ಬೆಂಗಳೂರು: ಇನ್ನು ಮುಂದೆ ರಾಜ್ಯದ ಯಾವುದೇ ಹೆದ್ದಾರಿಯಲ್ಲಿ (karnataka highway) ಅತಿ ವೇಗದ ವಾಹನ ಚಾಲನೆಯು ನಿಮ್ಮನ್ನು ಕಾನೂನು ತೊಂದರೆಯಲ್ಲಿ (New Traffic Rules) ಸಿಕ್ಕಿಸಿ ಹಾಕಬಹುದು. ಯಾಕೆಂದರೆ ಕರ್ನಾಟಕ ಪೊಲೀಸರು (karnataka police) ಈಗ ಹೆದ್ದಾರಿಯಲ್ಲಿ ಅತಿ ವೇಗದ ಮತ್ತು ನಿರ್ಲಕ್ಷ್ಯದ ವಾಹನ ಚಾಲನೆಯನ್ನು (Excessive speed and careless driving) ನಿಯಂತ್ರಿಸಲು ಮುಂದಾಗಿದ್ದಾರೆ. ಆಗಸ್ಟ್ 1ರಿಂದ ಜಾರಿಯಾಗುವಂತೆ ಪ್ರತಿ ಗಂಟೆಗೆ 130 ಕಿ.ಮೀ ಎಂಬ ಷರತ್ತನ್ನು ವಿಧಿಸಲಾಗಿದ್ದು, ಇದನ್ನು ಮೀರಿ ವಾಹನ ಚಲಾಯಿಸಿದರೆ ವಾಹನ ಮತ್ತು ಚಾಲಕರ ವಿರುದ್ಧ ಎಫ್ ಐಆರ್ ದಾಖಲಿಸಲು ನಿರ್ಧರಿಸಿದ್ದಾರೆ.
ಈ ನಿಯಮ ಉಲ್ಲಂಘಿಸುವವರಿಗೆ ಆರು ತಿಂಗಳವರೆಗೆ ಜೈಲು ಶಿಕ್ಷೆ ಅಥವಾ 1,000 ರೂ. ವರೆಗೆ ದಂಡ ಅಥವಾ ಎರಡನ್ನೂ ವಿಧಿಸಲಾಗುತ್ತದೆ. ಗುರುವಾರವೇ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ 155 ವಾಹನಗಳು ಗಂಟೆಗೆ 130 ಕಿಲೋ ಮೀಟರ್ ವೇಗದ ಮಿತಿಯನ್ನು ಮೀರಿದ್ದು ಕೆಮರಾದಲ್ಲಿ ಸೆರೆಯಾಗಿದೆ. ಸಿಕ್ಕಿಬಿದ್ದ ವಾಹನಗಳಲ್ಲಿ ಒಂದು ಕೆಎಸ್‌ಆರ್‌ಟಿಸಿ ಬಸ್ ಕೂಡ ಸೇರಿದ್ದು, ಇದು ಗಂಟೆಗೆ 140 ಕಿ.ಮೀ. ವೇಗದಲ್ಲಿ ಸಂಚರಿಸುತ್ತಿತ್ತು.
ವೇಗದ ಮಿತಿ ಎಷ್ಟಿದೆ?
ರಾಜ್ಯದ ಅನೇಕ ಹೆದ್ದಾರಿಗಳಲ್ಲಿ ವೇಗದ ಮಿತಿಗಳು ಪ್ರತಿ ಗಂಟೆಗೆ 130 ಕಿ.ಮೀ.ಗಿಂತ ಕಡಿಮೆಯಿದೆ. ಬೆಂಗಳೂರು- ಮೈಸೂರು ಹೆದ್ದಾರಿ ಮತ್ತು ಬೆಂಗಳೂರು- ಪುಣೆ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ವೇಗದ ಮಿತಿಗಳು ಹೀಗಿದೆ.
- – ಪ್ರತಿ ಗಂಟೆಗೆ 80ರಿಂದ 100 ಕಿ.ಮೀ. ಆಗಿದ್ದು, ವಾಹನ ಚಾಲಕರು ಗಂಟೆಗೆ 130 ಕಿ.ಮೀ. ಮೀರಿದರೆ ಹೊಸ ನಿಯಮ ಅನ್ವಯಿಸಲಾಗುತ್ತದೆ.
- – ಅತಿ ವೇಗ ಮತ್ತು ಅಸುರಕ್ಷಿತ ವಾಹನ ಚಲನೆಯಿಂದ ಶೇ. 90ರಷ್ಟು ಮಾರಣಾಂತಿಕ ರಸ್ತೆ ಅಪಘಾತಗಳಿಗೆ ಕಾರಣವಾಗುತ್ತಿದೆ. ಹೀಗಾಗಿ ಅತಿ ವೇಗವಾಗಿ ವಾಹನ ಚಲಾಯಿಸುವ ವಾಹನ ಚಾಲಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ರಾಜ್ಯ ಪೊಲೀಸರು ಮುಂದಾಗಿದ್ದಾರೆ.
- – ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ಈ ಕುರಿತು ಪ್ರತಿಕ್ರಿಯಿಸಿ ನಾವು ಬೆಂಗಳೂರು- ಮೈಸೂರು ಹೆದ್ದಾರಿಯ ಉದ್ದಕ್ಕೂ ಸ್ಪೀಡ್ ಲೇಸರ್ ಗನ್‌ಗಳನ್ನು ಸ್ಥಾಪಿಸಿದ್ದೇವೆ. ಇದು ರಾತ್ರಿಯೂ ವಾಹನಗಳ ವೇಗವನ್ನು ದಾಖಲಿಸುತ್ತದೆ. ಸ್ವಯಂ ಚಾಲಿತ ನಂಬರ್ ಪ್ಲೇಟ್ ಗುರುತಿಸುವಿಕೆ, ಕೆಮರಾಗಳು, ಹೆದ್ದಾರಿಯ ಉದ್ದಕ್ಕೂ ಅತಿ ವೇಗದ ವಾಹನಗಳ ಚಿತ್ರಗಳನ್ನು ಅವುಗಳ ವೇಗದೊಂದಿಗೆ ರೆಕಾರ್ಡ್ ಮಾಡಲು ನಮಗೆ ಸಹಾಯ ಮಾಡುತ್ತದೆ ಎಂದಿದ್ದಾರೆ.
ಇದನ್ನೂ ಓದಿ: FASTag new rule: ಫಾಸ್ಟ್‌ಟ್ಯಾಗ್ ಬಳಕೆದಾರರೇ ಗಮನಿಸಿ; ನಾಳೆಯಿಂದ ಹೊಸ ನಿಯಮ ಜಾರಿ!
ಕೆಮರಾ ಮತ್ತು ಲೇಸರ್ ಗನ್
ವಿವಿಧ ಜಿಲ್ಲೆಗಳು ಮತ್ತು ನಗರ ಪೊಲೀಸರಿಗೆ ಒಟ್ಟು 155 ಸ್ಪೀಡ್ ಲೇಸರ್ ಗನ್‌ಗಳನ್ನು ವಿತರಿಸಲಾಗಿದೆ. ಅಂದಾಜಿನ ಪ್ರಕಾರ, ಪ್ರತಿ ಜಿಲ್ಲೆಗೆ ಐದರಿಂದ ಆರು ಸ್ಪೀಡ್ ಲೇಸರ್ ಗನ್ ಸಿಗುತ್ತದೆ. ಜಿಲ್ಲೆಗಳಲ್ಲಿ ಪೊಲೀಸ್ ಸೂಪರಿಂಟೆಂಡೆಂಟ್ ಮತ್ತು ನಗರಗಳಲ್ಲಿನ ಇತರ ಹಿರಿಯ ಹೆದ್ದಾರಿ ಅಧಿಕಾರಿಗಳಿಗೆ ಈ ಲೇಸರ್ ಗನ್‌ಗಳನ್ನು ಎಲ್ಲಿ, ಹೇಗೆ ಬಳಸಬೇಕು ಎಂಬುದರ ಕುರಿತು ಮಾಹಿತಿ ನೀಡಲಾಗುತ್ತದೆ. ಎಫ್‌ಐಆರ್‌ಗಳನ್ನು ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 281 ರ ಅಡಿಯಲ್ಲಿ ದಾಖಲಿಸಲಾಗುತ್ತದೆ ಎಂದರು.