ಲೋಹಿತ್ ಪಾರಾಗಿದ್ದರು.
ಇದನ್ನೂ ಓದಿ: Namma Metro : ಬಗೆಹರಿದ ಸಿಗ್ನಲ್ ಸಮಸ್ಯೆ; ನೇರಳೆ ಮೆಟ್ರೋ ಸಂಚಾರ ಮಧ್ಯಾಹ್ನದ ಹೊತ್ತಿಗೆ ನಿರಾಳ!