ಬೆಂಗಳೂರು: ಮಾಸಿಕ 200 ಯುನಿಟ್ ವಿದ್ಯುತ್ ಪಡೆಯುವ ಕುರಿತು ಈಗಾಗಲೆ ಕಾಂಗ್ರೆಸ್ ಸರ್ಕಾರ ಹೊರಡಿಸಿರುವ ಆದೇಶ ಸಾಕಷ್ಟು ಗೊಂದಲಗಳಿಗೆ ಕಾರಣವಾಗಿದೆ. ಈ ಯೋಜನೆ ಕೇವಲ ಮನೆ ಮಾಲೀಕರಿಗೆ ಅನ್ವಯ ಆಗಲಿದ್ದು, ಬಾಡಿಗೆದಾರರಿಗೆ ಸಿಗುವುದಿಲ್ಲ ಎಂಬ ವಿಚಾರ ಈಗ ವಿವಾದಕ್ಕೆ ಕಾರಣವಾಗಿದೆ.
ಆದರೆ ಟ್ವೀಟ್ ಮೂಲಕ ಹಾಗೂ ಮಾಧ್ಯಮ ಹೇಳಿಕೆಯಲ್ಲಿ ಈ ಕುರಿತು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಇದು ಬಾಡಿಗೆದಾರರಿಗೂ ಅನ್ವಯ ಆಗುತ್ತದೆ ಎಂದಿದ್ದಾರೆ. ಅಧಿಕಾರಿಗಳ ಭಾಷೆ ಹಾಗೆ ಇರುತ್ತದೆ, ಪರಿಶೀಲಿಸಿ ಸರಿಪಡೊಸುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಈ ನಡುವೆ ಇಂಧನ ಇಲಾಖೆಯಿಂದ ಈ ಕಾರ್ಯಕ್ಕಾಗಿ ಹೊಸ ಮೊಬೈಲ್ ಆ್ಯಪ್ ಸಹ ತಯಾರಿಸಲಾಗುತ್ತಿದೆ.
ಈಗಾಗಲೆ ಸರ್ಕಾರ ತಿಳಿಸಿರುವಂತೆ ಸೇವಾ ಸಿಂಧು ಮೂಲಕ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಜತೆಗೆ ಇದಕ್ಕಾಗಿಯೇ ಹೊಸ ಮೊಬೈಲ್ ಆ್ಯಪ್ ಸಹ ಸಿದ್ಧವಾಗುತ್ತಿದೆ. ಈ ಆ್ಯಪ್ ಈಗಾಗಲೆ ತಯಾರಿ ಹಂತದಲ್ಲಿದ್ದು, ಮುಂದಿನ 10-15 ದಿನದಲ್ಲಿ ಸಿದ್ಧವಾಗುತ್ತದೆ. ಇದರಲ್ಲಿ ಬಾಡಿಗೆದಾರರೂ ಅರ್ಜಿ ಸಲ್ಲಿಸಿ ಉಚಿತ ವಿದ್ಯುತ್ ಯೋಜನೆಯ ಲಾಭ ಪಡೆಯಬಹುದು ಎನ್ನಲಾಗಿದೆ.
- ಗೃಹಜ್ಯೋತಿ ಹೆಸರಿನಲ್ಲೇ ಆ್ಯಪ್ ಸಿದ್ದವಾಗುತ್ತಿದೆ
- ಎಲ್ಲಾ ಆ್ಯಪ್‌ನಂತೆ ಪ್ಲೇ ಸ್ಟೋರ್‌ನಲ್ಲಿ ಲಭ್ಯವಾಗಲಿದೆ
- ಈ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು
- ಬಾಡಿಗೆದಾರರು ಕನಿಷ್ಠ 3 ದಾಖಲೆಗಳನ್ನು ಹೊಂದಿರಲೇಬೇಕು
- ಆಧಾರ್ ಕಾರ್ಡ್, ಬಾಡಿಗೆ ಕರಾರು ಪತ್ರ ಹಾಗೂ ಪ್ರತಿ ತಿಂಗಳು ಕಟ್ಟುವ ವಿದ್ಯುತ್ ಸ್ಥಾವರದ ID ನಂಬರ್ ಇರುವ ಬಿಲ್
- ಆ್ಯಪ್‌ನಲ್ಲಿ ಲಾಗಿನ್ ಆಗಿ Opt in ಆಪ್ಷನ್ ಪ್ರೆಸ್ ಮಾಡಬೇಕು
- ಬಳಿಕ ಅಲ್ಲಿ ನಿಮ್ಮ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು
- ಒಂದು ವೇಳೆ ಒಂದೆರೆಡು ತಿಂಗಳು ಬಳಿಕ ಬಾಡಿಗೆ ಮನೆ ಖಾಲಿ ಮಾಡಿ ಬೇರೆ ಕಡೆ ಹೋದರೆ Opt out ಮಾಡಬೇಕು
- ಮತ್ತೆ ಹೊಸ ಬಾಡಿಗೆ ಮನೆಗೆ ಹೋದಾಗ ಅಲ್ಲಿ ಮತ್ತೆ ಆ್ಯಪ್‌ನಲ್ಲಿ ಲಾಗಿನ್ ಆಗಿ Opt ಇನ್ ಆಪ್ಷನ್ ಆಯ್ಕೆ ಮಾಡಬೇಕು
- ಅಲ್ಲಿ ಮತ್ತೆ ನಿಮ್ಮ ದಾಖಲೆಗಳನ್ನು ಅಪ್ಲೋಡ್ ಮಾಡಿ ಯೋಜನೆಗೆ ಅರ್ಹತೆ ಪಡೆಯಬೇಕು
- ನೀವು ಬಳಸುತ್ತಿರುವ ಮನೆಗೆ ನಿಗದಿಯಾಗಿರುವ ವಾರ್ಷಿಕ ಸರಾಸರಿ ವಿದ್ಯುತ್ ಬಳಕೆ 200 ಯುನಿಟ್‌ಗಿಂತ ಕಡಿಮೆ ಇದ್ದರೆ ಯೋಜನೆ ಲಾಭ ಸಿಗುತ್ತದೆ. 200 ಯುನಿಟ್‌ಗಿಂತ ಹೆಚ್ಚಿದ್ದರೆ ಸಿಗುವುದಿಲ್ಲ.
ಇದನ್ನೂ ಓದಿ: Congress Guarantee : ತೆರಿಗೆ ಪಾವತಿಸುವವರ ಪತ್ನಿಗೆ ಗೃಹ ಲಕ್ಷ್ಮಿ ಯೋಜನೆಯ 2 ಸಾವಿರ ರೂ. ಸಿಗೋದಿಲ್ಲ!