Site icon Vistara News

Dr K Bhujang Shetty: ಅಂಧರ ಬಾಳಿಗೆ ಬೆಳಕಾಗಿದ್ದ ನಾರಾಯಣ ನೇತ್ರಾಲಯದ ಖ್ಯಾತ ನೇತ್ರ ತಜ್ಞ ಡಾ. ಭುಜಂಗ ಶೆಟ್ಟಿ ಇನ್ನಿಲ್ಲ

Bhujang Shetty passes away in Bengaluru

Bhujang Shetty passes away in Bengaluru

ಬೆಂಗಳೂರು: ನಾರಾಯಣ ನೇತ್ರಾಲಯದ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕ, ಪ್ರಖ್ಯಾತ ನೇತ್ರ ತಜ್ಞ ಡಾ. ಕೆ. ಭುಜಂಗ ಶೆಟ್ಟಿ (69) (Dr K Bhujang Shetty) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾದರು. ಆಸ್ಪತ್ರೆಗೆ ಬಂದು ರೋಗಿಗಳಿಗೆ ಚಿಕಿತ್ಸೆ ನೀಡಿ, ಮನೆಗೆ ತೆರಳಿದ ಬಳಿಕ ಸಂಜೆ ಅವರಿಗೆ ಹೃದಯಾಘಾತವಾಗಿದೆ. ತಕ್ಷಣ ಅವರನ್ನು ಯಶವಂತಪುರದ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು.

ಮಣಿಪಾಲ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಫಿರೋಜ್ ಅಹ್ಮದ್ ಪ್ರತಿಕ್ರಿಯಿಸಿ, ಸಂಜೆ 7.30ರಲ್ಲಿ ಮನೆಯಲ್ಲಿ ವ್ಯಾಯಾಮ ಮಾಡುವಾಗ ಡಾ. ಕೆ. ಭುಜಂಗ ಶೆಟ್ಟಿ ಅವರಿಗೆ ತೀವ್ರ ಸ್ವರೂಪದ ಹೃದಯಾಘಾತವಾಗಿದೆ. ಕೂಡಲೆ ನಮ್ಮ ಆಸ್ಪತ್ರೆಗೆ ಅವರನ್ನು ಕರೆತರಲಾಯಿತು. ಐಸಿಯುನಲ್ಲಿ ಅವರಿಗೆ ಚಿಕಿತ್ಸೆ ನೀಡಿ ಬದುಕಿಸುವ ಪ್ರಯತ್ನ ಮಾಡಿದೆವು. ಆಸ್ಪತ್ರೆಗೆ ಕರೆತರುವ ವೇಳೆಯೇ ಅವರ ನಾಡಿ ಬಡಿತ ನಿಂತಿತ್ತು. ಎಲ್ಲಾ ರೀತಿಯ ಪ್ರಯತ್ನ ಪಟ್ಟೆವು, ಆದರೆ, ಅವರು ರಾತ್ರಿ 9.40ಕ್ಕೆ ಕೊನೆಯುಸಿರೆಳೆದಿದ್ದಾರೆ ಎಂದು ಮಾಹಿತಿ ನೀಡಿದರು.

ಶನಿವಾರ ಮಧ್ಯಾಹ್ನ ಹರಿಶ್ಚಂದ್ರ ಘಾಟ್‌ನಲ್ಲಿ‌ ಅಂತ್ಯ ಸಂಸ್ಕಾರ

ರಾಜಾಜಿನಗರದ ನಾರಾಯಣ ನೇತ್ರಾಲಯದಲ್ಲಿ ಡಾ. ಕೆ. ಭುಜಂಗ ಶೆಟ್ಟಿ ಅವರ ಅಂತಿಮ ದರ್ಶನಕ್ಕೆ ಶನಿವಾರ ವ್ಯವಸ್ಥೆ ಮಾಡಲಾಗುತ್ತದೆ. ಬೆಳಗ್ಗೆ 10 ಗಂಟೆಯ ನಂತರ ಮಣಿಪಾಲ ಆಸ್ಪತ್ರೆಯ ಶವಗಾರದಿಂದ ನಾರಾಯಣ ಆಸ್ಪತ್ರೆಗೆ ಪಾರ್ಥಿವ ಶರೀರವನ್ನು ಸ್ಥಳಾಂತರಿಸಲಾಗುತ್ತದೆ. 11 ಗಂಟೆಯಿಂದ 2 ಗಂಟೆಯವರಗೆ ಅಂತಿಮ ದರ್ಶನಕ್ಕೆ ಅವಕಾಶವಿರಲಿದೆ. ಬಳಿಕ ಹರಿಶ್ಚಂದ್ರ ಘಾಟ್‌ನಲ್ಲಿ‌ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳಿಂದ ಮಾಹಿತಿ ದೊರೆತಿದೆ.

ಡಾ. ಭುಜಂಗ ಶೆಟ್ಟಿ ಹಿನ್ನೆಲೆ

1953ರಲ್ಲಿ ಕುಂದಾಪುರದಲ್ಲಿ ಡಾ.ಭುಜಂಗ ಶೆಟ್ಟಿ ಅವರು ಜನಿಸಿದರು. 1978ರಲ್ಲಿ ಬೆಂಗಳೂರಿನಲ್ಲಿ ಎಂಬಿಬಿಎಸ್ ವಿದ್ಯಾಭ್ಯಾಸ ಮಾಡಿದರು. 1982ರಲ್ಲಿ ಮಿಂಟೋ ಆಸ್ಪತ್ರೆಯಲ್ಲಿ ವೈದ್ಯಕೀಯ ಸೇವೆ ಆರಂಂಭಿಸಿದ ಅವರಿಗೆ 2010ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿತ್ತು. ಇವರು ಪುತ್ರಿ ನಯನಾ ಶೆಟ್ಟಿ, ಪುತ್ರ ನರೇನ್‌ ಶೆಟ್ಟಿ ಅವರನ್ನು ಅಗಲಿದ್ದಾರೆ.

ಯಾವುದೇ ಔಷಧ ಇಲ್ಲದೆ ಕೇವಲ ಆಹಾರ ಪದ್ಧತಿ ಬದಲಾವಣೆ ಮೂಲಕ ಸಕ್ಕರೆ ಕಾಯಿಲೆಯನ್ನು ಸಂಪೂರ್ಣವಾಗಿ ಗೆಲ್ಲಬಹುದು ಎಂದು ರಿವರ್ಸ್‌ ಡಯಾಬಿಟಿಸ್‌ ಎಂಬ ಸರಳ ಸೂತ್ರದ ಮೂಲಕ ಭುಜಂಗ ಶೆಟ್ಟಿ ಅವರು ಮಧುಮೇಹವನ್ನು ಗೆದ್ದಿದ್ದರು.

ಇದನ್ನೂ ಓದಿ | Mono Diet: ಏಕಾಹಾರ ಪದ್ಧತಿಯೆಂಬ ಶಾರ್ಟ್‌ಕಟ್:‌ ದಿಢೀರ್‌ ತೂಕ ಇಳಿಕೆ ಒಳ್ಳೆಯದೇ?

ಡಾ. ರಾಜ್‌ ಕುಮಾರ್ ಕುಟುಂಬದ ವೈದ್ಯರಾಗಿ ಸೇವೆ

ಡಾ.ಭುಜಂಗ ಶೆಟ್ಟಿ ಅವರ ಸಮ್ಮುಖದಲ್ಲಿ ನೇತ್ರದಾನ ಪ್ರತಿಜ್ಞೆ ಮಾಡಿದ್ದ ಡಾ. ರಾಜ್ ಕುಮಾರ್‌

ನಾರಾಯಣ ನೇತ್ರಾಲಯದ ಮುಖ್ಯಸ್ಥರಾಗಿದ್ದ ಭುಜಂಗ ಶೆಟ್ಟಿ ಅವರು, ಡಾ. ರಾಜ್ ಕುಮಾರ್ ಕುಟುಂಬದ ವೈದ್ಯರಾಗಿದ್ದರು. ಅಲ್ಲದೆ ನಾರಾಯಣ ನೇತ್ರಾಲಯದಲ್ಲಿ ಡಾ. ರಾಜ್ ಕುಮಾರ್ ನೇತ್ರದಾನ ಕೇಂದ್ರವನ್ನು ಸ್ಥಾಪಿಸಿ, ಬಹುದೊಡ್ಡ ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಂಡಿದ್ದರು.

1994ರಲ್ಲಿ ನಾರಾಯಣ ನೇತ್ರಾಲಯ ಉದ್ಘಾಟನೆ ವೇಳೆ ಡಾ. ರಾಜ್‌ ಕುಮಾರ್‌ ಅವರು ತಮ್ಮ ಕುಟುಂಬ ಸದಸ್ಯರೆಲ್ಲರ ಕಣ್ಣುಗಳನ್ನು ದಾನ ಮಾಡುವುದಾಗಿ ಪ್ರತಿಜ್ಞೆ ಮಾಡಿದ್ದರು. ನಂತರ 2006ರಲ್ಲಿ ಅವರು ನಿಧನರಾದ ಬಳಿಕ ಅವರ ಕಣ್ಣುಗಳನ್ನು ದಾನ ಮಾಡಲಾಯಿತು. ಇನ್ನು ಪುನೀತ್ ರಾಜ್ ಕುಮಾರ್ ಅವರು ನಿಧನರಾಗಿದ್ದಾಗ ಅವರು ಕಣ್ಣುಗಳನ್ನು ದಾನ ಮಾಡಲಾಗಿತ್ತು. ಭುಜಂಗ ಶೆಟ್ಟಿ ಮಾರ್ಗದರ್ಶನದಲ್ಲಿ ಎರಡು ಕಣ್ಣುಗಳನ್ನು ಬಳಸಿಕೊಂಡು ನಾಲ್ವರಿಗೆ ದೃಷ್ಟಿ ನೀಡಲಾಗಿತ್ತು.

ಭುಜಂಗ ಶೆಟ್ಟಿ ಅವರ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸೇರಿ ರಾಜಕೀಯ ನಾಯಕರು ಹಾಗೂ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಬಸವರಾಜ ಬೊಮ್ಮಾಯಿ ಸಂತಾಪ

ಖ್ಯಾತ ನೇತ್ರ ತಜ್ಞರಾದ ಡಾ. ಭುಜಂಗ ಶೆಟ್ಟಿ ಅವರು ಹೃದಯಾಘಾತದಿಂದ ನಿಧನರಾದ ವಿಷಯ ತಿಳಿದು ಅತ್ಯಂತ‌ ದುಃಖವಾಗಿದೆ‌. ಕಣ್ಣಿನ ಶಸ್ತ್ರಚಿಕಿತ್ಸೆ ಮೂಲಕ ಸಾವಿರಾರು ಅಂಧರ ಬಾಳಿಗೆ ಬೆಳಕಾಗಿದ್ದ ಭುಜಂಗ ಶೆಟ್ಟಿ ಅವರ ನಿಧನದಿಂದ ರಾಜ್ಯ ಒಬ್ಬ ನೇತ್ರ ತಜ್ಞನನ್ನು ಕಳೆದುಕೊಂಡಂತಾಗಿದೆ. ದೇವರು ಅವರ ಆತ್ಮಕ್ಕೆ ಸದ್ಗತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಎಂದು ಟ್ವೀಟ್‌ ಮಾಡಿ ಸಂತಾಪ ಸೂಚಿಸಿದ್ದಾರೆ.

ಡಿ.ಕೆ. ಶಿವಕುಮಾರ್ ಸಂತಾಪ

ಖ್ಯಾತ ನೇತ್ರತಜ್ಞ ಡಾ. ಕೆ. ಭುಜಂಗ ಶೆಟ್ಟಿ ಅವರ ನಿಧನಕ್ಕೆ ನಿಯೋಜಿತ ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸಂತಾಪ ಸೂಚಿಸಿದ್ದಾರೆ.

“ಭುಜಂಗ ಶೆಟ್ಟಿ ಅವರು ಆರೋಗ್ಯ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ ಅಪಾರ. ರಾಜ್ಯ ಕಂಡ ಶ್ರೇಷ್ಠ ವೈದ್ಯರಲ್ಲಿ ಒಬ್ಬರು. ಜನರಲ್ಲಿ ಆರೋಗ್ಯ ಕುರಿತು ಜಾಗೃತಿ ಮೂಡಿಸುತ್ತಾ ಬಹಳ ದೂರದೃಷ್ಟಿ ಹೊಂದಿದ್ದ ವೈದ್ಯರಾಗಿದ್ದರು. ನಾರಾಯಣ ನೇತ್ರಾಲಯದ ಮುಖ್ಯಸ್ಥರಾಗಿ ಭುಜಂಗ ಶೆಟ್ಟಿ ಅವರು ಈ ಸಂಸ್ಥೆಯನ್ನು ಅತ್ಯುನ್ನತ ಮಟ್ಟಕ್ಕೆ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅತ್ಯಾಧುನಿಕ ತಂತ್ರಜ್ಞಾನ ಮೂಲಕ ಸಾರ್ವಜನಿಕರಿಗೆ ಸೇವೆ ಒದಗಿಸಿಕೊಂಡು ಬಂದಿದ್ದವರು ಎಂದು ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಇದನ್ನೂ ಓದಿ | Mobile Addiction: ಅತಿಯಾಗಿ ಮೊಬೈಲ್ ಬಳಸ್ತೀರಾ? ನಿಮ್ಮ ಹೃದಯಕ್ಕಿದುವೇ ಡೇಂಜರ್!

ಆರೋಗ್ಯ ಕ್ಷೇತ್ರದಲ್ಲಿ ಅಪಾರ ಸೇವೆಗೆ 2010 ರಲ್ಲಿ ರಾಜ್ಯೋತ್ಸವ ಪುರಸ್ಕಾರ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಇವರು ಭಾಜನರಾಗಿದ್ದಾರೆ. ಭುಜಂಗ ಶೆಟ್ಟಿ ಅವರ ನಿಧನದ ಸುದ್ದಿ ಕೇಳಿ ಮನಸ್ಸಿಗೆ ಬಹಳ ಬೇಸರವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ಅವರ ಕುಟುಂಬ ಸದಸ್ಯರು ಹಾಗೂ ಆತ್ಮೀಯರಿಗೆ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ” ಎಂದು ಶಿವಕುಮಾರ್ ಅವರು ತಮ್ಮ ಸಂತಾಪ ನುಡಿಯಲ್ಲಿ ತಿಳಿಸಿದ್ದಾರೆ.

Exit mobile version