Site icon Vistara News

Namma Metro : ನೀವು ನಂಬ್ತೀರಾ? ಇನ್ನು ಸ್ವಲ್ಪ ದಿನ ಹೋದ್ರೆ ಚಾಲಕನಿಲ್ಲದೆಯೇ ಓಡುತ್ತಂತೆ ನಮ್ಮ ಮೆಟ್ರೊ!

Namma Metro Driverless train

ಬೆಂಗಳೂರು: ಇನ್ನು ಕೆಲವೇ ತಿಂಗಳಲ್ಲಿ ಚಾಲಕನಿಲ್ಲದೆಯೇ ಓಡುವ ಟೆಸ್ಲಾ ಕಾರು ಬೆಂಗಳೂರಿಗೂ ಬರುತ್ತಂತೆ ಅಂತ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ. ಅದರ ನಡುವೆ, ಇನ್ನೇನು ಕೆಲವೇ ತಿಂಗಳಲ್ಲಿ ಬೆಂಗಳೂರಿನ ಹೆಮ್ಮೆಯ (Pride of Bangalore) ನಮ್ಮ ಮೆಟ್ರೊ (Namma Metro) ಚಾಲಕನಿಲ್ಲದೆಯೇ (Driverless metro in Bangalore) ಓಡಲಿದೆಯಂತೆ!

ಬಿಎಂಆರ್‌ಸಿಎಲ್‌ (BMRCL) ನಿರ್ವಹಣೆಯ ನಮ್ಮ ಮೆಟ್ರೋ ರೈಲು ಸೇವೆಯಲ್ಲಿ (Namma Metro Train Service) ಶೀಘ್ರವೇ ಬಹುದೊಡ್ಡ ಬದಲಾವಣೆ ಆಗಲಿದ್ದು, ಚಾಲಕರಹಿತ ಮೆಟ್ರೋ ರೈಲು ಸಂಚಾರ 2023ರ ಕೊನೆಯಲ್ಲಿ ಆರಂಭವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದಕ್ಕೆ ಬೇಕಾದ ಎಲ್ಲ ಸಿದ್ಧತೆಗಳು ಪೂರ್ಣವಾಗಿವೆ!

ನಮ್ಮ ಮೆಟ್ರೋ ವೈಭವದ ಓಟ

ಚಾಲಕರಹಿತ ಮೆಟ್ರೋ ಸೇವೆ ದೇಶಕ್ಕೇನೂ ಹೊಸದಲ್ಲ. 2020ರ ಜನವರಿಯಿಂದಲೇ ದಿಲ್ಲಿಯಲ್ಲಿ ಚಾಲಕ ರಹಿತ ಮೆಟ್ರೋ ಓಡುತ್ತಿದೆ. ಅದಾದ ಬಳಿಕ ಮುಂಬಯಿಯಲ್ಲಿ ಈ ಯೋಜನೆ ಬಂತು. ಆಗಸ್ಟ್‌ನಲ್ಲಿ ಚೆನ್ನೈ ಮೆಟ್ರೋ ರೈಲು ಡ್ರೈವರ್‌ ಲೆಸ್‌ ಆಗಲಿದೆ. ಅದಾದ ಬಳಿಕ ವರ್ಷದ ಕೊನೆಗೆ ಬೆಂಗಳೂರಿನಲ್ಲೂ ಚಾಲಕನೇ ಇಲ್ಲದೆ ಮೆಟ್ರೋ ಓಡಲಿದೆ.

ಹಾಗಿದ್ದರೆ ಯಾವ ಮಾರ್ಗದಲ್ಲಿ ಡ್ರೈವರ್‌ ಇಲ್ಲದ ರೈಲು ಓಡುತ್ತೆ?

ಹಾಗಿದ್ದರೆ ಯಾವ ಮೆಟ್ರೋ ಮಾರ್ಗದಲ್ಲಿ ಚಾಲಕನಿಲ್ಲದೆ ರೈಲು ಓಡುತ್ತೆ ಅಂತ ನಿಮ್ಮ ಪ್ರಶ್ನೆಯಾಗಿರಬಹುದು. ರೇಷ್ಮೆ ಸಂಸ್ಥೆಯಿಂದ ನಾಗಸಂದ್ರದವರೆಗಿನ ಹಸಿರು ಪಥದಲ್ಲೋ, ಬೈಯಪ್ಪನ ಹಳ್ಳಿಯಿಂದ ಕೆಂಗೇರಿ ನಡುವೆ ಓಡಾಡುವ ನೇರಳೆ ಮಾರ್ಗದಲ್ಲೋ? ನಿಜವೆಂದರೆ, ಇವೆರಡೂ ಅಲ್ಲ! ಈ ಹೊಸ ಸಾಹಸ ಶುರುವಾಗಲಿರುವುದು ಹಳದಿ ಮಾರ್ಗದಲ್ಲಿ (Yellow line) ! ಹೌದು, ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರವರೆಗಿನ (RV Road to Bommasandra) 19 ಕಿ.ಮೀ. ಉದ್ದ ಎಲಿವೇಟೆಡ್‌ ಕಾರಿಡಾರ್‌ ಈ ವರ್ಷದ ಕೊನೆಯಲ್ಲಿ ಕಾರ್ಯಾಚರಣೆ ಶುರು ಮಾಡಲಿದ್ದು, ಅದು ಡ್ರೈವರ್‌ಲೆಸ್‌ ಕೂಡಾ ಆಗಿರಲಿದೆ.

ಇದು ಹಳದಿ ಮಾರ್ಗದಲ್ಲಿ ಓಡಲಿರುವ ರೈಲಿನ ಮಾದರಿ

ಗಮನಿಸಿ ಹಳದಿ ಮಾರ್ಗ ಅಂದರೆ ಇದು

ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರಕ್ಕೆ ಸಂಪರ್ಕ ಕಲ್ಪಿಸುವ 19 ಕಿ.ಮೀ. ಉದ್ದದ ಸಂಪೂರ್ಣ ಎಲಿವೇಟೆಡ್‌ ಕಾರಿಡಾರ್‌ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಅದನ್ನು ಈ ವರ್ಷದ ಅಂತ್ಯದೊಳಗೆ ಪೂರ್ಣಗೊಳಿಸುವ ಗುರಿ ಇದೆ.

ಆರ್‌ವಿ ರೋಡ್‌ನಿಂದ ಬೊಮ್ಮಸಂದ್ರದವರೆಗೆ 16 ಸ್ಟೇಷನ್‌ಗಳು ಬರುತ್ತವೆ. ಅವುಗಳೆಂದರೆ, 1. ಆರ್‌ ವಿ ರೋಡ್‌. 2. ರಾಗಿಗುಡ್ಡ, 3. ಜಯದೇವ ಆಸ್ಪತ್ರೆ, 4. ಬಿಟಿಎಂ ಬಡಾವಣೆ 5. ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌, 6. ಬೊಮ್ಮನಹಳ್ಳಿ, 7. ಹೊಂಗಸಂದ್ರ, 8. ಕೂಡ್ಲು ಗೇಟ್‌, 9. ಸಿಂಗಸಂದ್ರ, 10. ನ್ಯೂ ರೋಡ್‌, 11. ಬೆರಟೇನ ಅಗ್ರಹಾರ. 12. ಕೋನಪ್ಪನ ಅಗ್ರಹಾರ. 13. ಎಲೆಕ್ಟ್ರಾನಿಕ್‌ ಸಿಟಿ, 14. ಹುಸ್ಕೂರು ರಸ್ತೆ, 15. ಹೆಬ್ಬಗೋಡಿ, 16. ಬೊಮ್ಮಸಂದ್ರ.

ಹಳದಿ ಮಾರ್ಗದ ರೈಲಿನ ಒಳಭಾಗ

ಹಸಿರು ಲೈನ್‌ನಲ್ಲಿ ಬರುವ ಜಯನಗರ ಮತ್ತು ಬನಶಂಕರಿ ನಡುವಿನ ಆರ್‌ವಿ ರೋಡ್‌ ನಿಲ್ದಾಣ ಹಳದಿ ಲೈನ್‌ ಸ್ಟಾರ್ಟಿಂಗ್‌ ಪಾಯಿಂಟ್‌ ಆಗಿರಲಿದೆ. ಅಂದರೆ ಇದು ಕೂಡಾ ಮುಂದೆ ಮೆಜೆಸ್ಟಿಕ್‌ ಮಾದರಿಯಲ್ಲೇ ಲೈನ್‌ ಚೇಂಜಿಂಗ್‌ ಸ್ಟೇಷನ್‌ ಆಗಲಿದೆ. 2026ರಲ್ಲಿ ಆರಂಭವಾಗಲಿರುವ ನೀಲಿ ಮಾರ್ಗಕ್ಕೆ ಸಿಲ್ಕ್‌ ಬೋರ್ಡ್‌ ನಿಲ್ದಾಣ ಸ್ಟಾರ್ಟಿಂಗ್‌ ಪಾಯಿಂಟ್‌.

ಹಳದಿ ಲೈನ್‌ನ ನಿರ್ಮಾಣ ಹಂತದ ಕಾಮಗಾರಿಯ ಚಿತ್ರಗಳು

ಈಗಾಗಲೇ ಸಿಬಿಟಿಸಿ ಸಿಗ್ನಲ್‌ ವ್ಯವಸ್ಥೆ

ಚಾಲಕರಹಿತ ಮೆಟ್ರೋ ರೈಲು ಓಡಾಟಕ್ಕೆ ಸಂವಹನ ಆಧಾರಿತ ರೈಲು ನಿಯಂತ್ರಣ (Communication based train controlling- CBTC) ಸಿಗ್ನಲಿಂಗ್‌ ವ್ಯವಸ್ಥೆ ಬೇಕಾಗುತ್ತದೆ. ಹಳದಿ ಮಾರ್ಗದಲ್ಲಿ ಈಗಾಗಲೇ ಈ ತಂತ್ರಜ್ಞಾನವನ್ನು ಅಳವಡಿಸಲಾಗುತ್ತಿದೆ. ರೈಲುಗಳು ಸ್ವಯಂಚಾಲಿತವಾಗಿ ಚಲಿಸಲು ಸಹಾಯ ಮಾಡುವ ಈ ಸಿಬಿಟಿಸಿ ತಂತ್ರಜ್ಞಾನವನ್ನು ಸೀಮೆನ್ಸ್‌ ಕಂಪನಿ ಒದಗಿಸುತ್ತಿದೆ.

ಸ್ವಲ್ಪ ದಿನ ಒಬ್ಬ ಅಟೆಂಡರ್‌ ಇರುತ್ತಾರೆ

ಚಾಲಕರಹಿತ ರೈಲನ್ನು ಕೇಂದ್ರೀಯ ನಿಯಂತ್ರಣ ವ್ಯವಸ್ಥೆಯಿಂದಲೇ ನಿರ್ವಹಿಸಲಾಗುತ್ತದೆ. ಒಮ್ಮೆ ಈ ವ್ಯವಸ್ಥೆ ಜಾರಿಗೆ ಬಂದರೆ ಚಾಲಕನ ಅವಶ್ಯಕತೆಯೇ ಇರುವುದಿಲ್ಲ. ಹಾಗಂತ ಆರಂಭದ ಹಂತದಲ್ಲಿ ಏನಾದರೂ ತಾಂತ್ರಿಕ ಸಮಸ್ಯೆ ಎದುರಾದರೆ ಎಂಬ ಕಾರಣಕ್ಕೆ ಒಬ್ಬ ಸಹಾಯಕನನ್ನು ನೇಮಿಸಲಾಗುತ್ತದೆ. ತುರ್ತು ಸಂದರ್ಭ ಬಂದಾಗ ಅವರು ಕಾರ್ಯಾಚರಿಸುತ್ತಾರೆ. ಒಂದು ಲೇನ್‌ ಮೂರು ವರ್ಷಗಳ ಕಾಲ ಯಾವುದೇ ಸಮಸ್ಯೆ ಇಲ್ಲದೆ ಕಾರ್ಯಾಚರಿಸಿದರೆ ಬಳಿಕ ಅಟೆಂಡರ್‌ ಕೂಡಾ ಇರುವುದಿಲ್ಲ.

ಅಂದ ಹಾಗೆ, ಈಗ ಕಾರ್ಯಾಚರಿಸುತ್ತಿರುವ ಹಸಿರು ಮತ್ತು ನೇರಳೆ ಮಾರ್ಗವನ್ನೂ ಸಿಬಿಟಿಸಿ ಯೋಜನೆಗೆ ಏರಿಸಲು ಬಿಎಂಆರ್‌ಸಿಎಲ್‌ ಪ್ಲ್ಯಾನ್‌ ಸಿದ್ಧಗೊಳಿಸುತ್ತಿದೆ.

ಇದನ್ನೂ ಓದಿ: Namma Metro | ನಮ್ಮ ಮೆಟ್ರೊ 2025ರ ಜೂನ್‌ ವೇಳೆಗೆ 175 ಕಿ.ಮೀ.ಗೆ ವಿಸ್ತರಣೆ

Exit mobile version