Site icon Vistara News

National youth festival | ಪ್ರಧಾನಿ ಮೋದಿ ಆಗಮನದಿಂದ ಯುವಕರಿಗೆ ಅವಕಾಶ, ಪ್ರೇರಣೆ: ಬೊಮ್ಮಾಯಿ

ಮೋದಿ ಕಾರ್ಯಕ್ರಮ

ಹುಬ್ಬಳ್ಳಿ: ಜನವರಿ 1೨ರಿಂದ ಏಳು ದಿನಗಳ ಕಾಲ ನಡೆಯಲಿರುವ ರಾಷ್ಟ್ರೀಯ ಯುವಜನೋತ್ಸವದ (National youth festival) ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸುವುದರಿಂದ ಈ ಭಾಗದ ಯುವಕರಿಗೆ ಅವಕಾಶ ಹಾಗೂ ಪ್ರೇರಣೆ ನೀಡಲಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಮಂಗಳವಾರ ಹುಬ್ಬಳ್ಳಿಯಲ್ಲಿ ಮಾಧ್ಯದವರೊಂದಿಗೆ ಮಾತನಾಡಿದರು.

ಕಾರ್ಯಕ್ರಮದಲ್ಲಿ 28 ರಾಜ್ಯಗಳು ಮತ್ತು ಎಂಟು ಕೇಂದ್ರಾಡಳಿತ ಪ್ರದೇಶಗಳಿಂದ ಯುವಕರ ತಂಡಗಳು ಬರುತ್ತಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಂದು ವಾರ ನಡೆಯಲಿರುವ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಮತ್ತು ಕ್ರೀಡೆಗಳು ನಡೆಯಲಿವೆ. ಪ್ರಥಮ ಬಾರಿಗೆ ರಾಷ್ಟ್ರೀಯ ಯುವಜನ ಮೇಳ ಉತ್ತರ ಕರ್ನಾಟಕದಲ್ಲಿ ನಡೆಯುತ್ತಿರುವುದು ನಮಗೆಲ್ಲಾ ಸಂತೋಷ ತಂದಿದೆ. ಎಲ್ಲಾ ರಂಗದಲ್ಲಿ ಯುವಕರು ಮುಂದೆ ಬರಲು ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದರು.

ಜನಸಂಖ್ಯೆ ನಮ್ಮ ಆಸ್ತಿ
ʻʻಜನಸಂಖ್ಯೆ ಎನ್ನುವುದು ಭಾರವಲ್ಲ. ಇದು ನಮ್ಮ ಆಸ್ತಿ ಎಂದು ಪ್ರಧಾನಿಗಳು ಪರಿಗಣಿಸಿದ್ದಾರೆ. ಶೇ. 46ರಷ್ಟು ಯುವಜನರಿರುವ ದೇಶದಲ್ಲಿ ಯುವಕರಿಂದಲೇ ದೇಶದ ಭವಿಷ್ಯ ನಿರ್ಮಾಣ ಮಾಡಬಹುದು ಎಂದು ಹಲವಾರು ಕಾರ್ಯಕ್ರಮ ರೂಪಿಸಲಾಗಿದೆ. ನೂತನ ಶಿಕ್ಷಣ ನೀತಿ, ಮುದ್ರಾ, ಆತ್ಮನಿರ್ಭರ ಭಾರತ್‌ನಂಥ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿಗಳ ಆಗಮನದಿಂದ ಸ್ಫೂರ್ತಿ ದೊರೆಯಲಿದೆʼʼ ಎಂದರು. ಪ್ರಧಾನಿ ಕಾರ್ಯಕ್ರಮಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ರೋಡ್ ಶೋ ಇರುವುದಿಲ್ಲ. ರಸ್ತೆಯ ಇಕ್ಕೆಲಗಳಲ್ಲಿ ನಿಲ್ಲಲು ಜನರಿಗೆ ಅವಕಾಶ ಕಲ್ಪಿಸಲಾಗಿದೆ. ಪ್ರಧಾನಿಗಳು ಅದಕ್ಕೆ ಸ್ಪಂದಿಸುತ್ತಾರೆ ಎಂದರು.

ಅಂತಿಮ ವರದಿ ಬಂದ ನಂತರ ಸ್ಪಷ್ಟತೆ
ಪಂಚಮಸಾಲಿ ಮೀಸಲಾತಿ ಬಗ್ಗೆ ಸ್ವಾಮೀಜಿಗಳು ಗಡುವು ನೀಡಿರುವ ಬಗ್ಗೆ ಮಾತನಾಡಿ ಈಗಾಗಲೇ ಪ್ರವರ್ಗ 2 ಕ್ಕೆ ಬರಬೇಕಿರುವ ಸಮುದಾಯಗಳಿಗೆ ಮೊದಲ ನಿರ್ಣಯ ಕೈಗೊಂಡಿದೆ. ಬರುವ ದಿನಗಳಲ್ಲಿ ಪ್ರಮಾಣ ಎಷ್ಟು ಹೆಚ್ಚಾಗುತ್ತದೆ ಎನ್ನುವುದು ಅಂತಿಮ ವರದಿ ಬಂದ ನಂತರ ತಿಳಿಯಲಿದೆ. ಸಂವಿಧಾನಬದ್ಧವಾಗಿ ಹಿಂದುಳಿದ ವರ್ಗಗಳ ಆಯೋಗದ ವರದಿಯ ಮೇಲೆ ತೀರ್ಮಾನವಾಗುತ್ತದೆ. ಅದನ್ನು ಶೀಘ್ರವಾಗಿ ಸಲ್ಲಿಸಲು ಸೂಚಿಸಿದ್ದು. ಅದು ಬಂದ ನಂತರ ಸ್ಪಷ್ಟತೆ ದೊರೆಯಲಿದೆ ಎಂದರು.

ತೀರುವಳಿ ಪಡೆಯಲಾಗುವುದು
ಮಹದಾಯಿ ಯೋಜನೆಗೆ ಸಂಬಂಧಿಸಿದಂತೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಸ್ಪಷ್ಟತೆ ಕೇಳುವುದು ಸಾಮಾನ್ಯ, ಅವುಗಳಿಗೆ ನಮ್ಮ ಬಳಿ ಪರಿಹಾರವಿದೆ. ಕೂಡಲೇ ಅವುಗಳಿಗೆ ಉತ್ತರ ನೀಡಿ ಪರಿಸರ ಇಲಾಖೆಯ ತೀರುವಳಿ ಪಡೆಯಲಾಗುವುದು ಎಂದರು.

ನಮ್ಮ ನಡೆ, ನಿಲುವುಗಳನ್ನು ಚುನಾವಣೆ ಒರೆಗೆ ಹಚ್ಚುತ್ತದೆ
ಸಿದ್ದರಾಮಯ್ಯ ಅವರು ಕೋಲಾರದಿಂದ ಸ್ಪರ್ಧಿಸುವ ಬಗ್ಗೆ ಪ್ರತಿಕ್ರಿಯೆ ನೀಡಿ, ʻʻಅದು ಅವರ ಆಯ್ಕೆ. ಪ್ರತಿ ರಾಜಕಾರಣಿ, ನಾಯಕನ ನಡೆ ಚುನಾವಣೆಯಲ್ಲಿ ತಿಳಿಯುತ್ತದೆ. ನಮ್ಮ ನಡೆ, ನಿಲುವು, ನಿರ್ಧಾರಗಳನ್ನು ಚುನಾವಣೆ ಒರೆಗೆ ಹಚ್ಚುತ್ತದೆ. ಕೋಲಾರ ಆಯ್ಕೆ ಬಗ್ಗೆ ವ್ಯಾಖ್ಯಾನಿಸುವುದಿಲ್ಲ. ಇದು ಅವರ ಹಾಗೂ ಅವರ ಪಕ್ಷದ ನಿರ್ಧಾರ. ಈ ಬಗ್ಗೆ ಕೋಲಾರದ ಜನತೆ ತೀರ್ಮಾನ ಮಾಡಲಿದ್ದಾರೆʼʼ ಎಂದರು.

ಇದನ್ನೂ ಓದಿ | Narendra Modi Visit | ಜ. 12ರಂದು ಪ್ರಧಾನಿ ನರೇಂದ್ರ ಮೋದಿ ಹುಬ್ಬಳ್ಳಿಗೆ, 19ಕ್ಕೆ ನಾರಾಯಣಪುರಕ್ಕೆ

Exit mobile version