ಉಡುಪಿ: ವೈದ್ಯಕೀಯ ಶಿಕ್ಷಣ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ನೀಟ್ ಪರೀಕ್ಷೆಯ ರ‍್ಯಾಂಕ್ ಲಿಸ್ಟ್ (NEET RESULT) ಬುಧವಾರ ರಾತ್ರಿ ಪ್ರಕಟವಾಗಿದೆ. ದೇಶಾದ್ಯಂತ ವಿದ್ಯಾರ್ಥಿಗಳು ರಾತ್ರಿ ಫಲಿತಾಂಶ ವೀಕ್ಷಿಸಿ ತಮಗೆ ವೈದ್ಯಕೀಯ ಶಿಕ್ಷಣ ಪಡೆಯುವ ಅವಕಾಶವಿದೆಯೇ ಎಂದು ಹುಡುಕಿಕೊಂಡರು. ಈ ನಡುವೆ, ಹಲವರಿಗೆ ತಮಗೆ ನಿರೀಕ್ಷಿಸಿದಷ್ಟು ರ‍್ಯಾಂಕ್ ಬಂದಿಲ್ಲ ಎಂಬ ಬೇಸರ ಕಾಡಿದೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ವಿಠಲವಾಡಿ ಶಾಯೀಶ್ ಶೆಟ್ಟಿ (೧೮)ಗೂ ಇದೇ ರೀತಿಯ ಆತಂಕ ಕಾಡಿದೆ. ನೀಟ್ ಪರೀಕ್ಷೆಯಲ್ಲಿ ನಿರೀಕ್ಷಿಸಿದ ರ‍್ಯಾಂಕ್ ಬಂದಿಲ್ಲ. ಇದರಿಂದ ಬಯಸಿದ ಕಾಲೇಜಿನಲ್ಲಿ ಸೀಟು ಸಿಗಲಿಕ್ಕಿಲ್ಲ ಎಂಬ ಆತಂಕ ಕಾಡಿದೆ. ಹೀಗಾಗಿ ತುಂಬ ಖಿನ್ನರಾದ ಅವರು ತಮ್ಮ ಪ್ರಾಣ ಕಳೆದುಕೊಳ್ಳುವ ತೀರ್ಮಾನಕ್ಕೆ ಬಂದಂತಿದೆ.
ಗುರುವಾರ ಮಧ್ಯಾಹ್ನದ ಹೊತ್ತಿಗೆ ಕುಂದಾಪುರ ಸಮೀಪದ ಅರಾಟೆಯ ಸೇತುವೆಯ ಬಳಿಗೆ ಬಂದ ಶಾಯೀಶ್ ಅಲ್ಲಿಂದಲೇ ತುಂಬಿ ಹರಿಯುತ್ತಿದ್ದ ಹೊಳೆಗೆ ಹಾರಿದ್ದಾರೆ. ಈ ರೀತಿ ಹಾರಿದ್ದನ್ನು ಯಾರೋ ಗಮನಿಸಿದ್ದು ಕೂಡಲೇ ಪೊಲೀಸರಿಗೆ ತಿಳಿಸಿದರು. ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಅಗ್ನಿಶಾಮಕ ದಳದವರನ್ನು ಕರೆಸಿಕೊಂಡಿದ್ದಾರೆ. ಹೊಳೆಗೆ ಹಾರಿರುವ ಅವರನ್ನು ರಕ್ಷಿಸುವ ಮೊದಲ ಪ್ರಯತ್ನವಾಗಿ ಅಥವಾ ಒಂದೊಮ್ಮೆ ಮೃತಪಟ್ಟಿದ್ದರೆ ಶವ ಮೇಲೆತ್ತುವ ಪ್ರಯತ್ನ ನಡೆಯಲಿದೆ.
ಘಟನಾ ಸ್ಥಳಕ್ಕೆ ಆಗಮಿಸಿದ ಕುಂದಾಪುರ ಸಂಚಾರ ಠಾಣೆ ಪೋಲಿಸರು ಹಾಗೂ ಅಗ್ನಿಶಾಮಕ ದಳದವರಿಗೆ ಸೇತುವೆ ಮೇಲೆ ಸೇರಿರುವ ಜನರನ್ನು ಅಲ್ಲಿಂದ ತೆರವು ಮಾಡುವುದು ಕೂಡಾ ಒಂದು ದೊಡ್ಡ ಕೆಲಸವೇ ಆಗಿದೆ. ಕುಂದಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆತ್ತವರ ಕಣ್ಣೀರು
ಮಗ ಈ ರೀತಿ ಹೊಳೆಗೆ ಹಾರಿದ್ದರಿಂದ ಹೆತ್ತವರು ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ. ಈ ಹಿಂದೆ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆ ಫಲಿತಾಂಶಕ್ಕೆ ಸೀಮಿತವಾಗಿದ್ದ ಈ ಆತ್ಮಹತ್ಯೆಯ ವಿದ್ಯಮಾನಗಳು ಈಗೀಗ ಸಿಇಟಿ, ನೀಟ್‌ಗೂ ವಿಸ್ತರಿಸಿರುವುದು ದುರಂತವಾಗಿದೆ. ಉತ್ತಮ ಸಾಧನೆ ಮಾಡಿರುವ ಮಕ್ಕಳು ಇನ್ನಷ್ಟು ಅವಕಾಶಗಳಿಗಾಗಿ, ಉತ್ತಮ ರ‍್ಯಾಂಕ್‌ಗಾಗಿ ಹಪಹಪಿಸುತ್ತಾರೆ. ಉತ್ತಮ ಕಾಲೇಜು ಸಿಗಬೇಕು ಎಂದು ಹಾತೊರೆಯುತ್ತಾರೆ. ಹೀಗಾಗಿ ಅದು ಸಿಗದೆ ಹೋದಾಗ ಆತ್ಮಹತ್ಯೆಯಂಥ ಆಘಾತಕಾರಿ ಕೃತ್ಯಕ್ಕೆ ಇಳಿಯುತ್ತಾರೆ. ಇದುವರೆಗಿನ ಅಷ್ಟೂ ಸಾಧನೆಯನ್ನು ನೀರುಪಾಲು ಮಾಡುತ್ತಾರೆ. ನಿಜವೆಂದರೆ, ಇವರೆಲ್ಲ ಸಾವಿನ ಕಡೆಗೆ ಮುಖ ಮಾಡದೆ, ಮುಂದಿನ ಪ್ರಯತ್ನ ನಡೆಸಿದರೆ, ವೈದ್ಯಕೀಯವೋ, ಎಂಜಿನಿಯರಿಂಗ್‌ನ್ನು ಬಿಟ್ಟು ಬೇರೆ ದಾರಿಯಲ್ಲಿ ಸಾಗಿದರೆ ಯಶಸ್ಸು ಪಡೆಯಬಹುದಲ್ಲವೇ ಎಂದು ಚಿಂತಿಸಿದರೆ ನಿಜಕ್ಕೂ ಹೊಸ ದಾರಿ ಕಂಡೀತು. ಆದರೆ, ಕೇವಲ ಯಶಸ್ಸು, ಸಾಮಾಜಿಕ ಒತ್ತಡಗಳನ್ನಷ್ಟೇ ಗಮನದಲ್ಲಿಟ್ಟುಕೊಂಡು ನಮ್ಮ ಬದುಕನ್ನು ನಿರ್ಧರಿಸಿಕೊಂಡರೆ ಅಲ್ಲಿವರೆಗೆ ಪ್ರಾಣದಂತೆ ಕಾದ ಮನೆಯವರಿಗೆ ನೋವು ನೀಡುವುದು ಬಿಟ್ಟರೆ ಬೇರೆನೂ ಸಾಧನೆ ಮಾಡಿದಂತೆ ಆಗುವುದಿಲ್ಲ. ಆದರೆ, ಅದೆಲ್ಲ ಅರ್ಥವಾಗುವ ಹೊತ್ತಿಗೆ ಎಲ್ಲವೂ ಮುಗಿದುಹೋಗಿರುತ್ತದೆ.
ಇದನ್ನೂ ಓದಿ | Suicide Attempt | ಕಾಲೇಜಿನಲ್ಲಿ ತಾರತಮ್ಯ ಆರೋಪ: ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ, ವಿಡಿಯೊ ವೈರಲ್