ಬೆಂಗಳೂರು: ಕೇವಲ ಒಂದು ದಿನ ಎಳೆಯ ಹಸುಗೂಸನ್ನು (Newly born Baby) ಕಟ್ಟಡಗಳ ನಡುವಿನ ಸಣ್ಣ ಜಾಗದಲ್ಲಿ ಎಸೆದುಹೋದ (New born child found) ಅತ್ಯಂತ ಅಮಾನವೀಯ ಘಟನೆಯೊಂದು (Inhuman incident) ಬೆಂಗಳೂರಿನಲ್ಲಿ (Bangalore News) ನಡೆದಿದೆ. ರಾತ್ರಿ ಪೂರ್ತಿ ಇದೇ ಜಾಗದಲ್ಲಿದ್ದ ಮಗುವನ್ನು ಕೊನೆಗೂ ರಕ್ಷಿಸಲಾಗಿದೆ. ಇಲಿಗಳ ಕಾಟ, ಕಚ್ಚುವಿಕೆಯ ನಡುವೆಯೂ ಈ ಮಗು ಪ್ರಾಣ ಹಳಿಸಿಕೊಂಡಿದ್ದೇ ಒಂದು ಅಚ್ಚರಿ.
ಇದು ಬೆಂಗಳೂರಿನ ಆರ್‌ಬಿಐ ಲೇಔಟ್‌ನಲ್ಲಿ ನಡೆದ ಘಟನೆ. ಇಲ್ಲಿ ಒತ್ತೊತ್ತಾಗಿ ಮನೆ ಮತ್ತು ಕಟ್ಟಡಗಳಿವೆ. ಇಲ್ಲಿನ ಎರಡು ಕಟ್ಟಗಳ ನಡುವಿನ ಇರುಕಿನ ಜಾಗದಲ್ಲಿ ಬುಧವಾರ ರಾತ್ರಿ ಪಾಪಿಗಳು ಈ ಎಳೆ ಹಸುಳೆಯನ್ನು ಎಸೆದು ಹೋಗಿದ್ದರು.
ಇದು ಅನೈತಿಕ ಸಂಬಂಧಕ್ಕೆ ಹುಟ್ಟಿದ ಮಗುವೇ ಅಥವಾ ಯಾರಾದರೂ ಮಗು ಬೇಡ ಎಂದೇ ಎಸೆದು ಹೋದರೇ ಗೊತ್ತಿಲ್ಲ. ಅಂತೂ ಕರುಣೆಯೇ ಇಲ್ಲದ ವ್ಯಕ್ತಿಗಳು ಅಮಾಯಕ ಮಗುವನ್ನು, ಜಗತ್ತು ಏನೆಂದೇ ತಿಳಿಯದ, ಇನ್ನೂ ಕಣ್ಣೂ ಬಿಡದ ಮಗುವನ್ನು ಪಾಪಿ ಪೋಷಕರು ಅಲ್ಲಿ ಜೀವಂತವಾಗಿ ಎಸೆದು ಹೋಗಿದ್ದರು.
ಈ ಮಗು ರಾತ್ರಿ ಪೂರ್ತಿ ಇದೇ ಜಾಗದಲ್ಲಿತ್ತು. ರಾತ್ರಿ ಕೆಲವರಿಗೆ ಸಣ್ಣ ಮಗುವೊಂದು ಕೀರಲು ಧ್ವನಿಯಲ್ಲಿ ಕಿರುಚುವ ಸದ್ದು ಕೇಳಿಸಿದೆ. ಆದರೆ, ಎಷ್ಟು ಹುಡುಕಿದರೂ ಎಲ್ಲಿಂದ ಬರುತ್ತಿದೆ ಎಂದು ಗೊತ್ತಾಗಲಿಲ್ಲ. ಕೊನೆಗೆ ಬೆಳಗ್ಗೆ ನೋಡುವಾಗ ಎರಡು ಕಟ್ಟಡಗಳ ನಡುವಿನ ಇರುಕಲು ಜಾಗದಲ್ಲಿ ಮಗುವೊಂದು ಕಂಡಿತು.
ಕೂಡಲೇ ಅದನ್ನು ಅಲ್ಲಿಂದ ರಕ್ಷಿಸಿ ಇಂದಿರಾ ಗಾಂಧಿ ಆಸ್ಪತ್ರೆಗೆ ಮಗು ದಾಖಲು ಮಾಡಿದರು. ಮಗುವಿನ ತಲೆ ಮತ್ತು ಮೈಯ ಕೆಲವು ಭಾಗಗಳಲ್ಲಿ ಇಲಿಗಳು ಕಚ್ಚಿದ್ದ ಗಾಯಗಳು ಕಂಡುಬಂದಿವೆ. ಅಂದರೆ ರಾತ್ರಿ ಇಡೀ ಇಲಿಗಳು ಈ ಪುಟ್ಟ ಮಗುವಿನ ದೇಹವನ್ನು ಕಚ್ಚಿವೆ. ಈ ಕಾರಣಕ್ಕಾಗಿಯೇ ಅದು ಕೀರಲು ಧ್ವನಿಯಲ್ಲಿ ಅತ್ತಿದೆ.
ಅಷ್ಟಾದರೂ ಮಗು ಯಾವುದೇ ಅಪಾಯಕ್ಕೆ ಒಳಗಾಗದೆ ಜೀವ ಉಳಿಸಿಕೊಂಡಿರುವುದು ನಿಜಕ್ಕೂ ಪವಾಡವೇ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.
ಘಟನೆ ಸಂಬಂಧ ತಿಲಕ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಭಾಗದ ಸಿಸಿ ಟಿವಿಗಳನ್ನು ಪರಿಶೀಲಿಸಲಾಗುತ್ತಿದೆ. ಅಂತೂ ಯಾವುದೇ ಕಾರಣಕ್ಕೆ ಮಗುವನ್ನು ಇಟ್ಟುಕೊಳ್ಳಲಾಗದ ಯಾರೋ ಈ ರೀತಿ ಎಸೆದು ಹೋಗಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ: New Born Baby: ಹಸುಗೂಸನ್ನು ತಿಂದು ಹಾಕಿದ ಬೀದಿ ನಾಯಿಗಳು; ಅನೈತಿಕ ಸಂಬಂಧದ ಶಿಶುವೇ!
ಇಂಥ ಪರಿಸ್ಥಿತಿಯಲ್ಲಿ ಏನು ಮಾಡಬಹುದು?
ಪರಿಸ್ಥಿತಿಯ ಅನಿವಾರ್ಯತೆಗಳು ಕೆಲವೊಮ್ಮೆ ಈ ರೀತಿ ಮಕ್ಕಳನ್ನು ಎಸೆದು ಹೋಗುವುದಕ್ಕೆ ಕಾರಣವಾಗುತ್ತವೆ ಎನ್ನುವುದು ನಿಜ. ಆದರೆ, ಈ ಪರಿಸ್ಥಿತಿಗಳು ಎದುರಾದರೆ ಸ್ವಲ್ಪ ಸಂಯಮವನ್ನು ಕಾಪಾಡಿಕೊಂಡರೆ ಮಕ್ಕಳನ್ನು ಈ ರೀತಿ ಎಸೆದು ಹೋಗುವುದು ತಪ್ಪುತ್ತದೆ.
ಅಕ್ರಮ ಸಂಬಂಧದಿಂದಲೇ ಮಗು ಹುಟ್ಟಿರಲಿ, ಅದನ್ನು ಎಸೆಯಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿರಲಿ, ಅಂಥ ಪರಿಸ್ಥಿತಿಯಲ್ಲಿ ಸರ್ಕಾರದ ಮಹಿಳಾ ಸಹಾಯವಾಣಿ 1091 ಇಲ್ಲವೇ ಮಕ್ಕಳ ಸಹಾಯವಾಣಿ 1098ಗೆ ಕರೆ ಮಾಡಿದರೆ ಅವರು ಯಾರಿಗೂ ಗೊತ್ತಾಗದಂತೆ ಪ್ರಕರಣವನ್ನು ಪರಿಹರಿಸುತ್ತಾರೆ.