Site icon Vistara News

Narayana devalaya: ಕಣ್ಣಿನ ಉಚಿತ ಚಿಕಿತ್ಸೆ ಆಸ್ಪತ್ರೆ ಉದ್ಘಾಟನೆ, ಜಿಲ್ಲೆಯಲ್ಲೊಂದು ಹಾಸ್ಪಿಟಲ್‌ ಪ್ಲ್ಯಾನ್‌ ಸಕ್ಸಸ್‌ ಆಗಲಿ ಎಂದ ಸಿಎಂ

Narayana devalaya

ತುಮಕೂರು: ವೈದ್ಯಕೀಯ ಕ್ಷೇತ್ರದ ಎಲ್ಲರೂ ಬಡವರಿಗೆ ಸುಲಭ ದರದಲ್ಲಿ ಚಿಕಿತ್ಸೆ ನೀಡಲು ಯೋಜನೆ ರೂಪಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ ಮಾಡಿದರು. ಅವರು ಬುಧವಾರ ತುಮಕೂರಿನ ಶೆಟ್ಟಿಹಳ್ಳಿಯಲ್ಲಿ ನಾರಾಯಣ ದೇವಾಲಯ-(Narayana devalaya) ಉಚಿತ ನೇತ್ರ ಚಿಕಿತ್ಸಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು. ಡಾ ಭುಜಂಗ ಶೆಟ್ಟಿಯವರು ರಾಜ್ಯದ ಎಲ್ಲ‌ ಜಿಲ್ಲೆಗಳಲ್ಲಿ ಉಚಿತ ಆಸ್ಪತ್ರೆ ತೆರೆಯುವುದಾಗಿ ಹೇಳಿದ್ದಾರೆ‌. ಅವರ ಯೋಜನೆ ಸಫಲವಾಗಲಿ ಎಂದು ಹಾರೈಸಿದರು.

ʻʻನಾರಾಯಣ‌ ನೇತ್ರಾಲಯ ಉಚಿತ‌ ಚಿಕಿತ್ಸೆ ನೀಡಲು ಮುಂದೆ ಬಂದಿರುವುದು ರಾಜ್ಯದ ಭಾಗ್ಯ. ಡಾ: ಭುಜಂಗ ಶೆಟ್ಟಿಯವರು ತಮ್ಮ ವೃತ್ತಿ ಯಲ್ಲಿ ಯಶಸ್ವಿಯಾಗಿದ್ದಾರೆ. ಯಶಸ್ಸು ಪಡೆದವರೆಲ್ಲಾ ಬದುಕಿನಲ್ಲಿ ಸಮಾಜಕ್ಕೆ ಹಿಂತಿರುಗಿಸಿ ನೀಡಬೇಕೆಂಬ ಸಣ್ಣ ಗುಣಧರ್ಮವಿದ್ದರೆ , ಈ ಜಗತ್ತು ಇನ್ನಷ್ಟು ಉತ್ತಮವಾಗುತ್ತದೆ. ಎಲ್ಲರಿಗೂ ಶ್ರೀಮಂತಿಕೆ ಇರುವುದಿಲ್ಲ. ಅಂತಿಮವಾಗಿ ನಮ್ಮ ದುಡಿಮೆ, ಶ್ರೀಮಂತಿಕೆ ಸೃಷ್ಟಿಗೆ ಸೇರಿದ್ದು. ನಾವು ಸೃಷ್ಟಿಯ ಭಾಗವಷ್ಟೇ. ಭುಜಂಗ ಶೆಟ್ಟಿಯವರಿಗೆ ನಾನು ಎನ್ನುವ ಭಾವವಿಲ್ಲ. ಕೃತಿಯಲ್ಲಿ ಮಾಡುವ ದೊಡ್ಡ ಗುಣ ಅವರು ಹಾಗೂ ಅವರ ಕುಟುಂಬದವರಿಗೆ ಇದೆʼʼ ಎಂದು ಬೊಮ್ಮಾಯಿ ಹೇಳಿದರು.

ಆರೋಗ್ಯಕ್ಕಾಗಿ ವಿಶೇಷ ಕಾರ್ಯಕ್ರಮಗಳು
ನಮ್ಮ ಸರ್ಕಾರ ಕಣ್ಣಿನ ಚಿಕಿತ್ಸೆಗೆ ಯೋಜನೆ ರೂಪಿಸಿದ್ದೇವೆ. 60 ವರ್ಷ ಮೇಲ್ಪಟ್ಟವರಿಗೆ ಕಣ್ಣಿನ ತಪಾಸಣೆ, ಚಿಕಿತ್ಸೆ, ಉಚಿತ ಕನ್ನಡಕ ನೀಡುವ ಯೋಜನೆ ಜನವರಿಯಲ್ಲಿ ಉದ್ಘಾಟನೆಗೊಳ್ಳಲಿದೆ. ಈ ಯೋಜನೆಗೆ ಡಾ.‌ಭುಜಂಗಶೆಟ್ಟಿ ಅವರು ಮೆಂಟರ್ ಆಗಿ ಬರಬೇಕು. ಬಡವರಿಗೆ ಉಚಿತ ಚಿಕಿತ್ಸೆ ನೀಡುವ ಈ ಯೋಜನೆ ರಾಜ್ಯದಲ್ಲಿ ಮೊದಲ ಬಾರಿಗೆ ಜಾರಿಯಾಗಿದೆ ಎಂದು ಬೊಮ್ಮಾಯಿ ವಿವರಿಸಿದರು.

ಕಿವಿಯ ಸಮಸ್ಯೆಗೆ ಕಾಕ್ಲಿಯರ್ ಇಂಪ್ಲಾಂಟ್ ಮಾಡುವ ಯೋಜನೆ 500 ಕೋಟಿ ರೂ.ಗಳ ಯೋಜನೆ ರೂಪಿಸಿದ್ದೇವೆ. ನಮ್ಮ ಸರ್ಕಾರ ಅತ್ಯಂತ ಸೂಕ್ಷ್ಮ ವಿಚಾರಗಳ‌ ಕಡೆಗೆ ಹೆಚ್ಚಿನ ಗಮನ ನೀಡಿದ್ದೇವೆ. ಡಯಾಲಿಸಿಸ್ ಸೈಕಲ್ ನ್ನು 30 ಸಾವಿರದಿಂದ 60 ಸಾವಿರಕ್ಕೆ ಹೆಚ್ಚಿಸಲಾಗಿದೆ. ಕ್ಯಾನ್ಸರ್ ಚಿಕಿತ್ಸೆಗೆ 12 ಹೊಸ ಕೇಂದ್ರಗಳನ್ನು ತೆರೆದು ಕೀಮೋಥೆರಪಿ ಸೈಕಲ್ ಗಳನ್ನು ದುಪ್ಪಟ್ಟು ಮಾಡಲಾಗಿದೆ. ಸಾಮಾನ್ಯ ಆರೋಗ್ಯ ತಪಾಸಣೆಯನ್ನು ಪ್ರರಿ ತಾಲ್ಲೂಕು ಹಾಗೂ ಜಿಲ್ಲೆಗಳಲ್ಲಿ ಕೈಗೊಳ್ಳಲು ಆದೇಶ ಹೊರಡಿಸಿದೆ. 100 ಪಿ.ಹೆಚ್.ಸಿ ಕೇಂದ್ರಗಳನ್ನು ಸಿ.ಹೆಚ್.ಸಿ ಕೇಂದ್ರಗಳಾಗಿ ತಲಾ 10.ಕೋಟಿ ರೂ.ಗಳ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲಾಗಿದೆ. ಆರೋಗ್ಯ ಮೂಲಸೌಕರ್ಯ ಅಭಿವೃದ್ಧಿ ಹಾಗೂ ರೋಗಿಗಳಿಗೆ ಚಿಕಿತ್ಸೆ ನೀಡುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ ಎಂದರು ಬೊಮ್ಮಾಯಿ

ಸಂಪೂರ್ಣ ಉಚಿತ ಕಣ್ಣಿನ ಆಸ್ಪತ್ರೆ
ಇದು ಸಂಪೂರ್ಣ ಉಚಿತ ಆಸ್ಪತ್ರೆ ಇಲ್ಲಿ ಕ್ಯಾಶ್ ಕೌಂಟರ್ ಇರುವುದಿಲ್ಲ ಎಂದು ತಿಳಿದಾಗ ಇದು ಹೇಗೆ ಸಾಧ್ಯ ಎಂದು ಆಶ್ಚರ್ಯವಾಯಿತು. ಶೇ. 100 ರಷ್ಟು ಅವರ ದುಡಿಮೆಯಿಂದ ಪುಣ್ಯದ ಕಾರ್ಯವಾಗಿ ಈ ಕೆಲಸ ಮಾಡುತ್ತಿರುವುದು ತಿಳಿದು ಹೃದಯ ತುಂಬಿ ಬಂದಿತು. ಈ ರೀತಿಯ ಆಸ್ಪತ್ರೆ ರಾಜ್ಯದಲ್ಲಿ ಎಲ್ಲಿಯೂ ಇಲ್ಲ. ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ಮಾಡುತ್ತಾರೆ. ಆದರೆ ಎಲ್ಲಾ ರೀತಿಯ ಆಧುನಿಕ ವ್ಯವಸ್ಥೆಯನ್ನು ಒಳಗೊಂಡ ಆಸ್ಪತ್ರೆ ಇದಾಗಿದೆ‌. ಬಡವರಿಗೆ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆ ನೀಡಬೇಕೆನ್ನುವ ತೀರ್ಮಾನ ಮಾದರಿಯಾಗಿದೆ. ಎಲ್ಲಾ ಯಶಸ್ವಿ ವೈದ್ಯರು ಇದನ್ನು ಅನುಸರಿಸಬೇಕು ಎಂದರು.

ಬಡವರು ಉತ್ತಮ ವೈದ್ಯಕೀಯ ಸೇವೆ ಪಡೆಯಲು ಗಂಭೀರವಾಗಿ ಚಿಂತನೆ ಅಗತ್ಯ
ವೈದ್ಯರು ಉತ್ತಮ ಸೇವೆಯನ್ನು ಕಡಿಮೆ ದರದಲ್ಲಿ ನೀಡುವ ಕೆಲಸ ಮಾಡಬೇಕು. ವೈದ್ಯಕೀಯ ಸೇವೆ ಅತ್ಯಂತ ದುಬಾರಿಯಾಗಿದೆ. ದೊಡ್ಡ ಪ್ರಮಾಣದ ಹಣ ಅಗತ್ಯವಿದೆ. ಬಡವರು ಉತ್ತಮ ವೈದ್ಯಕೀಯ ಸೇವೆ ಪಡೆಯಲು ಸಾಧ್ಯವಾಗದಂತಾಗಿದೆ. ಈ ಬಗ್ಗೆ ನಾವು ಗಂಭೀರವಾಗಿ ಚಿಂತನೆ. ಮಾಡಬೇಕಿದೆ. ನಮ್ಮ ಬಂಧುಗಳಿಗೆ ಆರ್ಥಿಕ ವ್ಯವಸ್ಥೆ ಇಲ್ಲದ ಕಾರಣ ರೋಗದಿಂದ ನರಳಿ ಸಾವನಪ್ಪುವುದನ್ನು ನೋಡಿ ಸುಮ್ಮನಿರಲು ಸಾಧ್ಯವಿಲ್ಲ.
ಇಡೀ ರಾಜ್ಯ ಹಾಗೂ ರಾಷ್ಟ್ರದಲ್ಲಿ ಚಿಂತನೆಯಾಗಬೇಕು. ಔಷಧಗಳ ಆರ್. ಅಂಡ್ ಡಿ ಯಿಂದ ಹಿಡಿದು, ಪರಿಕರಗಳ ಉತ್ಪಾದನೆ ಹಾಗೂ ವೈದ್ಯರು ಕೂಡ ಈ ಬಗ್ಗೆ ಚಿಂತನೆ ಮಾಡಬೇಕು ಎಂದರು.

ಬಡವರಿಗೆ ಸುಲಭ ದರದಲ್ಲಿ ಚಿಕಿತ್ಸೆ ದೊರೆಯಬೇಕು
ಈಗಾಗಲೇ ಹಲವಾರು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಪ್ರಧಾನ ಮಂತ್ರಿ ಅವರು ಆಯುಷ್ಮಾನ್ ಭಾರತ ಯೋಜನೆಯಡಿ 5 ಲಕ್ಷ ರೂವರೆಗೂ ಬಡವರ ಚಿಕಿತ್ಸೆಗಾಗಿ ಜಾರಿಗೊಳಿಸಿದ್ದಾರೆ. ರಾಜ್ಯ ದಲ್ಲಿ 5 ಕೋಟಿ ಕಾರ್ಡುಗಳನ್ನು ನೀಡುವ ಗುರಿ ಇದ್ದು, ಈಗಾಗಲೇ ಒಂದು ಕೋಟಿ ಕಾರ್ಡ್ ನೀಡಿದ್ದೇವೆ. ಇದೊಂದು ಕಡೆಯಾದರೆ, ಸಾಮಾನ್ಯ ಜನರಿಗೆ ಯಾವುದೇ ತೊಂದರೆ ಇಲ್ಲದೆ ನೇರವಾಗಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯಬೇಕಾದರೆ ಅವರಿಗೆ ಸುಲಭ ದರದಲ್ಲಿ ಚಿಕಿತ್ಸೆ ದೊರೆಯುವುದು ಮುಖ್ಯ ಎಂದರು.

ಕಾರ್ಯಕ್ರಮದಲ್ಲಿ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಸಚಿವರಾದ ಬಿ.ಸಿ.ನಾಗೇಶ್, ಗೋವಿಂದ ಕಾರಜೋಳ, ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ.ಸೋಮಶೇಖರ್, ನಾರಾಯಣ ನೇತ್ರಾಲಯ ಆಸ್ಪತ್ರೆಯ ಹಿರಿಯ ವೈದ್ಯ ಡಾ. ಭುಜಂಗಶೆಟ್ಟಿ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ | Namma Clinic | ರಾಜ್ಯದಲ್ಲಿ 437 ನಮ್ಮ ಕ್ಲಿನಿಕ್ ಆರಂಭಿಸಲು ಕ್ರಮ: ಸಿಎಂ ಬಸವರಾಜ ಬೊಮ್ಮಾಯಿ‌

Exit mobile version