Site icon Vistara News

Neha Hiremath: ಲಿಂಗಾಯತಳಾದ ನೇಹಾ ಹಿರೇಮಠ ಎಸ್‌ಸಿ ಪ್ರಮಾಣಪತ್ರ ಮಾಡಿಸಿದ್ದೇಕೆ? ಸರ್ಟಿಫಿಕೇಟ್‌ ಫೋಟೊ ಈಗ ವೈರಲ್

Neha Hiremath

Neha Hiremath Has An SC Caste Certificate; Document Goes Viral

ಬೆಂಗಳೂರು: ದೇಶಾದ್ಯಂತ ಸುದ್ದಿಯಾಗಿದ್ದ ನೇಹಾ ಹಿರೇಮಠ ಕೊಲೆ ಪ್ರಕರಣದಲ್ಲಿ (Neha Murder Case) ಹೊಸ ಟ್ವಿಸ್ಟ್‌ ಸಿಕ್ಕಿದೆ. ಹುಬ್ಬಳ್ಳಿಯಲ್ಲಿ ಹತ್ಯೆಗೀಡಾದ, ಲಿಂಗಾಯತ ಸಮುದಾಯದ ನೇಹಾ ಹಿರೇಮಠ ಅವರು ಪಡೆದಿರುವ ಪರಿಶಿಷ್ಟ ಜಾತಿ ಪ್ರಮಾಣಪತ್ರವೀಗ (Caste Certificate) ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಲಿಂಗಾಯತ ಸಮುದಾಯದ ನಿರಂಜನ ಹಿರೇಮಠ ಅವರ ಪುತ್ರಿಯಾದ ನೇಹಾ ಹಿರೇಮಠ ಅವರು ಪರಿಶಿಷ್ಟ ಜಾತಿ ಪ್ರಮಾಣಪತ್ರ ಪಡೆದುಕೊಂಡಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.

ಏ.18 ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ಕಾಂಗ್ರೆಸ್ ಕಾರ್ಪೊರೇಟರ್ ನಿರಂಜನ ಹಿರಮೇಠ ಪುತ್ರಿ ನೇಹಾ ಕೊಲೆ ನಡೆದಿತ್ತು. ಸರ್ಕಾರ ಈ ಪ್ರಕರಣವನ್ನು ಸಿಐಡಿಗೆ ವಹಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಫಯಾಜ್‌ ಎಂಬಾತನನ್ನು ಬಂಧಿಸಲಾಗಿದ್ದು, ಇದು ಲವ್‌ ಜಿಹಾದ್‌ ಎಂಬ ಆರೋಪಗಳೂ ಕೇಳಿಬಂದಿದ್ದವು. ನೇಹಾಳನ್ನು ಕೊಂದಿದ್ದ ಆರೋಪಿ ಫಯಾಜ್‌ನನ್ನು ಸಿಐಡಿ ಅಧಿಕಾರಿಗಳು ವಶಪಡಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಫಯಾಜ್ ತಂದೆ-ತಾಯಿ ಸೇರಿ 10 ಕ್ಕೂ ಹೆಚ್ಚು ಜನರ ವಿಚಾರಣೆ ಮಾಡಲಾಗಿದೆ. ಇದರ ಬೆನ್ನಲ್ಲೇ, ನೇಹಾ ಹಿರೇಮಠ ಜಾತಿ ಪ್ರಮಾಣಪತ್ರವು ವೈರಲ್‌ ಆಗಿದೆ.

Neha Murder Case

ಬೆಂಗಳೂರು ವಿಳಾಸ ನೀಡಿದ್ದೇಕೆ?

ನೇಹಾ ಹಿರೇಮಠ ಅವರು ಬೆಂಗಳೂರಿನ ಬೇಗೂರು ರೋಡ್‌, ಹೊಂಗಸಂದ್ರದ ವಾರ್ಡ್‌ ನಂಬರ್‌ 135ರಲ್ಲಿ ವಾಸವಿರುವುದಾಗಿ ವಿಳಾಸ ನೀಡಿ, ಬೇಡ ಜಂಗಮ ಜಾತಿ ಪ್ರಮಾಣಪತ್ರ ಪಡೆದಿರುವುದು ಮತ್ತೊಂದು ಚರ್ಚೆಯ ವಿಷಯವಾಗಿದೆ. ಮೊದಲಿಗೆ ನೇಹಾ ಹಿರೇಮಠ ಅವರು ಪರಿಶಿಷ್ಟ ಜಾತಿ ಪ್ರಮಾಣಪತ್ರ ಪಡೆದಿದ್ದೇಕೆ? ಹುಬ್ಬಳ್ಳಿಯವರಾದ ಅವರು ಅದಕ್ಕೆ, ಬೆಂಗಳೂರು ವಿಳಾಸ ನೀಡಿದ್ದೇಕೆ? ನೇಹಾ ಹಿರೇಮಠ ಅವರು ಇದ್ದಿದ್ದು ಬೆಂಗಳೂರಿನಲ್ಲಾ? ಅಥವಾ ಹುಬ್ಬಳ್ಳಿಯಲ್ಲಾ ಎಂಬುದು ಸೇರಿ ಹಲವು ಪ್ರಶ್ನೆಗಳು ಮಾಡಿವೆ.

ಸಮತಾ ಸೇನೆ ಆಕ್ರೋಶ

ನೇಹಾ ಹಿರೇಮಠ ಅವರು ಪರಿಶಿಷ್ಟ ಜಾತಿ ಪ್ರಮಾಣಪತ್ರ ಪಡೆದಿರುವುದಕ್ಕೆ ಹುಬ್ಬಳ್ಳಿಯಲ್ಲಿ ಸಮತಾ ಸೇನೆಯು ಆಕ್ರೋಶ ವ್ಯಕ್ತಪಡಿಸಿದೆ. “ಹುಬ್ಬಳ್ಳಿ ನಿವಾಸಿಯಾದ ನೇಹಾ ಹಿರೇಮಠ ಅವರು ಲಿಂಗಾಯತ ಸಮುದಾಯಕ್ಕೆ ಸೇರಿದ್ದಾರೆ. ಅಲ್ಲದೆ, ಅವರು ಬೆಂಗಳೂರು ವಿಳಾಸ ನೀಡಿ ಬೇಡ ಜಂಗಮ ಜಾತಿ ಪ್ರಮಾಣಪತ್ರ ಪಡೆದಿದ್ದಾರೆ. ಇದು ಪರಿಶಿಷ್ಟರ ಹಕ್ಕುಗಳನ್ನು ಕಸಿಯುವ ಹುನ್ನಾರವಾಗಿದೆ” ಎಂದು ಸಂಘಟನೆಯು ದೂರಿದೆ. ಅಷ್ಟೇ ಅಲ್ಲ, ಅವರ ಜಾತಿ ಪ್ರಮಾಣಪತ್ರವನ್ನು ರದ್ದುಗೊಳಿಸುವಂತೆ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯವನ್ನು ಆಗ್ರಹಿಸಿದೆ.

ಇದನ್ನೂ ಓದಿ: Murder Case: ʼನೇಹಾ ಹಿರೇಮಠ ಥರ ಕೊಲೆ ಮಾಡ್ತೀನಿ…ʼ ಎಂದವನು ಮಾಡಿಯೇ ಬಿಟ್ಟ! ಪಾಗಲ್‌ ಪ್ರೇಮಿಯಿಂದ ಮತ್ತೊಬ್ಬ ಯುವತಿಯ ಹತ್ಯೆ

Exit mobile version