ಧಾರವಾಡ: ಬೆಂಗಳೂರಿನ ನಾಗವಾರದಲ್ಲಿ ಮೆಟ್ರೋ ಕಾಮಗಾರಿಯ ವೇಳೆ ಪಿಲ್ಲರ್ ಕುಸಿತದ ಅವಘಡದಿಂದಾಗಿ ಮೃತಪಟ್ಟ ಮಹಿಳೆ ಹಾಗೂ ಮಗುವಿನ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ತಲಾ 10 ಲಕ್ಷ ರೂ. ಪರಿಹಾರವನ್ನು ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. ಇದು ಬಿಎಂಆರ್‌ಸಿಎಲ್ ಈಗಾಗಲೇ ಘೋಷಿಸಿರುವ ತಲಾ ೧೦ ಲಕ್ಷ ರೂ. ಪರಿಹಾರದ ಜತೆಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ನೀಡುವ ಹೆಚ್ಚುವರಿ ಪರಿಹಾರವಾಗಿರುತ್ತದೆ.
ಅವರು ಧಾರವಾಡದ ಪ್ರವಾಸಿ ಮಂದಿರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 12ರಂದು ಹುಬ್ಬಳ್ಳಿಗೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿ ನಂತರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.
ಬೆಂಗಳೂರಿನಲ್ಲಿ ಮೆಟ್ರೋ ಕಾಮಗಾರಿಯ ಪಿಲ್ಲರ್ ಕುಸಿತದಿಂದಾದ ಅವಘಡದ ಬಗ್ಗೆ ಪ್ರತಿಕ್ರಿಯೆ ನೀಡಿ, ಘಟನೆಯ ಸಂಪೂರ್ಣ ಮಾಹಿತಿಯನ್ನು ಪಡೆಯಲಾಗುತ್ತಿದೆ. ಇದು ಅತ್ಯಂತ ದುರದೃಷ್ಟಕರ ಸಂಗತಿ. ಕಾಮಗಾರಿಯ ಗುತ್ತಿಗೆದಾರರು, ಅವಘಡಕ್ಕೆ ಕಾರಣ ತಿಳಿಯಲು ತನಿಖೆಯನ್ನು ನಡೆಸಲು ಈಗಾಗಲೇ ಸೂಚನೆ ನೀಡಲಾಗಿದೆ. ಮೆಟ್ರೋ ಸಂಸ್ಥೆಯಿಂದ ಮೃತಪಟ್ಟವರಿಗೆ ಪರಿಹಾರ ದೊರೆಯಲಿದೆ ಎಂದರು.
ಮೆಟ್ರೋ ಪಿಲ್ಲರ್ ಕುಸಿತದ ಅವಘಡಕ್ಕೆ ಸರ್ಕಾರದ 40 % ಕಮೀಷನ್ ಕಾರಣವೆಂದು ಹೇಳಿಕೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ಉತ್ತರಿಸಿ, ಕಾಮಾಲೆ ಕಣ್ಣಿನಿಂದ ಎಲ್ಲವನ್ನೂ ನೋಡಲಾಗುತ್ತಿದೆ ಎಂದರು.
ನಾಗವಾರದಲ್ಲಿ ನಡೆದ ಘಟನೆ ಇದು
ಮೂಲತಃ ಗದಗ ನಿವಾಸಿಗಳಾದ ಲೋಹಿತ್, ತೇಜಸ್ವಿನಿ (೨೮) ದಂಪತಿಗೆ ಅವಳಿ ಜವಳಿ ಮಕ್ಕಳಿದ್ದು, ಕಳೆದ 10 ವರ್ಷಗಳಿಂದ ಬೆಂಗಳೂರಿನ ಕಲ್ಕೆರೆಯ ಡಿಎಕ್ಸ್ ಮ್ಯಾಕ್ಸ್ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದಾರೆ. ಮಾನ್ಯತಾ ಟೆಕ್ ಪಾರ್ಕ್‌ನಲ್ಲಿರುವ ಮೋಟರೋಲಾದಲ್ಲಿ ಎಂಜಿನಿಯರ್ ಆಗಿರುವ ತೇಜಸ್ವಿನಿ ಅವರನ್ನು ಪತಿ ಲೋಹಿತ್ ಎಂದಿನಂತೆ ಕಚೇರಿಗೆ ಬಿಟ್ಟು ಇಬ್ಬರು ಮಕ್ಕಳನ್ನು ಬೇಬಿ ಸಿಟ್ಟಿಂಗ್ ಬಿಡಲು ತೆರಳುತ್ತಿದ್ದರು. ಆದರೆ ಯಮಸ್ವರೂಪಿಯಾಗಿ ಕಾದು ನಿಂತಿದ್ದ ನಾಗವಾರದ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್‌ಗಳು ಏಕಾಏಕಿ ಮರಕ್ಕೆ ಉರುಳಿ, ಆ ಮರವು ಬೈಕ್‌ನಲ್ಲಿ ಬರುತ್ತಿದ್ದ ತೇಜಸ್ವಿನಿಯ ತಲೆ ಮೇಲೆ ಹಾಗೂ ಎರಡೂವರೆ ವರ್ಷದ ವಿಹಾನ್‌ನ ಬಲಭಾಗದ ಮೇಲೆ ಬಿದ್ದಿದೆ.
ಇದನ್ನೂ ಓದಿ | Namma Metro Pillar | ಮೆಟ್ರೋ ಪಿಲ್ಲರ್ ರೂಪದಲ್ಲಿ ಕಾದು ಕುಳಿತಿತ್ತು ಮೃತ್ಯು; ಛಿದ್ರವಾಯಿತು ಸುಂದರ ಸಂಸಾರ