ಬೆಂಗಳೂರು: ಇತ್ತೀಚೆಗಷ್ಟೆ ಶಾಲಾ ಶೂ ಮತ್ತು ಸಾಕ್ಸ್ ವಿಚಾರದಲ್ಲಿ ಭುಗಿಲೆದ್ದಿದ್ದ ವಿವಾದವನ್ನು ಸರ್ಕಾರ ಬಗೆಹರಿಸಿತು ಎಂದುಕೊಳ್ಳುತ್ತಿರುವಾಗಲೆ, ಶಾಲಾ ಮಕ್ಕಳಿಗೆ ಮೊಟ್ಟೆ ನೀಡುವ ಯೋಜನೆ ಇದೀಗ ಮತೊಮ್ಮೆ ವಿವಾದಕ್ಕೆ ಕಾರಣವಾಗುವ ಮುನ್ಸೂಚನೆ ಲಭಿಸಿದೆ. ಮಧ್ಯಾಹ್ನದ ಬಿಸಿ ಊಟದಿಂದ ಮೊಟ್ಟೆಯನ್ನು ತೆಗೆದುಹಾಕಬೇಕು ಎಂದು ರಾಷ್ಟ್ರೀಯ ಶಿಕ್ಷಣ ನೀತಿ(NEP) ಅನುಗುಣವಾಗಿ ಕಾರ್ಯಪಡೆ ವರದಿಯನ್ನು ನೀಡಿದೆ.
ರಾಷ್ಟ್ರೀಯ ಶಿಕ್ಷಣ ನೀತಿ 2020ರ ಅಡಿ ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ರಾಜ್ಯ ಸರ್ಕಾರವು ನಿವೃತ್ತ ಐಎಎಸ್ ಅಧಿಕಾರಿ ಮದನ್ ಗೋಪಾಲ್ ಅವರ ನೇತೃತ್ವದಲ್ಲಿ ಕಾರ್ಯಪಡೆಯನ್ನು ರಚಿಸಿತ್ತು. ಈ ಕಾರ್ಯಪಡೆಯು 26 ವಿಷಯಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಸಮಿತಿ ರಚಿಸಿ, ಆ ಸಮಿತಿಗಳಿಂದ ವರದಿ ಪಡೆದಿತ್ತು. ಅದನ್ನು ಆಧರಿಸಿ ತಾನು ಸಿದ್ಧಪಡಿಸಿದ ವರದಿಯನ್ನು ಇತ್ತೀಚೆಗೆ ರಾಜ್ಯ ಸರ್ಕಾರಕ್ಕೆ ಸಲ್ಲಿಕೆ ಮಾಡಿತ್ತು. ಇದೀಗ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಈ ವರದಿಯನ್ನು ರವಾನಿಸಿದೆ. ಕನ್ನಡವನ್ನು ಕಡ್ಡಾಯ ಮಾಡಬೇಕು, ಶಾಲಾ ಮಕ್ಕಳಿಗೆ ಬ್ಯಾಗ್ ಹೊರೆಯನ್ನು ಕಡಿಮೆ ಮಾಡಬೇಕು ಎನ್ನುವುದರ ಜತೆಗೆ ಮೊಟ್ಟೆ ವಿಚಾರವನ್ನೂ ಸಮಿತಿ ಶಿಫಾರಸು ಮಾಡಿದೆ.
ಆರೋಗ್ಯಕ್ಕೆ ಒಳ್ಳೆಯದಲ್ಲ
ಶಾಲಾ ಮಕ್ಕಳಿಗೆ ಮೊಟ್ಟೆ ವಿತರಿಸುವುದರಿಂದ ಹಲವರ ಧಾರ್ಮಿಕ ನಂಬಿಕೆಗೆ ಧಕ್ಕೆ ಬರುತ್ತದೆ. ವಿದ್ಯಾರ್ಥಿಗಳಿಗೆ ಸರ್ಕಾರ ಶಾಲೆಗಳಲ್ಲಿ ಮಾಸಂಹಾರ ತಿನ್ನಲು ಪ್ರೋತ್ಸಾಹ ಮಾಡಿದ ಹಾಗೆ ಆಗುತ್ತದೆ ಎಂದು ಈ ಹಿಂದೆ ಸಾಧು ಸಂತರು ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ಆದರೆ ಈಗಿನ ಶಿಫಾರಸಿನಲ್ಲಿ, ಮೊಟ್ಟೆ ಸೇವನೆಯಿಂದ ಮಕ್ಕಳಿಗೆ ಅನಾರೋಗ್ಯ ಕಾಡುತ್ತದೆ. ಹೀಗಾಗಿ ಸಾತ್ವಿಕ ಆಹಾರ ಪದ್ಧತಿಯನ್ನು ಅನುಸರಿಸಬೇಕೆಂದು ಸಮಿತಿ ಶಿಫಾರಸು ಮಾಡಿದ್ದು, ಮಧ್ಯಾಹ್ನದ ಬಿಸಿ ಊಟದಿಂದ ಮೊಟ್ಟೆಯನ್ನು ತೆಗೆದುಹಾಕಬೇಕೆಂದು ತಿಳಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಮೊಟ್ಟೆ ಹಾಗೂ ಮಾಂಸ ಸೇವಿಸಿದರೆ ದೇಹಕ್ಕೆ ಪ್ರೋಟಿನ್ ಒದಗಿಸುತ್ತದೆ. ಮಾನವನ ಮಿದುಳಿನ ಬೆಳವಣಿಗೆಗೆ ಸಹಾಯ ಮಾಡಿದೆಯೆಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಹೀಗಾಗಿ ಕರ್ನಾಟಕ ಸರ್ಕಾರವು ಮೊಟ್ಟೆಯನ್ನು ಬಿಸಿಯೂಟದಲ್ಲಿ ಸೇರಿಸಿತ್ತು. ಆದರೆ ಈ ಸಮಿತಿಯ ಮೊಟ್ಟೆ ಉತ್ತಮವಲ್ಲ ಎಂದು ಶಿಫಾರಸು ಮಾಡಿರುವುದು ಅವೈಜ್ಞಾನಿಕವಾಗಿದೆ. ಜನರ ಊಟದ ಪದ್ಧತಿಯನ್ನು ಇದು ಹೇರಲು ಮುಂದಾಗಿದೆ. ದೇಶದಲ್ಲಿ ಶೇ.50 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವಾಗ ಈ ಸಮಿತಿಯು ವಾಸ್ತವವನ್ನು ಅಣಕಿಸಿದಂತಿದೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ | ಪ್ರತಿಭಟನೆ ಬೆದರಿಕೆ: ರೋಹಿತ್ ಚಕ್ರತೀರ್ಥ ಸನ್ಮಾನ ಮುಂದೂಡಿಕೆ
ಈ ಕುರಿತು ಮಾತನಾಡಿರುವ ಪೌಷ್ಠಿಕಾಂಶ ತಜ್ಞ ಡಾ. ಕೀರ್ತಿ, ಮಕ್ಕಳಿಗೆ ಮೊಟ್ಟೆ ನೀಡುವುದು ಉತ್ತಮ. ಮೊಟ್ಟೆ ಸೇವನೆಯಿಂದ ಅಪೌಷ್ಟಿಕತೆ ಕೊರತೆ ದೂರವಾಗುತ್ತದೆ. ದಿನಕ್ಕೆ ಒಂದು ಮೊಟ್ಟೆ ಸೇವನೆ ಒಳ್ಳೆಯದು. ಮೊಟ್ಟೆ ತಿನ್ನುವದರಿಂದ ಮಕ್ಕಳ ಕ್ಯಾಲ್ಸಿಯಂ ಮಟ್ಟ ಉತ್ತಮಗೊಳ್ಳುತ್ತದೆ. ಇದರಿಂದ ಮೂಳೆಗಳು ಬಲಿಷ್ಠವಾಗುತ್ತವೆ. ಮೊಟ್ಟೆಯನ್ನು ಶೇ.೧೦೦ ಬೇಯಿಸಿ ಕೊಡಬೇಕು. ಅರ್ದಮರ್ದ ಬೇಯಿಸಿದ ಮೊಟ್ಟೆ ಸೇವನೆ ಒಳ್ಳೆಯದಲ್ಲ ಎಂದು ಹೆಳಿದ್ದಾರೆ.
ಕೊನೆಯ ಹತ್ತು ದಿನ ಬ್ಯಾಗ್ ಬೇಡ
ಮಕ್ಕಳಿಗೆ ಮುಖ್ಯವಾಗಿ ಬ್ಯಾಗ್ ಹೊರೆಯನ್ನು ಕಡಿಮೆ ಮಾಡಬೇಕು ಎನ್ನುವ ಬೇಡಿಕೆ ಅನೇಕ ವರ್ಷಗಳಿಂದ ಇದೆ. ಇಷ್ಟು ಪ್ರಮಾಣದ ಪುಸ್ತಕಗಳ ಹೊರೆ ಮಕ್ಕಳಿಗೆ ಬೇಕಿಲ್ಲ ಎನ್ನುವುದು ಒಂದಾದರೆ, ಭೌತಿಕವಾಗಿ ಇಷ್ಟು ಭಾರ ಹೊತ್ತುಕೊಂಡು ಹೋಗುವ ಕುರಿತೂ ಆಕ್ಷೇಪಣೆಗಳಿದ್ದವು.
ಈ ಕುರಿತು ಶಿಫಾರಸು ಮಾಡಿರುವ ಸಮಿತಿ, ಶೈಕ್ಷಣಿಕ ವರ್ಷದ ಕೊನೆಯ ಹತ್ತು ದಿನಗಳನ್ನು ಬ್ಯಾಗ್‌ರಹಿತ ದಿನವನ್ನಾಗಿ ಪರಿಗಣಿಸಬೇಕು. ಈ ದಿನಗಳನ್ನು ಸೇವಾ ದಿನ ಎಂದು ಪರಿಗಣಿಸಿ, ಮಕ್ಕಳನ್ನು ವೃತ್ತಿಪರ ಕುಶಲಕರ್ಮಿಗಳ ಬಳಿಗೆ ತರಬೇತಿಗಾಗಿ ಕಳಿಸಬೇಕು. ಕುಂಬಾರ, ಮರಗೆಲಸ, ಕಲಾವಿದರಿಂದ ತರಬೇತಿ ಕೊಡಿಸಬೇಕು.
ಈಗಿನ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳನ್ನು ಪಠ್ಯದ ಆಧಾರದಲ್ಲಿ ಮೌಲ್ಯಾಂಕನ ಮಾಡಲಾಗುತ್ತಿದೆ. ಹೊಸ ವ್ಯವಸ್ಥೆಯಲ್ಲಿ ಸಮಗ್ರವಾಗಿ ಮಕ್ಕಳ ವಿಕಾಸವನ್ನು ಗಣನೆಗೆ ತೆಗೆದುಕೊಂಡು ಮೌಲ್ಯಮಾಪನ ಮಾಡಬೇಕು. ಇದರಲ್ಲಿ ಪಠ್ಯ, ಪಠ್ಯೇತರದ ಜತೆಗೆ ಮಾನಸಿಕ ಬೆಳವಣಿಗೆಯನ್ನೂ ಗಮನಿಸಬೇಕಾಗುತ್ತದೆ ಎಂದು ವರದಿ ತಿಳಿಸಿದೆ.
ಭಾಷಾ ವಿಚಾರದಲ್ಲಿ ಶಿಫಾರಸು ನೀಡಿರುವ ಸಮಿತಿ, ಒಂದನೇ ಭಾಷೆ ಕನ್ನಡ, ಎರಡನೇ ಭಾಷೆ ಇಂಗ್ಲಿಷ್, ಮೂರನೇ ಭಾಷೆಯನ್ನು ಐಚ್ಚಿಕ ಭಾಷೆಯಾಗಿ ಕಲಿಯಲು ಅವಕಾಶ ನೀಡುವಂತೆ ತಿಳಿಸಿದೆ. 1 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಕನ್ನಡವನ್ನು ಪ್ರಥಮ ಭಾಷೆಯಾಗಿ ಕಡ್ಡಾಯಗೊಳಿಸಬೇಕೆಂದು ಶಿಫಾರಸು ಮಾಡಿದೆ.
ಇದನ್ನೂ ಓದಿ | ಗೋಡಂಬಿ ಅಲ್ಲ ಇದು ಮೊಟ್ಟೆ!