ಮಂಗಳೂರು: ದಕ್ಷಿಣ ಕನ್ನಡದಲ್ಲಿ ಗುರುವಾರ ಸಂಜೆಯಿಂದ ಹೊಸ ನಿಯಮ ಜಾರಿಗೆ ಬರಲಿದೆ. ಇದರ ಪ್ರಕಾರ ದ್ವಿಚಕ್ರ ವಾಹನದಲ್ಲಿ ಇಬ್ಬರು ಪ್ರಯಾಣಿಸುವಂತಿಲ್ಲ. ಒಂದು ವಾಹನದಲ್ಲಿ ಒಬ್ಬ ಮಾತ್ರ ಕುಳಿತು ಪ್ರಯಾಣಿಸಬಹುದು. ಮಂಗಳೂರಿನಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಅವರು ಈ ಹೊಸ ನಿಯಮವನ್ನು ಘೋಷಿಸಿದ್ದಾರೆ.
ಯಾಕೆ ಈ ನಿಯಮ?
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹತ್ತು ದಿನಗಳ ಅವಧಿಯಲ್ಲಿ ಮೂರು ಕೊಲೆಗಳು ಸಂಭವಿಸಿವೆ. ಬೆಳ್ಳಾರೆ ಸಮೀಪ ಕಳಂಜದ ಮಸೂದ್, ಪ್ರವೀಣ್ ನೆಟ್ಟಾರು ಮತ್ತು ಸುರತ್ಕಲ್ ಫಾಝಿಲ್ ಅವರನ್ನು ದುಷ್ಕರ್ಮಿಗಳು ಕೊಂದು ಹಾಕಿದ್ದಾರೆ. ಈ ರೀತಿ ಸಾಲು ಸಾಲು ಹತ್ಯೆಗಳಿಂದ ದಕ್ಷಿಣ ಕನ್ನಡ ಜಿಲ್ಲೆ ಬೂದಿ ಮುಚ್ಚಿದ ಕೆಂಡದಂತಾಗಿದೆ. ಯಾವಾಗ ಎಲ್ಲಿ ಹಲ್ಲೆ, ಕೊಲೆಗಳು ಸಂಭವಿಸುತ್ತವೆ ಎಂದು ಹೇಳಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರವೀಣ್ ನೆಟ್ಟಾರು ಅವರನ್ನು ದ್ವಿಚಕ್ರ ವಾಹನದಲ್ಲಿ ಬಂದ ಮೂವರು ಕೊಲೆ ಮಾಡಿದ್ದರು. ದ್ವಿಚಕ್ರ ವಾಹನದಲ್ಲಿ ಇಬ್ಬರು ಬಂದು, ಒಬ್ಬ ದುಷ್ಕೃತ್ಯ ನಡೆಸಿ ಇನ್ನೊಬ್ಬನ ಜತೆ ಪರಾರಿಯಾಗುವುದು ಅತ್ಯಂತ ಸುಲಭದ ದಾರಿಯಾಗಿದೆ. ಇದನ್ನೇ ಬಳಸಿಕೊಂಡು ಕೆಲವರು ದುಷ್ಕೃತ್ಯ ನಡೆಸಬಹುದು ಎನ್ನುವ ಗುಮಾನಿ ಪೊಲೀಸ್ ಇಲಾಖೆಯಲ್ಲಿದೆ. ಹೀಗಾಗಿ ದ್ವಿಚಕ್ರ ವಾಹನ ಸಂಚಾರಕ್ಕೆ ಸಂಬಂಧಿಸಿ ಹೊಸ ನಿಯಮ ಜಾರಿಗೆ ತರಲು ನಿರ್ಧರಿಸಲಾಗಿದೆ. ಅದರಲ್ಲೂ ಮುಖ್ಯವಾಗಿ ಸಂಜೆ ಮತ್ತು ರಾತ್ರಿಯ ಹೊತ್ತು ಇಂಥ ಅಪಾಯಗಳು ಹೆಚ್ಚು ಎನ್ನಲಾಗಿದೆ.
ವಿನಾಯಿತಿಯೂ ಇದೆ
ದ್ವಿಚಕ್ರ ವಾಹನ ಸಂಚಾರಕ್ಕೆ ಸಂಬಂಧಿಸಿದ ಈ ನಿಯಮದಲ್ಲಿ ಕೆಲವು ವಿನಾಯಿತಿಗಳೂ ಇವೆ. ವಯಸ್ಕ ಪುರುಷರಿಬ್ಬರೂ ಯಾವುದೇ ಕಾರಣಕ್ಕೆ ಒಂದು ದ್ವಿಚಕ್ರ ವಾಹನದಲ್ಲಿ ಹೋಗುವಂತಿಲ್ಲ. ಆದರೆ, ಹದಿನೆಂಟು ವರ್ಷದ ಕೆಳಗಿನ ಮಕ್ಕಳು, ಹಿರಿಯ ನಾಗರಿಕರು ಮತ್ತು ಮಹಿಳೆಯರಿಗೆ ವಿನಾಯಿತಿ ಇದೆ. ಅಂದರೆ, ಪುರುಷ ಹಿಂಬದಿ ಸವಾರರಿಗೆ ಮಾತ್ರ ನಿಯಮ ಅನ್ವಯವಾಗಲಿದೆ.
ಒಂದು ವಾರದ ಮಟ್ಟಿಗೆ ನಿಯಮ
ದ್ವಿಚಕ್ರದ ಹಿಂಬದಿ ಸವಾರರು ಅಪಾಯಗಳನ್ನು ಸೃಷ್ಟಿಸುವ ಸಾಧ್ಯತೆ ಹೆಚ್ಚು ಎಂಬ ನೆಲೆಯಲ್ಲಿ ಜಾರಿಗೆ ತಂದಿರುವ ಈ ಕಾನೂನು ಒಂದು ವಾರದ ಮಟ್ಟಿಗೆ ಜಾರಿಯಲ್ಲಿರುತ್ತದೆ ಎಂದು ಅಲೋಕ್ ಕುಮಾರ್ ತಿಳಿಸಿದ್ದಾರೆ. ಬೇರೆ ರಾಜ್ಯದಲ್ಲೂ ಈ ನಿಯಮ ಜಾರಿ ಮಾಡಲಾಗಿತ್ತು. ಆಗಲೂ ಪುರುಷ ಸವಾರರ ಡಬಲ್ ಸಂಚಾರಕ್ಕೆ ಅನುಮತಿ ನಿರಾಕರಿಸಲಾಗಿತ್ತು. ಒಂದು ವೇಳೆ ಈ ನಿಯಮ ಮುರಿದರೆ ಏನು ಕ್ರಮ ಎನ್ನುವುದು ಸ್ಪಷ್ಟವಾಗಿಲ್ಲ.
ಆಕ್ಷೇಪ, ಟ್ರೋಲ್‌ಗಳ ಸುರಿಮಳೆ
ಈ ನಡುವೆ, ಹೊಸ ನಿಯಮಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಒಂದೇ ಮನೆಯ ಇಬ್ಬರು ಜತೆಯಾಗಿ ಸಾಗಬಾರದು ಅನ್ನುವ ನಿಯಮ ಸರಿಯಲ್ಲ ಎನ್ನುವುದು ಹೆಚ್ಚಿನವರ ವಾದ. ಕೆಲವು ಕಡೆಗಳಲ್ಲಿ ಉದ್ಯೋಗಕ್ಕೆ ಹೋಗುವಾಗ ಇಬ್ಬರು ಜತೆಯಾಗಿ ಒಂದೇ ಬೈಕ್‌ನಲ್ಲಿ ಹೋಗುವ ಪರಿಪಾಠವಿದೆ. ಅದಕ್ಕೆ ತಡೆ ಹಾಕುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಅದರೆ, ಮಹಿಳೆಯರು, ಹಿರಿಯರು ಹಾಗೂ ಮಕ್ಕಳಿಗೆ ವಿನಾಯಿತಿ ನೀಡಿರುವುದರಿಂದ ಇದು ದೊಡ್ಡ ಸಮಸ್ಯೆಯೇನಲ್ಲ ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ.
ಈ ನಡುವೆ ಕೆಲವು ಟ್ರೋಲ್‌ಗಳು ಕೂಡಾ ಗಮನ ಸೆಳೆಯುತ್ತಿವೆ. ʻದ್ವಿಚಕ್ರ ವಾಹನಗಳಲ್ಲಿ ಒಂಟಿಯಾಗಿ ಹೋದರೆ ಯಾರಾದರೂ ಹೊಂಚು ಹಾಕಿ ಕೊಲೆ ಮಾಡಬಹುದು ಎಂದು ಭಯವಾಗುತ್ತದೆ. ಅದೇ ಇಬ್ಬರು ಹೋದರೆ ಪೊಲೀಸರು ಹೊಂಚು ಹಾಕಿ ಹಿಡಿಯಬಹುದು ಎಂದು ಭಯವಾಗುತ್ತದೆʼ ಎಂದು ಒಬ್ಬರು ಟ್ರೋಲ್ ಮಾಡಿದ್ದಾರೆ. ಅಂತೂ ದಕ್ಷಿಣ ಕನ್ನಡದ ಹೊಸ ನಿಯಮ ಸಾಕಷ್ಟು ಚರ್ಚೆಗಳಿಗೆ ಕಾರಣವಾಗಿದೆ.
ನಿರ್ಬಂಧ ರಾತ್ರಿಗೆ ಮಾತ್ರ ಸೀಮಿತ
ದಕ್ಷಿಣ ಕನ್ನಡದಲ್ಲಿ ಜಾರಿ ಮಾಡಲಾದ ಹೊಸ ನಿಯಮಕ್ಕೆ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆಯೇ ಸ್ಪಷ್ಟೀಕರಣ ನೀಡಿರುವ ಎಡಿಜಿಪಿ ಅಲೋಕ್ ಕುಮಾರ್ ಅವರು, ‘ಬೈಕ್ ನಲ್ಲಿ ಹಿಂಬದಿ ಸವಾರರ ನಿರ್ಬಂಧ ಆದೇಶ ರಾತ್ರಿ ಹೊತ್ತು ಮಾತ್ರ’ ಎಂದು ಸ್ಪಷ್ಟನೆ ನೀಡಿದ್ದಾರೆ. ಸಂಜೆ 6 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಮಾತ್ರ ಈ ನಿರ್ಬಂಧ ಜಾರಿಯಲ್ಲಿರುತ್ತದೆ. ಹಲ್ಲೆ ಪ್ರಕರಣಗಳು ಸಂಜೆ ವೇಳೆ ನಡೆಯುವ ಕಾರಣ ಬ್ರೇಕ್ ಮಾಡಲು ಈ ಆದೇಶ ಜಾರಿಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.