ಬೆಂಗಳೂರು: ಖಾಸಗಿ ಡೇರಿಯವರು ಕೆಎಂಎಫ್‌ಗಿಂತ ಹೆಚ್ಚು ಹಣ ನೀಡಿ ಹಾಲು ಖರೀದಿ ಮಾಡುತ್ತಿದ್ದು ನಂದಿನಿ (Nandini Milk) ಹಾಲಿನ ದರವನ್ನು ಏರಿಕೆ ಮಾಡುವುದು ಅನಿವಾರ್ಯವಾಗಿದೆ ಎಂದು ಪಶುಸಂಗೋಪನೆ ಸಚಿವ ಕೆ. ವೆಂಕಟೇಶ್ ತಿಳಿಸಿದ್ದಾರೆ. ವಿಧಾನಪರಿಷತ್‌ನಲ್ಲಿ ಈ ಕುರಿತು ಮಾತನಾಡಿದ್ದಾರೆ.
ಅಮೂಲ್ ಜೊತೆ ನಂದಿನಿ ವಿಲೀನದ ಬಗ್ಗೆ ಜೆಡಿಎಸ್ ಸದಸ್ಯ ತಿಪ್ಪೇಸ್ವಾಮಿ ಪ್ರಶ್ನೆಗೆ ಉತ್ತರಿಸಿದ ವೆಂಕಟೇಶ್, ಅಮೂಲ್ ಜೊತೆ ನಂದಿನಿ ವಿಲೀನ ಪ್ರಶ್ನೆಯೇ ಇಲ್ಲ. ಅವರು ನಮ್ಮನ್ನು ಕೇಳಿಲ್ಲ, ಆ ಪ್ರಸ್ತಾವನೆಯೂ ನಮ್ಮ ಮುಂದಿಲ್ಲ. ಆದರೆ ಖಾಸಗಿ ಡೇರಿಗಳಿಂದ ನಂದಿನಿಗೆ ಪೈಪೋಟಿ ಆಗಿರಬಹುದು. ಕೆಎಂಎಫ್‌ಗಿಂತ ಒಂದೆರಡು ರೂ. ಹೆಚ್ಚು ಕೊಟ್ಟು ಖರೀದಿ ಮಾಡ್ತಿದ್ದಾರೆ. ಹೀಗಾಗಿ ನಂದಿನಿ ಹಾಲಿನ ದರ ಏರಿಕೆ ಅನಿವಾರ್ಯ ಎಂದಿದ್ದಾರೆ.
ಸಿಎಂ ಜೊತೆ ಚರ್ಚೆ ಮಾಡಿ ಖರೀದಿ ದರ, ಮಾರಾಟ ದರ ಬಗ್ಗೆ ತೀರ್ಮಾನ ಮಾಡ್ತೀವಿ. ರೈತರನ್ನು ಉಳಿಸಿಕೊಳ್ಳುವುದು ನಮ್ಮ ಜವಾಬ್ದಾರಿ. ಮಾರಾಟದ ಹಣದಲ್ಲಿ 80% ಹಣ ರೈತರಿಗೆ ಕೊಡುತ್ತಿದ್ದೇವೆ ಎಂದರು.
ಹಾಲಿನ ಪ್ರೋತ್ಸಾಹ ಧನ ಹೆಚ್ಚಳದ ಬಗ್ಗೆ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಪ್ರಸ್ತಾಪಿಸಿದರು. ಹಿಂದೆ ಲೀಟರ್ ಹಾಲಿಗೆ ಐದು ರೂ. ಪ್ರೋತ್ಸಾಹ ಧನ ನೀಡಲಾಗುತ್ತಿತ್ತು. ಅದನ್ನ ಇತ್ತೀಚೆಗೆ ತಡೆಹಿಡಿಯಲಾಗಿದೆ. ಪ್ರೋತ್ಸಾಹ ಧನ ಏರಿಕೆ ಮಾಡಬೇಕು. ಹಾಲು ಖರೀದಿ ದರ, ಮಾರಾಟ ದರ ಏರಿಕೆ ಮಾಡಿ. ಹಾಲು ಉತ್ಪಾದಕರಿಗೆ ಹೆಚ್ಚಿನ ಹಣ ತಲುಪುವಂತೆ ಮಾಡಿ ಎಂದು ಮರಿತಿಬ್ಬೇಗೌಡ ಒತ್ತಾಯಿಸಿದರು.
ಅಮೃತ್ ಮಹಲ್ ತಳಿ ನಶಿಸಿಹೋಗುತ್ತಿದೆ ಎಂದು ಜೆಡಿಎಸ್ ಸಭಾನಾಯಕ ಬೋಜೆಗೌಡ ಪ್ರಸ್ತಾಪಿಸಿದರು. ಎಲ್ಲಾ ಕಡೆ ಅಮೃತ್ ಮಹಲ್ ಕಾವಲ್ ಜಮೀನು ಇದೆ. ಆ ಜಮೀನನ್ನ ವಶಕ್ಕೆ ಪಡೆಯದಿದ್ದರೆ ಅಮೃತ್ ಮಹಲ್ ತಳಿ ನಶಿಸಿಹೋಗುತ್ತೆ. ಇದರ ಜೊತೆಗೆ ಮಲ್ನಾಡ್ ಗಿಡ್ಡ ತಳಿಯನ್ನ ಅಭಿವೃದ್ಧಿಪಡಿಸಬೇಕು ಎಂದರು.
ವೈ.ಎ. ನಾರಾಯಣಸ್ವಾಮಿ ಮಾತಿಗೆ ಆಕ್ಷೇಪ
ಧನಸಹಾಯ ಬಿಡುಗಡೆ ಕುರಿತು ಉತ್ತರಿಸುವಾಗ ಬಿಜೆಪಿ ಸದಸ್ಯ ವೈ.ಎ. ನಾರಾಯಣಸ್ವಾಮಿ ಮಾತಿಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಹಾಲಿನ ಪ್ರೋತ್ಸಾಹ ಧನವನ್ನ ಫೆಬ್ರವರಿವರೆಗೆ ನೀಡಲಾಗಿದೆ. ಮೊದಲು ಎಸ್‌ಸಿ ಎಸ್‌ಟಿಗಳಿಗೆ ಬಿಡುಗಡೆ ಮಾಡ್ತೀವಿ, ಬಳಿಕ ಉಳಿದವರಿಗೆ ಕೊಡ್ತೀವಿ. ಸಿಎಂ ಜೊತೆ ಚರ್ಚೆ ಮಾಡಿ ಪ್ರೋತ್ಸಾಹ ಧನ ಏರಿಕೆ ಬಗ್ಗೆ ತೀರ್ಮಾನ ಮಾಡ್ತೀವಿ ಎಂದರು.
ಇದನ್ನೂ ಓದಿ: Karnataka Budget 2023: ʼನಂದಿನಿʼ ಮಾದರಿಯಲ್ಲಿ ರೈತ ಉತ್ಪನ್ನಗಳ ಬ್ರಾಂಡಿಂಗ್, ಕೃಷಿ ಉದ್ಯಮಗಳಿಗೆ ʼನವೋದ್ಯಮʼ
ಬಿಜೆಪಿ ಸದಸ್ಯ ವೈ.ಎ.ನಾರಾಯಣಸ್ವಾಮಿ ಮಧ್ಯಪ್ರವೇಶ ಮಾಡಿ, ಕೇವಲ ಎಸ್‌ಸಿ ಎಸ್‌ಟಿಗಳಿಗೆ ಯಾಕೆ ಕೊಡ್ತೀರ? ಎಲ್ಲರಿಗೂ ಒಟ್ಟಿಗೆ ಕೊಡಿ ಎಂದು ಒತ್ತಾಯ ಮಾಡಿದರು. ಸಚಿವರಿಗೆ ಉತ್ತರ ಕೊಡಲು ಬಿಡಿ ಎಂದ ಸಭಾಪತಿಯವರನ್ನು ಕುರಿತು ನೀವು ಈ ರೀತಿ ದಬ್ಬಾಳಿಕೆ ಮಾಡಬಾರದು ಎಂದು ನಾರಾಯಣಸ್ವಾಮಿ ಹೇಳಿದರು. ನಾರಾಯಣಸ್ವಾಮಿ ಮಾತಿಗೆ ಕೆರಳಿದ ಜೆಡಿಎಸ್ ಕಾಂಗ್ರೆಸ್ ಸದಸ್ಯರು, ಇದು ಸಭಾಪತಿ ಪೀಠಕ್ಕೆ ಮಾಡುವ ಅವಮಾನ ಎಂದರು.
ಇದರಿಂದ ಸಭಾಪತಿ ಬಸವರಾಜ ಹೊರಟ್ಟಿ ಭಾವುಕರಾದರು. ದಬ್ಬಾಳಿಕೆ ಪದ ಕಡತದಲ್ಲಿ ಹಾಗೆ ಇರಲಿ ಎಂದ ಸಭಾಪತಿ ಭಾವುಕರಾದರು. ಮಾತನಾಡಲು ಕೊಡದಿದ್ದರೆ ಹೊರಗೆ ಹೋಗುತ್ತೇನೆ ಎಂದು ಬೆಳಗ್ಗೆ ಹೇಳಿದ್ದು, ಆ ಬಗ್ಗೆ ನನಗೆ ಬಳಿಕ ಅರಿವಾಗಿದೆ ಎಂದು ಬಿಜೆಪಿ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅದನ್ನು ಮನಸ್ಸಿಗೆ ತೆಗೆದುಕೊಳ್ಳಬೇಡಿ ಎಂದು ಸಭಾಪತಿ ಮತ್ತೆ ಭಾವುಕರಾದರು. ನನ್ನಿಂದ ಪೀಠಕ್ಕೆ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ ಎಂದು ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.