ಉಡುಪಿ: ಇನ್ನೆರಡು ದಿನಗಳಲ್ಲಿ ನಾರಾಯಣಗುರು ನಿಗಮ ರಚನೆ ಮಾಡಿ ಘೋಷಣೆ ಮಾಡಲಾಗುವುದು. ಈ ಬಗ್ಗೆ ಯಾರಿಗೂ ಯಾವುದೇ ರೀತಿಯ ಆತಂಕ ಬೇಡ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಟ್ವೀಟ್ ಮೂಲಕ ಭರವಸೆ ನೀಡಿದ್ದಾರೆ.
ಬಿಲ್ಲವ ಸಮುದಾಯದವರು ಹಲವು ವರ್ಷಗಳಿಂದ ನಿಗಮ ಮಂಡಳಿ ರಚನೆಗಾಗಿ ನಿರಂತರವಾಗಿ ಬೇಡಿಕೆ ಇಡುತ್ತಾ ಬಂದಿದ್ದು, ಕೆಲವು ದಿನಗಳ ಹಿಂದೆ ಇಂಧನ ಸಚಿವ ಸುನೀಲ್ ಕುಮಾರ್ ನೇತೃತ್ವದಲ್ಲಿ ನಿಯೋಗ ತೆರಳಿತ್ತು. ಬಿಲ್ಲವ ಸಮುದಾಯದ ನಾಯಕರ ಜತೆ ನಿಯೋಗ ತೆರಳಿ ಮುಖ್ಯಮಂತ್ರಿಗಳಿಗೆ ಮನವಿಯನ್ನೂ ಸಲ್ಲಿಸಲಾಗಿತ್ತು. ಈ ಬಾರಿಯ ರಾಜ್ಯ ಬಜೆಟ್ ನಲ್ಲಿ ನಾರಾಯಣ ಗುರು ನಿಗಮ ಮಂಡಳಿ ಘೋಷಣೆಯಾಗಲಿದೆ ಎಂಬ ನಿರೀಕ್ಷೆಯಲ್ಲಿ ಸಮುದಾಯದ ಮುಖಂಡರು ಇದ್ದರು.
ಕೋಟ ಶ್ರೀನಿವಾಸ್ ಪೂಜಾರಿ ಮಾಡಿರುವ ಟ್ವೀಟ್
ಆದರೆ, ಈ ಬಾರಿಯ ಬಜೆಟ್‌ನಲ್ಲಿ ಬಿಲ್ಲವ ಸಮುದಾಯದವರ ಮನವಿಯಂತೆ ನಾರಾಯಣಗುರು ನಿಗಮ ಘೋಷಣೆಯಾಗಲಿಲ್ಲ. ಈ ಹಿನ್ನೆಲೆಯಲ್ಲಿ ಸಮಾಜದವರಿಂದ ಸಚಿವರ ಮೇಲೆ ತೀವ್ರ ಒತ್ತಡ ಹೇರಲಾಗುತ್ತಿದೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಟ್ವೀಟ್ ಮಾಡಿದ್ದು, “ನಾರಾಯಣ ಗುರು ನಿಗಮ ವಿಚಾರದಲ್ಲಿ ಯಾರಿಗೂ ಆತಂಕ ಬೇಡ. ಮನ್ನಿಸಿ…. ಇನ್ನೆರೆಡು ದಿನಗಳಲ್ಲಿ ನಿಗಮವನ್ನು ಘೋಷಣೆ ಮಾಡುತ್ತೇವೆ. ಈ ಜವಾಬ್ದಾರಿ ನನ್ನದು” ಎಂದು ಬರೆದುಕೊಂಡಿದ್ದಾರೆ.