ಮೈಸೂರು: ರಾಷ್ಟ್ರಗೀತೆಗೆ ಅಗೌರವ ತೋರಿರುವ ಘಟನೆ ನಗರದ ಜಯಲಕ್ಷ್ಮೀಪುರಂನಲ್ಲಿನ ಡಿಆರ್‌ಸಿ ಚಿತ್ರಮಂದಿರದಲ್ಲಿ ಭಾನುವಾರ ರಾತ್ರಿ ನಡೆದಿದೆ. ಚಿತ್ರಮಂದಿರದಲ್ಲಿ ರಾಷ್ಟ್ರಗೀತೆ (National Anthem) ಪ್ರಸಾರವಾದ ವೇಳೆ ಮುಸ್ಲಿಂ ದಂಪತಿ ಎದ್ದು ನಿಲ್ಲದೆ ಅಗೌರವ ತೋರಿದ್ದರು. ಇದನ್ನು ಪಕ್ಕದಲ್ಲಿದ್ದವರು ಪ್ರಶ್ನಿಸಿದ ಬಳಿಕ ತಪ್ಪಿನ ಅರಿವಾಗಿ ಮುಸ್ಲಿಂ ದಂಪತಿ ಕ್ಷಮೆಯಾಚಿಸಿದ್ದಾರೆ.
ಭಾನುವಾರ ರಾತ್ರಿ ಬ್ಯಾಡ್ ನ್ಯೂಸ್ ಸಿನಿಮಾ ವೀಕ್ಷಿಸಲು ಮುಸ್ಲಿಂ ದಂಪತಿ ಡಿಆರ್‌ಸಿ ಚಿತ್ರಮಂದಿರಕ್ಕೆ ತೆರಳಿದ್ದರು. ಚಿತ್ರ ಆರಂಭವಾಗುವ ಮೊದಲೇ ಚಿಪ್ಸ್, ಪಾಪ್ ಕಾರ್ನ್ ಸೇರಿ ಇನ್ನಿತರ ತಿಂಡಿ ಇರಿಸಿಕೊಂಡು ಕುಳಿತಿದ್ದರು. ಈ ವೇಳೆ ಸಿನಿಮಾ ಆರಂಭಕ್ಕೂ ಮುಂಚೆ ರಾಷ್ಟ್ರಗೀತೆ ಪ್ರಸಾರ ಮಾಡಿದಾಗ, ಮುಸ್ಲಿಂ ದಂಪತಿ ಎದ್ದು ನಿಂತಿಲ್ಲ. ಇದಕ್ಕೆ ಅವರ ಪಕ್ಕದಲ್ಲಿದ್ದ ಹಿಂದು ದಂಪತಿ ಆಕ್ಷೇಪ ವ್ಯಕ್ತಪಡಿಸಿದ್ದರು. ನಂತರ ಚಿತ್ರಮಂದಿರದ ಸಿಬ್ಬಂದಿ ಈ ಬಗ್ಗೆ ಮಾಹಿತಿ ನೀಡಿದ್ದರಿಂದ ಸ್ಥಳಕ್ಕೆ ಧಾವಿಸಿದ ಜಯಲಕ್ಷ್ಮೀಪುರಂ ಠಾಣೆಯ ಪೊಲೀಸರು, ಮುಸ್ಲಿಂ ದಂಪತಿಯನ್ನು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಿಸಿದ್ದಾರೆ.
ರಾಷ್ಟ್ರಗೀತೆ ಪ್ರಸಾರದ ವೇಳೆ ತಮ್ಮ ಮಡಿಲಲ್ಲಿ ತಿಂಡಿ ಇದ್ದಿದ್ದರಿಂದ ಮೇಲೇಳಲು ಆಗಿಲ್ಲ. ನಮ್ಮಿಂದ ತಪ್ಪಾಗಿದೆ ಎಂದು ಮುಸ್ಲಿಂ ದಂಪತಿ ಕ್ಷಮೆ ಕೋರಿದ್ದಾರೆ. ಹೀಗಾಗಿ, ಪೊಲೀಸರು ಮುಚ್ಚಳಿಕೆ ಬರೆಸಿಕೊಂಡು ದಂಪತಿಯನ್ನು ಕಳುಹಿಸಿದ್ದಾರೆ.
ಈ ರೀತಿ ಆಗದಂತೆ ನೋಡಿಕೊಳ್ಳಬೇಕಿದೆ ಎಂದ ಪ್ರತಾಪ್ ಸಿಂಹ
ಚಿತ್ರಮಂದಿರಲ್ಲಿ ರಾಷ್ಟ್ರಗೀತೆಗೆ ಅಗೌರವ ತೋರಿದ ಘಟನೆ ಬಗ್ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿ, ಯಾರಲ್ಲಿ ದೇಶದ ಬಗ್ಗೆ ಜನ್ಮ ಭೂಮಿ, ಪವಿತ್ರ ಭೂಮಿ ಎಂಬ ಭಾವನೆ ಇರುವುದಿಲ್ಲವೋ ಅಂತಹವರಿಂದ ಈ ರೀತಿ ಆಗುತ್ತದೆ. ಹೋಲಿ ಲ್ಯಾಂಡ್ ಅರಬ್‌ನಲ್ಲಿ ಇದೆ ಎಂದು ಭಾವಿಸುತ್ತಾರೋ ಅವರಿಂದ ಈ ರೀತಿ ಆಗುತ್ತದೆ. ಚಿತ್ರಮಂದಿರದಲ್ಲಿದ್ದ ಇತರರು ಕಿವಿ ಹಿಂಡುವ ಕೆಲಸ ಮಾಡಬೇಕಿತ್ತು. ಆದರೆ, ಯಾರೂ ಆ ಕೆಲಸ ಮಾಡಿಲ್ಲ. ಇನ್ನು ಮುಂದೆಯಾದರೂ ಈ ರೀತಿ ಆಗದಂತೆ ನೋಡಿಕೊಳ್ಳಬೇಕಿದೆ ಎಂದಿದ್ದಾರೆ.
ಇದನ್ನೂ ಓದಿ | Sexual Abuse: ವಿದ್ಯಾರ್ಥಿನಿಯನ್ನು ಅಪಹರಿಸಿ 12 ದಿನ ಅತ್ಯಾಚಾರ ಎಸಗಿ ಪೊಲೀಸ್ ಠಾಣೆ ಮುಂದೆಯೇ ಬಿಟ್ಟು ಹೋದರು!
ಅಡ್ಡಗಟ್ಟಿದ ಪೊಲೀಸ್ ಜೀಪ್ ಮೇಲೆ ಕಲ್ಲು ತೂರಿ ಆಂಧ್ರದ ಡೆಡ್ಲಿ ಕಳ್ಳರ ಗ್ಯಾಂಗ್ ಎಸ್ಕೇಪ್!
ಚಿತ್ರದುರ್ಗ: ಪೊಲೀಸರ ಮೇಲೆ ಕಳ್ಳರು (Theft Case) ಕಲ್ಲು ತೂರಿ ಆಂಧ್ರದ ಡೆಡ್ಲಿ ಕಳ್ಳರ ಗ್ಯಾಂಗ್‌ವೊಂದು ಎಸ್ಕೇಪ್ ಆಗಿದೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯಲ್ಲಿ ಪೊಲೀಸ್ ಜೀಪ್ ಮೇಲೆ ಕಲ್ಲು ತೂರಿ ಕಳ್ಳರು ಕಾಲ್ಕಿತ್ತಿದ್ದಾರೆ. ಪೊಲೀಸರು ಏರ್ ಫೈರ್ ಮಾಡಿದರೂ ಜಗ್ಗದೆ ತಪ್ಪಿಸಿಕೊಂಡಿದ್ದಾರೆ.
ಚಳ್ಳಕೆರೆ ತಾಲ್ಲೂಕಿನ ಕುದಾಪುರ ಬಳಿ ಕಳ್ಳರನ್ನು ಹಿಡಿಯಲು ಪೊಲೀಸರು ಬೊಲೆರೋ ವಾಹನವನ್ನು ಅಡ್ಡ ಹಾಕಿದ್ದರು. ಈ ವೇಳೆ ಕಳ್ಳರು ಪೊಲೀಸರ ಮೇಲೆ ಕಲ್ಲು ತೂರಿದ್ದಾರೆ. ಏಕಾಏಕಿ ಕಳ್ಳರು ದಾಳಿ ಮಾಡಿದ ಹಿನ್ನೆಲೆಯಲ್ಲಿ ಆತ್ಮರಕ್ಷಣೆಗಾಗಿ ಪೊಲೀಸರು ಏರ್ ಫೈರಿಂಗ್ ಮಾಡಿದ್ದಾರೆ.
ಇನ್ನೂ ಕಳ್ಳರು ಕಲ್ಲು ತೂರಿದ್ದರಿಂದ ಪೊಲೀಸರ ಜೀಪಿನ ಗ್ಲಾಸ್ ಡ್ಯಾಮೇಜ್ ಆಗಿದೆ. ಸುಮಾರು 7 ಮಂದಿ ಗ್ಯಾಂಗ್ ಆಂಧ್ರಪ್ರದೇಶದ ರಿಜಿಸ್ಟ್ರೇಷನ್ ಹೊಂದಿದ್ದ ಬೊಲೆರೋ ವಾಹನದಲ್ಲಿ ಬಂದಿದ್ದರು. ಇದನ್ನೂ ಗಮನಿಸಿದ ರಾತ್ರಿ ಗಸ್ತಿನಲ್ಲಿದ್ದ ಪೊಲೀಸರು, ತಡೆದು ಪರಿಶೀಲನೆಗೆ ಮುಂದಾಗಿದ್ದಾರೆ. ಈ ವೇಳೆ ಗಾಡಿ ನಿಲ್ಲಿಸದೇ ಖತರ್ನಾಕ್ ಕಳ್ಳರು, ಪೊಲೀಸರಿಗೆ ಕಲ್ಲು ತೂರಿದ್ದಾರೆ.
ದರೋಡೆಕೋರರು ಎಂಬ ಅನುಮಾನದಿಂದ ಪೊಲೀಸರು ಅಲರ್ಟ್ ಆಗಿದ್ದಾರೆ. ಬೊಸೇ ದೇವರಹಟ್ಟಿ, ಕೋಟೆ ನಗರ ಒಳ ಮಾರ್ಗದಲ್ಲಿ ಕುದಾಪುರ ಕಡೆ ಬರುತ್ತಿದ್ದ ಕಳ್ಳರಿಗೆ, ಪೊಲೀಸರು ಮನಮಯ್ಯನಹಟ್ಟಿ ಕುದಾಪುರ ಒಳ ಮಾರ್ಗದಲ್ಲಿ ಎದುರಾಗಿದ್ದರು. ನಾಯಕನಹಟ್ಟಿ ಠಾಣೆ ಪಿಎಸ್‌ಐ ಶಿವಕುಮಾರ್ ತಂಡ ಬುಲೇರೋ ವಾಹನದಲ್ಲಿ ಬಂದಿದ್ದ ಕಳ್ಳರನ್ನು ಹಿಡಿಯಲು ಯತ್ನಿಸಿದ್ದಾರೆ. ಆದರೆ ಹಿರೇಹಳ್ಳಿ, ಬೇಡರೆಡ್ಡಿಹಳ್ಳಿ, ಬುಕ್ಕಂಬೂದಿ ಮಾರ್ಗದಲ್ಲಿ ಕಳ್ಳರು ಎಸ್ಕೇಪ್ ಆಗಿದ್ದಾರೆ.
ಇದನ್ನೂ ಓದಿ: Karnataka Rain : ಭಾರಿ ಮಳೆಗೆ ಮುಂದುವರಿದ ಸಾವು-ನೋವು; ಮನೆ ಗೋಡೆ ಕುಸಿದು ವ್ಯಕ್ತಿ ಸಾವು
ಸ್ಥಳಕ್ಕೆ ಚಿತ್ರದುರ್ಗ ಎಸ್‌ಪಿ ಧರ್ಮೇಂದರ್ ಕುಮಾರ್ ಮೀನಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾತ್ರಿ ನಡೆದ ಘಟನೆ ಕುರಿತು ಸ್ಟಲಿತರುಲ್ ಪೊಲೀಸರಿಂದ ಮಾಹಿತಿ ಪಡೆದಿದ್ದಾರೆ. ಪೊಲೀಸರ ಮೇಲೆ ಕಳ್ಳರ ದಾಳಿ ಸುದ್ದಿ ತಿಳಿದು ಸ್ಥಳೀಯರು ಆತಂಕಗೊಂಡಿದ್ದಾರೆ.