Site icon Vistara News

Navaratri: ದಸರಾ ನೋಡಲು ಮೈಸೂರಿಗೆ ಹೋದಾಗ ಈ ಸ್ಥಳಗಳನ್ನು ಮಿಸ್‌ ಮಾಡಲೇಬೇಡಿ

mysure

mysure

ಬೆಂಗಳೂರು: ನವರಾತ್ರಿ(Navaratri) ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ನಾಡಹಬ್ಬ ಎಂದೇ ಕರೆಯಲ್ಪಡುವ ದಸರಾ ಜತೆಗೆ ಜತೆಗೆ ಸಾಲು ಸಾಲು ರಜೆಯೂ ಆರಂಭಗೊಂಡಿದೆ. ಹೀಗಾಗಿ ಮೈಸೂರು ದಸರಾ ನೋಡಲು ಪ್ರವಾಸಿಗರ ದಂಡು ಆಗಮಿಸತೊಡಗಿದೆ. ನೀವೂ ಈ ದಸರಾ ಸಮಯದಲ್ಲಿ ಮೈಸೂರಿಗೆ ಹೋಗುವ ಪ್ಲ್ಯಾನ್‌ ಮಾಡಿದ್ದೀರಾ? ಹಾಗಾದರೆ ಒಂದಷ್ಟು ಯೋಜನೆ ಹಾಕಿಕೊಂಡರೆ ಮೈಸೂರು ಜತೆಗೆ ಸುತ್ತಮುತ್ತಲ ಪ್ರವಾಸಿ ತಾಣಕ್ಕೂ ಭೇಟಿ ನೀಡಬಹುದು. ಆ ಕುರಿತಾದ ವಿವರ ಇಲ್ಲಿದೆ.

ಕೊಡಗು

ʼಭಾರತದ ಸ್ಕಾಟ್ಲೆಂಡ್‌ʼ ಕೊಡಗನ್ನು ಪ್ರವಾಸಿಗರ ಸ್ವರ್ಗ ಎಂದೇ ಕರೆಯಲಾಗುತ್ತದೆ. ಇಲ್ಲಿ ಹಲವು ಪ್ರವಾಸಿ ತಾಣಗಳಿವೆ. ಹಚ್ಚ ಹಸಿರಿನ ಬೆಟ್ಟ, ಗುಡ್ಡಗಳು, ಘಮ ಹರಡುವ ಕಾಫಿ ಎಸ್ಟೇಟ್‌, ಮಂಜು ಆವರಿಸುವ ಗಿರಿಗಳು ಹಾಗೂ ಜಲಪಾತಗಳ ಭೋರ್ಗರೆವ ಸದ್ದು ತುಂಬಿದ ಕೊಡಗು ನಿಜಕ್ಕೂ ಅದ್ಭುತ ತಾಣ. ದುಬಾರೆ ಆನೆ ಕ್ಯಾಂಪ್‌, ಬೈಲಕುಪ್ಪೆಯ ಗೋಲ್ಡನ್‌ ಟೆಂಪಲ್‌, ರಾಜಾಸೀಟ್‌, ಅಬ್ಬೆ ಫಾಲ್ಸ್‌, ಇತ್ತೀಚೆಗೆ ಮಡಿಕೇರಿ ಹೊರವಲಯದ ಉಡೋತ್‌ನಲ್ಲಿ ಪ್ರವಾಸಿಗರಿಗಾಗಿ ತೆರೆದುಕೊಂಡ ಗ್ಲಾಸ್‌ ಸ್ಕೈ ವಾಕ್‌ ಬ್ರಿಡ್ಜ್‌ ಹೊಸ ಅನುಭವ ನೀಡಲಿದೆ. ಮೈಸೂರಿನಿಂದ ಕೊಡಗಿಗೆ 109 ಕಿ.ಮೀ. ಅಂತರ.

ಚಿಕ್ಕಮಗಳೂರು

ನಿಸರ್ಗದ ಉತ್ತಮ ಕೊಡುಗೆ ಎಂದೇ ಚಿಕ್ಕಮಗಳೂರನ್ನು ಹಲವರು ಬಣ್ಣಿಸುತ್ತಾರೆ. ಪಶ್ಚಿಮಘಟ್ಟದ ಭಾಗವಾಗಿರುವ ಇದು ಹಸಿರಿನಿಂದ ಸಮೃದ್ಧವಾಗಿ ದೇಶದ ಪ್ರವಾಸಿಗರನ್ನೇ ತನ್ನತ್ತ ಸೆಳೆಯುತ್ತದೆ. ಹಸಿರು ಬೆಟ್ಟ, ಕಾಫಿ ತೋಟ, ಜಲಪಾತಗಳಿಂದ ಕೂಡಿದ ಚಿಕ್ಕಮಗಳೂರಿನ ಪ್ರವಾಸ ಅವಿಸ್ಮರಣೀಯವಾಗಲಿದೆ. ರಾಜ್ಯದ ಅತೀ ಎತ್ತರದ ಶಿಖರಗಳಲ್ಲಿ ಒಂದಾದ ಮುಳ್ಳಯ್ಯನಗಿರಿ ಇಲ್ಲಿದೆ. ಬಾಬಾ ಬುಡಾನ್ ಗಿರಿ ಪರ್ವತ, ಭದ್ರಾ ವನ್ಯಜೀವಿ ಉದ್ಯಾನವನ ಇಲ್ಲಿನ ಇತರ ಆಕರ್ಷಣೆಗಳು. ಮೂಡಿಗೆರೆ ತಾಲೂಕಿನಲ್ಲಿರುವ ದೇವರಮನೆ ಎಂಬ ಸ್ವರ್ಗಕ್ಕೆ ನೀವು ಭೇಟಿ ನೀಡಲೇ ಬೇಕು. ಮಧ್ಯಮ ಟ್ರೆಕ್ಕಿಂಗ್ ಮತ್ತು ಫೋಟೋಗ್ರಫಿಗೆ ಸೂಕ್ತವಾದ ಸ್ಥಳವಾಗಿರುವ ದೇವರಮನೆಯ ವಿಶೇಷವೆಂದರೆ ಬೇಸಿಗೆಯಲ್ಲೂ ಈ ಪ್ರದೇಶ ಹಸಿರಾಗಿಯೇ ಇರುತ್ತದೆ. ಅಲ್ಲೇ ಪಕ್ಕದಲ್ಲಿರುವ, ಏಷ್ಯಾ ಖಂಡದಲ್ಲೇ ರೋಮಾಂಚನಕಾರಿ ಟ್ರಕ್ಕಿಂಗ್ ಪಾಯಿಂಟ್ ಅಂತ ಹೆಸರುವಾಸಿಯಾಗಿರುವ ಎತ್ತಿನಭುಜಕ್ಕೂ ತೆರಳಬಹುದು. ಚಿಕ್ಕಮಗಳೂರು ಮೈಸೂರಿನಿಂದ 178 ಕಿ.ಮೀ. ದೂರದಲ್ಲಿದೆ.

ಸಕಲೇಶಪುರ

ಅನೇಕ ಪ್ರವಾಸಿಗರನ್ನು ಸೆಳೆಯುವ ನಕ್ಷತ್ರಾಕಾರದ ಕೋಟೆ ಮಂಜರಾಬಾದ್ ಕೋಟೆ ಸಕರಲೇಶಪುರದಲ್ಲಿದೆ. ಭೂಮಟ್ಟದಿಂದ ಸುಮಾರು 988 ಮೀಟರ್ ಎತ್ತರದ ಗುಡ್ಡದ ಮೇಲೆ ಈ ಕೋಟೆಯನ್ನು ನಿರ್ಮಿಸಲಾಗಿದೆ. ಸಕಲೇಸಪುರದಿಂದ 5 ಕಿ.ಮೀ. ದೂರದಲ್ಲಿರುವ ಇಲ್ಲಿ ಅನೇಕ ಸಿನಿಮಾಗಳ ಚಿತ್ರೀಕರಣವೂ ನಡೆದಿದೆ. ಇದಲ್ಲದೆ ಸದಾ ಹಸಿರಿನಿಂದ ಕಂಗೊಳಿಸುವ ಸಕಲೇಶಪುರ ಕಾಫಿ, ಏಲಕ್ಕಿ, ಕರಿ ಮೆಣಸು, ಅಡಕೆ, ತೆಂಗು, ಬಾಳೆಯ ತೋಟಗಳಿಂದ ಆವೃತವಾಗಿದ್ದು ಎಂತಹವರನ್ನೂ ಸೆಳೆಯುತ್ತದೆ. ಜತೆಗೆ ಮಂಜೆಹಳ್ಳಿ ಜಲಪಾತವೂ ನಿಸರ್ಗಪ್ರೇಮಿಗಳ ಮನ ತಣಿಸಲಿದೆ. ಸಕಲೇಶಪುರದಿಂದ ಶ್ರವಣಬೆಳಗೊಳ 90 ಕಿ.ಮಿ. ಅಂತರದಲ್ಲಿದ್ದು, ಏಷ್ಯ ಖಂಡದಲ್ಲಿಯೇ ಅತಿ ಎತ್ತರದ ಏಕಶಿಲಾ ವಿಗ್ರಹ ಬಾಹುಬಲಿಯ ಮೂರ್ತಿ ಇಲ್ಲಿದೆ. ಮೈಸೂರಿನಿಂದ ಸಕಲೇಶಪುರಕ್ಕೆ ತೆರಳಲು 156 ಕಿ.ಮೀ. ಪ್ರಯಾಣ ಅಗತ್ಯ.

ಬಂಡೀಪುರ

ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ವನ್ಯಮೃಗ ಸಂರಕ್ಷಣಾ ಕೇಂದ್ರಕ್ಕೆ ಪ್ರವಾಸಿಗರು ಭೇಟಿ ನೀಡಲೇಬೇಕು. ಬಂಡೀಪುರ ವನ್ಯಮೃಗ ಸಂರಕ್ಷಣಾ ಕೇಂದ್ರ ಸುಮಾರು 57 ಚ.ಕಿ.ಮೀ. ವಿಸ್ತಾರವಾಗಿದೆ. ಇದನ್ನು 1941ರಿಂದ ವೇಣುಗೋಪಾಲ ವನ್ಯಮೃಗ ಉದ್ಯಾನವನದ ಒಂದು ಭಾಗವಾಗಿ ಪರಿಗಣಿಸಲಾಗುತ್ತಿದೆ. ಸಮುದ್ರಮಟ್ಟಕ್ಕಿಂತ 1,454 ಮೀ ಎತ್ತರದಲ್ಲಿದೆ. ಕಾಡಾನೆಗಳು ಬಂಡೀಪುರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತವೆ. ಜತೆಗೆ ಕಾಡು ಕೋಣ, ಚುಕ್ಕೆಜಿಂಕೆ, ಬಗಳುವ ಜಿಂಕೆ, ಕಾಡುಹಂದಿ, ಕಾಡುನಾಯಿ, ನರಿ, ಮುಂಗುಸಿ, ಹುಲಿ, ಚಿರತೆ, ಕಾಡುಕುರಿ, ಕರಡಿ, ಕಾಡುಬೆಕ್ಕು, ನವಿಲು, ಹಸಿರು ಪಾರಿವಾಳ, ಮುಳ್ಳುಹಂದಿ, ಹೆಬ್ಬಾವು, ನಾಗರಹಾವು, ಹಸಿರು ಹಾವು, ಮಂಡಲದ ಹಾವು ಮೊದಲಾದವುಗಳನ್ನೂ ನೋಡಬಹುದು. ಬಂಡೀಪುರ ಮೈಸೂರಿನಿಂದ ಕೇವಲ 80 ಕಿ.ಮೀ. ದೂರದಲ್ಲಿದೆ.

ನಾಗರಹೊಳೆ

ಕರ್ನಾಟಕದ ಪ್ರಸಿದ್ಧ ರಾಷ್ಟ್ರೀಯ ಉದ್ಯಾನವನ ಇದು. ಇಲ್ಲಿನ ವನ್ಯಪ್ರಾಣಿಗಳಲ್ಲಿ ಮುಖ್ಯವಾದವು ಹುಲಿ, ಚಿರತೆ, ಕರಡಿ, ಕಾಡು ನಾಯಿ, ಆನೆ, ಕಾಡೆಮ್ಮೆ, ಜಿಂಕೆ, ಕಾಡುಬೆಕ್ಕು, ಕೆಂಪು ಅಳಿಲು, ಹಾರುವ ಅಳಿಲು, ಕೋತಿ, ನರಿ, ಮುಂಗುಸಿ ಮುಂತಾದವು. ಮಾತ್ರವಲ್ಲ ಅಪರೂಪದ ನಾಲ್ಕು ಕೊಂಬಿನ ಹುಲ್ಲೆ ಕಾಣ ಸಿಗುತ್ತದೆ. ವೈವಿಧ್ಯ ಪಕ್ಷಿ ಸಂತತಿಯೂ ಇಲ್ಲಿದೆ. ನವಿಲು, ಕಾಡು ಕೋಳಿ, ಗೌಜಲು, ಭೀಮರಾಜ, ಮರಕುಟಿಗ, ಪ್ಯಾರಡೈಸ್ ಫ್ಲೈ ಕ್ಯಾಚರ್, ಅರಷಿಣ ಬಣ್ಣದ ಕೊಕ್ಕುಳ್ಳ ಮಂಗಟ್ಟೆ (ಹಾರ್ನ್ ಬಿಲ್), ಕಾಮಾಲೆಹಕ್ಕಿ (ಓರಿಯೋಲ್), ಬಾಬಾಬುಡನ್ ಗಿಣಿ, ಬೆಟ್ಟದ ಗೊರವಂಕ), ಬುಲ್ಬುಲ್, ಸೂರಕ್ಕಿ (ಸನ್ ಬರ್ಡ್)– ಮುಂತಾದ ಪಕ್ಷಿಗಳನ್ನು ನೋಡಬಹುದು. ಜತೆಗೆ ನಿಮ್ಮನ್ನು ಬೆಚ್ಚಿ ಬೀಳಿಸುವ ಹೆಬ್ಬಾವು, ನಾಗರಹಾವು, ಕಾಳಿಂಗಸರ್ಪ ಇತ್ಯಾದಿ ಇಲ್ಲಿದೆ. ಇಲ್ಲಿನ ಪ್ರಾಣಿ ಸಂಪತ್ತನ್ನು ಹತ್ತಿರದಿಂದ ನೋಡುವ ಅನುಕೂಲತೆಗಾಗಿ ಎತ್ತರದ ವೀಕ್ಷಣ ಗೋಪುರಗಳನ್ನು ಕಟ್ಟಲಾಗಿದೆ. ಅಭಯಾರಣ್ಯವನ್ನು ಸುತ್ತುವ ಸಲುವಾಗಿ ವಾಹನ ಸೌಕರ್ಯವನ್ನೂ ಕಲ್ಪಿಸಲಾಗಿದೆ. ಮೈಸೂರಿನಿಂದ ನಾಗರಹೊಳೆಗೆ 90 ಕಿ.ಮೀ. ಅಂತರ.

ಬಿಳಿಗಿರಿರಂಗನ ಬೆಟ್ಟ

ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನಲ್ಲಿದೆ ಬಿಳಿಗಿರಿರಂಗನ ಬೆಟ್ಟ. ಇದು ಸಮುದ್ರಮಟ್ಟದಿಂದ ಸುಮಾರು 1,552 ಮೀಟರ್ ಎತ್ತರದಲ್ಲಿದೆ. ಬೆಟ್ಟದ ಮೇಲೆ ಬಿಳಿಗಿರಿರಂಗಸ್ವಾಮಿ ದೇವಾಲಯವಿದ್ದು ಪುಣ್ಯಕ್ಷೇತ್ರವೆನಿಸಿದೆ. ಬೆಟ್ಟ ಏರಲು ಯಳಂದೂರು ಹಾಗೂ ಚಾಮರಾಜನಗರದಿಂದ ರಸ್ತೆಗಳಿವೆ. ಬೆಟ್ಟದ ಇಳಿಜಾರು ಪ್ರದೇಶಗಳಲ್ಲಿ ದಟ್ಟ ಅರಣ್ಯ ಸಂಪತ್ತಿದೆ. ಈ ಹಸಿರು ನೋಟ ಪ್ರವಾಸಿಗರ ಮನ ತಣಿಸುವುದರಲ್ಲಿ ಅನುಮಾನವೇ ಇಲ್ಲ. ಬೆಟ್ಟದ ಮೇಲೆ ಕೆಲವೆಡೆ ಕಾಫಿ, ಕಿತ್ತಳೆ, ಬಾಳೆ, ಹಿಪ್ಪನೇರಳೆ ಬೆಳೆಯಲಾಗುತ್ತದೆ. ಅಲ್ಲದೆ ರೇಷ್ಮೆ ಸಂಶೋಧನಾ ಕೇಂದ್ರವಿದೆ. ಮೈಸೂರಿನಿಂದ ಬಿಳಿರಂಗನಬೆಟ್ಟ ಕೇವಲ 61 ಕಿ.ಮೀ. ದೂರದಲ್ಲಿದೆ.

ಹಿಮವದ್ ಗೋಪಾಲಸ್ವಾಮಿ ಬೆಟ್ಟ

ಮೈಸೂರಿಗೆ ಭೇಟಿ ನೀಡಿದವರು ಖಂಡಿತಾ ಇಲ್ಲಿಗೆ ಬರಲೇಬೇಕು. ನಿಸರ್ಗದ ಚೆಲುವಿಗೆ ಇದು ಪ್ರಸಿದ್ಧ. ಹಿಮವದ್ ಗೋಪಾಲಸ್ವಾಮಿ ಬೆಟ್ಟ ಸಮುದ್ರ ಮಟ್ಟದಿಂದ ಸುಮಾರು 4,800 ಅಡಿ ಎತ್ತರದಲ್ಲಿದೆ. ಇದು ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಅಂಚಿನಲ್ಲಿ ಇದೆ. ಬೆಟ್ಟದ ಮೇಲಿರುವ ಗೋಪಾಲಸ್ವಾಮಿ ದೇವಸ್ಥಾನ ಮತ್ತು ನಿಸರ್ಗ ರಮಣೀಯತೆ ಎಲ್ಲರನ್ನೂ ಆಕರ್ಷಿಸುತ್ತದೆ. ಇಲ್ಲಿ ವರ್ಷದ ಎಲ್ಲ ಕಾಲಗಳಲ್ಲಿ ಹಿಮ ಕವಿದಿರುವುದರಿಂದ ʼಹಿಮವದ್ ಗೋಪಾಲಸ್ವಾಮಿ ಬೆಟ್ಟʼ ಎಂಬ ಹೆಸರು ಬಂದಿದೆ. ಬೆಟ್ಟದ ಮೇಲೆ ತಲುಪಲು ರಸ್ತೆ ಇದೆ. ಗೋಪಾಲಸ್ವಾಮಿ ವಿಗ್ರಹದ ಕಲ್ಲಿನ ಮೇಲೆ ವರ್ಷದ ಎಲ್ಲ ದಿನವೂ ನೀರು ಜಿನುಗುವುದು ಮತ್ತೊಂದು ವಿಶೇಷ. ಮೈಸೂರಿನಿಂದ ಹಿಮವದ್ ಗೋಪಾಲಸ್ವಾಮಿ ಬೆಟ್ಟ 79 ಕಿ.ಮೀ. ದೂರದಲ್ಲಿದೆ.

ಶ್ರೀರಂಗಪಟ್ಟಣ

ಐತಿಹಾಸಿಕ ಊರು ಶ್ರೀರಂಗಪಟ್ಟಣ. ಇದು ಮಂಡ್ಯ ಜಿಲ್ಲೆಯಲ್ಲಿದೆ. ಇಲ್ಲಿನ ಮುಖ್ಯ ನದಿ ಕಾವೇರಿ. ಜಲ ಸಮೃದ್ಧಿಯನ್ನು ಹೊಂದಿರುವ ಈ ತಾಲೂಕು ಫಲವತ್ತಾದ ಕೆಂಪು ಜೇಡಿಮಿಶ್ರಿತ ಮಣ್ಣಿನಿಂದ ಕೂಡಿದೆ. ಇಲ್ಲಿನ ಹಸಿರು ನೋಟ ಮನಸ್ಸಿಗೆ ಮುದ ನೀಡುತ್ತದೆ. ಇದರ ಸಮೀಪದಲ್ಲೇ ರಂಗನತಿಟ್ಟು ಪಕ್ಷಿಧಾಮವಿದೆ. ಶ್ರೀರಂಗಪಟ್ಟಣದಲ್ಲಿರುವ ಶ್ರೀರಂಗನಾಥಸ್ವಾಮಿ ದೇವಾಲಯ ಬಹಳ ಪ್ರಸಿದ್ಧ. ಇದು ದ್ರಾವಿಡ ಶೈಲಿಯಲ್ಲಿದೆ. ಶ್ರೀರಂಗಪಟ್ಟಣವನ್ನು ಸುತ್ತುವರಿದಿದ್ದ ಗಟ್ಟಿ ಕೋಟೆಯನ್ನು ಈಗಲೂ ಇದೆ. ಟಿಪ್ಪುವಿನ ಅರಮನೆ ಎಂದು ಹೇಳುವ ಲಾಲ್‌ಮಹಲ್‌ನ ಅವಶೇಷವನ್ನು ನೋಡಬಹುದು. ಟಿಪ್ಪು ಸುಲ್ತಾನ್‌ ಕಾಲದಲ್ಲಿ ಖೈದಿಗಳನ್ನು ಕೂಡಿಡುತ್ತಿದ್ದ ಬಂದೀಖಾನೆಗಳಿವೆ. ಕೋಟೆಯ ಸುತ್ತ ಕಂದಕವಿದ್ದು ಅದರಲ್ಲಿ ಕಾವೇರಿ ನದಿಯ ನೀರು ತುಂಬುವಂತೆ ಮಾಡಲಾಗುತ್ತಿತ್ತು ಎಂದು ಇತಿಹಾಸ ಹೇಳುತ್ತದೆ. ಮೈಸೂರು ಮತ್ತು ಶ್ರೀರಂಗಪಟ್ಟಣಕ್ಕಿರುವ ಅಂತರ ಕೇವಲ 15 ಕಿ.ಮೀ.

ಇದನ್ನೂ ಓದಿ: Navaratri: ದಸರಾ ರಜೆಯಲ್ಲಿ ಇಲ್ಲೆಲ್ಲ ಸುತ್ತಾಡಿ; ಕೆಎಸ್‌ಆರ್‌ಟಿಸಿ ಟೂರ್‌ ಪ್ಯಾಕೇಜ್‌ ಘೋಷಣೆ

Exit mobile version