Site icon Vistara News

Mera Booth Sabse Mazboot: ಬೂತ್‌ ಸದಸ್ಯರ ಜತೆ ಮೋದಿ ಭಾಷಣ ನಾಳೆ: ಲೋಕಸಭೆ ಚುನಾವಣೆ ಪ್ರಚಾರಕ್ಕೆ ಚಾಲನೆ?

Narendra Modi

#image_title

ಬೆಂಗಳೂರು: ಮಂಗಳವಾರ ಬೆಳಗ್ಗೆ 10.30ಕ್ಕೆ ರಾಜ್ಯದ ಎಲ್ಲ ಮಂಡಲ ಕೇಂದ್ರಗಳಲ್ಲಿ ಮತ್ತು ದೇಶದ ಎಲ್ಲ ಮಂಡಲ ಕೇಂದ್ರಗಳಲ್ಲಿ ʼಮೇರಾ ಬೂತ್ ಸಬ್‍ಸೆ ಮಜ್‍ಬೂತ್ʼ (ನನ್ನ ಬೂತ್ ಶಕ್ತಿಶಾಲಿ ಬೂತ್) (Mera Booth Sabse Mazboot) ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಮಧ್ಯಪ್ರದೇಶದಿಂದ ಮೋದಿ ಮಾತನಾಡಲಿದ್ದು, ಕರ್ನಾಟಕದ ಎಲ್ಲ 224 ವಿಧಾನಸಭೆ ಕ್ಷೇತ್ರಗಳಲ್ಲೂ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಈ ಮೂಲಕ ಲೋಕಸಭೆ ಚುನಾವಣೆ ತಯಾರಿಗೆ ಅಧಿಕೃತವಾಗಿ ಮೋದಿ ಚಾಲನೆ ನೀಡಲಿದ್ದಾರೆ.

ಈ ಕುರಿತು ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ್‌ ಮಾಹಿತಿ ನೀಡಿದರು. ರಾಜ್ಯದ 300 ಕೇಂದ್ರಗಳಲ್ಲಿ ಮಂಡಲ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಮೋರ್ಚಾಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಮತ್ತು ಬೂತ್ ಅಧ್ಯಕ್ಷರು, ಕಾರ್ಯಕರ್ತರು ಮಂಡಲ ಕೇಂದ್ರಗಳಲ್ಲಿ ಸೇರಿ ಅಭಿಯಾನ ಮಾಡಲಿದ್ದಾರೆ ಎಂದರು.

ಮೋದಿಯವರ ಅವರ ಭಾಷಣದ ಬಳಿಕ ಎಲ್ಲ ಮನೆಗಳಿಗೆ ತೆರಳಿ ಕರಪತ್ರ ವಿತರಿಸಲು ಕರೆ ನೀಡಲಾಗಿದೆ. ಇಡೀ ಜಗತ್ತೇ ಭಾರತದತ್ತ ತಿರುಗಿ ನೋಡುವ ರೀತಿಯಲ್ಲಿ ಅಭಿವೃದ್ಧಿ ಮಾಡಿ ತೋರಿಸಿದವರು ನರೇಂದ್ರ ಮೋದಿ. ಸ್ವಚ್ಛ ಭಾರತ್, ಮನೆ ಮನೆಗೆ ಗ್ಯಾಸ್ ಸಿಲಿಂಡರ್, ರೈತರ ಬ್ಯಾಂಕ್ ಖಾತೆಗೆ 6 ಸಾವಿರ ಜಮಾ, ಕೋವಿಡ್ ಸಂದರ್ಭದಲ್ಲಿ ಎಲ್ಲರಿಗೂ ಉಚಿತವಾಗಿ ಎರಡು ಡೋಸ್ ಲಸಿಕೆ ನೀಡುವಿಕೆ, ವಿಮಾನನಿಲ್ದಾಣಗಳ ನಿರ್ಮಾಣ, ವೈದ್ಯಕೀಯ ಕಾಲೇಜುಗಳ ಸ್ಥಾಪನೆ, ರೈತರಿಗೆ ಫಸಲ್ ವಿಮಾ ಯೋಜನೆ ಸೇರಿ ದೇಶದ ಮೂಲಭೂತ ಅವಶ್ಯಕತೆ ಈಡೇರಿಸುವ ನಿಟ್ಟಿನಲ್ಲಿ ಬಹಳ ದೊಡ್ಡ ಸಾಧನೆಯನ್ನು ಮೋದಿ ಮಾಡಿ ತೋರಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಮೋದಿ ಅವರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ತಿಳಿಸಿದರು.

ಮಂಡಲದಲ್ಲಿ ಸ್ಕ್ರೀನ್ ವ್ಯವಸ್ಥೆ ಮಾಡಬೇಕು. ಮುಂದಿನ ಒಂದು ವಾರ ಕಾರ್ಯಕರ್ತರು ಮನೆಮನೆಗೆ ಹೋಗಿ ಕೇಂದ್ರ ಸರಕಾರದ ತಲಾ 5 ಕೆಜಿ ಅಕ್ಕಿ ವಿತರಣೆ ಸೇರಿದಂತೆ ಅದ್ಭುತ ಸಾಧನೆ ಮಾಡಿದ್ದನ್ನು ತಿಳಿಸುವ ಅಭಿಯಾನ ನೆರವೇರಿಸಲಿದ್ದಾರೆ. ನಮ್ಮೆಲ್ಲ ಕಾರ್ಯಕರ್ತರು ನಾಳೆ 10.30ಕ್ಕೆ ಮಂಡಲ ಕೇಂದ್ರದಲ್ಲಿ ಸೇರಬೇಕೆಂದು ವಿನಂತಿಸಿದರು. ಕೇಂದ್ರ ಸರಕಾರವು 9 ವರ್ಷ ಅಧಿಕಾರ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಈ ಅಭಿಯಾನ ನಡೆಯಲಿದೆ ಎಂದು ತಿಳಿಸಿದರು.

ಕೋವಿಡ್ ಲಸಿಕೆ, ಪಡಿತರ ಅಕ್ಕಿ, ಗ್ಯಾಸ್, ಶೌಚಾಲಯ- ಇವೆಲ್ಲಕ್ಕೂ ಅರ್ಜಿ ಹಾಕಿ ಎಂದು ನಾವು ಹೇಳಿಲ್ಲ. ಅರ್ಜಿ ಹಾಕಿ ಎನ್ನುತ್ತಿರುವುದು ಸಿದ್ದರಾಮಯ್ಯರ ಈ ಕಾಂಗ್ರೆಸ್ ಸರಕಾರ. ಹಾಗಾಗಿ ನಾವು ನಮ್ಮ ಕೇಂದ್ರ ಸರಕಾರದ ಸಾಧನೆಯನ್ನು ಜನರಿಗೆ ಈ ಅಭಿಯಾನದ ಮೂಲಕ ತಿಳಿಸುತ್ತೇವೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.
ಅಕ್ಕಿ ಕೊಡುತ್ತಿರುವುದು ಮೋದಿ ಸರಕಾರ ಎಂಬುದು ಈಗ ಜನರಿಗೆ ಮನವರಿಕೆ ಆಗಿದೆ. ಇದನ್ನು ಜನರಿಗೆ ವಿವರವಾಗಿ ತಿಳಿಸುತ್ತೇವೆ. ತಲಾ 5 ಕೆಜಿ ಅಕ್ಕಿಯನ್ನು ಕೇಂದ್ರ ಸರಕಾರ ಮುಂದುವರೆಸಲಿದೆ ಎಂದು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು. ಅಕ್ಕಿ ನೀಡುವಿಕೆ ಸೇರಿ ಕಾಂಗ್ರೆಸ್ಸಿನ ವಿವಿಧ ಗ್ಯಾರಂಟಿಗಳ ಅನುಷ್ಠಾನಕ್ಕೆ ಆಗ್ರಹಿಸಿ ವಿಧಾನಸಭೆ ಒಳಗೆ ಮತ್ತು ಹೊರಗೆ ಹೋರಾಟ ಮಾಡಲಿದ್ದೇವೆ ಎಂದು ಅವರು ನುಡಿದರು.

ನೈತಿಕತೆ, ತಾಕತ್ತಿದ್ದರೆ ತಲಾ 10 ಕೆಜಿ ಅಕ್ಕಿ ವಿತರಿಸಲಿ. ಇಲ್ಲದಿದ್ದರೆ ಸಿದ್ದರಾಮಯ್ಯ ನಂಬರ್ ಒನ್ ಸುಳ್ಳುಗಾರ ಎಂದು ಜನರಿಗೆ ತಿಳಿಸುತ್ತೇವೆ ಎಂದು ಎಚ್ಚರಿಸಿದರು. ಕೇಂದ್ರದ 5 ಕೆಜಿಗೆ 10 ಕೆಜಿ ಸೇರಿಸಿ ತಲಾ 15 ಕೆಜಿ ಅಕ್ಕಿ ಕೊಡಿ. ನಿರುದ್ಯೋಗ ಭತ್ಯೆಯನ್ನು ಕೇವಲ 2022-23ನೇ ಸಾಲಿನವರಿಗೆ ಕೊಡುವುದಲ್ಲ. ಎಲ್ಲ ನಿರುದ್ಯೋಗಿಗಳಿಗೂ ಕೊಡಿ ಎಂದು ಆಗ್ರಹಿಸಿದರು.

ಹಿಂದೆ 200 ಯೂನಿಟ್ ವಿದ್ಯುತ್ ಉಚಿತ ಎಂದಿದ್ದರು. ಈಗ, ಹಿಂದೆ 60- 70 ಯೂನಿಟ್ ಬಳಸುತ್ತಿದ್ದರೆ 10 ಯೂನಿಟ್ ಹೆಚ್ಚುವರಿ ಬಳಸಿ ಎನ್ನುತ್ತಿದ್ದಾರೆ. ಕಾಂಗ್ರೆಸ್ಸಿಗರ ಮಾತನ್ನು ಇಟ್ಟುಕೊಂಡು ಹೋರಾಟ ಮಾಡಲು ರಾಜ್ಯದ ಪ್ರತಿಯೊಬ್ಬ ಪ್ರಜೆಗೂ ಹಕ್ಕಿದೆ ಎಂದು ತಿಳಿಸಿದರು. ಸರಕಾರವು ಗ್ಯಾರಂಟಿ ಈಡೇರಿಸದೆ ಇದ್ದರೆ ಕುರ್ಚಿ ಬಿಟ್ಟು ತೊಲಗಲಿ ಎಂದು ಒತ್ತಾಯಿಸಿದರು.

ನಾವು ಸೋತಿರುವುದು ನಿಜ. ಸೋಲು ದೀರ್ಘ ಕಾಲ ಉಳಿಯಬಾರದು. ಇದನ್ನು ಹೊರತುಪಡಿಸಿ ರಾಜ್ಯದಲ್ಲಿ ಲೋಕಸಭಾ ಚುನಾವಣೆಯಲ್ಲಿ 28ಕ್ಕೆ 28 ಸೀಟುಗಳನ್ನು ಗೆಲ್ಲಬೇಕೆಂಬ ಹಿನ್ನೆಲೆಯಲ್ಲಿ ಎಲ್ಲ ಕಡೆಗಳಲ್ಲಿ ಜಿಲ್ಲಾ ಕಾರ್ಯಕರ್ತರ ಸಭೆ ನಡೆಯುತ್ತಿದೆ. ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ. ಕಾರ್ಯಕರ್ತರು ಮತ್ತು ಮುಖಂಡರ ಸಂಕಲ್ಪದಿಂದ ಎಲ್ಲ 28 ಸೀಟುಗಳನ್ನು ಗೆಲ್ಲಿಸುವ ಮೂಲಕ ಮೋದಿ ಅವರನ್ನು 3ನೇ ಬಾರಿಗೆ ಪ್ರಧಾನಿಯಾಗಿ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಗತ್ತೇ ಮೋದಿ ಅವರಂಥ ನಾಯಕತ್ವ ಬಯಸುತ್ತಿದೆ. ಪಕ್ಷದಲ್ಲಿ ಸಣ್ಣಪುಟ್ಟ ಗೊಂದಲ ಇದೆ. ಸಮಸ್ಯೆಗಳೇ ನಮ್ಮನ್ನು ಆಳಲು ಬಿಡುವುದಿಲ್ಲ. ಮನುಷ್ಯ ನಿರ್ಮಿತ ಸಮಸ್ಯೆಗಳಿಗೆ ಪರಿಹಾರವೂ ಇದೆ. ಸಣ್ಣಪುಟ್ಟ ಗೊಂದಲವನ್ನು ಚರ್ಚಿಸಿ ಹೊಸ ಶಕ್ತಿ, ಸ್ಫೂರ್ತಿ, ಆಲೋಚನೆಯನ್ನು ಕಾರ್ಯಕರ್ತರಲ್ಲಿ ತುಂಬಿಸಿ ಪಕ್ಷವನ್ನು ಸಶಕ್ತಗೊಳಿಸಿ 28 ಸೀಟನ್ನೂ ಗೆಲ್ಲಲಿದ್ದೇವೆ ಎಂದು ನುಡಿದರು.

ಇದನ್ನೂ ಓದಿ: Amazon: ಭಾರತದಲ್ಲಿ 2025ರ ಹೊತ್ತಿಗೆ 20 ಲಕ್ಷ ಉದ್ಯೋಗ ಸೃಷ್ಟಿಸಲಿದೆ ಅಮೆಜಾನ್! ಮೋದಿ ಜತೆ ಸಿಇಒ ಮಾತುಕತೆ

ಪಕ್ಷಕ್ಕೆ ಸೇರಿದವರು ನಾವೆಲ್ಲರೂ ಹಾಲು ಜೇನಿನಂತೆ ಒಟ್ಟಾಗಿದ್ದೇವೆ. ಹೊರಗಿನವರು, ಒಳಗಿನವರು ಎಂಬ ಪ್ರಶ್ನೆ ಇಲ್ಲ. ಒಂದೇ ಬಿಜೆಪಿ ನಮ್ಮೆಲ್ಲರದು. ಎರಡು, ಮೂರು, ನಾಲ್ಕು ಇಲ್ಲ. ಈಶ್ವರಪ್ಪ, ಯಡಿಯೂರಪ್ಪ, ನಳಿನ್‍ಕುಮಾರ್ ಕಟೀಲ್, ಸದಾನಂದ ಗೌಡ, ಪ್ರಲ್ಹಾದ ಜೋಶಿ- ನಾವೆಲ್ಲ ಒಟ್ಟಾಗಿ ಸೇರಿ ಸಣ್ಣಪುಟ್ಟ ಗೊಂದಲ ಬಗೆಹರಿಸಿ ಒಂದೇ ನಿರ್ಣಯ- ಸಂಕಲ್ಪ ಮಾಡಿ ಮತ್ತೆ ಸಂಸತ್ ಚುನಾವಣೆಗೆ ಸಜ್ಜಾಗುತ್ತೇವೆ. ಬಿಬಿಎಂಪಿ ಚುನಾವಣೆಯಲ್ಲಿ ಗೆಲ್ಲಲಿದ್ದೇವೆ. ರಾಜ್ಯದಲ್ಲಿ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲೂ ಉತ್ತಮ ಸಾಧನೆ ಮಾಡುತ್ತೇವೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.

ವಿಪಕ್ಷ ಸ್ಥಾನ, ರಾಜ್ಯಾಧ್ಯಕ್ಷರ ಸ್ಥಾನ ಕುರಿತು ಸೂಕ್ತ ಸಮಯದಲ್ಲಿ ನಿರ್ಧಾರ ಮಾಡಲಿದ್ದೇವೆ. ದೆಹಲಿ ನಾಯಕರು ಮತ್ತು ಇಲ್ಲಿನ ದೊಡ್ಡ ದೊಡ್ಡ ನಾಯಕರು ಸೇರಿ ರಾಜ್ಯಾಧ್ಯಕ್ಷರ ಆಯ್ಕೆ ಮಾಡುತ್ತಾರೆ ಎಂದು ಪ್ರಶ್ನೆಗೆ ಉತ್ತರಿಸಿದರು.
ಇದು ಗ್ಯಾರಂಟಿ ಆಧಾರದ ಸರಕಾರ. ಗ್ಯಾರಂಟಿ ಸಮರ್ಪಕವಾಗಿ ಜಾರಿಯಾಗದೆ ಇದ್ದಲ್ಲಿ ರಾಜ್ಯದ ಮುಂದೆ ಕಾಂಗ್ರೆಸ್‍ನವರನ್ನು ಬೆತ್ತಲು ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು. ನಾವು ತನಿಖೆಗಳಿಗೆ ಹೆದರುವ ಪ್ರಶ್ನೆ ಇಲ್ಲ. ಅವನ್ನೆಲ್ಲ ಎದುರಿಸಿ ನಿಲ್ಲುವ, ಮೆಟ್ಟಿ ನಿಲ್ಲುವ ಶಕ್ತಿ ಬಿಜೆಪಿಗೆ ಇದೆ ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರ ನೀಡಿದರು.

Exit mobile version