Site icon Vistara News

NDRF ಪರಿಹಾರ ಸಾಲುವುದಿಲ್ಲ: ವಿಶೇಷ ಎಂದು ಪರಿಗಣಿಸಿ ಅನುದಾನ ನೀಡಲು ಸಿಎಂ ಬೊಮ್ಮಾಯಿ ಮನವಿ

ಬೆಂಗಳೂರು: ಸಾಮಾನ್ಯ ಸಂದರ್ಭದಲ್ಲಿ ಸಂಭವಿಸುವ ಪ್ರಕೃತಿ ವಿಕೋಪಗಳನ್ನು ಮೀರಿದ ಗಂಭಿರ ಪರಿಸ್ಥಿತಿ ಈ ಬಾರಿ ಕರ್ನಾಟಕದಲ್ಲಿ ಉಂಟಾಗಿದ್ದು, ಎನ್‌ಡಿಆರ್‌ಎಫ್‌ ನಿಯಮಾವಳಿಗಳ ಜತೆಗೆ ವಿಶೇಷ ಪ್ರಕರಣವೆಂದು ಪರಿಗಣಿಸಿ ಪರಿಹಾರ ನೀಡಬೇಕು ಎಂದು ಕೇಂದ್ರ ತಂಡಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಕೋರಿದ್ದಾರೆ.

ರಾಜ್ಯದ ಪ್ರವಾಹ ಪರಿಸ್ಥಿತಿ ಅಧ್ಯಯನಕ್ಕೆ ಆಗಮಿಸಿರುವ ಕೇಂದ್ರ ಸರ್ಕಾರದ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಆಶಿಶ್ ಕುಮಾರ್ ನೇತೃತ್ವದ ಕೇಂದ್ರ ಅಧ್ಯಯನ ತಂಡದೊಂದಿಗೆ ಸಭೆ ನಡೆಸಿ, ರಾಜ್ಯದಲ್ಲಿ ಪ್ರವಾಹದಿಂದ ಜುಲೈ, ಆಗಸ್ಟ್ ಹಾಗೂ ಈ ತಿಂಗಳು ಸಂಭವಿಸಿದ ಹಾನಿಯ ಕುರಿತು ಚರ್ಚಿಸಿದರು.

ರಾಜ್ಯ ಸರ್ಕಾರ ಅತ್ಯಂತ ನಿಖರವಾಗಿ ಹಾಗೂ ಪಾರದರ್ಶಕವಾಗಿ ಹಾನಿಯ ಅಂದಾಜುಪಟ್ಟಿ ಸಿದ್ಧಪಡಿಸಿ, ಪ್ರಸ್ತಾವನೆ ಸಲ್ಲಿಸಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ನ್ಯಾಯಯುತ ಪರಿಹಾರ ಒದಗಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ತಿಳಿಸಿದರು.

ರಾಜ್ಯದಲ್ಲಿ ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ಸಂಭವಿಸಿದ ಪ್ರವಾಹ ಪರಿಸ್ಥಿತಿಯಿಂದ ಉಂಟಾದ ಹಾನಿಯ ಕುರಿತು ಹಾಗೂ ರಾಜ್ಯ ಸರ್ಕಾರ ಕೈಗೊಂಡ ಪರಿಹಾರ ಕ್ರಮಗಳ ಕುರಿತು ಸಭೆಯಲ್ಲಿ ವಿವರವಾದ ಮಾಹಿತಿ ಒದಗಿಸಲಾಯಿತು.
ತಂಡವು ಚಿತ್ರದುರ್ಗ, ಹಾಸನ, ಚಿಕ್ಕಮಗಳೂರು, ಹಾವೇರಿ, ಧಾರವಾಡ, ಗದಗ, ಬೀದರ್, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳಿಗೆ ಭೇಟಿ ನೀಡುವ ಕಾರ್ಯಕ್ರಮ ರೂಪಿಸಲಾಗಿತ್ತು. ಇದರೊಂದಿಗೆ ಅತಿ ಹೆಚ್ಚು ಭೂಕುಸಿತ, ಸಮುದ್ರ ಕೊರೆತ ಸಂಭವಿಸಿರುವ ಕೊಡಗು, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಗೂ ಭೇಟಿ ನೀಡುವಂತೆ ಸಿಎಂ ಬೊಮ್ಮಾಯಿ ಸಲಹೆ ನೀಡಿದರು. ಬೆಂಗಳೂರು ನಗರ, ನೆರೆಯ ಮಂಡ್ಯ, ರಾಮನಗರ ಜಿಲ್ಲೆಗಳ ಪ್ರವಾಹ ಪರಿಸ್ಥಿತಿಯನ್ನೂ ಅವಲೋಕಿಸುವಂತೆ ತಿಳಿಸಿದರು.

ಬೆಂಗಳೂರಿನ ಜನರಿಗೆ ಆಗಿರುವ ಸಮಸ್ಯೆ, ಕೆರೆಗಳು ತುಂಬಿ, ತಗ್ಗು ಪ್ರದೇಶಗಳಲ್ಲಿ ನೀರು ತುಂಬಿರುವುದು, ನಷ್ಟದ ಪ್ರಾಥಮಿಕ ಅಂದಾಜು ಮಾಡಿರುವುದು ತಿಳಿಸಲಾಗಿದೆ. ಮೀನುಗಾರರ ಹಡಗುಗಳಿಗೆ ಹಾನಿಯಾಗಿರುವುದು, ಭೂ ಕುಸಿತವಾಗಿರುವ ಪ್ರಮುಖ ಅಂಶಗಳನ್ನು ತಂಡದ ಗಮನಕ್ಕೆ ಸಿಎಂ ತಂದರು.

ಎನ್‌ಡಿಆರ್‌ಎಫ್‌ನಲ್ಲಿ ಅವಕಾಶವಿಲ್ಲ

ಕೆಲವು ನಗರ ಪ್ರದೇಶಗಳಲ್ಲಿ ಅಂಗಡಿಗಳಿಗೆ, ವಾಣಿಜ್ಯ ಸಂಕೀರ್ಣಗಳಿಗೆ ನೀರು ನುಗ್ಗಿದ್ದು, ತೊಂದರೆಯಾಗಿದೆ. ಅವರಿಗೆ ಎನ್‌ಡಿಆರ್‌ಎಫ್ ನಿಯಮಗಳಲ್ಲಿ ಪರಿಹಾರ ಒದಗಿಸಲು ಅವಕಾಶವಿಲ್ಲ. ಅದನ್ನು ಅಳವಡಿಸಿಕೊಳ್ಳಬೇಕು. ಮೀನುಗಾರರಿಗೆ ಪರಿಹಾರ ನೀಡುವುದನ್ನು ಅಳವಡಿಸಿಕೊಳ್ಳಬೇಕು. ಭೂ ಕುಸಿತಕ್ಕೆ ವಿಶೇಷವಾದ ಪರಿಹಾರ ನೀಡಬೇಕು. ಕೆರೆಗಳು ತುಂಬಿರುವ ಹಿನ್ನೆಲೆಯಲ್ಲಿ ವಿಶೇಷ ಅನುದಾನ ನೀಡಬೇಕು. ಪ್ರವಾಹ ಬಂದಾಗ 2-3 ದಿನಗಳಲ್ಲಿ ನೀರು ಇಳಿಯುತ್ತಿತ್ತು. ಆದರೆ ಪ್ರತಿದಿನ ಪ್ರವಾಹ ಬರುತ್ತಿದೆ ಎಂದು ಒತ್ತಿ ಹೇಳಿದರು. ತಂಡದವರು ವೀಕ್ಷಣೆ ಮಾಡಿ ಬಂದ ನಂತರ ಇನ್ನಷ್ಟು ಮಾಹಿತಿ ನೀಡಿ ಮನವರಿಕೆ ಮಾಡಿಕೊಡಲಾಗುವುದು ಎಂದು ಸಿಎಂ ತಿಳಿಸಿದರು.

ಮೂಲಸೌಕರ್ಯ ದುರಸ್ತಿಗೆ 1600 ಕೋಟಿ ರೂ. ಬಿಡುಗಡೆ

ರಾಜ್ಯದಲ್ಲಿ ಕಳೆದ ನವೆಂಬರ್‌ನಿಂದೀಚೆಗೆ ಮೂಲಸೌಕರ್ಯಗಳ ದುರಸ್ತಿಗೆ ಎರಡು ಬಾರಿ 500 ಕೋಟಿ ರೂ.ಗಳಂತೆ ಹಾಗೂ ಎರಡು ದಿನಗಳ ಹಿಂದೆ 600 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಬೆಳೆ ಹಾನಿಗೆ ರಾಜ್ಯ ಸರ್ಕಾರ ಹೆಚ್ಚುವರಿ ಪರಿಹಾರ ನೀಡುತ್ತಿದ್ದು, 18.58 ಲಕ್ಷ ರೈತರಿಗೆ ಒಟ್ಟು 2452 ಕೋಟಿ ರೂ. ಪರಿಹಾರ ವಿತರಿಸಲಾಗಿದೆ. ಇದರಲ್ಲಿ 1160 ಕೋಟಿ ರೂ. ಹೆಚ್ಚುವರಿ ಮೊತ್ತವನ್ನು ರಾಜ್ಯ ಸರ್ಕಾರದ ಬೊಕ್ಕಸದಿಂದ ಭರಿಸಲಾಗಿದೆ. ಮನೆ ಹಾನಿಗೂ ನಷ್ಟದ ಪ್ರಮಾಣವನ್ನು ಆಧರಿಸಿ, ಪರಿಹಾರ ವಿತರಿಸಲಾಗುತ್ತಿದೆ. ಈ ಎಲ್ಲ ಪರಿಹಾರಗಳನ್ನೂ ಅತ್ಯಂತ ತ್ವರಿತವಾಗಿ, ಪಾರದರ್ಶಕವಾಗಿ ನೇರವಾಗಿ ಸಂತ್ರಸ್ತರ ಖಾತೆಗೆ ಜಮಾ ಮಾಡಲಾಗುತ್ತಿದೆ ಎಂದು ಸಿಎಂ ವಿವರಿಸಿದರು.

ರಾಜ್ಯದ ವಿವಿದೆಡೆ ನಾಲ್ಕು ತಂಡಗಳ ಭೇಟಿ

ಬೆಂಗಳೂರಿನ ಮಹದೇವಪುರಕ್ಕೆ ತಂಡವನ್ನು ಕಳುಹಿಸಲಾಗಿದೆ. ಅಲ್ಲಿಂದ ಹೆಲಿಕಾಪ್ಟರ್ ನಲ್ಲಿ ರಾಮನಗರ, ಮಂಡ್ಯ, ಕೊಡಗು, ದಕ್ಷಿಣ ಕನ್ನಡ ಉಡುಪಿ, ಕಾರವಾರಕ್ಕೆ ಒಂದು ತಂಡ ತೆರಳಲಿದೆ. ಮತ್ತೊಂದು ತಂಡ ಚಿತ್ರದುರ್ಗ, ಚಿಕ್ಕಮಗಳೂರು, ಮರರೊಂದು ಬೀದರ್ ಗುಲ್ಬರ್ಗಾಕ್ಕೆ ತೆರಳಲಿದೆ ಎಂದು ಸಿಎಂ ಮಾಹಿತಿ ನೀಡಿದರು.

Exit mobile version