| ಬೆಂಕಿ ಬಸಣ್ಣ, ನ್ಯೂಯಾರ್ಕ್
‘ಆನಂದ- ಅನುಭವ-ಅನುಬಂಧ’ ಎಂಬ ಟ್ಯಾಗ್‌ಲೈನ್ನೊಂದಿಗೆ ಅಮೆರಿಕದ ಟೆಕ್ಸಾಸ್ ರಾಜ್ಯದ ಆಸ್ಟಿನ್‌ನಲ್ಲಿ ಆಯೋಜಿಸಿದ್ದ ಮೂರು ದಿನಗಳ ʼ7ನೇ ನಾವಿಕ ವಿಶ್ವ ಕನ್ನಡ ಸಮಾವೇಶ 2023″ (NAVIKA Summit) ಭಾನುವಾರ ಮುಕ್ತಾಯಗೊಂಡಿತು. ಈ ಮಹಾ ಸಮ್ಮೇಳನದಲ್ಲಿ ಅಮೆರಿಕದ ಮೂಲೆ ಮೂಲೆಗಳಿಂದ ಸುಮಾರು 3 ಸಾವಿರ ಜನರು ಭಾಗವಹಿಸಿದ್ದರು.
ಅರ್ಜುನ್ ಜನ್ಯ ಅವರ ಲೈವ್ ಸಂಗೀತ ಸಂಜೆಯಲ್ಲಿ ಕೊನೆಯ ದಿನ ಶಿವಣ್ಣ ಅವರು ಅಮೆರಿಕದಲ್ಲಿ ಹುಟ್ಟಿ ಬೆಳೆದ ಕನ್ನಡ ಮಕ್ಕಳ ಜತೆ ವೇದಿಕೆ ಮೇಲೆ ಭರ್ಜರಿಯಾಗಿ ಕುಣಿದು ಕುಪ್ಪಳಿಸಿದರು. ಹ್ಯಾಟ್ರಿಕ್ ಹೀರೋ ಶಿವಣ್ಣ ಮತ್ತು ಅವರ ಪತ್ನಿ ಗೀತಾ ಅಮೆರಿಕದ ಕನ್ನಡಿಗರ ಮಾತೃ ಭಾಷೆಯ ಅಭಿಮಾನವನ್ನು ಮುಕ್ತಕಂಠದಿಂದ ಹೊಗಳಿದರು.
ಕರುನಾಡ ಚಕ್ರವರ್ತಿ, ಸ್ಯಾಂಡಲ್‌ವುಡ್ ಕಿಂಗ್, ಸೆಂಚುರಿ ಸ್ಟಾರ್, ಹ್ಯಾಟ್ರಿಕ್ ಹೀರೊ ಡಾ. ಶಿವರಾಜ್‌ಕುಮಾರ್ ತಾವು ಮೊದಲನೇ ನಾವಿಕ ವಿಶ್ವ ಕನ್ನಡ ಸಮ್ಮೇಳನವನ್ನು 14 ವರ್ಷಗಳ ಹಿಂದೆ 2010ರಲ್ಲಿ ಲಾಸ್ ಎಂಜಲೀಸ್ ನಗರದಲ್ಲಿ ಭಾಗವಹಿಸಿದ್ದನ್ನು ತುಂಬು ಹೃದಯದಿಂದ ಸ್ಮರಿಸಿದರು. ನಾವಿಕ ಸಂಸ್ಥೆಯ ಹೊಸ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶಿವಕುಮಾರ್ ಬೆಂಗಳೂರು ಅವರನ್ನು ಅಧ್ಯಕ್ಷ ಮಂಜುನಾಥ್ ರಾವ್ ವೇದಿಕೆ ಮೇಲೆ ಸನ್ಮಾನಿಸಿದರು.
ಕನ್ನಡ ಸಿನಿಮಾ ರಂಗದ ಪ್ರಸಿದ್ಧ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ತಂಡ ಪ್ರೈಮ್ ಟೈಮ್‌ನಲ್ಲಿ ಪ್ರದರ್ಶನ ಕೊಟ್ಟಿತು. ಖ್ಯಾತ ಹಿನ್ನೆಲೆ ಗಾಯಕರಾದ ವ್ಯಾಸರಾಜ ಸಾಸೋಲೆ, ಕೀರ್ತನ್ ಹೊಳ್ಳ, ಇಂದು ನಾಗರಾಜ್, ಐಶ್ವರ್ಯ ರಂಗ ರಾಜನ್, ಮುಂತಾದ ಗಾಯಕರು ಪ್ರೇಕ್ಷಕರನ್ನು ರಂಜಿಸಿದರು.
ಕರ್ನಾಟಕ ರಾಜ್ಯದ ಪ್ರತಿನಿಧಿಗಳಾಗಿ ಡಾ. ಎಸ್ ರಾಮಾನುಜ ಮತ್ತು ಮಹಮ್ಮದ್ ರಫೀ ಪಾಶ ಭಾಗವಹಿಸಿ ಸನ್ಮಾನ್ಯ ಮುಖ್ಯಮಂತ್ರಿ ಸಿದ್ರಾಮಯ್ಯನವರ ಸರ್ಕಾರದಿಂದ ಅನಿವಾಸಿ ಕನ್ನಡಿಗರಿಗೆ ಶುಭಾಶಯ ಮತ್ತು ಹೊಸ ಸರ್ಕಾರದಿಂದ ನಾವಿಕ ಸಂಸ್ಥೆಗೆ ಪ್ರೋತ್ಸಾಹ, ಸಹಕಾರ ಮತ್ತು ಬೆಂಬಲಗಳನ್ನು ಬೆಂಬಲಗಳನ್ನು ವ್ಯಕ್ತಪಡಿಸಿದರು.
ಆಸ್ಟಿನ್ ಕನ್ನಡ ಸಂಘದವರು ನಡೆಸಿಕೊಟ್ಟ ತುಳುನಾಡ ಐಸಿರಿ ಪ್ರಮುಖ ಆಕರ್ಷಣೆಗಳು ಒಂದಾಗಿತ್ತು. ಉತ್ತರ ಕರ್ನಾಟಕದ ಪ್ರಸಿದ್ಧ ಸಹೋದರರಾದ ಖಾನ್ ಬ್ರದರ್ಸ್ ಪ್ರೇಕ್ಷಕರನ್ನು ರಂಜಿಸಿದರು.”ಬೀಟ್ ಗುರೂಸ್ ” ಮ್ಯೂಸಿಕ್ ಬ್ಯಾಂಡ್ ವಿನೂತನ ರೀತಿಯಲ್ಲಿ ಪ್ರೇಕ್ಷಕರನ್ನು ರೋಮಾಂಚನಗೊಳಿಸಿತು. ಶನಿವಾರ ಸಂಜೆ ಪ್ರೈಮ್ ಶೋನಲ್ಲಿ ರಘು ದೀಕ್ಷಿತ್ ಪ್ರೇಕ್ಷಕರನ್ನು ಸಂಗೀತ ಲೋಕಕ್ಕೆ ತೆಗೆದುಕೊಂಡು ಹೋಗಿದ್ದರು.
ಈ ಸಮಾವೇಶದಲ್ಲಿ ಇನ್ವೆಸ್ಟ್ಮೆಂಟ್ ( Investment / ಹೂಡಿಕೆದಾರರ ) ಫೋರಮ್, ವುಮೆನ್ಸ್ ಫೋರಮ್, ಸಾಹಿತ್ಯ ಗೋಷ್ಠಿ, ಆಧ್ಯಾತ್ಮಿಕ ವೇದಿಕೆ, ವೈದ್ಯರ ಫೋರಮ್ , ಮೆರವಣಿಗೆ ಹೀಗೆ ಅನೇಕ ಕಾರ್ಯಕ್ರಮಗಳು ಮೂರು ದಿನಗಳ ಕಾಲ ಸತತವಾಗಿ ನಡೆದವು. ಈ ಸಮಾವೇಶದಲ್ಲಿ ಅನಿವಾಸಿಯರು ಮಾತ್ರವಲ್ಲದೇ ಕರ್ನಾಟಕದ ಖ್ಯಾತನಾಮ ಕಲಾವಿದರಿಂದ ವೈವಿದ್ಯಮಯ ಮನರಂಜನಾ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಈ ಮಹಾಸಮ್ಮೇಳನದ ಆಯೋಜನೆಯ ಜವಾಬ್ದಾರಿಯನ್ನು ಸಂಚಾಲಕರಾದ ಸದಾಶಿವ ಕಲ್ಲೂರ್ ನೂರಾರು ಸ್ವಯಂಸೇವಕರ ತಂಡಗಳನ್ನು ಕಟ್ಟಿ ಕಳೆದ ಆರು ತಿಂಗಳಿಂದ ತುಂಬಾ ಪರಿಶ್ರಮವಹಿಸಿ ತುಂಬಾ ಯಶಸ್ವಿಯಾಗಿ ನಡೆಸಿಕೊಟ್ಟರು. ಇವರಿಗೆ ಸಹ-ಸಂಚಾಲಕರಾದ ಹೂಸ್ಟನ್ ಕನ್ನಡ ಸಂಘದ ಅನು ಅಯ್ಯಂಗಾರ್, ಸ್ಯಾನ್ ಅಂಟೋನಿಯೋ ಕುವೆಂಪು ಕನ್ನಡ ಸಂಘದ ಕಾರ್ತಿಕ್ ಹುಲಿಕುಂಟೆ, ಡಲ್ಲಾಸ್ ಕನ್ನಡ ಬಳಗದ ಗೌರಿಶಂಕರ್ ಮತ್ತು ಆಸ್ಟಿನ್ ಕನ್ನಡ ಸಂಘದ ಪ್ರಕಾಶ್ ಉಡುಪ ಮುಂತಾದ ಲೀಡರ್‌ಗಳು ಹೆಗಲುಕೊಟ್ಟರು.
ಈ ಸಮಾವೇಶದಲ್ಲಿ ನೃತ್ಯ, ಸಂಗೀತ, ನಾಟಕ, ಫ್ಯಾಷನ್ ಶೋ , ಸ್ಟ್ಯಾಂಡ್-ಅಪ್ ಕಾಮಿಡಿ , ಮ್ಯಾಜಿಕ್ ಶೋ, ಗಾಲ್ಫ್ ಪಂದ್ಯಾವಳಿ, ಮೆರವಣಿಗೆ – ಹೀಗೆ ಹಲವಾರು ಕಾರ್ಯಕ್ರಮಗಳು ನಡೆದವು. ಕರ್ನಾಟಕದ ಪ್ರಖ್ಯಾತ ಯುವ ಸ್ಟಾಂಡ್ ಅಪ್ ಕಾಮಿಡಿಯನ್‌ಗಳಾದ ರಾಘವೇಂದ್ರ ಆಚಾರ್, ಕಾರ್ತಿಕ್ ಪತ್ತಾರ್ ಮತ್ತು ನಿರೂಪ್ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸಿದರು.
ನಾವಿಕ ಮೆರವಣಿಗೆಯಲ್ಲಿ ಶಿವಣ್ಣ ದಂಪತಿ ಉತ್ಸಾಹದಿಂದ ಭಾಗವಹಿಸಿದ್ದರು. ಈ ಮೆರವಣಿಗೆಯಲ್ಲಿ
ಕರ್ನಾಟಕದ ವಿವಿಧ ಪ್ರದೇಶಗಳ ಚರಿತ್ರೆಯನ್ನು, ಪರಂಪರೆಯನ್ನು ಮೆರವಣಿಗೆಯಲ್ಲಿ ಪ್ರದರ್ಶಿಸಲಾಯಿತು. ನಾವಿಕ 2023 ಸಾಹಿತ್ಯ ವೇದಿಕೆಯು ಕನ್ನಡದ ಹೆಸರಾಂತ ಸಾಹಿತಿ ಡಾ. ಗಜಾನನ ಶರ್ಮ ಅವರೊಂದಿಗೆ ಮುಕ್ತ “ಸಂವಾದ” ವನ್ನು ಪ್ರಸ್ತುತ ಪಡಿಸಿತು.
ಈ ವಿಶ್ವ ಕನ್ನಡ ಸಮಾವೇಶದಲ್ಲಿ ರಂಗಸ್ಥಳ ನಾಟಕ, ನಾವಿಕ ಕೋಗಿಲೆ ಗಾಯನ ಸ್ಪರ್ಧೆ, ನೃತ್ಯೋತ್ಸವ ನೃತ್ಯ , ಶೃಂಗಾರ ಸಿರಿ ಫ್ಯಾಶನ್ ಶೋ ಈಗ ಅನೇಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು ಕರ್ನಾಟಕದ ಪ್ರಾದೇಶಿಕ ವೈವಿಧ್ಯಮಯ ಸವಿ ಭೋಜನವನ್ನು ಮೂರು ದಿನಗಳ ಕಾಲ ಸವಿದರು.