ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನಲ್ಲಿ ಎರಡು ಬೃಹತ್ ರೋಡ್ ಶೋ ಕೈಗೊಳ್ಳಲಿದ್ದು, ಇದಕ್ಕಾಗಿ ಬಿಜೆಪಿಯು ಸಕಲ ಸಿದ್ಧತೆ ಮಾಡಿಕೊಂಡಿದೆ. ಇದರ ಬೆನ್ನಲ್ಲೇ, ರೋಡ್ ಶೋ ಹಿನ್ನೆಲೆಯಲ್ಲಿ ಬೆಂಗಳೂರಿನ ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳು ಮಹತ್ವದ ಸಭೆ ನಡೆಸಿದ್ದಾರೆ. ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಸಭೆ ನಡೆದಿದ್ದು, ಭದ್ರತೆ ಸೇರಿ ಹಲವು ವಿಷಯಗಳ ಕುರಿತು ಚರ್ಚಿಸಲಾಗಿದೆ ಎಂದು ತಿಳಿದುಬಂದಿದೆ.
ಪೊಲೀಸ್ ಕಮೀಷನರ್, ಸಂಚಾರ ವಿಭಾಗದ ಸ್ಪೆಷಲ್ ಕಮೀಷನರ್, ಹೆಚ್ಚುವರಿ ಆಯುಕ್ತರು, ನಗರದ ಎಲ್ಲ ಡಿಸಿಪಿಗಳು, ಬಿಬಿಎಂಪಿ, ಅಧಿಕಾರಿಗಳು, ಚುನಾವಣಾಧಿಕಾರಿಗಳು, ಅಗ್ನಿಶಾಮಕ ಇಲಾಖೆ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದಾರೆ. ಅಲ್ಲದೆ, ಬಿಜೆಪಿ ಸಂಸದ ಪಿ.ಸಿ.ಮೋಹನ್ ಅವರು ಕೂಡ ಸಭೆಯಲ್ಲಿ ಭಾಗಿಯಾಗಿದ್ದಾರೆ.
ರೋಡ್ ಶೋ ವೇಳೆ ಪೊಲೀಸ್ ಬಂದೋಬಸ್ತ್, ಸಂಚಾರ ನಿರ್ವಹಣೆ, ಜನರ ನಿಯಂತ್ರಣ ಸೇರಿ ಹಲವು ಮುನ್ನೆಚ್ಚರಿಕೆ ಕ್ರಮಗಳ ಕುರಿತು ಸಭೆಯಲ್ಲಿ ಕೂಲಂಕಷವಾಗಿ ಚರ್ಚಿಸಲಾಗಿದೆ. ಪಿ.ಸಿ. ಮೋಹನ್ ಅವರು ರೋಡ್ ಶೋ ಬಗ್ಗೆ ಅಧಿಕಾರಿಗಳಿಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ. ರೋಡ್ ಶೋನಲ್ಲಿ ಎಷ್ಟು ಪ್ರಮಾಣದಲ್ಲಿ ಜನ ಭಾಗಿಯಾಗುತ್ತಾರೆ, ಸಾರ್ವಜನಿಕರ ನಿರ್ವಹಣೆ ಹೇಗೆ ಕೈಗೊಳ್ಳಬೇಕು ಎಂಬುದು ಸೇರಿ ಮುಂತಾದ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮೋದಿ ರೋಡ್ ಶೋಗೆ ಪ್ರತಿಯಾಗಿ ಮೇ 7ರಂದು ರಾಹುಲ್ ಗಾಂಧಿ ರೋಡ್ ಶೋ
10 ಲಕ್ಷ ಜನ ಸೇರುವ ಸಾಧ್ಯತೆ
“ಮೇ 6ರಂದು ಬೆಳಗ್ಗೆ 10 ಗಂಟೆಗೆ ನರೇಂದ್ರ ಮೋದಿ ಅವರು ಆಗಮಿಸಲಿದ್ದು, ಇಡೀ ರೋಡ್ ಶೋನಲ್ಲಿ 10 ಲಕ್ಷ ಜನ ಭಾಗಿಯಾಗುವ ನಿರೀಕ್ಷೆ ಇದೆ” ಎಂದು ಸಂಸದ ಪಿ.ಸಿ.ಮೋಹನ್ ಮಾಹಿತಿ ನೀಡಿದ್ದಾರೆ. “ಬೆಂಗಳೂರು ಪೊಲೀಸರಿಗೆ ಈಗಾಗಲೇ ರೂಟ್ ಮ್ಯಾಪ್ ನೀಡಿದ್ದೇವೆ. ಬೆಂಗಳೂರಿನ 18 ವಿಧಾನಸಭೆ ಕ್ಷೇತ್ರಗಳಲ್ಲಿ ಮೋದಿ ರೋಡ್ ಶೋ ಸಾಗಲಿದೆ. ಪೊಲೀಸರು ಕೂಡ ನಮಗೆ ಹಲವು ಸಲಹೆ ನೀಡಿದ್ದಾರೆ. ಸಾರ್ವಜನಿಕರಿಗೆ ತೊಂದರೆ ಆಗಬಾರದು ಎಂದು ರೋಡ್ ಶೋ ಎರಡು ಕಿ.ಮೀ ದೂರ ಸಾಗುತ್ತಲೇ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ” ಎಂದು ತಿಳಿಸಿದರು.