ಬೆಂಗಳೂರು: ತಿರುಪತಿಯ ಪ್ರಖ್ಯಾತ ತಿರುಮಲ ದೇವಸ್ಥಾನದಲ್ಲಿ (Tirupati Temple) ನೀಡುವ ಬಹುಜನಪ್ರಿಯ ಮತ್ತು ಬಲುರುಚಿಕರವಾದ ಲಡ್ಡಿನಲ್ಲಿ (Tirupati Laddu) ಇನ್ನು ಮುಂದೆ ತುಪ್ಪ ಇರುವುದಿಲ್ಲ ಎಂಬ ಸುದ್ದಿಯನ್ನು ಹಿಡಿದುಕೊಂಡು ಕಾಂಗ್ರೆಸ್ ಮತ್ತು ಬಿಜೆಪಿ (Congress and BJP Fighting) ಆರೋಪ ಪ್ರತ್ಯಾರೋಪ ಮುಂದುವರಿದಿದೆ. ನಂದಿನಿ ತುಪ್ಪದ ಬೆಲೆ ಹೆಚ್ಚಾಗಿದೆ ಎಂಬ ಕಾರಣಕ್ಕೆ ಈ ಬಾರಿಯ ಬಿಡ್‌ನಲ್ಲಿ ತಿರುಪತಿ ದೇವಸ್ಥಾನ ರಾಜ್ಯದ ತುಪ್ಪವನ್ನು (Nandini Ghee) ಖರೀದಿ ಮಾಡಿಲ್ಲ. ಇದನ್ನೇ ಮುಂದಿಟ್ಟುಕೊಂಡು ಬಿಜೆಪಿ ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದೆ. ಆದರೆ, ತುಪ್ಪ ಖರೀದಿ ಒಪ್ಪಂದ ಮುರಿದುಬಿದ್ದಿದ್ದು ಈಗ ಅಲ್ಲ. ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲೇ ಎನ್ನುವುದು ಕಾಂಗ್ರೆಸ್‌ನ ಪ್ರತ್ಯಾರೋಪ.
ಬಿಜೆಪಿ ಹೇಳುವುದೇನು?
ತಿರುಪತಿ ಲಡ್ಡಿಗೆ ತುಪ್ಪ ಪೂರೈಕೆ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಅಸಮರ್ಥವಾಗಿದೆ ಎಂದು ಬಿಜೆಪಿ ನಾಯಕ ಸಿ.ಟಿ. ರವಿ ಹೇಳಿದ್ದಾರೆ. ಮಾಜಿ ಡಿಸಿಎಂ ಗೋವಿಂದ ಕಾರಜೋಳ ಅವರು ಕಾಂಗ್ರೆಸ್ ಸರ್ಕಾರ ದರ ಹೆಚ್ಚಳ ಮಾಡಿದ್ದರಿಂದ ತುಪ್ಪ ತಿರಸ್ಕಾರವಾಗಿದೆ ಎಂದಿದ್ದಾರೆ.
ʻʻತಿರುಪತಿಗೆ ಕೆಎಂಎಫ್ 13 ಲಕ್ಷ ಕೆ.ಜಿ. ಸರಬರಾಜು ಮಾಡುತ್ತಿತ್ತು ತುಪ್ಪದ ದರ ಹೆಚ್ಚಳ ಆಗಿದ್ದರಿಂದ ಟಿಟಿಡಿ ತಿರಸ್ಕಾರ ಮಾಡಿದೆ. ದೊಡ್ಡ ಪ್ರಮಾಣದ ಖರೀದಿದಾರರು ಕಡಿಮೆ ದರಕ್ಕೆ ಕೇಳುತ್ತಾರೆ ಎನ್ನುವುದು ಸಹಜ. ಆದರೆ ದರ ಹೆಚ್ಚು ಮಾಡಿದ್ದರಿಂದ ತಿರಸ್ಕಾರ ಆಗಿದೆ. ಈ ಸರ್ಕಾರ ಎಲ್ಲ ವರ್ಗಗಳಿಗೂ ಅನ್ಯಾಯ ಮಾಡುತ್ತಿದೆ. ಈ ಬಗ್ಗೆ ಬಿಜೆಪಿ ಎಸ್‌ಸಿ ಎಸ್‌ಟಿ ಮೋರ್ಚಾದಿಂದ ಹೋರಾಟ ಮಾಡುತ್ತೇವೆʼʼ ಎಂದು ಮಾಜಿ ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ದಾರೆ.
ತಿರುಪತಿ ತಿಮ್ಮಪ್ಪ ಲಡ್ಡು ತಯಾರಿಕೆಗೆ ಹಿಂದಿನ ಬೆಲೆಗೆ ತುಪ್ಪ ಕೊಡಲು ಸಾಧ್ಯವಿಲ್ಲ ಎಂಬ ಕೆಎಂಎಫ್ ಅಧ್ಯಕ್ಷ ಭೀಮಣ್ಣ ನಾಯ್ಕ ಅವರ ಹೇಳಿಕೆಯನ್ನು ಮಾಜಿ ಸಚಿವ ಸಿ.ಟಿ ರವಿ ಖಂಡಿಸಿದರು.
ʻʻವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ನಂದಿನಿ ವಿಷಯವನ್ನು ನಾಚಿಕೆಯಿಲ್ಲದೆ ರಾಜಕೀಯ ಮಾಡಿ ಅಮುಲ್‌ಗೆ ದೂಷಿಸಲು ಮುಂದಾಗಿತ್ತು. ಅಧಿಕಾರಕ್ಕೆ ಬಂದ ನಂತರ, ಕಾಂಗ್ರೆಸ್ ಸರ್ಕಾರವು ಹಾಲಿನ ದರವನ್ನು ಹೆಚ್ಚಿಸಿತು. ಅಸಮರ್ಥ ಕಾಂಗ್ರೆಸ್ ಸರ್ಕಾರಕ್ಕೆ ಧನ್ಯವಾದಗಳು. ನಂದಿನಿ ಇನ್ನು ಮುಂದೆ ಪ್ರಸಿದ್ಧ ತಿರುಪತಿ ಲಡ್ಡುಗಳನ್ನು ತಯಾರಿಸಲು ತುಪ್ಪವನ್ನು ಪೂರೈಸುವುದಿಲ್ಲ.. ಕಾಂಗ್ರೆಸ್ ತನ್ನ ಅಜೆಂಡಾವನ್ನು ಅನುಸರಿಸಲು ಸುವರ್ಣ ಕರ್ನಾಟಕವನ್ನು ನಾಶಮಾಡಲು ಹವಣಿಸುತ್ತಿದೆʼʼ ಎಂದು ಸಿ.ಟಿ ರವಿ ಟ್ವೀಟ್ ಮಾಡಿದ್ದಾರೆ.
ಬಿಜೆಪಿ ಸರ್ಕಾರದ ಅವಧಿಯಲ್ಲೇ ತುಪ್ಪ ಪೂರೈಕೆ ಸ್ಥಗಿತ ಎಂದ ಸಿದ್ದರಾಮಯ್ಯ
ತಿರುಪತಿಗೆ ತುಪ್ಪ ಪೂರೈಸುವ ವಿಚಾರದಲ್ಲಿ ಸರ್ಕಾರದ ವಿರುದ್ಧ ಮುಗಿಬಿದ್ದಿರುವ ಬಿಜೆಪಿ ನಾಯಕರಿಗೆ ಸಿಎಂ ಸಿದ್ದರಾಮಯ್ಯ ಟ್ವೀಟ್ ಮೂಲಕ ತಿರುಗೇಟು ನೀಡಿರುವ ಸಿಎಂ ಅವರು ಇದು ಬಿಜೆಪಿ ಸರ್ಕಾರದ ಕಾಲದಲ್ಲೇ ಸ್ಥಗಿತಗೊಂಡಿದ್ದು ಎಂದಿದ್ದಾರೆ
ʻʻಆಂಧ್ರಪ್ರದೇಶದ ತಿರುಪತಿಗೆ ನಂದಿನಿ ತುಪ್ಪ ಪೂರೈಕೆ ಸ್ಥಗಿತಗೊಂಡಿರುವುದು ಇಂದು, ನಿನ್ನೆಯ ವಿಚಾರವಲ್ಲ. ಕಳೆದ ಒಂದೂವರೆ ವರ್ಷದ ಹಿಂದೆಯೇ ಬಿಜೆಪಿ ಸರ್ಕಾರದ ಅವಧಿಯಲ್ಲಿ ತಿರುಪತಿಗೆ ತುಪ್ಪ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ. ಮಾನ್ಯ ಸಂಸದ Nalin Kumar Kateel ಅವರೇ ಈಗ ಹೇಳಿ, ಹಿಂದೆ ಅಧಿಕಾರದಲ್ಲಿದ್ದ BJP Karnataka ಸರ್ಕಾರ ಹಿಂದೂ ಧಾರ್ಮಿಕ ಶ್ರದ್ಧಾ ಭಕ್ತಿಯ ವಿರೋಧಿಯೋ? ಅಥವಾ ಮುಖ್ಯಮಂತ್ರಿಯಾಗಿದ್ದ Basavaraj Bommai ಅವರು ಮಾತ್ರ ಹಿಂದೂ ವಿರೋಧಿಯೋ? ನಮಗೆ ಜನರ ಧಾರ್ಮಿಕ ನಂಬಿಕೆಯ ಜೊತೆಗೆ ಹೈನುಗಾರರ ಬದುಕು ಮುಖ್ಯ. ಹೀಗಾಗಿ ನಾಡಿನ ರೈತರ ಹಿತದೃಷ್ಟಿಯಿಂದ ನಾವು ಕೇಳುವ ದರ ನೀಡಲು ತಿರುಪತಿ ದೇವಾಲಯದವರು ಒಪ್ಪುವುದಾದರೆ ತುಪ್ಪ ಪೂರೈಸಲು ನಮಗೆ ಯಾವ ಸಮಸ್ಯೆಗಳಿಲ್ಲʼʼ ಎಂದು ಹೇಳಿದ್ದಾರೆ ಸಿಎಂ ಸಿದ್ದರಾಮಯ್ಯ.
ಈ ವಿಚಾರವನ್ನು ಕಾಂಗ್ರೆಸ್ ಪಕ್ಷವೂ ಪ್ರಶ್ನಿಸಿದೆ
ʻʻ6 ತಿಂಗಳಿಗೊಮ್ಮೆ ಟಿಟಿಡಿ ತುಪ್ಪ ಸರಬರಾಜಿಗೆ ಕರೆಯುತ್ತದೆ, ಮಾರ್ಚ್ 2023ರಲ್ಲಿ ಕರೆದ ಟೆಂಡರ್ ನಲ್ಲಿ ಕೆಎಂಎಫ್ ಭಾಗವಹಿಸಿರಲಿಲ್ಲ, ಮಾರ್ಚ್ ನಲ್ಲಿ ಇದ್ದಿದ್ದು ಬಿಜೆಪಿ ಸರ್ಕಾರ. 2023ರ ಮಾರ್ಚ್ ತಿಂಗಳಲ್ಲಿ ಬಿಜೆಪಿ ಸರ್ಕಾರ ಟೆಂಡರ್ ನಲ್ಲಿ ಬಾಗಿಯಾಗಿರಲಿಲ್ಲ ಎಂದು ಟಿಟಿಡಿಯ ಧರ್ಮ ರೆಡ್ಡಿಯವರೇ ಹೇಳಿದ್ದಾರೆ, ಈಗ ಕರ್ನಾಟಕ ಬಿಜೆಪಿ ನಾಯಕರು ಬಾಯಿ ಬಿಡಲಿ, ಹಿಂದೂ ವಿರೋಧಿಗಳು ಯಾರು ಎನ್ನುವುದನ್ನು ಹೇಳಲಿ! ಎಂದು ಹೇಳಿದೆ.
6 ತಿಂಗಳಿಗೊಮ್ಮೆ ಟಿಟಿಡಿ ತುಪ್ಪ ಸರಬರಾಜಿಗೆ ಕರೆಯುತ್ತದೆ, ಮಾರ್ಚ್ 2023ರಲ್ಲಿ ಕರೆದ ಟೆಂಡರ್ ನಲ್ಲಿ ಕೆಎಂಎಫ್ ಬಾಗವಹಿಸಿರಲಿಲ್ಲ, ಮಾರ್ಚ್ ನಲ್ಲಿ ಇದ್ದಿದ್ದು ಬಿಜೆಪಿ ಸರ್ಕಾರ.
— Karnataka Congress (@INCKarnataka) August 1, 2023
2023ರ ಮಾರ್ಚ್ ತಿಂಗಳಲ್ಲಿ ಬಿಜೆಪಿ ಸರ್ಕಾರ ಟೆಂಡರ್ ನಲ್ಲಿ ಬಾಗಿಯಾಗಿರಲಿಲ್ಲ ಎಂದು ಟಿಟಿಡಿಯ ಧರ್ಮ ರೆಡ್ಡಿಯವರೇ ಹೇಳಿದ್ದಾರೆ,
ಈಗ @BJP4Karnataka ನಾಯಕರು… pic.twitter.com/QRgEYaftxq
ನಂದಿನಿ ತುಪ್ಪವನ್ನು ತಿರುಪತಿಗೆ ಸರಬರಾಜು ಮಾಡುವುದನ್ನು ನಿಲ್ಲಿಸಿ ಒಂದೂವರೆ ವರ್ಷವಾಗಿದೆ, ಬಿಜೆಪಿ ಸರ್ಕಾರದ ಅವಧಿಯಲ್ಲೇ ಈ ಕ್ರಮ ಕೈಗೊಳ್ಳಲಾಗಿತ್ತು, ಬಿಜೆಪಿಗೆ ತಿರುಪತಿ ತಿಮ್ಮಪ್ಪನ ಮೇಲೆ ಗೌರವ, ಭಕ್ತಿ ಇರಲಿಲ್ಲವೇಕೆ? ತಿಮ್ಮಪ್ಪನಿಗೆ ತುಪ್ಪ ಕೊಡದ ಬಿಜೆಪಿ ಹಿಂದೂ ವಿರೋಧಿ ಅಲ್ಲವೇ? 2020 -2021ರಲ್ಲಿ ತುಪ್ಪ ಸರಬರಾಜನ್ನು ಸ್ಥಗಿತಗೊಳಿಸಿದ್ದೇಕೆ ಎಂಬುದಕ್ಕೆ ಬಿಜೆಪಿ ಉತ್ತರಿಸುವುದೇ? ಹಿಂದೂ ವಿರೋಧಿ ಬಿಜೆಪಿ ನಾಯಕರು ಉತ್ತರಿಸುವರೆ? ಎಂದು ಅದು ಕೇಳಿದೆ.
ತಿರುಪತಿಗೆ ನಂದಿನಿ ತುಪ್ಪದ ಸರಬರಾಜನ್ನು 2020 – 2021ರಲ್ಲೇ ನಿಲ್ಲಿಸಿದ್ದು ಯಾವ ಸರ್ಕಾರ @BJP4Karnataka?
— Karnataka Congress (@INCKarnataka) August 1, 2023
ಆಗ ಯಾವ ಅಜೆಂಡಾವಾಗಿತ್ತು @CTRavi_BJP?
ಬಿಜೆಪಿ ಸರ್ಕಾರದ ಅವಧಿಯಲ್ಲಿ ಸರಬರಾಜು ನಿಲ್ಲಿಸಿದ್ದು ಏಕೆ? ಈ ಬಗ್ಗೆ ಬಿಜೆಪಿಗರು ಮೌನವಾಗಿರುವುದೇಕೆ?
ಮಾರುಕಟ್ಟೆಯಲ್ಲಿ ನಂದಿನಿ ತುಪ್ಪಕ್ಕೆ ಬಹುಬೇಡಿಕೆ ಇರುವಾಗ ಕಡಿಮೆ ಮೊತ್ತಕ್ಕೆ… pic.twitter.com/p3MqXWAAL1
ಕೆಎಂಎಫ್ ಅಧ್ಯಕ್ಷ ಭೀಮಾ ನಾಯಕ್ ಅವರು ಹೇಳಿದ್ದೇನು?
ದರ ಹೆಚ್ಚಳದ ಕಾರಣದಿಂದಲೇ ನಂದಿನಿ ತುಪ್ಪವನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಕರ್ನಾಟಕ ನಂದಿನಿಯ ತುಪ್ಪವನ್ನು ತಿರುಪತಿಯಲ್ಲಿ ಲಡ್ಡು ತಯಾರಿಸಲು ಬಹುತೇಕ ಐವತ್ತು ವರ್ಷಗಳಿಂದ ಬಳಸಲಾಗುತ್ತಿದೆ. ಇದರಿಂದ ಹಳೆಯ ಒಡಬಂಡಿಕೆ ರದ್ದಾಗಲಿದೆ. ಈ ಬಾರಿಯ ಟೆಂಡರ್‌ನಲ್ಲಿ ಬೆಲೆಯ ವಿಷಯದಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿತ್ತು. ತಿರುಪತಿ ಆಡಳಿತ ಮಂಡಳಿ ಅತಿ ಕಡಿಮೆ ಬೆಲೆಗೆ ಕೊಡುವ ತುಪ್ಪವನ್ನು ಸ್ವೀಕರಿಸುತ್ತದೆ. ಹೀಗಾಗಿ ಕರ್ನಾಟಕದ ತುಪ್ಪ ತಿರಸ್ಕಾರವಾಗಿದೆ ಎಂದು ಕರ್ನಾಟಕ ಹಾಲು ಮಹಾಮಂಡಳದ ಅಧ್ಯಕ್ಷ ಭೀಮಾನಾಯಕ್ ಹೇಳಿದ್ದರು.
ನಂದಿನಿಗಿಂತ ಕಡಿಮೆ ದರದಲ್ಲಿ ತುಪ್ಪ ನೀಡುವ ಹಲವು ಸಂಸ್ಥೆಗಳು ಮುಂದೆ ಬಂದಿವೆ. ಅದರಲ್ಲಿ ಹೊಸ ಸಂಸ್ಥೆಯನ್ನು ಹುಡುಕಿಕೊಂಡಿರುವುದರಿಂದ ನಾವು ಸಹಜವಾಗಿ ತುಪ್ಪದ ಸರಬರಾಜು ನಿಲ್ಲಿಸಬೇಕಾಗುತ್ತದೆ. ನಂದಿನಿ ತುಪ್ಪವನ್ನು ಅಂತರಾಷ್ಟ್ರೀಯ ಗುಣಮಟ್ಟಕ್ಕೆ ಅನುಗುಣವಾಗಿ ಉತ್ಪಾದನೆ ಮಾಡುತ್ತಿದ್ದೇವೆ. ನಮ್ಮ ಗುಣಮಟ್ಟವನ್ನು ಬೇರೆ ಕಂಪೆನಿಗಳನ್ನು ಹೋಲಿಕೆ ಮಾಡಲು ಸಾಧ್ಯವಿಲ್ಲ. ಮುಂದೆ ತಿರುಪತಿ ಲಡ್ಡುಗಳು ಈಗಿನಂತೆಯೇ ಇರುತ್ತವೆ ಎಂದು ಹೇಳಲಾಗದು. ಕೆಎಂಎಫ್ ಅತ್ಯುತ್ತಮ ದರ್ಜೆಯ ನಂದಿನಿ ತುಪ್ಪವನ್ನು ಸರಬರಾಜು ಮಾಡುತ್ತಿದೆ ಎನ್ನುವುದರಲ್ಲಿ ಅನುಮಾನವೇ ಬೇಡ. ನಮ್ಮ ಬೆಲೆಗಿಂತ ಕಡಿಮೆ ದರಕ್ಕೆ ಬೇರೆ ಸಂಸ್ಥೆ ತುಪ್ಪ ಸರಬರಾಜು ಮಾಡುತ್ತದೆ ಎಂದರೆ ಗುಣಮಟ್ಟದಲ್ಲಿ ರಾಜಿ ಮಾಡಿಕೊಂಡಂತೆ ಎನ್ನುವುದು ನನ್ನ ಖಚಿತ ನಿಲುವು ಎಂದು ಭೀಮಾ ನಾಯಕ್ ಹೇಳಿದ್ದರು.
ಇದನ್ನೂ ಓದಿ : Nandini ghee : ತಿರುಪತಿ ಲಡ್ಡಿಗೆ ನಂದಿನಿ ತುಪ್ಪ ಇನ್ನಿಲ್ಲ!