Site icon Vistara News

ಸರ್ಕಾರಿ ಜಾಹೀರಾತಿನಲ್ಲಿ ನೆಹರು ನಾಪತ್ತೆ: ಕಾಂಗ್ರೆಸ್‌ ನಾಯಕರ ಆಕ್ರೋಶ; ಬಿಜೆಪಿ ಸಮರ್ಥನೆ

controversial advertisement

ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಮಾಧ್ಯಮಗಳಲ್ಲಿ ಪ್ರಕಟಿಸಿರುವ ಸರ್ಕಾರಿ ಜಾಹೀರಾತಿನಲ್ಲಿ ಸ್ವಾತಂತ್ರ್ಯ ಹೋರಾಟಗಾರ ಹಾಗೂ ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್‌ ನೆಹರು ಅವರ ಭಾವಚಿತ್ರ ಕೈಬಿಟ್ಟಿರುವುದು ಕಾಂಗ್ರೆಸ್‌ ಮತ್ತು ಬಿಜೆಪಿ ನಾಯಕರ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ.

ಕೆಪಿಸಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌, ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರದ ಈ ಕ್ರಮವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರೆ, ಬಿಜೆಪಿ ನಾಯಕರು, ಸಚಿವರು ಸರ್ಕಾರದ ಈ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

ಈ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸಿಎಂಗೆ ಪತ್ರ ಬರೆದು ಅಸಮಾಧಾನ ವ್ಯಕ್ತಪಡಿಸಿದ್ದರೆ, ಮಾಜಿ ಸಿಎಂ ಸಿದ್ದರಾಮಯ್ಯ ಟ್ಟಿಟರ್‌ನಲ್ಲಿ ಸರಣಿ ಟ್ವೀಟ್‌ ಮಾಡುವ ಮೂಲಕ ಸರ್ಕಾರದ ಕ್ರಮವನ್ನು ಟೀಕಿಸಿದ್ದಾರೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಕೂಡ ಟ್ವೀಟ್‌ ಮಾಡಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸರ್ಕಾರದ ಈ ನಡೆಯನ್ನು ಬಿಜೆಪಿಯ ವಿಧಾನ ಪರಿಷತ್‌ ಸದಸ್ಯ ರವಿಕುಮಾರ್‌, ಉದ್ದೇಶಪೂರ್ವಕವಾಗಿಯೇ ಸರ್ಕಾರದಿಂದ ಕೊಟ್ಟ ಜಾಹಿರಾತಿನಲ್ಲಿ ನೆಹರು ಅವರ ಪೋಟೋ ಬಿಡಲಾಗಿದೆ. ನೆಹರು ದೇಶ ಇಬ್ಭಾಗವಾಗಲು ಕಾರಣರಾಗಿದ್ದರು. ಹೀಗಾಗಿ ಅವರನ್ನು ಇಲ್ಲಿ ಸ್ಮರಿಸಲಾಗಿಲ್ಲ ಎಂದು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

ರಾಜಕೀಯ ದುರುದ್ದೇಶದ ಕ್ರಮ: ಡಿ.ಕೆ.ಶಿವಕುಮಾರ್‌
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಬರೆದ ಪತ್ರದಲ್ಲಿ ನೆಹರು ಅವರನ್ನು ಗೌರವಿಸದೇ ಇರುವುದು ರಾಜಕೀಯ ದುರುದ್ದೇಶದ ಕ್ರಮ ಎಂದಿದ್ದಾರೆ. ಇಡೀ ದೇಶ ಸ್ವಾಂತಂತ್ರ್ಯ 75 ನೇ ವರ್ಷದ ಸಂಭ್ರಮಾಚರಣೆಯಲ್ಲಿದೆ. ಈ ಸಂದರ್ಭದಲ್ಲಿ ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನ ಮಾಡಿದವರನ್ನು ಸ್ಮರಿಸಿ, ಗೌರವ ಸಲ್ಲಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಈ ವಿಚಾರದಲ್ಲಿ ಅಧಿಕಾರರೂಢ ಸರ್ಕಾರದ ಜವಾಬ್ದಾರಿ ಒಂದು ಪಟ್ಟು ಹೆಚ್ಚಾಗಿಯೇ ಇರುತ್ತದೆ.

ಆದರೆ, ದೇಶದ ಮೊದಲ ಪ್ರಧಾನಿ, ಸ್ವಾತಂತ್ರೋತ್ತರ ನವಭಾರತ ನಿರ್ಮಾಣದ ಶಿಲ್ಪಿ ಜವಾಹರಲಾಲ್ ನೆಹರು ಅವರ ಭಾವಚಿತ್ರ ಹಾಗೂ ಹೆಸರನ್ನು ಉದ್ದೇಶಪೂರ್ವಕವಾಗಿ ಪ್ರಕಟಿಸದೆ ಅವರಿಗೆ ಅಪಮಾನ ಮಾಡಲಾಗಿದೆ. ಆ ಮೂಲಕ ಇತಿಹಾಸ ತಿರುಚುವ ವಿಫಲ ಯತ್ನ ಮಾಡಿದ್ದೀರಿ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಮುಖ್ಯಮಂತ್ರಿ ಸ್ಥಾನದಿಂದ ತಾವು ಇಂತಹ ಕೀಳು ಮಟ್ಟದ ರಾಜಕಾರಣ ಮಾಡಬಾರದಿತ್ತು. ಇದು ತಮ್ಮ ಆತ್ಮಸಾಕ್ಷಿಗೆ ಶೋಭೆ ತರುವ ಕೆಲಸವಲ್ಲ. ಮಹಾತ್ಮ ಗಾಂಧಿ ಅವರ ನೇತೃತ್ವದಲ್ಲಿ ನೆಹರು ಅವರು ಅಸಹಕಾರ ಚಳವಳಿ, ಉಪ್ಪಿನ ಸತ್ಯಾಗ್ರಹ, ಕ್ವಿಟ್‌ ಇಂಡಿಯಾ ಚಳವಳಿ ಸೇರಿ ಪ್ರತಿ ಹಂತದಲ್ಲೂ ತಮ್ಮ ಬದುಕು ಮುಡಿಪಿಟ್ಟವರು. ಅಲ್ಲದೆ ಸ್ವಾತಂತ್ರ್ಯ ಹೋರಾಟಕ್ಕಾಗಿ 9 ವರ್ಷಗಳ ಸೆರೆವಾಸ ಅನುಭವಿಸಿದ್ದರು.

ಸ್ವಾತಂತ್ರ್ಯ ಹೋರಾಟ, ನವಭಾರತ ನಿರ್ಮಾಣದಲ್ಲಿ ನೆಹರು ಅವರ ಪಾತ್ರ ಬಹಳ ಹಿರಿದು. ಇದು ನಿಮಗೂ ಗೊತ್ತಿದೆ. ಈ ಇತಿಹಾಸ ಓದಿಯೇ ನಾವು ನೀವು ಬೆಳೆದಿದ್ದೇವೆ. ಆದರೂ ರಾಜಕೀಯ ಕಾರಣಕ್ಕೆ ನೀವು ಇಂತಹ ಕ್ಷುಲ್ಲಕ ಕೆಲಸಕ್ಕೆ ಕೈ ಹಾಕಬಾರದಿತ್ತು. ಇದು ಅಕ್ಷಮ್ಯ. ಆಗಿರುವ ಪ್ರಮಾದಕ್ಕೆ ನೀವು ಕ್ಷಮೆ ಯಾಚಿಸಬೇಕು. ಇತಿಹಾಸದ ಸತ್ಯವನ್ನು ಎತ್ತಿ ಹಿಡಿಯಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಇದನ್ನೂ ಓದಿ | Amrit Mahotsav | ಬೆಂಗಳೂರಿನಲ್ಲಿ ಟಿಪ್ಪು ಸುಲ್ತಾನ್‌ ಬ್ಯಾನರ್‌ಗೆ ಹಾನಿ, ಕಾಂಗ್ರೆಸ್‌ ಪ್ರತಿಭಟನೆ

ಬೊಮ್ಮಾಯಿ ಕ್ಷಮೆಯಾಚಿಸಲಿ : ಸಿದ್ದರಾಮಯ್ಯ ಒತ್ತಾಯ
ಸನ್ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇರಾಜ್ಯ ಸರ್ಕಾರದ ಜಾಹೀರಾತಿನ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ಮಾಜಿ ಪ್ರಧಾನಿ ಜವಾಹರಲಾಲ್‌ ನೆಹರು ಅವರ ಹೆಸರನ್ನು ಕೈಬಿಡುವಷ್ಟು ಕೀಳು ಮಟ್ಟಕ್ಕೆ ನೀವು ಇಳಿಯಬಾರದಿತ್ತು, ಕುರ್ಚಿ ಉಳಿಸಲು ಈ ಪರಿಯ ಗುಲಾಮಗಿರಿಯೇ? ಮೊದಲು ಮುಖ್ಯಮಂತ್ರಿ ಬೊಮ್ಮಾಯಿ ಅವರು ಮೊದಲು ರಾಜ್ಯದ ಜನತೆಯ ಕ್ಷಮೆ ಕೇಳಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ವಿಟರ್‌ನಲ್ಲಿ ಒತ್ತಾಯಿಸಿದ್ದಾರೆ.

ಪಂಡಿತ ಜವಾಹರಲಾಲ್ ನೆಹರು ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ ತಮ್ಮ ಬದುಕಿನ 9 ವರ್ಷಗಳನ್ನು ಜೈಲಿನಲ್ಲಿ ಕಳೆದವರು ಎನ್ನುವುದು ನೆನಪಿರಲಿ. ಅವರು ನಿಮ್ಮ ವಿ.ಡಿ.ಸಾವರ್ಕರ್ ಅವರಂತೆ ಜೈಲಿನಿಂದ ಬಿಡುಗಡೆಗೊಳ್ಳಲು ಬ್ರಿಟಿಷರ ಕಾಲು ಹಿಡಿದು ಕ್ಷಮೆ ಕೋರಿದ ಹೇಡಿ ಅಲ್ಲ ಎಂದು ಹೇಳಿದ್ದಾರೆ.

ಆರ್‌ಎಸ್ಎಸ್ ಕೋಮುರಾಜಕಾರಣವನ್ನು ವಿರೋಧಿಸಿದ್ದ ಗಾಂಧಿ ಹತ್ಯೆಯ ನಂತರ ಅದನ್ನು ನಿಷೇಧಿಸಿದ್ದ ಮತ್ತು ತನ್ನ ಬದುಕನ್ನು ಜಾತ್ಯತೀತತೆ ಕಾಪಾಡಲು ಮುಡಿಪಾಗಿಟ್ಟಿದ್ದ ನೆಹರು ಅವರ ಬಗ್ಗೆ ಆರ್‌ಎಸ್ಎಸ್ ಅಲರ್ಜಿಯನ್ನು ಅರ್ಥಮಾಡಿಕೊಳ್ಳಬಹುದು, ನಿಮಗೇನಾಗಿದೆ? ಜಾಹೀರಾತಿನಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ನಮೂದಿಸಲು ನಿಮಗೆ ಸಿಕ್ಕ ಏಕೈಕ ವ್ಯಕ್ತಿ ಜೈಲಿನಿಂದ ಬಿಡುಗಡೆಗೊಳ್ಳಲು ಬ್ರಿಟಿಷರ ಕ್ಷಮೆ ಯಾಚಿಸಿದ್ದ ಹೇಡಿ ವಿ.ಡಿ.ಸಾವರ್ಕರ್ ಮಾತ್ರ ಎನ್ನುವುದು ನಿಮ್ಮ ಪರಿವಾರದ ಸ್ವಾತಂತ್ರ್ಯ ಹೋರಾಟದ ಸತ್ಯವನ್ನು ಬೆತ್ತಲೆ ಮಾಡಿದೆ ಎಂದು ಕಿಡಿ ಕಾರಿದ್ದಾರೆ.

ದೇಶಕ್ಕೆ ದ್ರೋಹ ಮಾಡಿದ್ದ ನೆಹರು: ರವಿ ಕುಮಾರ್‌
ನಮ್ಮ ದೇಶಕ್ಕೆ ದ್ರೋಹ ಮಾಡಿದ, ದೇಶ ವಿಭಜನೆ ಮಾಡಿರುವ ನೆಹರು ಅವರನ್ನು ಮಾದರಿಯಾಗಿ ಇಟ್ಟುಕೊಳ್ಳಲು ಖಂಡಿತ ಸಾಧ್ಯವಿಲ್ಲ. ಹೀಗಾಗಿ ಸರ್ಕಾರ ಜಾಹೀರಾತಿನಲ್ಲಿ ಅವರಿಗೆ ಸ್ಥಾನ ನೀಡಿಲ್ಲ. ಸರ್ಕಾರದ ಈ ಕ್ರಮವನ್ನು ಬಿಜೆಪಿಯು ಸ್ವಾಗತಿಸುತ್ತದೆ ಎಂದು ವಿಧಾನ ಪರಿಷತ್‌ ಸದಸ್ಯ ರವಿಕುಮಾರ್‌ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಈ ವಿವಾದದ ಕುರಿತು “ವಿಸ್ತಾರ ನ್ಯೂಸ್‌ʼ ನೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ, ಡಿಕೆಶಿ ಸೇರಿದಂತೆ ಎಲ್ಲಾ ಕಾಂಗ್ರೆಸ್ ನಾಯಕರು ಟಿಪ್ಪು ಅವರನ್ನು ಸ್ವಾತಂತ್ರ್ಯ ಹೋರಾಟಗಾರ ಎನ್ನುತ್ತಾರೆ.
ಆದರೆ ಸ್ವಾತಂತ್ರ್ಯ ಹೋರಾಟಗಾರ ಮಹಾನ್ ಕ್ರಾಂತಿಕಾರಿ ಎಲ್ಲಾ ಕ್ರಾಂತಿಕಾರಿಗಳಿಗೆ ಗುರು ಸ್ಥಾನದಲ್ಲಿದ್ದ ಸ್ವಾತಂತ್ರ್ಯ ವೀರ ಸಾರ್ವಕರ್ ಅವರನ್ನು ಸ್ವಾತಂತ್ರ್ಯ ಹೋರಾಟಗಾರ ಅಲ್ಲ ಅನ್ನುತ್ತಾರೆ. ಇದು ಅತ್ಯಂತ ವಿಪರ್ಯಾಸದ ಸಂಗತಿ ಎಂದು ಕಾಂಗ್ರೆಸ್‌ ನಾಯಕರ ವಿರುದ್ಧ ಕಿಡಿ ಕಾರಿದ್ದಾರೆ.
ವೀರ ಸಾರ್ವಕರ್ ಅವರನ್ನು ನಾವು ಗೌರವಿಸುತ್ತೇವೆ, ಜಾಹಿರಾತು ಕೊಡ್ತೇವೆ, ಉನ್ನತ ಸ್ಥಾನದಲ್ಲಿ ನೋಡ್ತೇವೆ. ಅವರ ಹೋರಾಟ ನಮಗೆ ಮಾದರಿಯಾಗಿದೆ ಎಂದಿರುವ ರವಿಕುಮಾರ್, ನೆಹರು ದೇಶ ವಿಭಜನೆಗೆ ಕಾರಣರಾದವರು, ಈ ಸಂದರ್ಭದಲ್ಲಿ ರಕ್ತದ ಕೋಡಿ ಹರಿಯಿತು. ಇಂದು ಎರಡು ದೇಶಗಳು ಭಯೋತ್ಪಾದನೆ ಸೇರಿದಂತೆ ಅನೇಕ ಸಮಸ್ಯೆಗಳಿಂದ ಎರಡು ದೇಶಗಳು ಬೆಯುತ್ತಿವೆ. ಇದಕ್ಕೆ ಕಾರಣ ನೆಹರು ಅವರು, ಹಾಗಾಗಿ ನೆಹರು ಅವರ ಪೋಟೋ ಹಾಕಲು ಸಾಧ್ಯವೇ ಇಲ್ಲ. ಮೊದಲಿಂದ ನಾವು ನೆಹರು ಪೋಟೋ ಹಾಕುತ್ತಿಲ್ಲ ಎಂದಿದ್ದಾರೆ.
ನೆಹರು ಒಂಬತ್ತು ವರ್ಷಗಳ ಕಾಲ ಜೈಲಿನಲ್ಲಿ ಇದ್ದರು ಎಂದು ಕಾಂಗ್ರೆಸ್ ನವರು ಹೇಳುತ್ತಾರೆ. ಅದಕ್ಕಿಂತ ಹೆಚ್ಚು ಹತ್ತಾರು ವರ್ಷಗಳ ಸಾರ್ವಕರ್ ಜೈಲಿನಲ್ಲಿದ್ದರು. ಅವರನ್ನು ಕಾಂಗ್ರೆಸ್ ನವರು ಯಾಕೆ ಸ್ವೀಕಾರ ಮಾಡಿಲ್ಲ ಎಂದು ಪ್ರಶ್ನಿಸಿದ ಅವರು, ಸಾರ್ವಕರ್ ಮುಚ್ಚಳಿಕೆ ಪತ್ರ ಬರೆದು ಕೊಟ್ಟಿದ್ದರು ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ಯಾವುದೋ ಒಂದು ಘಟನೆ ಇಟ್ಟುಕೊಂಡು ದೇಶಪ್ರೇಮವನ್ನು ಅಳೆಯುವುದು ಬಹಳ ದೊಡ್ಡ ಮುರ್ಖತನದ ಪರಮಾವಧಿ. ಸಾರ್ವಕರ್ ಸಮುದ್ರದಲ್ಲಿ‌ ಮೂರು ಕಿಲೊಮೀಟರ್ ಈಜುತ್ತಾರೆ. ಬ್ರಿಟಿಷ್ ರಿಗೆ ಸಾರ್ವಕರ್ ಅವರನ್ನು ಹಿಡಿಯಲು ಆಗಿರಲಿಲ್ಲ. ಲಂಡನ್ ನಲ್ಲೂ ಹೋಗಿ ಸ್ವಾತಂತ್ರ್ಯ ಹೋರಾಟ ಮಾಡಿದ್ದರು.
ಸಾರ್ವಕರ್ ಅವರ ಭಾಷಣ ಕೇಳಿ ಲಕ್ಷಾಂತರ ಜನ ಸ್ವಾತಂತ್ರ್ಯ ಹೋರಾಟಕ್ಕೆ ದುಮುಕಿದ್ದರು ಎಂದು ವಿವರಿಸಿದ್ದಾರೆ.

ಸ್ವಾತಂತ್ರ್ಯಹೋರಾಟದಲ್ಲಿ ಭಾಗಿಯಾಗಿ ಎರಡು ಬಾರಿ (1921 ಮತ್ತು 1931) ಜೈಲುಶಿಕ್ಷೆ ಅನುಭವಿಸಿದ್ದ ಆರ್‌ಎಸ್ಎಸ್ ಸಂಸ್ಥಾಪಕ ಕೆ.ಬಿ.ಹೆಡಗೆವಾರ್ ಅವರ ಚಿತ್ರವನ್ನು ಯಾಕೆ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಿಂದ ಕೈಬಿಟ್ಟಿದ್ದೀರಿ, ತ್ರಿವರ್ಣ ಧ್ವಜವನ್ನು ತಿರಸ್ಕರಿಸಿದ್ದ ಅವರ ಬಂಡವಾಳ ಬಯಲಾಗಬಹುದೆಂಬ ಭಯವೇ? ಎಂದು ಪ್ರಶ್ನಿಸಿದ್ದಾರೆ.

ಬ್ರಿಟಿಷರ ಕ್ಷಮೆ ಕೇಳಿ ಜೈಲಿನಿಂದ ಬಿಡುಗಡೆಗೊಂಡ ವಿ.ಡಿ.ಸಾವರ್ಕರ್ ಅವರಿಗೆ ಮೊದಲ ಸಾಲಿನ ಗೌರವ, ಸ್ವಾತಂತ್ರ್ಯ ಹೋರಾಟದ ಜತೆ ಬಹುಜನ ಸಮಾಜದ ಹಿತಾಸಕ್ತಿಯ ರಕ್ಷಣೆಗಾಗಿಯೂ ಹೋರಾಟ ನಡೆಸಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಕೊನೆಯ ಸಾಲಿನ ನಿರ್ಲಕ್ಷ್ಯ. ‘ಸುಪ್ತ ಅಸ್ಪೃಶ್ಯತೆಯ ನಗ್ನ ಪ್ರದರ್ಶನ’ ಎಂದು ತಿಳಿಸಿದ್ದಾರೆ. ಜನರ ತೆರಿಗೆ ಹಣದಿಂದ ನೀಡಿರುವ ಜಾಹೀರಾತಿನಲ್ಲಿ ಧೀಮಂತ ಸ್ವಾತಂತ್ರ್ಯ ಹೋರಾಟಗಾರ ಪಂಡಿತ ಜವಾಹರಲಾಲ್‌ ನೆಹರು ಅವರಿಗೆ ಮಾಡಿರುವ ಅವಮಾನವನ್ನು ಸಹಿಸಲಾಗದು. ಈ ಅವಮಾನಕ್ಕಾಗಿ ಮುಖ್ಯಮಂತ್ರಿ ಬೊಮ್ಮಾಯಿ ಅವರು ಮೊದಲು ರಾಜ್ಯದ ಜನತೆಯ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.

ಅತ್ಯಂತ ಕೆಳಮಟ್ಟದ ರಾಜಕಾರಣ: ಸುರ್ಜೇವಾಲಾ

ಜವಾಹರಲಾಲ್ ನೆಹರು ಅವರ ಮೇಲಿನ ಬಿಜೆಪಿಯ ಕೊನೆಯಿಲ್ಲದ ದ್ವೇಷವು ಅದರ ಉತ್ತುಂಗವನ್ನು ತಲುಪಿದೆ ಎಂದು ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಕಿಡಿ ಕಾರಿದ್ದಾರೆ. ಬೊಮ್ಮಾಯಿ ಸರ್ಕಾರ ಅವರ ಅಸ್ತಿತ್ವವನ್ನೇ ನಿರಾಕರಿಸುವ ಮೂಲಕ ಅತ್ಯಂತ ಕೆಳಮಟ್ಟಕ್ಕೆ ಇಳಿದಿದೆ ಎಂದು ಅವರು ಟ್ವೀಟ್‌ನಲ್ಲಿ ಹೇಳಿದ್ದಾರೆ.

ಇದನ್ನೂ ಓದಿ | ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಬಹಿಷ್ಕರಿಸಬೇಕು ಎಂದ ಕಾಂಗ್ರೆಸ್‌ ವಕ್ತಾರ

Exit mobile version