ಬೆಂಗಳೂರು: ಕರ್ನಾಟಕದ ಗಮನ ಸೆಳೆದಿರುವ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ (Shivamogga Airport) ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ (ಫೆಬ್ರವರಿ ೨೭) ಚಾಲನೆ ನೀಡಲಿದ್ದಾರೆ. ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದ ನಂತರ ಕರ್ನಾಟಕದ ಎರಡನೇ ಅತಿ ಉದ್ದದ ರನ್‌ವೇ ಹೊಂದಿದ ವಿಮಾನ ನಿಲ್ದಾಣ ಎನಿಸಿರುವ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕುವೆಂಪು ಅವರ ಹೆಸರಿಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಹಾಗಾದರೆ, ಶಿವಮೊಗ್ಗ ವಿಮಾನ ನಿಲ್ದಾಣದ ವೈಶಿಷ್ಟ್ಯವೇನು? ಏರ್‌ಪೋರ್ಟ್ ಬಗ್ಗೆ ತಿಳಿಯಲೇಬೇಕಾದ ಐದು ಅಂಶಗಳು ಯಾವವು? ಇಲ್ಲಿದೆ ಮಾಹಿತಿ.
೧. ನರೇಂದ್ರ ಮೋದಿ ಅವರ ವಿಮಾನವೇ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಲಿರುವ ಮೊದಲ ವಿಮಾನ ಎನಿಸಲಿದೆ. ಆದಾಗ್ಯೂ, ಶಿವಮೊಗ್ಗ ಏರ್‌ಪೋರ್ಟ್‌ನಿಂದ ಸಂಚರಿಸುವ ವಿಮಾನಗಳ ಪಟ್ಟಿ ಇನ್ನೂ ಲಭ್ಯವಾಗಿಲ್ಲ.
೨. ವಿಮಾನ ನಿಲ್ದಾಣ ನಿರ್ಮಾಣಕ್ಕೆ ೬೦೦ ಕೋಟಿ ರೂ. ವ್ಯಯಿಸಲಾಗಿದೆ. ಇದರಲ್ಲಿ ೪೪೯ ಕೋಟಿ ರೂ. ಮೂಲ ಸೌಕರ್ಯಕ್ಕೆ ಹಾಗೂ ಉಳಿದ ಹಣ ಭೂಸ್ವಾಧೀನಕ್ಕೆ ಬಳಸಲಾಗಿದೆ.
೩. ಶಿವಮೊಗ್ಗ ವಿಮಾನ ನಿಲ್ದಾಣಕವು ಕರ್ನಾಟಕದ ಒಂಬತ್ತನೇ ವಿಮಾನ ನಿಲ್ದಾಣ ಎನಿಸಲಿದೆ. ಈಗಾಗಲೇ ಬೆಂಗಳೂರು, ಮೈಸೂರು, ಬಳ್ಳಾರಿ, ಹುಬ್ಬಳ್ಳಿ, ಬೀದರ್, ಕಲಬುರಗಿ, ಬೆಳಗಾವಿ ಹಾಗೂ ಮಂಗಳೂರಿನಲ್ಲಿ ವಿಮಾನ ನಿಲ್ದಾಣಗಳಿವೆ.
೪. ಕೇಂದ್ರ ಸರ್ಕಾರದ ಉಡಾನ್ (ಉಡೇ ದೇಶ್ ಕಾ ಆಮ್ ನಾಗರಿಕ್) ಯೋಜನೆ ಅಡಿಯಲ್ಲಿ ಏರ್‌ಪೋರ್ಟ್‌ಅನ್ನು ನಿರ್ಮಿಸಲಾಗಿದೆ. ಇದು ರಾಜ್ಯದಲ್ಲಿಯೇ ಉದ್ದದ ರನ್‌ವೇ ಹೊಂದಿದ ಎರಡನೇ ವಿಮಾನ ನಿಲ್ದಾಣ ಆಗಿದೆ.
೫. ವಿಮಾನ ನಿಲ್ದಾಣಕ್ಕೆ ಕುವೆಂಪು ಅವರ ಹೆಸರಿಡುವ ಕುರಿತು ಕೇಂದ್ರಕ್ಕೆ ಶಿಫಾರಸು ಕಳುಹಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದು, ಈ ಕುರಿತು ಸೋಮವಾರವೇ ನರೇಂದ್ರ ಮೋದಿ ಅವರು ಘೋಷಣೆ ಮಾಡುವ ಸಾಧ್ಯತೆ ಇದೆ.
ಇದನ್ನೂ ಓದಿ: Shivamogga Airport: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಿ.ಎಸ್. ಯಡಿಯೂರಪ್ಪ ಹೆಸರಿಡಲು ಶಿಫಾರಸು: ಸಿಎಂ ಬಸವರಾಜ ಬೊಮ್ಮಾಯಿ