Site icon Vistara News

New Rules : ಬೆಂಗಳೂರು ಪೊಲೀಸರು ಇನ್ನು ಮುಂದೆ ವಾಟ್ಸ್‌ ಆ್ಯಪ್ ಡಿಪಿಗೆ ಫೋಟೊ ಹಾಕುವಂತಿಲ್ಲ

Bangalore police

#image_title

ಬೆಂಗಳೂರು: ಪೊಲೀಸರು ಇನ್ನು ಮುಂದೆ ತಮ್ಮ ಮೊಬೈಲ್‌ನ ವಾಟ್ಸ್‌ ಆ್ಯಪ್ ಡಿಪಿಗೆ ತಮ್ಮ ಫೋಟೊವಾಗಲಿ, ಮಕ್ಕಳ ಫೋಟೊವಾಗಲೀ ಅಥವಾ ಯಾವುದೇ ಫೋಟೊವನ್ನು ಹಾಕುವಂತಿಲ್ಲ ಎಂಬ ಹೊಸ ನಿಯಮ (New Rules) ಬಂದಿದೆ.

ಹೀಗೊಂದು ಸೂಚನೆಯನ್ನು ಬೆಂಗಳೂರು ಆಗ್ನೇಯ ವಿಭಾಗದ ಪೊಲೀಸರಿಗೆ ನೀಡಲಾಗಿದೆ. ಈ ಹೊಸ ಸೂಚನೆಯ ಮುಂದುವರಿದ ಭಾಗವಾಗಿ ಪೊಲೀಸರಿಗೆ ಇನ್ನೊಂದು ಸಂಕಷ್ಟವೂ ಇದೆ. ಅವರ ಮೊಬೈಲ್‌ಗೆ ಬರುವ ಕರೆಯನ್ನು ರಿಸೀವ್‌ ಮಾಡದೆ ಇದ್ದರೂ ಸಂಕಷ್ಟ ಎದುರಾಗಲಿದೆ!

ಹಾಗಿದ್ದರೆ ಈ ಡಿಪಿಗೆ ಫೋಟೊ ಹಾಕದಿರುವುದಕ್ಕೂ ಕಾಲ್‌ ರಿಸೀವ್‌ ಮಾಡದೆ ಇದ್ದರೆ ಎದುರಾಗುವ ಸಂಕಷ್ಟಕ್ಕೂ ಏನು ಸಂಬಂಧ ಅಂತೀರಾ? ಇಲ್ಲಿದೆ ವಿವರ.

ನಗರದ ಆಗ್ನೇಯ ವಿಭಾಗ ಡಿಸಿಪಿ ಸಿ.ಕೆ ಬಾಬಾ ಅವರು ಬುಧವಾರದಿಂದಲೇ ಒಂದು ಹೊಸ ಪ್ರಯೋಗ ಆರಂಭಿಸಿದ್ದಾರೆ. ಆಗ್ನೇಯ ವಿಭಾಗದ ಎಲ್ಲಾ ಪೊಲೀಸ್ ಆಫೀಸರ್ ಗಳಿಗೆ ವಾಟ್ಸ್‌ ಆ್ಯಪ್ ಡಿಪಿಗಳಿಗೆ ಪೋಟೊ ಹಾಕದಂತೆ ಡಿಸಿಪಿ ಖಡಕ್ ಸೂಚನೆ ನೀಡಿದ್ದಾರೆ.

ಸಿ.ಕೆ.ಬಾಬಾ ಸೂಚನೆ ಹಿಂದೆ ಒಂದು ಪ್ಲ್ಯಾನ್‌ ಇದೆ. ಅದೇನೆಂದರೆ ಡಿಪಿ ಜಾಗದಲ್ಲಿ ಲೋಕಸ್ಪಂದನ ಎಂಬ ಕ್ಯೂಆರ್‌ ಕೋಡ್‌ ಹಾಕುವುದು. ಲೋಕ ಸ್ಪಂದನ ಎನ್ನುವುದು ಪೊಲೀಸರು ಜನರ ಕರೆಗಳಿಗೆ ಹೇಗೆ ಸ್ಪಂದಿಸುತ್ತಾರೆ, ಕಾಲ್‌ ರಿಸೀವ್‌ ಮಾಡುತ್ತಾರಾ ಎಂಬುದನ್ನು ಗುರುತಿಸಲು ಮಾಡಿದ ಹೊಸ ಪ್ರಯೋಗ. ಇದೊಂದು ಕ್ಯೂಆರ್‌ ಕೋಡ್‌ ರೂಪದಲ್ಲಿ ಇರುತ್ತದೆ.

ಲೋಕಸ್ಪಂದನ ಹೇಗೆ ಕೆಲಸ ಮಾಡುತ್ತದೆ?

ಪ್ರತಿಯೊಬ್ಬ ಪೊಲೀಸರೂ ಲೋಕಸ್ಪಂದನ ಕ್ಯೂಆರ್‌ ಕೋಡ್‌ನ್ನು ತಮ್ಮ ಡಿಪಿಯಲ್ಲಿ ಹಾಕಿಕೊಳ್ಳಬೇಕು. ಒಂದು ವೇಳೆ ಪೊಲೀಸ್‌ ಸಿಬ್ಬಂದಿ ಫೋನ್‌ ರಿಸೀವ್‌ ಮಾಡದೆ ಇದ್ದರೆ ಅವರ ಡಿಪಿಯಲ್ಲಿರುವ ಕ್ಯೂಆರ್‌ ಕೋಡ್‌ ಅನ್ನು ಸ್ಕ್ಯಾನ್‌ ಮಾಡಿ ದೂರ ನೀಡಲು ಅವಕಾಶ ನೀಡಲಾಗಿದೆ.

ಅಂದರೆ ಒಬ್ಬ ಸಿಬ್ಬಂದಿ ಪದೇಪದೆ ಕಾಲ್‌ ರಿಸೀವ್‌ ಮಾಡುತ್ತಿಲ್ಲ ಎಂದರೆ ಸಾರ್ವಜನಿಕರು ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿ ಮೆಸೇಜ್‌ ಮಾಡಬಹುದು. ಈ ಮೆಸೇಜ್‌ ತಲುಪುವುದು ಸೀದಾ ಡಿಸಿಪಿ ಸಿ.ಕೆ. ಬಾಬಾ ಅವರ ಮೊಬೈಲ್‌ಗೆ!

ಯಾವ ಅಧಿಕಾರಿ ಕಾಲ್‌ ರಿಸೀವ್‌ ಮಾಡ್ತಿಲ್ಲ, ಪದೇಪದೆ ಈ ರೀತಿ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ನೇರವಾಗಿ ಡಿಸಿಪಿ ಅವರಿಗೆ ತಲುಪುತ್ತದೆ. ಅವರು ಈ ಅಧಿಕಾರಿಗಳಿಗೆ ಎಚ್ಚರಿಕೆ ನೀಡಬಹುದು, ಕ್ರಮ ಕೈಗೊಳ್ಳಬಹುದು. ಹೀಗೆ ಲೋಕಸ್ಪಂದನ ಕ್ಯೂ ಆರ್ ಕೋಡ್ ಮೂಲಕ ಪೊಲೀಸರು ಇನ್ನಷ್ಟು ಜನಸ್ನೇಹಿಯಾಗಲು ಆಗ್ನೇಯ ವಿಭಾಗ ಡಿಸಿಪಿ ಸಿ.ಕೆ.ಬಾಬಾ ಹೊಸ ಯೋಜನೆ ಮಾಡಿದ್ದಾರೆ.

ಇದು ಎಷ್ಟು ಯಶಸ್ವಿಯಾಗುತ್ತದೆ ಎನ್ನುವುದರ ಆಧಾರದ ಮೇಲೆ ಅದನ್ನು ಬೇರೆ ಕಡೆಗೆ ವಿಸ್ತರಿಸುವ ಬಗ್ಗೆ ಯೋಜನೆ ಮಾಡಬಹುದು.

ಇದನ್ನೂ ಓದಿ : ಪಾಸ್‌ಪೋರ್ಟ್‌ ಪೊಲೀಸ್ ದೃಢೀಕರಣಕ್ಕಾಗಿ mPassport Police App ಲಾಂಚ್

Exit mobile version