ಬೆಂಗಳೂರು: ಆಸ್ಪತ್ರೆಗಳಲ್ಲಿ ವೈದ್ಯರು, ವೈದ್ಯಾಧಿಕಾರಿಗಳು ಅಮಾನವೀಯವಾಗಿ (Negligence) ನಡೆದುಕೊಂಡರೆ ಕೇವಲ ಅಮಾನತಲ್ಲ, ಕೆಲಸದಿಂದಲೇ ವಜಾ ಮಾಡಲಾಗುವುದು. ವಜಾ ಮಾಡಲು ಕಾನೂನಿನಲ್ಲಿ ಬದಲಾವಣೆ ತರಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಲಾಗುವುದು. ಮುಂದಿನ ಅಧಿವೇಶನದಲ್ಲೇ ಕಾನೂನು ತಿದ್ದುಪಡಿಗೆ ಪ್ರಯತ್ನಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ತಾಯಿ ಹಾಗೂ ನವಜಾತ ಶಿಶುಗಳ ಮರಣದ ದುರ್ಘಟನೆ ಕುರಿತು ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿದರು. ತುರ್ತು ಪರಿಸ್ಥಿತಿಯಲ್ಲಿ ರೋಗಿಗಳು ದಾಖಲೆ ಕೊಡಬೇಕಾಗಿಲ್ಲ. ಇಲ್ಲಿ ದಾಖಲೆ ಮುಖ್ಯವಲ್ಲ, ಜೀವ ಮುಖ್ಯ ಎಂದು ಅವರು ತಿಳಿಸಿದರು.
ʻʻನತದೃಷ್ಟ ಹೆಣ್ಣುಮಗುವನ್ನು ಬಾಲಕಿಯರ ಮಂದಿರಕ್ಕೆ ದಾಖಲಿಸಲಾಗಿದೆ. ಆಕೆಗೆ ಸರ್ಕಾರದಿಂದಲೇ 5 ಲಕ್ಷ ರೂ. ಎಫ್‌ಡಿ ಇರಿಸಲು ಕ್ರಮ ವಹಿಸಲಾಗಿದೆ. ಹಾಗೆಯೇ ಆಕೆಯ ಶೈಕ್ಷಣಿಕ ಭವಿಷ್ಯವನ್ನೂ ರೂಪಿಸಲಾಗುವುದುʼʼ ಎಂದು ತಿಳಿಸಿದ ಸುಧಾಕರ್, ಈ ಘಟನೆಯಲ್ಲಿ ಅಮಾನವೀಯವಾಗಿ ನಡೆದುಕೊಂಡ ವೈದ್ಯರು, ಸಿಬ್ಬಂದಿಗೆ ಹಾಗೂ ಜಿಲ್ಲಾ ಸರ್ಜನ್ ಗೆ, ಆಡಳಿತ ವೈಫಲ್ಯ ಎಂದು ಪರಿಗಣಿಸಿ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ಕರ್ತವ್ಯದಲ್ಲಿರುವ ವೈದ್ಯರಿಗೆ ಕೂಡ ಪ್ರಕರಣದ ಗಂಭೀರತೆ ಬಗ್ಗೆಯೂ ತಿಳಿಸಲಾಗಿದೆ. ಹಾಗೆಯೇ ಅವರಿಗೂ ಶೋಕಾಸ್ ನೋಟಿಸ್ ನೀಡಿ 24 ಗಂಟೆಯೊಳಗೆ ಉತ್ತರ ನೀಡಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಕಾರ್ಡ್‌ಗಳನ್ನು ನಂತರವೂ ಕೇಳಬಹುದು
ʻʻಈ ರೀತಿಯ ಘಟನೆ ಎಂದೂ ಮರುಕಳಿಸಬಾರದು. ಅದಕ್ಕಾಗಿ ಎಲ್ಲಾ ಕ್ರಮಗಳನ್ನು ವಹಿಸಲಾಗಿದೆ. ಯಾವುದೇ ರೋಗಿ ತುರ್ತು ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ಬಂದಾಗ ಯಾವ ದಾಖಲೆಗಳೂ ಮುಖ್ಯವಲ್ಲ. ತಾಯಿ ಕಾರ್ಡ್, ಆಧಾರ್ ಕಾರ್ಡ್‌ಗಳನ್ನು ಚಿಕಿತ್ಸೆ ನೀಡಿದ ಬಳಿಕವೂ ಕೇಳಬಹುದು. ಈ ಬಗ್ಗೆ ಹಿಂದಿನಿಂದಲೂ ಸೂಚನೆ ಇದೆ. ಖಾಸಗಿ ಆಸ್ಪತ್ರೆಗಳಲ್ಲಿ 76 ತುರ್ತು ಸೇವೆಗಳನ್ನು ಜೋಡಿಸಲಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಈ ಸೇವೆಗಳು ಇಲ್ಲವಾದರೆ, ಖಾಸಗಿ ಆಸ್ಪತ್ರೆಯಲ್ಲಿ ಆ ಸೇವೆ ಪಡೆಯಬಹುದು. ಆಗ ಸರ್ಕಾರವೇ ವೆಚ್ಚ ಭರಿಸುತ್ತದೆʼʼ ಎಂದು ಸುಧಾಕರ್ ಹೇಳಿದರು.
ಕರಾಳ ಘಟನೆ, ಸರಕಾರಕ್ಕೆ ಮುಜುಗರ
ʻʻಎಲ್ಲಾ ಸೌಲಭ್ಯಗಳು ಇದ್ದರೂ, ಆರೋಗ್ಯ ಸಿಬ್ಬಂದಿ ಮಾಡಿದ ಕೆಲಸದಿಂದ ಸರ್ಕಾರಕ್ಕೆ ಮುಜುಗರವಾಗಿದೆ. ಇದು ಇಡೀ ಮಾನವ ಸಂಕುಲಕ್ಕೆ ಕರಾಳ ದಿನವಾಗಿದೆ. ಇದಕ್ಕಾಗಿ ನಾನು ಬಹಳ ವಿಷಾದ, ಸಹಾನುಭೂತಿ ವ್ಯಕ್ತಪಡಿಸುತ್ತೇನೆʼʼ ಎಂದು ಸುಧಾಕರ್ ಹೇಳಿದರು.
ಸಿದ್ದರಾಮಯ್ಯಗೆ ಬಹಿರಂಗ ಸವಾಲು
ʻʻಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಮೈಸೂರು ಜಿಲ್ಲೆಯಲ್ಲಿ ಎಷ್ಟು ಶಿಶುಗಳು ಸತ್ತಿವೆ ಎಂದು ದಾಖಲೆ ನೀಡುತ್ತೇನೆ. ಆಗ ಸಿದ್ದರಾಮಯ್ಯನವರು ಅಥವಾ ಆಗಿನ ಆರೋಗ್ಯ ಸಚಿವರು ರಾಜೀನಾಮೆ ನೀಡಲಿಲ್ಲ. ಇಂತಹ ವಿಚಾರದಲ್ಲೂ ರಾಜಕೀಯ ಮಾಡುತ್ತಾರೆಂದರೆ ಇವರು ರಾಜಕೀಯ ನಾಯಕರು ಮಾತ್ರವಲ್ಲ, ಒಬ್ಬ ಉತ್ತಮ ಮಾನವನಾಗಲೂ ಸಾಧ್ಯವಿಲ್ಲ. ಇಷ್ಟು ಕೆಳ ಹಂತಕ್ಕೆ ಹೋಗಿ ಅವರು ತೀರ್ಮಾನ ಮಾಡಬಾರದು. ಇದರಲ್ಲೂ ರಾಜಕೀಯ ಮಾಡಬಾರದುʼʼ ಎಂದರು ಸುಧಾಕರ್.
ʻʻಸಿದ್ದರಾಮಯ್ಯನವರು ಸಿಎಂ ಆಗಿದ್ದಾಗ, ಎಷ್ಟು ಆಸ್ಪತ್ರೆಗಳಲ್ಲಿ ಎಷ್ಟು ಸಾವುಗಳಾಗಿವೆ ಎಂಬ ದಾಖಲೆಗಳನ್ನು ನೀಡುತ್ತೇನೆ. ಅವರು ಕೂಡ ವಿರೋಧ ಪಕ್ಷದ ನಾಯಕರ ಸ್ಥಾನಕ್ಕೆ ರಾಜೀನಾಮೆ ನೀಡುವುದಾದರೆ, ನಾನು ಕೂಡ ಆರೋಗ್ಯ ಸಚಿವನ ಸ್ಥಾನಕ್ಕೆ ನೀಡುತ್ತೇನೆ. ಇದು ಬಹಿರಂಗ ಸವಾಲುʼʼ ಎಂದರು.
ಇದನ್ನೂ ಓದಿ | Negligence | ಅವಳಿ ಮಕ್ಕಳ ಸಹಿತ ತಾಯಿ ಸಾವು; ತಾಯಿ ಕಾರ್ಡ್ ಇಲ್ಲವೆಂದು ವಾಪಸ್ ಕಳಿಸಿದ ಸರ್ಕಾರಿ ಆಸ್ಪತ್ರೆ