Site icon Vistara News

ಚಿತ್ತಾಪುರದಲ್ಲಿ ಮೇ 6ರಂದು ನಡೆಯಬೇಕಿದ್ದ ಮೋದಿ ರ‍್ಯಾಲಿ ರದ್ದು; ಅಭ್ಯರ್ಥಿ ವಿರುದ್ಧ ಇರುವ ಕೇಸ್‌ ಕಾರಣ?

Narendra Modi To Visit US

Narendra Modi To Address Sold-Out Diaspora Event In Washington

ಬೆಂಗಳೂರು/ಕಲಬುರಗಿ: ಕಲಬುರಗಿ ಜಿಲ್ಲೆಯ ಚಿತ್ತಾಪುರ ವಿಧಾನಸಭೆ ಕ್ಷೇತ್ರದಲ್ಲಿ ಮೇ 6ರಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಬೇಕಿದ್ದ ಚುನಾವಣೆ ಸಮಾವೇಶವನ್ನು ಕೊನೆಯ ಕ್ಷಣದಲ್ಲಿ ರದ್ದುಗೊಳಿಸಲಾಗಿದೆ. ಕೆಲ ದಿನಗಳ ಹಿಂದಷ್ಟೇ ಕಲಬುರಗಿ ಎಸ್‌ಪಿ ಇಶಾ ಪಂತ್‌ ಅವರು ಸಮಾವೇಶದ ಸ್ಥಳ ಪರಿಶೀಲನೆ ಮಾಡಿದ್ದರು. ಸಮಾವೇಶದ ಆಯೋಜನೆಗೆ ಸಕಲ ಸಿದ್ಧತೆಯನ್ನೂ ಕೈಗೊಳ್ಳಲಾಗಿತ್ತು. ಆದರೆ, ಈಗ ಏಕಾಏಕಿ ಸಮಾವೇಶವನ್ನು ರದ್ದುಗೊಳಿಸಲಾಗಿದೆ.

“ಕಲಬುರಗಿ ಜಿಲ್ಲೆ ಚಿತ್ತಾಪುರದಲ್ಲಿ ಮೇ 6ರಂದು ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಲು ಉದ್ದೇಶಿಸಿರುವ ನರೇಂದ್ರ ಮೋದಿ ಅವರ ಸಾರ್ವಜನಿಕ ಸಭೆಯನ್ನು ರದ್ದುಗೊಳಿಸಲಾಗಿದೆ” ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಪ್ರಕಟಣೆ ತಿಳಿಸಿದ್ದಾರೆ. ನರೇಂದ್ರ ಮೋದಿ ಅವರು ಚಿತ್ತಾಪುರ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್‌ ಪರ ಪ್ರಚಾರ ಮಾಡುವವರಿದ್ದರು.

ಅಭ್ಯರ್ಥಿ ವಿರುದ್ಧ ಕೇಸ್‌ ಇರುವುದೇ ಕಾರಣ?

ಮಣಿಕಂಠ ರಾಠೋಡ್‌ ವಿರುದ್ಧ ಹತ್ತಾರು ಕ್ರಿಮಿನಲ್‌ ಕೇಸ್‌ ಇರುವ ಕಾರಣದಿಂದಾಗಿಯೇ ನರೇಂದ್ರ ಮೋದಿ ಅವರ ಸಮಾವೇಶ ರದ್ದುಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಈಗಾಗಲೇ ರೌಡಿಶೀಟರ್‌ ಹಿನ್ನೆಲೆಯ ವ್ಯಕ್ತಿಗೆ ಟಿಕೆಟ್‌ ನೀಡಿರುವುದು ಕ್ಷೇತ್ರದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇತ್ತೀಚೆಗಷ್ಟೇ, ಮಣಿಕಂಠ ರಾಠೋಡ್‌ ಗನ್‌ ಹಿಡಿದು ಕುಳಿತ ವಿಡಿಯೊ ವೈರಲ್‌ ಆಗಿತ್ತು. ಇದರಿಂದ ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತವಾಗುತ್ತಿದೆ. ಇದೇ ಕಾರಣಕ್ಕಾಗಿಯೇ ಮೋದಿ ಅವರ ಕಾರ್ಯಕ್ರಮ ರದ್ದುಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಚಿತ್ತಾಪುರ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್.

ಭದ್ರತಾ ವೈಫಲ್ಯವೂ ಕಾರಣ?

ರಾಯಚೂರಿನ ಸಿಂಧನೂರಿನಲ್ಲಿ ಭದ್ರತಾ ವೈಫಲ್ಯ ನಡೆದಿರುವುದು ಕೂಡ ಚಿತ್ತಾಪುರ ಸಮಾವೇಶ ರದ್ದುಗೊಳಿಸಲು ಕಾರಣ ಎನ್ನಲಾಗುತ್ತಿದೆ. ಮಂಗಳವಾರ ಸಿಂಧನೂರಿನಲ್ಲಿ ನರೇಂದ್ರ ಮೋದಿ ಅವರ ಹೆಲಿಕಾಪ್ಟರ್‌ ಟೇಕಾಫ್‌ ಆಗುವ ವೇಳೆ ಯುವಕನೊಬ್ಬ ಹೆಲಿಪ್ಯಾಡ್‌ನತ್ತ ನುಗ್ಗಿ ಬಂದಿದ್ದ. ಭದ್ರತಾ ಸಿಬ್ಬಂದಿಯ ಕಣ್ಗಾವಲು ದಾಟಿ ಯುವಕ ಓಡಿ ಹೋಗಿದ್ದ. ಹೆಲಿಪ್ಯಾಡ್‌ ಸಮೀಪವೇ ಓಡಿ ಹೋಗಿದ್ದ. ಅಲ್ಲದೆ, ಹೆಲಿಕಾಪ್ಟರ್‌ ಲ್ಯಾಂಡ್‌ ಆಗುವಾಗ ಕೆಸರಿನಲ್ಲಿ ಸಿಲುಕಿ ಅವಘಡ ಸಂಭವಿಸಿತ್ತು. ಇದರಿಂದಾಗಿ ಕೂಡ ಸಮಾವೇಶ ರದ್ದುಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Modi in Karnataka: ಬೆಂಗಳೂರಲ್ಲಿ ಮೋದಿ ರೋಡ್‌ ಶೋ; ಎರಡು ದಿನದ ಬದಲು, ಒಂದೇ ದಿನ 36 ಕಿ.ಮೀ. ಸಂಚಾರ

ಮೇ 5, 6, 7ರಂದು ರಾಜ್ಯದಲ್ಲಿ ಮೋದಿ ಪ್ರಚಾರ

ಚಿತ್ತಾಪುರದ ಸಮಾವೇಶ ರದ್ದುಗೊಳಿಸಿದ ಬೆನ್ನಲ್ಲೇ ನರೇಂದ್ರ ಮೋದಿ ಅವರು ರಾಜ್ಯದಲ್ಲಿ ಕೈಗೊಳ್ಳುವ ಪ್ರವಾಸ ನಿಗದಿಪಡಿಸಲಾಗಿದೆ. ಮೇ 5ರಂದು ಮೋದಿ ಅವರು ಬಳ್ಳಾರಿ ಹಾಗೂ ತುಮಕೂರು ಜಿಲ್ಲೆಯಲ್ಲಿ ಬಹಿರಂಗ ಪ್ರಚಾರ ಮಾಡಲಿದ್ದಾರೆ. ಬೆಂಗಳೂರಿನಲ್ಲಿ 6ರಂದು ಮೋದಿ ರೋಡ್‌ ಶೋ ಕೈಗೊಳ್ಳಲಿದ್ದಾರೆ. ಹಾಗೆಯೇ, ಮೇ 7ರಂದು ಬಾದಾಮಿ ಹಾಗೂ ಹಾವೇರಿಯಲ್ಲಿ ಮೋದಿ ಪ್ರಚಾರ ಮಾಡಲಿದ್ದಾರೆ.

Exit mobile version