Site icon Vistara News

NDA vs INDIA: ಲೋಕಸಭೆ ಫೈನಲ್‌ಗೆ ಬೆಂಗಳೂರಲ್ಲಿ ರಣಘೋಷ: ಟೀಂ INDIA ನಡೆಸಲಿದ್ದಾರೆ 11 ಆಟಗಾರರು!

Lok Sabha election will modi vs Kharge, India bloc may choose aicc president as its leader

ಬೆಂಗಳೂರು: ಲೋಕಸಭೆ ಚುನಾವಣೆಗೆ ಕೇಂದ್ರ ಸರ್ಕಾರದ ವಿರುದ್ಧ ಒಗ್ಗಟ್ಟಿನ ಹೋರಾಟ ನಡೆಸಲು ಬೆಂಗಳೂರಿನ ಪ್ರತಿಪಕ್ಷದ ಸಭೆಯಲ್ಲಿ, ಮೈತ್ರಿಕೂಟಕ್ಕೆ Indian Nationation Develpemental Inclusive Alliance (INDIA) ಎಂದು ನಾಮಕರಣ ಮಾಡಲಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಧಿಕೃತವಾಗಿ (NDA vs INDIA) ಘೋಷಣೆ ಮಾಡಿದ್ದಾರೆ.

ಸಭೆಯ ನಂತರ ಎಲ್ಲ ನಾಯಕರನ್ನೊಳಗೊಂಡ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ದೇಶ ಹಾಗೂ ಪ್ರಜಾಪ್ರಭುತ್ವವನ್ನು ಉಳಿಸಲು ಈ ಸಭೆ ಮಹತ್ವವಾಗಿದೆ. ನಾವು ಸಭೆಯಲ್ಲಿ ಅನೇಕ ವಿಚಾರಗಳನ್ನು ಚರ್ಚಿಸಿದ್ದೇವೆ. ಪ್ರಸ್ತಾವನೆಯನ್ನು ಎಲ್ಲ 26 ಪಕ್ಷಗಳೂ ಒಪ್ಪಿಕೊಂಡಿವೆ. ನಮ್ಮ ಮೈತ್ರಿಕೂಟವನ್ನು Indian Nationation Develpemental Inclusive Alliance (INDIA) ಎಂದು ಆಗಿದೆ. ಈ ಹೆಸರನ್ನು ಎಲ್ಲರೂ ಒಪ್ಪಿದ್ದಾರೆ.

ಮೈತ್ರಿಕೂಟಕ್ಕೆ 11 ಜನರ ಸಮನ್ವಯ ಸಮಿತಿ ರಚನೆಯಾಗಲಿದೆ. ಈ 11 ಸದಸ್ಯರ ಹೆಸರನ್ನು ಮುಂಬೈಯಲ್ಲಿ ನಡೆಯುವ ಮುಂದಿನ ಸಭೆಯಲ್ಲಿ ನಿರ್ಧಾರ ಮಾಡಲಾಗುತ್ತದೆ. ಈ ಮೈತ್ರಿಕೂಟದ ಪ್ರಚಾರ ನಿರ್ವಹಣೆಗೆ ಒಂದು ಸಚಿವಾಲಯವನ್ನು ರಚಿಸಲಾಗುತ್ತದೆ. ದೆಹಲಿಯಲ್ಲಿ ಈ ಸಚಿವಾಲಯವನ್ನು ಸ್ಥಾಪಿಸಲಾಗುತ್ತದೆ.

ಇಂದಿನ ಸಭೆಯ ನಂತರ ಜಂಟಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಲು ನಿರ್ಧಾರ ಮಾಡಲಾಗಿದೆ. ಮುಂದಿನ ಸಭೆಯು ಮುಂಬೈಯಲ್ಲಿ ನಡೆಯಲಿದೆ. ಇಂದಿನ ಬಿಜೆಪಿ ಸರ್ಕಾರ ಪ್ರಜಾಪ್ರಭುತ್ವವನ್ನು ನಾಶ ಮಾಡಲು ಬಿಜೆಪಿ ಬಯಸುತ್ತಿದೆ. ಸಂವಿಧಾನವನ್ನೂ ನಾಶ ಮಾಡಲು ಮುಂದಾಗಿದೆ.

ಸಿಬಿಐ, ಇಡಿಯಂತಹ ಸ್ವಾಯತ್ತ ಸಂಸ್ಥೆಗಳನ್ನು ಪ್ರತಿಪಕ್ಷಗಳ ವಿರುದ್ಧ ಬಳಕೆ ಮಾಡುತ್ತಿದೆ. ಇಂದಿನ ಗಂಭೀರ ಪರಿಸ್ಥಿತಿಯಲ್ಲಿ ದೇಶವನ್ನು ಉಳಿಸಲು ನಾವೆಲ್ಲರೂ ಒಟ್ಟಾಗಿದ್ದೇವೆ. ಪ್ರತಿ ರಾಜ್ಯದಲ್ಲೂ ನಮ್ಮಲ್ಲಿ ರಾಜಕೀಯವಾಗಿ ಕೆಲವು ಭಿನ್ನಾಭಿಪ್ರಾಯಗಳಿವೆ. ಆದರೆ ಅದೆಲ್ಲವನ್ನೂ ಬದಿಗಿಟ್ಟು ದೇಶವನ್ನು ಉಳಿಸಲು ನಾವೆಲ್ಲರೂ ಮುಂದೆ ಬಂದಿದ್ದೇವೆ. ಇದಕ್ಕಾಗಿ ಎಲ್ಲ ಪಕ್ಷಗಳೂ ಅನೇಕ ಸಲಹೆಗಳನ್ನು ನೀಡಿವೆ. ಅವುಗಳನ್ನು ಒಪ್ಪಿ ಮುನ್ನಡೆಯುತ್ತೇವೆ.

ಮೊದಲಿಗೆ ಪಟನಾದಲ್ಲಿ ಸಭೆ ಸೇರಲಾಗಿತ್ತು. ಆಗ 16 ಪಕ್ಷಗಳಿದ್ದವು. ಈಗ 26 ಪಕ್ಷಗಳಿವೆ. ಇದೆಲ್ಲವನ್ನೂ ನೋಡಿದ ನಂತರ ನರೇಂದ್ರ ಮೋದಿಯವರು 30 ಪಕ್ಷಗಳ ಸಭೆ ನಡೆಸಿದ್ದಾರೆ. ಈ 30 ಪಕ್ಷಗಳು ಎಲ್ಲಿವೆ ಎಂದು ಗೊತ್ತಿಲ್ಲ. ಅವೇನು ನೋಂದಾಯಿತ ಪಕ್ಷಗಳೇ? ಎಲ್ಲಿವೆ ಆ ಪಕ್ಷಗಳು ಗೊತ್ತಿಲ್ಲ. ಇಲ್ಲಿವರೆಗೆ ತಮ್ಮದೇ ಮೈತ್ರಿಕೂಟವನ್ನು ಅವರು ಲೆಕ್ಕಕ್ಕಿಟ್ಟಿರಲಿಲ್ಲ. ಈಗ ಒಬ್ಬೊಬ್ಬರನ್ನೂ ಕರೆಯುತ್ತಿದ್ದಾರೆ. ಮೋದಿಯವರಿಗೆ ಈಗ ಭಯ ಆರಂಭವಾಗಿದೆ.

ಇದನ್ನೂ ಓದಿ: Opposition Meet: ಲೋಕಸಭೆಗೆ NDA vs INDIA: ಮೋದಿ ವಿರೋಧಿ ಪ್ರತಿಪಕ್ಷಕ್ಕೆ ಹೊಸ ಹೆಸರು

ದೇಶದಲ್ಲಿ ತಾಂಡವವಾಡುತ್ತಿರುವ ನಿರುದ್ಯೋಗ, ಬೆಲೆಯೇರಿಕೆಯಂತಹ ಅನೇಕ ಸಮಸ್ಯೆಗಳನ್ನು ಎದುರಿಸಲು ನಾವೆಲ್ಲರೂ ಮುಂದೆ ಬಂದಿದ್ದೇವೆ. ಮಾಧ್ಯಮಗಳೂ ಇಂದು ಸಂಕಷ್ಟದಲ್ಲಿವೆ. ಮಾಧ್ಯಮಗಳನ್ನು ಮೋದಿ ಬಂಧಿಸಿದ್ದಾರೆ. ಮೋದಿಯವರ ಸಂಕೇತ ಇಲ್ಲದೆಯೇ ಏನೂ ಮಾಡಲಾಗುತ್ತಿಲ್ಲ. ನನ್ನ ರಾಜಕೀಯ ಜೀವನದಲ್ಲಿ ಇಷ್ಟು ಪ್ರಮಾಣದ ಮಾಹಿತಿ ಹತ್ತಿಕ್ಕುವ ಕೆಲಸವನ್ನು ನಾನೆಂದಿಗೂ ನೋಡಿಲ್ಲ. ಇಷ್ಟೆಲ್ಲದರ ನಡುವೆ ನಾವು 2024ರ ಲೋಕಸಭೆ ಚುನಾವಣೆಯ ಕಡೆಗೆ ಮುನ್ನಡೆಯುತ್ತೇವೆ, ಸಫಲ ಆಗುತ್ತೇವೆ ಎಂದು ಭಾವಿಸಿದ್ದೇವೆ.

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮಾತನಾಡಿ, ನಾವೆಲ್ಲರೂ ಭಾರತಕ್ಕಾಗಿ ಸೇರಿದ್ದೇವೆ. INDIAವನ್ನು ಬಿಜೆಪಿ ಎದುರಿಸುತ್ತದೆಯೇ? ನಮ್ಮ ಸವಾಲು ನೇರವಾಗಿ ಕೇಂದ್ರೀಕೃತವಾಗಿರುತ್ತದೆ. ಇದೇ ವೇದಿಕೆಯ ಅಡಿಯಲ್ಲಿ ನಾವು ಹೋರಾಟ ನಡೆಸುತ್ತೇವೆ. ಇದಕ್ಕೆ ಸವಾಲೆಸೆಯುವವರಿದ್ದರೆ ಬನ್ನಿ. ಭಾರತವನ್ನು ಉಳಿಸಬೇಕು. ಮಣಿಪುರಂತಹ ಘಟನೆಗಳಿಂದ ಭಾರತವನ್ನು ಉಳಿಸಬೇಕು. ಭಾರತವನ್ನು ಉಳಿಸಬೇಕು. ಬಿಜೆಪಿಯು ದೇಶವನ್ನು ಮಾರುವ ಒಪ್ಪಂದಕ್ಕೆ ಮುಂದಾಗಿದೆ. ಪ್ರಜಾಪ್ರಭುತ್ವವನ್ನು ಖರೀದಿಸಲು ಮುಂದಾದೆ. ಹೀಗಾಗಿ ಯಾವುದೇ ಸ್ವಾಯತ್ತ ಸಂಸ್ಥೆ ಕೆಲಸ ಮಾಡಲು ಬಿಡುತ್ತಿಲ್ಲ. ಭಾರತ ಗೆಲ್ಲುತ್ತದೆ, ಬಿಜೆಪಿ ಸೋಲುತ್ತದೆ ಎಂದರು.

ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌ ಮಾತನಾಡಿ, ಈ ಸರ್ಕಾರಕ್ಕೆ ಕೆಲಸ ಮಾಡಲು ಸಾಕಷ್ಟು ಅವಕಾಶವಿತ್ತು. ಆದರೆ ಒಂದೇ ಒಂದು ಕ್ಷೇತ್ರದಲ್ಲೂ ಈ ಸರ್ಕಾರ ಅಭಿವೃದ್ಧಿ ಮಾಡಿಲ್ಲ. ರೈಲ್ವೆಯಿಂದ ಎಲ್ಲವನ್ನೂ ಹಾಳು ಮಾಡಿದ್ದಾರೆ. ಅದಕ್ಕಾಗಿ ಈ ಸಭೆಯಲ್ಲಿ ಉತ್ತಮ ಚರ್ಚೆ ನಡೆದಿದೆ ಎಂದರು.

ಮಹಾರಾಷ್ಟ್ರದ ಮಾಜಿ ಸಿಎಂ ಉದ್ಧವ್‌ ಠಾಕ್ರೆ ಮಾತನಾಡಿ, ಬೇರೆಬೇರೆ ವಿಚಾರಧಾರೆ ಇದೆಯಲ್ಲ ಎಂದು ಅನೇಕರು ಕೇಳಿದರು. ಇಷ್ಟೆಲ್ಲದರ ನಂತರವೂ ನಾವು ಒಟ್ಟಾಗಿದ್ದೇವೆ. ನಾವು ಕುಟುಂಬಕ್ಕಾಗಿ ಹೋರಾಡುತ್ತಿದ್ದೇವೆ ಎಂದು ಹೇಳುತ್ತಾರೆ. ಹೌದು. ಇಡೀ ದೇಶವೇ ನಮ್ಮ ಕುಟುಂಬ. ಇದನ್ನು ಉಳಿಸಿಕೊಳ್ಳಲು ನಾವೆಲ್ಲರೂ ಒಟ್ಟಾಗಿದ್ದೇವೆ. ನಾವೆಲ್ಲರೂ ಸಫಲರಾಗುತ್ತೇವೆ ಎಂಬ ವಿಶ್ವಾಸ ನಮಗಿದೆ. ನೀವೇಕೆ ಹೆದರುತ್ತೀರ? ನಾವಿದ್ದೇವೆ ಎಂದು ದೇಶದ ಜನರಿಗೆ ತಿಳಿಸುತ್ತಿದ್ದೇವೆ. ದೇಶವನ್ನು ನಾವೆಲ್ಲರೂ ಸುರಕ್ಷಿತವಾಗಿಸುತ್ತೇವೆ. ಈ ಸಭೆಯನ್ನು ಆಯೋಜಿಸಿದ್ದಕ್ಕೆ ಕರ್ನಾಟಕ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮಾತನಾಡಿ, ಈ ಹೋರಾಟವು ಬಿಜೆಪಿ ಹಾಗೂ ಪ್ರತಿಪಕ್ಷಗಳ ನಡುವಿನದ್ದಲ್ಲ. ಇದು ದೇಶದ ಧ್ವನಿಯನ್ನು ಅಡಗಿಸುವುದರ ವಿರುದ್ಧದ ಹೋರಾಟ. ಅದಕ್ಕಾಗಿಯೇ INDIA ಹೆಸರನ್ನು ಇರಿಸಲಾಗಿದೆ. ಇದು NDA ಹಾಗೂ INDIA ನಡುವಿನ ಹೋರಾಟ. ಯಾರೇ ಭಾರತದ ವಿರುದ್ಧ ನಿಂತರೂ ಜಯ ಯಾರಿಗೆ ಸಿಗುತ್ತದೆ ಎನ್ನುವುದು ನಿಶ್ಚಿತವಾಗಿದೆ. ನಾವು ಇದಕ್ಕಾಗಿ ಒಂದು ಕ್ರಿಯಾ ಯೋಜನೆ ರೂಪಿಸುತ್ತೇವೆ. ನಮ್ಮ ವಿಚಾರಧಾರೆಯ ಕುರಿತು ಒಟ್ಟಾಗಿ ಹೇಳುತ್ತೇವೆ ಎಂದರು.

ಪ್ರಶ್ನೋತ್ತರ
ಈ ಮೈತ್ರಿಕೂಟಕ್ಕೆ ನಾಯಕರು ಯಾರು ಎಂಬ ಪ್ರಶ್ನೆಗೆ ಉತ್ತರಿಸಿದ ಮಲ್ಲಿಕಾರ್ಜುನ ಖರ್ಗೆ, ನಾವು ಸಮನ್ವಯ ಸಮಿತಿ ಮಾಡುತ್ತೇವೆ. ಈ 11 ಜನರ ತಂಡವೇ, ಸಂಚಾಲಕರನ್ನು ನೇಮಕ ಮಾಡುತ್ತದೆ. ಇದು ಮುಂಬೈಯಲ್ಲಿ ತೀರ್ಮಾನ ಆಗುತ್ತದೆ . ಇದು ಸಣ್ಣ ವಿಚಾರ, ದೊಡ್ಡದೇನಲ್ಲ ಎಂದರು.

ಅನೇಕ ವಿಚಾರಗಳ ಕುರಿತು ಸಮಾನತೆ ಬಂದಿದೆಯೇ ಎಂಬ ಕುರಿತು ಪ್ರತಿಕ್ರಿಯಿಸಿದ ಮಲ್ಲಿಕಾರ್ಜುನ ಖರ್ಗೆ, ನಾವು ಮಣಿಪುರ, ನಿರುದ್ಯೋಗ, ಹಣದುಬ್ಬರದಂತಹ ವಿಚಾರಗಳನ್ನು ಚರ್ಚೆ ಮಾಡಿದ್ದೇವೆ. ಪ್ರಜಾಪ್ರಭುತ್ವವನ್ನು ರಕ್ಷಿಸುವ ಕುರಿತು ಚರ್ಚೆ ನಡೆಸಿದ್ದೇವೆ. ಎಲ್ಲರೂ ಚರ್ಚೆಯಿಂದ ಸಂತುಷ್ಠರಾಗಿದ್ದಾರೆ. ಕನಿಷ್ಠ ಸಾಮಾನ್ಯ ಕಾರ್ಯಕ್ರಮದ ಕುರಿತು ಉತ್ತರಿಸಿ, ಎಲ್ಲರೂ ಒಟ್ಟಾಗಿದ್ದೇವೆ ಎನ್ನುವುದೇ ಸೂತ್ರ ಎಂದರು.

ಸೀಟು ಹಂಚಿಕೆ ಕುರಿತು ಯಾವ ಚರ್ಚೆ ನಡೆದಿದೆ ಎಂಬ ಕುರಿತು ಉತ್ತರಿಸಿದ ಮಲ್ಲಿಕಾರ್ಜುನ ಖರ್ಗೆ, ಸೀಟು ಹಂಚಿಕೆ ಬಹಳ ದೊಡ್ಡ ವಿಚಾರ ಅಲ್ಲ. 11 ಜನರ ಸಮಿತಿಯೇ ಎಲ್ಲವನ್ನೂ ನಿರ್ಧಾರ ಮಾಡುತ್ತದೆ. ಎಲ್ಲ ನಾಯಕರೂ ಒಟ್ಟಾಗಿ ಕುಳಿತು ನಿರ್ಧಾರ ಮಾಡುತ್ತದೆ ಎಂದರು. ಪ್ರಾದೇಶಿಕ ಪಕ್ಷಕ್ಕೆ ತೊಂದರೆ ಇದೆಯೇ ಎಂಬ ಕುರಿತು ಉತ್ತರಿಸಿದ ಮಲ್ಲಿಕಾರ್ಜುನ ಖರ್ಗೆ, ಜನರಿಂದ ಬೆಂಬಲಿಸಲ್ಪಡುವ ಶರದ್‌ ಪವಾರ್‌, ಉದ್ಧವ್‌ ಠಾಕ್ರೆಯವರಂತಹ ನಾಯಕರು ನಮ್ಮ ಜತೆಗಿದ್ದಾರೆ. ಶಾಸಕರನ್ನು ಸೃಷ್ಟಿಸುವವರೇ ನಮ್ಮ ಜತೆಗೆ ಇರುವಾಗ ಅದರ ಬಗ್ಗೆ ತಲೆಕೆಡಿಸಿಕೊಳ್ಳುವಂತಿಲ್ಲ ಎಂದರು.

Exit mobile version