Site icon Vistara News

Book release: ನೋವಿನ ನಡುವೆಯೂ ಪ್ರೀತಿ ಹಂಚಿದ ರಾಹುಲ್‌ ಗಾಂಧಿ: ಜಿ.ಎನ್‌ ದೇವಿ; ಸುಗತ ಶ್ರೀನಿವಾಸರಾಜು ಕೃತಿ ʼಸ್ಟ್ರೇಂಜ್‌ ಬರ್ಡನ್ಸ್‌ʼ ಬಿಡುಗಡೆ

sugatha srinivasaraju1

ಬೆಂಗಳೂರು: ತಮ್ಮ ಪರಿವಾರದ ಹತ್ಯೆಗಳ ನೋವಿನ ನಡುವೆಯೂ ಸಮಾಜಕ್ಕೆ ಪ್ರೀತಿ ಹಂಚಲು ನಿರಂತರ ಪ್ರಯತ್ನ ಮಾಡಿದವರು ರಾಹುಲ್‌ ಗಾಂಧಿ (Rahul Gandhi). ಅವರ ನಡೆ ಬುದ್ಧಪ್ರಜ್ಞೆಯ ಹಾದಿಯಂತೆ ಕಾಣುತ್ತದೆ. ಅವರ ವ್ಯಕ್ತಿತ್ವ, ದ್ವಂದ್ವ, ವೈರುಧ್ಯಗಳನ್ನು ʼಸ್ಟ್ರೇಂಜ್‌ ಬರ್ಡನ್ಸ್‌ʼ ಕೃತಿ ಹಿಡಿದಿಡುತ್ತದೆ ಎಂದು ಚಿಂತಕ ಜಿ.ಎನ್‌.ದೇವಿ ಹೇಳಿದ್ದಾರೆ.

ಅವರು ಮಂಗಳವಾರ ನಗರದಲ್ಲಿ ನಡೆದ ಪತ್ರಕರ್ತ ಸುಗತ ಶ್ರೀನಿವಾಸರಾಜು (sugatha srinivasarajua) ಅವರ ಕೃತಿ ʼʼಸ್ಟ್ರೇಂಜ್‌ ಬರ್ಡನ್ಸ್‌- ದಿ ಪಾಲಿಟಿಕ್ಸ್‌ ಆಂಡ್‌ ಪ್ರೆಡಿಕಮೆಂಟ್ಸ್‌ ಆಫ್‌ ರಾಹುಲ್‌ ಗಾಂಧಿʼ (Strange Burdens: The Politics and Predicaments of Rahul Gandhi) ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕೃತಿ ಬಿಡುಗಡೆ ಮಾಡಿ ಮಾತನಾಡಿದರು.

ರಾಹುಲ್‌ ಅವರಲ್ಲಿ ಮಾನವ ಪ್ರೇಮ, ಬಡವರ ಬಗೆಗಿನ ಕಾಳಜಿ, ಕೋಮುವಾದವನ್ನು ವಿರೋಧಿಸುವ ಜಾತ್ಯತೀತ ನಿಲುವು, ಧರ್ಮಗಳ ನಡುವೆ ಸಾಮರಸ್ಯ ಮೂಡಿಸುವ ಪ್ರಯತ್ನ, ಮಾನವೀಯತೆ, ಆಧ್ಯಾತ್ಮ ಹೀಗೆ ಹಲವ ಆಯಾಮಗಳಿವೆ. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಅವರ ವ್ಯಕ್ತಿತ್ವವನ್ನು ಸಾರ್ವಜನಿಕವಾಗಿ ಕುಗ್ಗಿಸಲು ಯತ್ನಿಸಿದರೂ ರಾಹುಲ್‌ ಹಿಂದಡಿ ಇಡಲಿಲ್ಲ. ಅವರ ʼಅನಿರೀಕ್ಷಿತ ಹೊರೆʼಗಳನ್ನು ಸುಗತ ಚಿತ್ರಿಸಿದ್ದಾರೆ ಎಂದು ದೇವಿ ಹೇಳಿದರು.

ಅನುಕೂಲಕರವಾಗಿ ಇರುವ ಸಾಧ್ಯತೆಯನ್ನು ಬಿಟ್ಟುಕೊಟ್ಟು ರಾಹುಲ್‌ ಗಾಂಧಿಯವರು ಪ್ರತೀಕಾರದ ರಾಜಕೀಯಕ್ಕೆ ಎದೆಯೊಡ್ಡಿ ಸಾಗುತ್ತಿದ್ದಾರೆ. 2004ರಲ್ಲಿ ರಾಜಕೀಯಕ್ಕೆ ಬಂದ ದಿನದಿಂದ ಭಾರತ್‌ ಜೋಡೋ ಯಾತ್ರೆಯವರೆಗಿನ ಅವರ ಏಳು ಬೀಳುಗಳನ್ನು ವಾಸ್ತವಿಕವಾಗಿ ʼಸ್ಟ್ರೇಂಜ್‌ ಬರ್ಡನ್ಸ್‌ ಕೃತಿ ಕಟ್ಟಿಕೊಟ್ಟಿದೆ ಎಂದು ಇತಿಹಾಸಜ್ಞ ಸಂಜೀವ್‌ ಜೈನ್‌ ಹೇಳಿದರು.

ಇಂದಿರಾ ಗಾಂಧಿಯವರಿಂದ ಇಂದಿನವರೆಗೆ ಬದಲಾಗುತ್ತ ಬಂದಿರುವ ರಾಜಕೀಯ ಚಿತ್ರಣವನ್ನು ಈ ಕೃತಿ ಮಾಡಿಕೊಡುತ್ತಿದೆ. ಇದು ಬರೀ ರಾಹುಲ್‌ ಗಾಂಧಿ ಅವರ ಜೀವನಚಿತ್ರಣವಲ್ಲ. ಇದು ಈಗಿನ ಸಾಮಾಜಿಕ, ರಾಜಕೀಯ ವಿಶ್ಲೇಷಣೆಯ ದಾಖಲೆಯಾಗಿದೆ ಎಂದು ನಿವೃತ್ತ ಐಎಎಸ್‌ ಅಧಿಕಾರಿ ಚಿರಂಜೀವಿ ಸಿಂಗ್‌ ನುಡಿದರು.

ಕೃತಿ ರಚನೆಯ ಸಂದರ್ಭ ದೇಶದ ರಾಜಕೀಯ ಬೆಳವಣಿಗೆಗಳನ್ನು ಮತ್ತಷ್ಟು ಆಳವಾಗಿ ಅರಿಯಲು, ವಿಶ್ಲೇಷಿಸಲು ಹಾದಿ ಮಾಡಿಕೊಟ್ಟಿತು ಎಂದು ಕೃತಿಕಾರ ಸುಗತ ಶ್ರೀನಿವಾಸರಾಜು ನುಡಿದರು. ನಟಿ ಪದ್ಮಾವತಿ ರಾವ್‌ ಸಮಾರಂಭದಲ್ಲಿ ಇದ್ದರು. ಕೃತಿಯನ್ನು ಪೆಂಗ್ವಿನ್‌ ಇಂಡಿಯಾ ಪ್ರಕಟಿಸಿದೆ.

ಇದನ್ನೂ ಓದಿ: Book Release : ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜು ರಚಿತ ‘ರಾಹುಲ್‌ ಗಾಂಧಿ’ ಕುರಿತ ಕೃತಿ ಸೆ.12ರಂದು ಬಿಡುಗಡೆ

Exit mobile version