ಬೆಂಗಳೂರು: ರಾಜ್ಯದ ಅತಿ ದೊಡ್ಡ ಹಾಲು ಉತ್ಪಾದಕರ ಸಂಘವಾದ ಕೆಎಂಎಫ್ ತನ್ನ ಬ್ರ್ಯಾಂಡ್ ನಂದಿನಿ ಹಾಲು ಮತ್ತು ಮೊಸರಿನ ದರದಲ್ಲಿ ಪ್ರತಿ ಲೀಟರ್‌ಗೆ ತಲಾ 2 ರೂ. ಏರಿಕೆ ಮಾಡಿದೆ.
ಉತ್ಪಾದಕರಿಗೆ ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ ಹಾಗೂ ರಾಜ್ಯದ ಗಡಿ ಪ್ರದೇಶಗಳಲ್ಲಿ ನೆರೆ ರಾಜ್ಯಗಳ ಹಾಲು ಉತ್ಪಾದಕ ಸಂಸ್ಥೆಗಳತ್ತ ರಾಜ್ಯದ ರೈತರು ವಾಲುತ್ತಿರುವುದನ್ನು ತಪ್ಪಿಸಲು ಈ ನಿರ್ಧಾರ ಕೈಗೊಂಡಿದೆ.
ಈ ಕುರಿತು ಮೂರು ಬಾರಿ ಕೆಎಂಎಫ್ ನಿರ್ಧಾರ ಮಾಡಿತ್ತಾದರೂ ಸರ್ಕಾರ ಬ್ರೇಕ್ ಹಾಕಿತ್ತು. ಬುಧವಾರ 19 ನಿರ್ದೇಶಕರೊಂದಿಗೆ ಸಭೆ ನಡೆಸಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ನೇರವಾಗಿ ರೈತರಿಗೆ ಈ ಹಣವನ್ನು ನೀಡಲಾಗುತ್ತದೆ. ಗ್ರಾಹಕರು ನಮಗೆ ಸಹಕರಿಸಬೇಕು ಎಂದರು.
ಕೆಎಂಎಫ್‌ಗೆ ಒತ್ತಡ ಆದರೂ ರೈತರಿಗೆ ೧೯೩ ಕೋಟಿ ರೂ. ಸಬ್ಸಿಡಿ ರೂಪದಲ್ಲಿ ನೀಡಿದ್ದೇವೆ. ಕ್ಷೀರಭಾಗ್ಯ ಯೋಜನೆಯಿಂದ ಪ್ರತಿನಿತ್ಯ ೮ ಲಕ್ಷ ಲೀಟರ್ ಹಾಲು ನೀಡ್ತಿದ್ದೇವೆ. ಸಾಮಾನ್ಯ ದರಕ್ಕಿಂತ ಕಡಿಮೆ ದರಕ್ಕೆ ನೀಡುತ್ತಿದ್ದೇವೆ. ತಿಂಗಳಿಗೆ ಇದರಿಂದ ಸುಮಾರು ೧೦ ಕೋಟಿ ರೂ. ಲಾಸ್ ಆಗುತ್ತಿದೆ.
ಭಾರತದಲ್ಲಿ ಹಾಲಿನ ದರದಲ್ಲಿ ನಾವು ಎಂಟನೇ ಸ್ಥಾನದಲ್ಲುದ್ದೇವೆ, ದೀಪಾವಳಿ ಸಮಯದಲ್ಲಿ ಮಾತ್ರ ತುಪ್ಪದ ದರದಲ್ಲಿ ಏರಿಕೆ ಮಾಡಲಾಗಿತ್ತು. ಇನ್ನು ಹೆಚ್ಚು ಮಾಡುವುದಿಲ್ಲ ಎಂದರು. ಈಗ ಹೆಚ್ಚಳ ಮಾಡಿರುವ ದರವು ಗುರುವಾರದಿಂದಲೇ ಜಾರಿಗೆ ಬರಲಿದೆ. ಆದರೆ ಗುರುವಾರ ಬೆಳಗ್ಗೆ ಹಾಲಿನ ದರ ಈಗಿನಷ್ಟೇ ಇರಲಿದೆ. ಆದರೆ ಬೆಳಗ್ಗೆ 11 ಗಂಟೆಯ ನಂತರ ಹೊಸ ದರ ಅನ್ವಯ ಆಗಲಿದೆ ಎಂದರು.
9 ಬಗೆಯ ನಂದಿನಿ ಹಾಲಿನ ದರ ಏರಿಕೆ ಪಟ್ಟಿ
ಉತ್ಪನ್ನ | ಈಗಿನ ದರ (ರೂ.) | ಹೊಸ ದರ (ರೂ.) |
ಟೋನ್ಡ್ ಹಾಲು | 37 | 39 |
ಹೋಮೋಜಿನೈಸ್ಡ್ ಟೋನ್ಡ್ ಹಾಲು | 38 | 40 |
ಹೋಮೋಜಿನೈಸ್ಡ್ ಹಸುವಿನ ಹಾಲು | 42 | 44 |
ಸ್ಪೆಷಲ್ ಹಾಲು | 43 | 45 |
ಶುಭಂ ಹಾಲು | 43 | 45 |
ಹೋಮೋಜಿನೈಸ್ಡ್ ಸ್ಟ್ಯಾಂಡರ್ಡೈಸರ್ ಹಾಲು | 44 | 46 |
ಸಮೃದ್ಧಿ ಹಾಲು | 48 | 50 |
ಸಂತೃಪ್ತಿ ಹಾಲು | 50 | 52 |
ಡಬ್ಬಲ್ ಟೋನ್ಡ್ ಹಾಲು | 36 | 38 |
ಮೊಸರು ಪ್ರತಿ ಕೆಜಿಗೆ | 45 | 47 |
ನವೆಂಬರ್ 14ರಂದು ನಂದಿನಿ ಹಾಲು ಮತ್ತು ಮೊಸರಿನ ದರವನ್ನು ಲೀಟರ್‌ಗೆ ಮೂರು ರೂಪಾಯಿ ಹೆಚ್ಚಿಸಲಾಗಿತ್ತು. ನ.14ರ ಮಧ್ಯರಾತ್ರಿಯಿಂದಲೇ ಈ ದರ ಅನ್ವಯ ಆಗುತ್ತದೆ ಎಂದು ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳ ನಿಯಮಿತ (ಕೆಎಂಎಫ್) ಪ್ರಕಟಣೆ ಹೊರಡಿಸಿತ್ತು. ಆದರೆ ಅಂದು ಸಿಎಂ ಬಸವರಾಜ ಬೊಮ್ಮಾಯಿ ದರ ಏರಿಕೆಗೆ ಬ್ರೇಕ್ ಹಾಕಿದ್ದರು.
ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳ ನಿಯಮಿತ (ಕೆಎಂಎಫ್) ಈ ಕುರಿತು ಪ್ರಕಟಣೆ ಹೊರಡಿಸಿತ್ತು. ಒಂದು ಲೀಟರ್ ಟೋನ್ಡ್ ಹಾಲಿನ ದರ 37 ರೂ.ಗಳಿಂದ 40 ರೂ.ಗಳಿಗೆ ಏರಲಿದೆ. ಮೊಸರಿನ ದರವನ್ನೂ ಮೂರು ರೂ. ಹೆಚ್ಚಿಸಲಾಗಿದ್ದು, ಒಂದು ಕೇಜಿ ಮೊಸರಿನ ದರ 45ರೂ.ಗಳಿಂದ 48ರೂ.ಗಳಿಗೆ ಏರಿಸಲಾಗಿತ್ತು.
ನ.14ರಂದು ಕಲಬುರಗಿಯಲ್ಲಿ ಮಾತನಾಡಿದ್ದ ಸಿಎಂ ಬೊಮ್ಮಾಯಿ, ‘ಸದ್ಯಕ್ಕೆ ನಂದಿನಿ ಹಾಲಿನ ದರ ಏರಿಕೆಯಿಲ್ಲ. ನವೆಂಬರ್ 20ರ ನಂತರ ಹಾಲು ಒಕ್ಕೂಟದ ಅಧ್ಯಕ್ಷರ ಜತೆ ಸಭೆ ನಡೆಸಿ, ಬಳಿಕವಷ್ಟೇ ಈ ಬಗ್ಗೆ ತೀರ್ಮಾನವಾಗಲಿದೆ. ಜನರಿಗೆ ಹೊರೆ ಮಾಡುವುದಿಲ್ಲ ಎಂದು ಹೇಳಿದ್ದರು. ಅದರಂತೆ ನವೆಂಬರ್ 21ರಂದು ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಪಶುಸಂಗೋಪನೆ ಇಲಾಖೆ ಸಿಬ್ಬಂದಿ ಮತ್ತು ಕೆಎಂಎಫ್ ಅಧಿಕಾರಿಗಳ ಸಭೆ ನಡೆದಿತ್ತು. ಇದರಲ್ಲಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಪಶುಸಂಗೋಪನೆ ಇಲಾಖೆ ಸಚಿವ ಪ್ರಭು ಚೌಹಾಣ್ ಕೂಡ ಉಪಸ್ಥಿತರಿದ್ದರು. ಈ ಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ‘ಹಾಲಿನ ದರ ಏರಿಕೆ ಮಾಡುವ ವಿಚಾರವನ್ನು ಇನ್ನೆರಡು ದಿನಗಳಲ್ಲಿ ನಿರ್ಣಯಿಸಿ, ಸೂಕ್ತ ನಿರ್ಣಯ ಕೈಗೊಳ್ಳುವಂತೆ’ ಸೂಚಿಸಿದ್ದರು.