Site icon Vistara News

Nandini VS Milma: ಕರ್ನಾಟಕದಲ್ಲಿ ಹಾಲು ಮಾರಾಟಕ್ಕೆ ಕೇರಳ ನಿರ್ಧಾರ; ನೆರೆರಾಜ್ಯದ ಡಬಲ್‌ ಸ್ಟಾಂಡರ್ಡ್ ಬಯಲು

Milma plans to open outlets in Karnataka

Nandini VS Milma: Kerala milk federation plans to open outlets in Karnataka

ಬೆಂಗಳೂರು: ಕರ್ನಾಟಕದ ಹೆಮ್ಮೆಯ ನಂದಿನಿ ಹಾಲಿನ (KMF) ಉತ್ಪನ್ನಗಳು ದೇಶದಲ್ಲಿಯೇ ಖ್ಯಾತಿ ಗಳಿಸಿವೆ. ಆದರೆ, ಕೆಲ ದಿನಗಳ ಹಿಂದಷ್ಟೇ ಕೇರಳದಲ್ಲಿ ಕರ್ನಾಟಕದ ನಂದಿನಿ ಹಾಲಿನ ಖ್ಯಾತಿ ಸಹಿಸದೆ ಮಾರಾಟ ಮಾಡಲು ಬಿಡಲ್ಲ, ಇದು ನೈತಿಕತೆ ಅಲ್ಲ ಎಂದೆಲ್ಲ (Nandini VS Milma) ಭಾಷಣ ಬಿಗಿದಿದ್ದ ಕೇರಳ ಈಗ ಕರ್ನಾಟಕದಲ್ಲೂ ಕೇರಳ ಕೋಆಪರೇಟಿವ್‌ ಮಿಲ್‌ ಮಾರ್ಕೆಟಿಂಗ್‌ ಫೆಡರೇಷನ್‌ (Milma-ಮಿಲ್ಮ) ಹಾಲಿನ ಮಾರಾಟಕ್ಕೆ ನಿರ್ಧರಿಸಿದೆ ಎಂದು ತಿಳಿದುಬಂದಿದೆ.

“ಕರ್ನಾಟಕದಲ್ಲಿ ಮಿಲ್ಮ ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡಲು ತೀರ್ಮಾನಿಸಲಾಗಿದೆ. ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಮಿಲ್ಮ ಹಾಲಿನ ಮಳಿಗೆಗಳನ್ನು ತೆರೆಯಲಾಗುತ್ತದೆ. ಕೆಲ ವರ್ಷಗಳ ಹಿಂದೆಯೇ ಇದರ ಕುರಿತು ಚಿಂತನೆ ನಡೆದಿತ್ತು. ಆದರೆ, ಕೊರೊನಾ ಬಿಕ್ಕಟ್ಟಿನಿಂದಾಗಿ ನಿಂತುಹೋಯಿತು. ಆದರೆ, ಈಗ ಎರಡು ರಾಜ್ಯಗಳಿಗೆ ಮಿಲ್ಮ ವಿಸ್ತರಣೆ ಮಾಡಲಾಗುತ್ತದೆ. ಕರ್ನಾಟಕದ ಬೆಂಗಳೂರು, ಮೈಸೂರು ಹಾಗೂ ಕೊಡಗಿನಲ್ಲಿ ಮಿಲ್ಮ ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತದೆ” ಎಂದು ಕೇರಳ ಸಹಕಾರಿ ಹಾಲು ಮಾರುಕಟ್ಟೆ ಫೆಡರೇಷನ್‌ ಅಧ್ಯಕ್ಷ ಕೆ.ಎಸ್.‌ ಮಣಿ ಹೇಳಿದ್ದಾರೆ.

ನಂದಿನಿ ಗುಣಮಟ್ಟ ಪ್ರಶ್ನಿಸಿದ್ದ ಕೇರಳ ಸಚಿವೆ

ನಂದಿನಿ ಹಾಲಿನ ಗುಣಮಟ್ಟವನ್ನು ಕೆಲ ದಿನಗಳ ಹಿಂದಷ್ಟೇ ಕೇರಳ ಪ್ರಶ್ನಿಸಿತ್ತು. ಹಾಗೆಯೇ, ಕೇರಳದಲ್ಲಿ ಕರ್ನಾಟಕದ ಹಾಲು ಮಾರಾಟ ಸರಿಯಲ್ಲ ಎಂದು ಕೂಡ ಮಿಲ್ಮ ಹೇಳಿತ್ತು. “ಕರ್ನಾಟಕ ಹಾಲು ಒಕ್ಕೂಟವು (KMF) ಕೇರಳ ಪ್ರವೇಶಿಸುವ ಮುನ್ನ ಅನುಮತಿ ಪಡೆಯಬೇಕಿತ್ತು. ಈ ಕುರಿತು ನಾವು ರಾಷ್ಟ್ರೀಯ ಡೇರಿ ಅಭಿವೃದ್ಧಿ ಮಂಡಳಿಗೆ ದೂರು ನೀಡುತ್ತೇವೆ. ಹಾಗೆಯೇ, ನಂದಿನಿ ಹಾಲಿನ ಗುಣಮಟ್ಟ ಕಳಪೆಯಾಗಿದೆ. ಕೇರಳ ನಾಗರಿಕರು ಮಿಲ್ಮ ಡೇರಿ ಉತ್ಪನ್ನಗಳನ್ನೇ ಬಳಸಬೇಕು” ಎಂದು ಕೇರಳ ಪಶು ಸಂಗೋಪನೆ ಸಚಿವೆ ಜೆ ಚಿಂಚು ರಾಣಿ ಹೇಳಿದ್ದರು.

ಇದನ್ನೂ ಓದಿ: Nandini milk: ಅಮುಲ್‌ಗೆ ನಂದಿನಿ ಸೆಡ್ಡು; ಇಂದಿರಾ ಕ್ಯಾಂಟೀನ್‌ಗಳಲ್ಲೂ ಹಾಲು ಮಾರಾಟಕ್ಕೆ ಪ್ಲಾನ್‌!

ಮಾರಾಟ ವಿರೋಧಿಸಲು ಮಿಲ್ಮ ತೀರ್ಮಾನ

ಈಗಾಗಲೇ, ಕರ್ನಾಟಕದ ನಂದಿನಿ ಹಾಲಿನ ಉತ್ಪನ್ನಗಳ ಮಾರಾಟವನ್ನು ವಿರೋಧಿಸಲು ಕೇರಳ ಕೋಆಪರೇಟಿವ್‌ ಮಿಲ್‌ ಮಾರ್ಕೆಟಿಂಗ್‌ ಫೆಡರೇಷನ್‌ (Milma-ಮಿಲ್ಮ) ತೀರ್ಮಾನಿಸಿದೆ. ಹಾಗೆಯೇ, ಭಾರತೀಯ ರಾಷ್ಟ್ರೀಯ ಸಹಕಾರಿ ಡೇರಿ ಫೇಡರೇಷನ್‌ ನಿರ್ದೇಶಕರ ಮಂಡಳಿ ಸಭೆಯಲ್ಲಿ ನಂದಿನಿ ಉತ್ಪನ್ನಗಳ ಮಾರಾಟ ಸ್ಥಗಿತಗೊಳಿಸುವ ಕುರಿತು ಪ್ರಸ್ತಾಪಿಸಲು ಕೂಡ ತೀರ್ಮಾನಿಸಲಾಗಿದೆ. ಹಾಗೊಂದು ವೇಳೆ, ಕೇರಳದಲ್ಲಿ ನಂದಿನಿ ಉತ್ಪನ್ನಗಳ ಮಾರಾಟ ಸ್ಥಗಿತಗೊಂಡರೆ ಕೆಎಂಎಫ್‌ಗೆ ಹಿನ್ನಡೆಯಾಗುತ್ತದೆ ಎಂದೇ ಹೇಳಲಾಗುತ್ತಿದೆ.

ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೂ ಮುನ್ನ ಗುಜರಾತ್‌ನ ಅಮುಲ್‌ ಸಂಸ್ಥೆಯು ಕರ್ನಾಟಕದ ಕೆಎಂಎಫ್‌ಅನ್ನು (ನಂದಿನಿ) ವಶಪಡಿಸಿಕೊಳ್ಳುತ್ತದೆ, ಅಮುಲ್‌ ಉತ್ಪನ್ನಗಳ ಉತ್ತೇಜನಕ್ಕಾಗಿಯೇ ನಂದಿನಿ ಹಾಲಿನ ಉತ್ಪನ್ನಗಳ ಕೃತಕ ಅಭಾವ ಸೃಷ್ಟಿಸಲಾಗುತ್ತದೆ ಎಂಬ ಆರೋಪಗಳು ದೇಶಾದ್ಯಂತ ಸುದ್ದಿಯಾಗಿದ್ದವು. ನಂದಿನಿ ಹಾಲಿನ ಅಸ್ಮಿತೆಗಾಗಿ ಕರ್ನಾಟಕದಲ್ಲಿ ಹೋರಾಟಗಳೇ ಆರಂಭವಾಗಿದ್ದವು.

Exit mobile version