Site icon Vistara News

Brand Bengaluru: ನನ್ನ ಸ್ವತ್ತು, ಸ್ವಯಂ ಚಾಲಿತ ನಕ್ಷೆ ಅನುಮೋದನೆ ಯೋಜನೆ ಜಾರಿ: ಡಿ.ಕೆ. ಶಿವಕುಮಾರ್

DK Shivakumar in Press meet

ಬೆಂಗಳೂರು: ‘ಬ್ರ್ಯಾಂಡ್ ಬೆಂಗಳೂರು’ ಯೋಜನೆ (Brand Bengaluru) ಅಡಿಯಲ್ಲಿ ರಾಜಧಾನಿಯ ನಾಗರಿಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ‘ನನ್ನ ಸ್ವತ್ತು’, ‘ಸ್ವಯಂ ಚಾಲಿತ ನಕ್ಷೆ ಅನುಮೋದನೆ’ ಹಾಗೂ ವಾರ್ಡ್ ಮಟ್ಟದಲ್ಲಿ ‘ರಾಜಕೀಯೇತರ ಸಾರ್ವಜನಿಕ ಸಮಿತಿ’ ಮಾಡಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ರ್ಯಾಂಡ್ ಬೆಂಗಳೂರು ಯೋಜನೆಯಲ್ಲಿ ಸರ್ಕಾರ ಕೈಗೊಳ್ಳಲಿರುವ ಕ್ರಾಂತಿಕಾರಿ ನಿರ್ಧಾರಗಳ ಬಗ್ಗೆ ಮಾಹಿತಿ ನೀಡಿದರು.

ತಕ್ಷಣವೇ ಆಸ್ತಿ ತೆರಿಗೆ ಹೆಚ್ಚಳ ಮಾಡುವ ಆಲೋಚನೆ ಸರ್ಕಾರಕ್ಕಿಲ್ಲ. ಎಲ್ಲಿ ತೆರಿಗೆ ಪೋಲಾಗುತ್ತಿದೆ, ಯಾರು ಕಟ್ಟುತ್ತಿಲ್ಲ ಎಂದು ಪರಿಶೀಲಿಸುವುದು, ನಗರದಲ್ಲಿ ಆಸ್ತಿಗಳ ಮರು ಸಮೀಕ್ಷೆ ನಡೆಸಿ, ಆಸ್ತಿ ಪಟ್ಟಿಯನ್ನು ಡಿಜೀಟಲೀಕರಣ ಮಾಡಿ ಎಲ್ಲಾ ದಾಖಲೆಗಳು ಜನರಿಗೆ ಸುಲಭವಾಗಿ ಸಿಗುವಂತೆ ಯೋಜನೆ ರೂಪಿಸಲಾಗುವುದು. ಮರು ಸಮೀಕ್ಷೆ ಆದ ನಂತರ ಪ್ರಸ್ತುತ ಇರುವ ತೆರಿಗೆ ಸಂಗ್ರಹಕ್ಕಿಂತ ಎರಡು- ಮೂರು ಪಟ್ಟು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ತಿಳಿಸಿದರು.

ಮನೆ ನಿರ್ಮಾಣದ ಪ್ಲ್ಯಾನ್ ಸ್ಯಾಂಕ್ಷನ್ ನೀಡುವ ವಿಚಾರದಲ್ಲಿ, ಸ್ವಯಂ ಚಾಲಿತ ನಕ್ಷೆ ಮಂಜೂರಾತಿಗೆ ಚಾಲನೆ ನೀಡಲು ಚಿಂತಿಸಿದ್ದೇವೆ. ಇದರಿಂದ ಮನೆ ಕಟ್ಟಲು ಪ್ಲ್ಯಾನ್ ಅನುಮೋದನೆ ಪಡೆಯಲು ಸರ್ಕಾರಿ ಕಚೇರಿ ಅಲೆಯುವಂತಿಲ್ಲ ಎಂದು ಹೇಳಿದರು.

ಇದನ್ನೂ ಓದಿ | Lingayat CM : ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಲಿಂಗಾಯತ ಅಸ್ತ್ರ ಡ್ಯಾಮೇಜ್? ಸಾಫ್ಟ್‌ ಆದ ಸಿದ್ದರಾಮಯ್ಯ!

ಪ್ರತಿ ವಾರ್ಡ್‌ಗಳಲ್ಲಿ ಉದ್ಯಾನವನ, ಆಟದ ಮೈದಾನಗಳ ನಿರ್ವಹಣೆಗೆ ʼರಾಜಕೀಯೇತರ ಸಾರ್ವಜನಿಕರ ಸಮಿತಿʼ ಮಾಡುವ ಆಲೋಚನೆಯಿದ್ದು, ಅದಕ್ಕೆ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಿಸಿ, ಜನರೇ ಸೇರಿ ಉದ್ಯಾನ ಮತ್ತು ಆಟದ ಮೈದಾನಗಳನ್ನು ಸ್ಥಳೀಯ ಸಿಎಸ್ಆರ್ ನಿಧಿ ಬಳಸಿ ಅಭಿವೃದ್ದಿ ಮಾಡುವ, ಒತ್ತುವರಿಯಿಂದ ರಕ್ಷಣೆ ಮಾಡುವ ಯೋಜನೆಯ ಬಗ್ಗೆ ಚಿಂತನೆ ನಡೆಯುತ್ತಿದ್ದು, ಸ್ಥಳೀಯ ಶಾಸಕರ ಬಳಿ ಚರ್ಚೆ ಮಾಡಿ ನೀತಿ ನಿರೂಪಣೆ ತಯಾರು ಮಾಡಲಾಗುವುದು ಎಂದು ತಿಳಿಸಿದರು.

ಕುಂದು- ಕೊರತೆ ಆಲಿಸಲು ʼಸಹಾಯಹಸ್ತʼ ವೆಬ್‌ಸೈಟ್‌

ಸಂಚಾರ ದಟ್ಟಣೆ ನಿವಾರಣೆ, ತೆರಿಗೆ ಸಂಗ್ರಹ ಹೆಚ್ಚಳ, ಕಸ ವಿಲೇವಾರಿ ಈ ಮೂರು ವಿಚಾರಗಳೇ ಸರ್ಕಾರದ ಹಾಗೂ ನನ್ನ ಪ್ರಮುಖ ಗುರಿ ಎಂದ ಅವರು, ಸಾರ್ವಜನಿಕ ಕುಂದು- ಕೊರತೆ, ದೂರುಗಳ ವಿಚಾರಗಳಿಗೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ದಿ ಸಚಿವರ ಕಚೇರಿಯಿಂದಲೇ ನೇರವಾಗಿ ನಿರ್ವಹಣೆ ಮಾಡುವ ಆಲೋಚನೆಯಿದೆ. ʼಸಹಾಯಹಸ್ತʼ ಎನ್ನುವ ವೆಬ್‌ಸೈಟ್ ಅಭಿವೃದ್ದಿ ಮಾಡುತ್ತಿದ್ದು, ಇದರಿಂದ ನಾನೇ ನೇರವಾಗಿ ಎಲ್ಲಾ ಸಮಸ್ಯೆಗಳ ಬಗ್ಗೆ ಪರಿಶೀಲಿಸಿ ಅಗತ್ಯ ಪರಿಹಾರ ನೀಡುವ ಯೋಚನೆಯಿದೆ. ಜನರು ಪಾಲಿಕೆಗೆ ಮನವಿ ನೀಡಿ ಕಾಯುವ ಕೆಲಸ ಹೊಸ ಆಲೋಚನೆಯಿಂದ ತಪ್ಪುತ್ತದೆ ಎಂದು ತಿಳಿಸಿದರು.

ಸಂಚಾರ ದಟ್ಟಣೆ ಕಡಿಮೆ ಮಾಡಲು ಮೇಲ್ಸೆತುವೆ, ಮೆಟ್ರೋ ಹಾಗೂ ಸುರಂಗ ರಸ್ತೆ ಈ ಮೂರು ಬಗೆಯ ಪರಿಹಾರ ಮಾತ್ರ ಇರುವುದು. ಈಗ ರಸ್ತೆ ಅಗಲೀಕರಣ ಕಷ್ಟದ ಕೆಲಸ, ಭೂಮಿಯ ಸ್ವಾಧೀನದ ಬೆಲೆ ಹೊಸ ಕಾನೂನು ಬಂದ ನಂತರ ಹೆಚ್ಚಳವಾಗಿದೆ, ಜನ ನಮಗೆ ಸಹಕಾರ ನೀಡುವುದು ಸಹ ಕಷ್ಟವಾಗುತ್ತದೆ. ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದ್ದು, ಹೆಚ್ಚು ಸಂಚಾರ ದಟ್ಟಣೆ ಉಂಟಾಗುತ್ತಿರುವ ಐಟಿ ಪಾರ್ಕ್ ಉದ್ಯೋಗಿಗಳ ಕಚೇರಿ ಸಮಯ ಹಾಗೂ ಶಾಲೆಗಳ ಸಮಯದಲ್ಲಿ ಬದಲಾವಣೆ ಬಗ್ಗೆ ಚರ್ಚೆ ನಡೆಸಲು ಸಂಚಾರಿ ಪೊಲೀಸ್ ವಿಭಾಗಕ್ಕೆ ಸೂಚಿಸಲಾಗಿದ್ದು, ಅವರು ಚರ್ಚೆ ನಡೆಸಿ ಒಂದು ತೀರ್ಮಾನಕ್ಕೆ ಬಂದು ವರದಿ ಸಲ್ಲಿಸಲಿದ್ದಾರೆ ಎಂದು ತಿಳಿಸಿದರು.

ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಶಾಶ್ವತ ಪರಿಹಾರ

ರಾಜಕಾಲುವೆ ವಿಚಾರವಾಗಿ ಬಿಬಿಎಂಪಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದ್ದು, ನೀರು ಹರಿಯಲು ಎಲ್ಲೆಲ್ಲಿ ತೊಡಕುಂಟಾಗಿದೆ ಅಲ್ಲೆಲ್ಲಾ ಮುಂಚಿತವಾಗಿಯೇ ಒತ್ತುವರಿ ತೆರವುಗೊಳಿಸಲು ಸೂಚಿಸಲಾಗಿದೆ ಎಂದ ಅವರು, ಘನತ್ಯಾಜ್ಯ ನಿರ್ವಹಣೆ ವಿಚಾರದಲ್ಲಿ ಶಾಶ್ವತವಾಗಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಯೋಜನೆ ರೂಪಿಸುತ್ತಿದ್ದೇವೆ. ಕಸವನ್ನು ಒಂದು ಕಡೆ ಮಾತ್ರ ಹಾಕಲಾಗುತ್ತಿದ್ದು ಸರಿಯಾಗಿ ವಿಂಗಡಣೆಯಾಗುತ್ತಿಲ್ಲ. ಆದ ಕಾರಣ ಪರಿಸರ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳ ಸಭೆಯನ್ನು ಮಂಗಳವಾರ (ಅ.10) ಕರೆಯಲಾಗಿದೆ. ಒಮ್ಮೆ ಕಸವನ್ನು ಒಂದು ಕಡೆ ಹಾಕಿದರೆ ಮುಂದಿನ 40 ವರ್ಷಗಳು ಆ ಸ್ಥಳದಲ್ಲಿ ಯಾವುದೇ ಯೋಜನೆಗಳನ್ನು ಹಾಕಿಕೊಳ್ಳಬಾರದು. ಆ ಸ್ಥಳದಲ್ಲೇ ಕಸವನ್ನು ಗೊಬ್ಬರ ಹಾಗೂ ವೈಜ್ಞಾನಿಕ ವಿಂಗಡಣೆ ಮಾಡಲಾಗುವುದು ಎಂದು ಹೇಳಿದರು.

750 ಎಂಎಲ್ಡಿ ನೀರು ಪೂರೈಸುವ ಕಾವೇರಿ 5ನೇ ಹಂತ ಕಾಮಗಾರಿ ಮುಕ್ತಾಯ ಹಂತಕ್ಕೆ ಬಂದಿದ್ದು, ಇದರಿಂದ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಒದಗಿದಂತಾಗುತ್ತದೆ. 20 ಎಸ್ಟಿಪಿಗಳನ್ನು ಸ್ಥಾಪನೆ ಮಾಡಲಾಗುತ್ತಿದ್ದು, ಒಳಚರಂಡಿ ನೀರಿನ ಶುದ್ಧೀಕರಣ ಮಾಡುವ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಅನೇಕಲ್, ಅತ್ತಿಬೆಲೆ ಹಾಗೂ 110 ಹಳ್ಳಿಗಳಿಗೆ ಶೀಘ್ರ ಕಾವೇರಿ ನೀರು ನೀಡಲಾಗುವುದು ಎಂದು ತಿಳಿಸಿದರು.

ಬಿಡಿಎ ಅಪಾರ್ಟ್ಮೆಂಟ್ ಮತ್ತು ನಿವೇಶನಗಳ ಕುರಿತು ಎರಡು ದಿನಗಳಲ್ಲಿ ಪತ್ರಿಕಾಗೋಷ್ಠಿ ಕರೆದು ವಿವರಣೆ ನೀಡಲಾಗುವುದು. ಇದರ ಬಗ್ಗೆ ವಿಶೇಷವಾದ ಯೋಜನೆ ರೂಪಿಸುತ್ತಿದ್ದು ಪ್ರತ್ಯೇಕ ಚರ್ಚೆ ನಡೆಸಲಾಗುವುದು ಎಂದ ಅವರು, ಬೆಂಗಳೂರು ಯೋಜಿತವಾದ ನಗರವಲ್ಲ, ಒಂದಷ್ಟು ಭಾಗ ಮಾತ್ರ ಸಮರ್ಪಕವಾಗಿತ್ತು, ಆನಂತರ ಬೆಳೆದು, ಈಗ 28 ವಿಧಾನಸಭಾ ಕ್ಷೇತ್ರಗಳು ಒಳಗೆ ಸೇರಿಕೊಂಡಿವೆ. ಪ್ರತಿ ವರ್ಷ 2- 3 ಲಕ್ಷ ಜನರು ಹೊರಗಿನಿಂದ ಬಂದು ಬೆಂಗಳೂರು ಸೇರಿಕೊಳ್ಳುತ್ತಿದ್ದಾರೆ. 1.48 ಕೋಟಿ ಜನ ಬೆಂಗಳೂರಿನಲ್ಲಿ ವಾಸ ಮಾಡುತ್ತಿದ್ದು ಎಲ್ಲರೂ ವಾಸಿಸುವ ಯೋಗ್ಯ ನಗರವನ್ನಾಗಿ ರೂಪಿಸಲಾಗುವುದು ಎಂದು ಹೇಳಿದರು.

ಇದನ್ನೂ ಓದಿ | Karnataka Politics : ಡಿಕೆಶಿ ತಿಹಾರ್‌ ಜೈಲು ಪಾಲು ಎಂದ ಎಚ್‌ಡಿಕೆ ವಿರುದ್ಧ ಗುಡುಗಿದ ಡಿ.ಕೆ. ಬ್ರದರ್ಸ್‌!

ವಿದ್ಯುತ್ ಸಂಪರ್ಕ ಎಷ್ಟು ಹೆಚ್ಚಳವಾಗುತ್ತಿವೆ ಎನ್ನುವ ಆಧಾರದ ಮೇಲೆ ಅಂದಾಜು ಸಿಗುತ್ತಿದೆ. ಕುಡಿಯುವ ನೀರು, ಸಂಚಾರ ದಟ್ಟಣೆ ಸೇರಿ ಅನೇಕ ಸಮಸ್ಯೆಗಳು ಹೆಚ್ಚುತ್ತಿದ್ದು, ಇದರ ನಿವಾರಣೆಗೆ 8 ತಂಡಗಳನ್ನು ಮಾಡಿದ್ದು, ಅವು ನೀಡುವ ವರದಿಯ ಮೇಲೆ ಯೋಜನೆ ರೂಪಿಸಲಾಗುವುದು ಎಂದು ತಿಳಿಸಿದರು.

Exit mobile version