Site icon Vistara News

National Youth Festival : ಮೋದಿಗೆ ಹೂವಿನ ಹಾರ ಕೊಡಲು ಬ್ಯಾರಿಕೇಡ್‌ ಹಾರಿಬಂದ ಬಾಲಕ; ಭದ್ರತಾ ಸಿಬ್ಬಂದಿ ತಬ್ಬಿಬ್ಬು!

ನರೇಂದ್ರ ಮೋದಿ ರೋಡ್‌ ಶೋ ಬಾಲಕ ಭದ್ರತಾ ಲೋಪ

ಹುಬ್ಬಳ್ಳಿ: ರಾಷ್ಟ್ರೀಯ ಯುವಜನೋತ್ಸವ (National Youth Festival) ಕಾರ್ಯಕ್ರಮಕ್ಕೆ ಚಾಲನೆ ನೀಡಲು ಹುಬ್ಬಳ್ಳಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್‌ ಶೋ ವೇಳೆ ಬಿಗಿ ಭದ್ರತೆಯ ನಡುವೆಯೇ ಕಾರಿನತ್ತ ನುಗ್ಗಿ ಬಂದ ಬಾಲಕ ಹಾರವನ್ನು ಪ್ರಧಾನಿಗೆ ನೀಡಿದ್ದಾನೆ. ಈ ಮೂಲಕ ಭದ್ರತಾ ಲೋಪವುಂಟಾಗಿತ್ತು. ಬಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಭವ್ಯ ಸ್ವಾಗತ ಕೋರಿದ್ದಾರೆ. ಅಲ್ಲಿಂದ 8 ಕಿ.ಮೀ.ವರೆಗೆ ಪ್ರಧಾನಿ ನರೇಂದ್ರ ಮೋದಿಯವರ ರೋಡ್ ಶೋ ನಡೆಯಿತು. ಈ ವೇಳೆ ಹಾದಿಯುದ್ದಕ್ಕೂ ಅಭಿಮಾನಿಗಳು, ಸಾರ್ವಜನಿಕರು ಹೂಮಳೆಯನ್ನೇ ಗೈದಿದ್ದಾರೆ.

National Youth Festival

ಪ್ರಧಾನಿ ಮೋದಿ ರಸ್ತೆಯ ಎರಡೂ ಬದಿಗೆ ನಿಂತಿದ್ದ ಅಭಿಮಾನಿಗಳ ಕಡೆಗೆ ಹರ್ಷದಿಂದ ಕೈಬೀಸುತ್ತಿದ್ದರು. ಮೋದಿ ಕಾರಿನ ಜತೆ ಜತೆಗೆ ಭದ್ರತಾಪಡೆಯವರೂ ಪಕ್ಕದಲ್ಲೇ ಸಾಗುತ್ತಿದ್ದರು. ಪೊಲೀಸರು ಸಹ ಎರಡೂ ಕಡೆಯ ಬ್ಯಾರಿಕೇಡ್‌ನಲ್ಲಿ ಕಣ್ಣಿಗೆ ಎಣ್ಣೆಬಿಟ್ಟುಕೊಂಡವರಂತೆ ಕಾಯುತ್ತಿದ್ದರು. ಆದರೆ, ಆಗ ಪ್ರಧಾನಿ ಸಮೀಪಿಸುತ್ತಿದ್ದಂತೆ ಬ್ಯಾರಿಕೇಡ್‌ನಿಂದ ಒಬ್ಬ ಬಾಲಕ ನುಸುಳಿ ಹೊರಬಂದಿದ್ದಾನೆ.

ಬ್ಯಾರಿಕೇಡ್‌ನಿಂದ ಬಾಲಕ ಬಂದವನೇ ಸೀದಾ ಪ್ರಧಾನಿ ಮೋದಿ ಬಳಿ ಓಡಿದ್ದಾನೆ. ಒಂದು ಕ್ಷಣ ಭದ್ರತಾ ಪಡೆ, ಪೊಲೀಸ್‌ ಸಿಬ್ಬಂದಿ ಬಾಲಕನ ಈ ನಡೆಗೆ ಕಕ್ಕಾಬಿಕ್ಕಿಯಾದರು. ಆದರೂ ಲೆಕ್ಕಿಸದೆ ಬಾಲಕ ಪ್ರಧಾನಿಯತ್ತ ನುಗ್ಗಿದ್ದು, ಹಾರವನ್ನು ಅವರತ್ತ ಕೊಂಡೊಯ್ದಿದ್ದಾನೆ. ಇದನ್ನು ನೋಡಿದ ಪ್ರಧಾನಿ ಸಹ ಖುಷಿಯಿಂದ ಅದನ್ನು ಸ್ವೀಕರಿಸಲು ಹೋಗಿದ್ದಾರೆ. ಅಷ್ಟರಲ್ಲಿ ಬಾಲಕನನ್ನು ತಡೆದ ಭದ್ರತಾ ಸಿಬ್ಬಂದಿ, ಹಾರವನ್ನು ಕಸಿದುಕೊಂಡಿದ್ದಾರೆ. ಇದನ್ನು ನೋಡಿದ ಮೋದಿ ಭದ್ರತಾ ಸಿಬ್ಬಂದಿಯಿಂದ ಆ ಹಾರವನ್ನು ಪಡೆದು ಮುಂದೆ ಸಾಗಿದ್ದಾರೆ.

ಬಾಲಕ ಪೊಲೀಸ್‌ ವಶಕ್ಕೆ
ಇಷ್ಟೆಲ್ಲ ಭದ್ರತೆ ಇದ್ದರೂ ಆ ಬಾಲಕ ಹಾರ ಹಿಡಿದು ಬಂದಿದ್ದರಿಂದ ಪೊಲೀಸರು ಆತನನ್ನು ಪುನಃ ಬ್ಯಾರಿಕೇಡ್‌ಗೆ ಒಯ್ದು ಬಿಟ್ಟಿದ್ದಾರೆ. ಆದರೆ, ಇದನ್ನು ಭದ್ರತಾ ಲೋಪವೆಂದು ಪರಿಗಣಿಸಲಾಗಿದೆ.

National Youth Festival

ಹೆಲ್ಮೆಟ್‌ ಎಸೆತ?
ಮೋದಿ ರೋಡ್‌ ಶೋ ವೇಳೆ ಹೆಲ್ಮೆಟ್‌ ಅನ್ನು ಎಸೆಯಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಮೋದಿ ಬರುತ್ತಿದ್ದಂತೆ ಬ್ಯಾರಿಕೇಡ್‌ನಿಂದ ರಸ್ತೆ ಮೇಲೆ ಹೆಲ್ಮೆಟ್‌ವೊಂದು ಕೆಳಗೆ ಬಿದ್ದಿದ್ದು, ಇದನ್ನು ಎಸೆಯಲಾಗಿದೆಯೋ ಅಥವಾ ಬಿದ್ದಿದ್ದೋ ಎಂಬ ಬಗ್ಗೆ ಪರಿಶೀಲನೆಗೆ ಪೊಲೀಸರು ಮುಂದಾಗಿದ್ದಾರೆ.

ಇದನ್ನೂ ಓದಿ | National Youth Festival : ಹುಬ್ಬಳ್ಳಿಯಲ್ಲಿ ಮೋದಿ ರೋಡ್‌ ಶೋ ನೋಡಲು ಮರವೇರಿದ ಬಾಗಲಕೋಟೆಯ 80ರ ವೃದ್ಧ

Exit mobile version