ಬೆಂಗಳೂರು: ಈಗಾಗಲೇ ಸಂಚಾರ ನಡೆಸುತ್ತಿರುವ ನಮ್ಮ ಮೆಟ್ರೋ (Namma Metro) ವಿಸ್ತೃತ ಮಾರ್ಗವನ್ನು ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ 2 ವಿಸ್ತೃತ ಮಾರ್ಗಗಳನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ಕೆ.ಆರ್.ಪುರಂ- ಬೈಯಪ್ಪನಹಳ್ಳಿ ಮತ್ತು ಕೆಂಗೇರಿ- ಚಲ್ಲಘಟ್ಟ ಮಾರ್ಗಗಳನ್ನು ಮಧ್ಯಾಹ್ನ 12 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಅಧಿಕೃತ ಉದ್ಘಾಟನೆ ಮಾಡಲಿದ್ದಾರೆ.
ವಿಸ್ತೃ ಮಾರ್ಗ ಪೂರ್ಣವಾಗಿ ಸಜ್ಜಾಗಿದ್ದರೂ, ಪ್ರಧಾನಿಗಳಿಂದ ಅಧಿಕೃತ ಉದ್ಘಾಟನೆಯಾಗಲೆಂದು ಬಿಎಂಆರ್‌ಸಿಎಲ್ ಕಾಯುತ್ತಿತ್ತು. ಇದರಿಂದ ಉಂಟಾದ ವಿಳಂಬದಿಂದ ಪ್ರಯಾಣಿಕರು ಅಸಮಾಧಾನಗೊಂಡಿದ್ದರು. ವಿಸ್ತೃತ ಮಾರ್ಗ ಕಾರ್ಯಾರಂಭ ಮಾಡುವಂತೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರಯಾಣಿಕರ ಆಕ್ರೋಶದ ಬೆನ್ನಲ್ಲೇ ಅ.9ರಂದು ವಿಸ್ತೃತ ಮಾರ್ಗದಲ್ಲಿ ಸಂಚಾರ ಆರಂಭವಾಗಿದೆ.
ಕೇಂದ್ರ ಸರ್ಕಾರದ ಅನುಮತಿ ಹಿನ್ನೆಲೆಯಲ್ಲಿ ಯಾವುದೇ ಅಧಿಕೃತ ಕಾರ್ಯಕ್ರಮವಿಲ್ಲದೆ ಬಿಎಂಆರ್‌ಸಿಎಲ್ ಸಂಚಾರ ಆರಂಭಿಸಿತ್ತು. ಸದ್ಯ ಈ 2 ಮಾರ್ಗಗಳನ್ನು ಪ್ರಧಾನಿ ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ. ವರ್ಚುವಲ್ ಆಗಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಕೂಡ ಭಾಗಿಯಾಗಲಿದ್ದಾರೆ.
ನಮ್ಮ ಮೆಟ್ರೋ ವಿಸ್ತೃತ ನೇರಳೆ ಮಾರ್ಗ ಚಲ್ಲಘಟ್ಟದಿಂದ ವೈಟ್‌ಫೀಲ್ಡ್‌ವರೆಗೆ ವಿಸ್ತರಿತಗೊಂಡಿದ್ದು, ಪ್ರಯಾಣಿಕರ ಉತ್ತಮ ಸ್ಪಂದನ ವ್ಯಕ್ತವಾಗಿದೆ. ಐಟಿ ಉದ್ಯೋಗಿಗಳಿಗೆ, ವಿದ್ಯಾರ್ಥಿಗಳಿಗೆ ಇದರಿಂದ ಹೆಚ್ಚಿನ ಸಂತಸವಾಗಿದೆ. ವೈಟ್‌ಫೀಲ್ಡ್‌ನಲ್ಲಿರುವ ನೂರಾರು ಐಟಿ ಕಂಪನಿಗಳ ಉದ್ಯೋಗಿಗಳು ರಾಜಧಾನಿಯ ಬೇರೆಬೇರೆಡೆಯಿಂದ ಮೆಟ್ರೋ ಮೂಲಕ ಆಗಮಿಸಲು ನೇರಳೆ ಮಾರ್ಗ ಅವಕಾಶ ಕಲ್ಪಿಸಿಕೊಟ್ಟಿದೆ. ಹಾಗೆಯೇ ಚಲ್ಲಘಟ್ಟ ಸಮೀಪವೇ ಇರುವ RR ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ವಿಧ್ಯಾರ್ಥಿಗಳು, ಸಿಬ್ಬಂದಿ, ರೋಗಿಗಳಿಗೂ ಇದರಿಂದ ಹೆಚ್ಚು ಪ್ರಯೋಜನವಾಗಿದೆ.
ನೇರಳೆ ಮಾರ್ಗದಲ್ಲಿ ಬಾಕಿ ಉಳಿದಿದ್ದ ಕೆಂಗೇರಿ- ಚಲ್ಲಘಟ್ಟ (2.10 ಕಿ.ಮೀ.) ಹಾಗೂ ಬೈಯಪ್ಪನಹಳ್ಳಿ- ಕೆ.ಆರ್.ಪುರ (2.10 ಕಿ.ಮೀ.) ಮಾರ್ಗಗಳನ್ನು ಸಂಪೂರ್ಣಗೊಳಿಸಲಾಗಿದೆ. ಈ ವಿಸ್ತರಿತ ಮಾರ್ಗ ಒಂದು ದಿಕ್ಕಿನಿಂದ ಮತ್ತೊಂದು ದಿಕ್ಕಿಗೆ 43.5 ಕಿ.ಮೀ ಇದ್ದು, ಒಟ್ಟು ಪ್ರಯಾಣದ ಅವಧಿ 1 ಗಂಟೆ 40 ನಿಮಿಷ. ಈ ಮಾರ್ಗ ಒಟ್ಟು 37 ನಿಲ್ದಾಣಗಳನ್ನು ಒಳಗೊಂಡಿದ್ದು, ಚಲ್ಲಘಟ್ಟದಿಂದ ವೈಟ್‌ಫೀಲ್ಡ್‌ಗೆ 60 ರೂ. ಟಿಕೆಟ್ ದರ ನಿಗದಿಯಾಗಿದೆ. ಇದೀಗ ನಮ್ಮ ಮೆಟ್ರೋ ಜಾಲ ಒಟ್ಟು 73.81 ಕಿ.ಮೀ.ಗೆ ವಿಸ್ತರಣೆಯಾಗಿದೆ.
ಇದನ್ನೂ ಓದಿ: Namma Metro : ಚಾಲಕನಿಲ್ಲದೆ ಈ ಮಾರ್ಗದಲ್ಲಿ ನಮ್ಮ ಮೆಟ್ರೊ ಓಡಾಟ!; ಪ್ರಾಯೋಗಿಕ ಪರೀಕ್ಷೆ ಹೇಗಿತ್ತು ನೋಡಿ..