ಮಂಗಳೂರು: ರಾಜ್ಯವನ್ನೇ ಬೆಚ್ಚಿಬೀಳಿಸಿದ, ಬಿಜೆಪಿ ಯುವ ಮೋರ್ಚಾ ಪದಾಧಿಕಾರಿ ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ಕೆಲವು ದಿನಗಳ ಹಿಂದಷ್ಟೇ ಬಂಧಿತನಾದ ನೋಟೆಡ್ ಕ್ರಿಮಿನಲ್ ಒಬ್ಬ ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಸದ್ದು ಮಾಡಿದ್ದ ಬಜರಂಗ ದಳ ಕಾರ್ಯಕರ್ತ ಪ್ರಶಾಂತ್ ಪೂಜಾರಿಯ ಹತ್ಯೆಯಲ್ಲೂ ಭಾಗಿಯಾಗಿದ್ದನೇ ಎಂಬ ಪ್ರಶ್ನೆಗಳು ಕೇಳಿಬಂದಿವೆ.
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ಕೆಲವು ದಿನಗಳ ಹಿಂದೆ ಎನ್‌ಐಎನಿಂದ ಬಂಧಿತನಾಗಿರುವ ಪಿಎಫ್ಐ ಮುಖಂಡ, ಕೊಡಗಿನ ಮೂಲದ ತುಫೈಲ್ ಮೂಡುಬಿದಿರೆಯಲ್ಲಿ ಏಳು ವರ್ಷಗಳ ಹಿಂದೆ ನಡೆದ ಹೂವಿನ ವ್ಯಾಪಾರಿ ಪ್ರಶಾಂತ್ ಪೂಜಾರಿ ಹತ್ಯೆಯಲ್ಲೂ ಸಂಚುಕೋರನಾಗಿದ್ದ!
ಪ್ರವೀಣ್ ನೆಟ್ಟಾರು ಕೊಲೆಯಲ್ಲಿ ಈತನ ಮೇಲೆ ಕ್ರಿಮಿನಲ್ ಸಂಚು ನಡೆಸಿದ ಮತ್ತು ಪ್ರಕರಣದ ಮೂವರು ಪ್ರಮುಖ ಆರೋಪಿಗಳಿಗೆ ಆಶ್ರಯ ನೀಡಿದ ಆರೋಪವಿದೆ. ಮೈಸೂರಿನ ಕೊಪ್ಪ ಗ್ರಾಮದಲ್ಲಿ ಮೂರು ಜನ ಆರೋಪಿಗಳಿಗೆ ತುಫೈಲ್ ರಕ್ಷಣೆ ಒದಗಿಸಿದ್ದ. ಈ ಮೂವರೂ ಆರೋಪಿಗಳು ಪ್ರವೀಣ್ ನೆಟ್ಟಾರು ಕೊಲೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು.
ಪ್ರಶಾಂತ್ ಪೂಜಾರಿ ಹತ್ಯೆಯಲ್ಲೂ ಭಾಗಿ?
ಕೊಡಗಿನ ಮಡಿಕೇರಿಯ ಮಸೀದಿ ಹಿಂಬದಿ ನಿವಾಸಿಯಾಗಿರುವ ತುಫೈಲ್‌ನ ಪತ್ತೆಗಾಗಿ ಎನ್‌ಐಎ ಐದು ಲಕ್ಷ ರೂ. ಬಹುಮಾನ ಘೋಷಿಸಿತ್ತು. ಇತ್ತೀಚೆಗೆ ಈತನನ್ನು ಸೆರೆ ಹಿಡಿಯಲಾಗಿದ್ದು ಆತನ ವಿಚಾರಣೆ ವೇಳೆ ಆತ ಇನ್ನೂ ಹಲವು ಕ್ರಿಮಿನಲ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದು ತಿಳಿದುಬಂದಿದೆ.
ಕೊಡಗಿನಲ್ಲಿ ಆತನ ಮೇಲೆ ಎರಡು ಕೊಲೆ ಯತ್ನ ಪ್ರಕರಣಗಳು ದಾಖಲಾಗಿವೆ. ಒಂದು ಕುಶಾಲನಗರದಲ್ಲಿ, ಇನ್ನೊಂದು ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ. ಯುವಕರ ಕೊಲೆ ಯತ್ನ ಪ್ರಕರಣಗಳು ಇವು.
ಈ ನಡುವೆ ಬೆಚ್ಚಿಬೀಳಿಸುತ್ತಿರುವುದು ಪ್ರಶಾಂತ್ ಕೊಲೆ ಪ್ರಕರಣದಲ್ಲಿ ಆತ ಭಾಗಿಯಾಗಿದ್ದಾನೆ ಎನ್ನುವುದು. ಮೂಡುಬಿದಿರೆಯಲ್ಲಿ ಹೂವಿನ ವ್ಯಾಪಾರಿಯಾಗಿದ್ದು, ಬಜರಂಗ ದಳ ಕಾರ್ಯಕರ್ತನಾಗಿಯೂ ಕೆಲಸ ಮಾಡುತ್ತಿದ್ದ ಪ್ರಶಾಂತ ಪೂಜಾರಿಯನ್ನು 2015ರ ಅಕ್ಟೋಬರ್ 9ರಂದು ಮುಂಜಾನೆ ದುಷ್ಕರ್ಮಿಗಳು ಕೊಚ್ಚಿ ಕೊಂದು ಪರಾರಿಯಾಗಿದ್ದರು. ಪ್ರಶಾಂತ್ ಪೂಜಾರಿ ಅಕ್ರಮ ಗೋ ಸಾಗಾಟಗಾರರಿಗೆ ಸಿಂಹ ಸ್ವಪ್ನವಾಗಿದ್ದದ್ದೇ ಕೊಲೆಗೆ ಕಾರಣ ಎನ್ನುವುದು ತನಿಖೆಯಲ್ಲಿ ಬಯಲಾಗಿದೆ. ಈ ನಡುವೆ ಗೋ ಸಾಗಾಟಗಾರರೂ ಸೇರಿದಂತೆ ಒಂಬತ್ತು ಮಂದಿಯನ್ನು ಆರೋಪಿಗಳೆಂದು ಅಂದು ಗುರುತಿಸಲಾಗಿದೆ ಹಲವರನ್ನು ಬಂಧಿಸಲಾಗಿತ್ತು. ಈ ಕೊಲೆ ಪ್ರಕರಣದ ನೇರ ಸಾಕ್ಷಿಯಾಗಿದ್ದ ವ್ಯಕ್ತಿಯೊಬ್ಬರು ಕೊಲೆ ನಡೆದ ಕೆಲವೇ ದಿನದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು ಭಾರಿ ಗುಮಾನಿಗೆ ಕಾರಣವಾಗಿತ್ತು. ಇದರ ನಡುವೆ ಒಬ್ಬ ಆರೋಪಿ ಜೈಲಿನಲ್ಲಿ ಕೊಲೆಯಾಗಿದ್ದ.
ಈ ನಡುವೆ, ಈಗ ಎದ್ದುಬಂದಿರುವ ಸಂಗತಿ ಎಂದರೆ ಆರೋಪಿ ತುಫೈಲ್ ಪ್ರಶಾಂತ್ ಪೂಜಾರಿಯ ಕೊಲೆಯಲ್ಲೂ ಸಂಚುಕೋರನಾಗಿ ಭಾಗಿಯಾಗಿದ್ದಾನೆ. ಈ ಬಗೆಗಿನ ಹೆಚ್ಚಿನ ಮಾಹಿತಿಯನ್ನು ಎನ್‌ಐಎ ಪೊಲೀಸರು ಇನ್ನಷ್ಟೇ ಬಿಟ್ಟುಕೊಡಬೇಕಾಗಿದೆ.
ಇದನ್ನೂ ಓದಿ : Praveen Nettaru Murder: ಪ್ರವೀಣ್ ಹತ್ಯೆ ಆರೋಪಿ ತುಫೈಲ್‌ನನ್ನು NIA ಹಿಡಿದದ್ದು ಹೀಗೆ!