ಬಳ್ಳಾರಿ: ತಾಯಿಯೊಬ್ಬಳು ಇನ್ನೂ ಕಣ್ಣುಬಿಡದ ಹಸುಗೂಸೊಂದನ್ನು ನಡುರಾತ್ರಿ ನಡುಬೀದಿಯಲ್ಲಿ ಬಿಟ್ಟು ಹೋದ ಅಮಾನವೀಯ ಘಟನೆ ಜಿಲ್ಲೆಯ ಸಂಡೂರು ಬಳಿ ನಡೆದಿದೆ.
ಸಂಡೂರು ತಾಲೂಕಿನ ಕುರೆಕುಪ್ಪ ಗ್ರಾಮದ ಎರಡನೇ ವಾರ್ಡ್‌ನಲ್ಲಿ ಈ ಘಟನೆ ನಡೆದಿದೆ. ಹೆಣ್ಣು ಮಗು ಎಂಬ ಕಾರಣಕ್ಕೆ ಹೆತ್ತವರು ಬಿಟ್ಟು ಹೋಗಿರಬಹುದು ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ. ಮಗು ತಡರಾತ್ರಿ ಹುಟ್ಟಿರಬಹುದು. ಮಗು ಹೆಣ್ಣು ಎಂದು ತಿಳಿದು ಪೋಷಕರೇ ರಸ್ತೆಯಲ್ಲಿ ಇಟ್ಟು ಹೋಗಿರಬಹುದು ಎಂದು ಹೇಳಲಾಗುತ್ತಿದೆ.
ಎಳೆದಾಡಿದ ನಾಯಿಗಳು
ಪೋಷಕರ ಕ್ರೌರ್ಯ ಒಂದು ಕಡೆಯಾದರೆ ಬೀದಿಯಲ್ಲಿ ಬಿದ್ದಿದ್ದ ಮಗುವನ್ನು ನಾಯಿಗಳು ಎಳೆದಾಡಿರುವ ಘಟನೆಯೂ ನಡೆದಿದ್ದು, ಚಿತ್ರಣ ಕಣ್ಣೀರು ಬರಿಸುವಂತಿದೆ.
ಮಗುವು ಮೊದಲೇ ಮೃತ ಪಟ್ಟಿತ್ತೋ ಅಥವಾ ನಾಯಿಗಳು ಎಳೆದಾಡಿದ ಮೇಲೆ ಮೃತ ಪಟ್ಟಿತ್ತೋ ಎಂಬುದು ತಿಳಿದು ಬಂದಿಲ್ಲ, ಆದರೆ ಸ್ಥಳೀಯರಲ್ಲಿ ಎರಡು ಅಭಿಪ್ರಾಯಗಳೂ ಇವೆ.
ಸ್ಥಳಕ್ಕೆ ಸಿಡಿಪಿಓ ಮತ್ತು ಪೊಲೀಸರು ಭೇಟಿ ನೀಡಿದ್ದು, ಅಧಿಕಾರಿಗಳು ಮಗುವಿನ ಮೃತ ದೇಹವನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾರೆ. ಇದು ಯಾರ ಮಗು, ಹೆಣ್ಣು ಮಗು ಎಂಬ ಕಾರಣಕ್ಕೆ ಈ ರೀತಿ ಮಾಡಿದರಾ ಎನ್ನುವುದು ಪೊಲೀಸ್ ತನಿಖೆಯಲ್ಲಿ ತಿಳಿದುಬರಬೇಕಾಗಿದೆ. ಪೊಲೀಸ್ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಈ ಪ್ರಕರಣದ ಮುಂದಿನ ತನಿಖೆಯನ್ನು ನಡೆಸಲಿದ್ದಾರೆ. ಇದು ಅಕ್ರಮ ಸಂಬಂಧದಿಂದ ಗರ್ಭ ಧರಿಸಿ ಹುಟ್ಟಿರುವ ಮಗುವಾಗಿರಬಹುದೇ? ಸಮಾಜಕ್ಕೆ ಹೆದರಿ ಬಿಟ್ಟು ಹೋಗಿರಬಹುದೇ ಎಂಬ ಅಂಶದ ಬಗೆಗೂ ತನಿಖೆ ನಡೆಯಲಿದೆ.
ಯಾಕೆ ಇನ್ನೂ ಈ ಕ್ರೌರ್ಯ?
ನಿಜವೆಂದರೆ, ಈಗ ಹೆಣ್ಣು ಮತ್ತು ಗಂಡಿನ ಮಧ್ಯೆ ಬೇಧವಿಲ್ಲ. ಇಬ್ಬರೂ ಸಮರ್ಥವಾಗಿ ಬೆಳೆದು ಮನೆಗೆ, ಸಮಾಜಕ್ಕೆ ಆಸರೆಯಾಗಬಲ್ಲರು. ಕೆಲವೊಂದು ವಿಷಯಗಳಲ್ಲಿ ಹೆಣ್ಣು ಮಕ್ಕಳೇ ಮುಂದಿದ್ದಾರೆ ಎನ್ನುವುದು ಆಗಾಗ ಹೊರಹೊಮ್ಮುವ ಫಲಿತಾಂಶ ಸಾಧನೆಗಳಲ್ಲಿ ಸಾಬೀತಾಗುತ್ತಿದೆ. ಆದರೂ ಗ್ರಾಮೀಣ ಭಾಗದಲ್ಲಿ, ಕೆಲವೊಮ್ಮೆ ಮೌಢ್ಯಗಳು, ಮನೆಯೊಳಗಿನ ಕ್ರೌರ್ಯಗಳು ಹೆಣ್ಣು ಮಗುವಿನ ಬಗ್ಗೆ ಅಸಡ್ಡೆಗೆ ಕಾರಣವಾಗಿದೆ. ನಿಜವೆಂದರೆ, ಈ ರೀತಿ ಮಕ್ಕಳನ್ನು ಕೊಲ್ಲುವ ಬದಲು ಒಂದು ಮಗು ಬೇಕು ಎಂದು ಕಾಯುತ್ತಿರುವವರಿಗೆ ನೀಡಬಹುದು.
ಇದನ್ನೂ ಓದಿ| ಭ್ರೂಣಗಳನ್ನು ಎಸೆದಿದ್ದು ನಾವೇ ಎಂದು ಒಪ್ಪಿಕೊಂಡ ವೈದ್ಯೆ: ಪೊಲೀಸರಿಂದ ಆಸ್ಪತ್ರೆ ಸೀಜ್