ಚಿಕ್ಕಬಳ್ಳಾಪುರ/ಮೈಸೂರು/ಚಾಮರಾಜನಗರ: ಹೊಸ ವರ್ಷಾಚರಣೆ (New Year 2023) ಹಿನ್ನೆಲೆ ವಿವಿಧ ಜಿಲ್ಲೆಗಳ ಕೆಲವು ಪ್ರವಾಸಿ ತಾಣಗಳಿಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗುವ ಸಾಧ್ಯತೆ ಇರಲಿದ್ದು ಮುಂಜಾಗ್ರತಾ ಕ್ರಮವಾಗಿ ನಿರ್ಬಂಧ ಹೇರಲಾಗಿದೆ.
ಹೊಸ ವರ್ಷ ಆಚರಣೆಗೆ ಖ್ಯಾತ ನಂದಿಗಿರಿಧಾಮಕ್ಕೆ ಬರುವ ಯೋಜನೆ ಇದ್ದರೆ ಕೂಡಲೇ ನಿಮ್ಮ ನಿರ್ಧಾರವನ್ನು ಬದಲಾಯಿಸಿಕೊಳ್ಳಿ. ಯಾಕೆಂದರೆ ಶನಿವಾರ ಸಂಜೆ ಆರು ಗಂಟೆಯಿಂದ ರಾತ್ರಿ ಹನ್ನೆರಡು ಗಂಟೆವರೆಗೆ ನಂದಿ ಗಿರಿಧಾಮಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ನಿಷೇಧಾಜ್ಞೆ ಹೊರಡಿಸಿದ್ದಾರೆ. ಪ್ರತಿ ವೀಕೆಂಡ್‌ನಲ್ಲಿ ನಂದಿ ಗಿರಿಧಾಮದ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಪ್ರವಾಸಿಗರು ಬರುತ್ತಿದ್ದರು. ಆದರೆ ಹೊಸ ವರ್ಷಾಚರಣೆಗೆ ಗುಂಪಾಗಿ ಬರುವವರು ಮದ್ಯ ಸೇವನೆ ಮಾಡಿ ಪಾರ್ಟಿ ಮಾಡುವುದು ಮತ್ತು ಪ್ಲಾಸ್ಟಿಕ್ ಬಾಟಲಿಗಳನ್ನು ಎಲ್ಲೆಂದರಲ್ಲಿ ಬಿಸಾಡಿ ನಂದಿಗಿರಿಧಾಮದ ಸೌಂದರ್ಯಕ್ಕೆ ಹಾನಿ ಉಂಟು ಮಾಡುವುದನ್ನು ತಡೆಯಲು, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಎನ್.ಎಂ. ನಾಗರಾಜ್ ನಂದಿಬೆಟ್ಟಕ್ಕೆ ನಿಷೇಧ ಹೇರಿದ್ದಾರೆ. ಜನವರಿ ೧ರ ಬೆಳಗ್ಗೆ 6 ಗಂಟೆಯಿಂದ ಎಂದಿನಂತೆ ನಂದಿಬೆಟ್ಟ ಪ್ರವೇಶಕ್ಕೆ ಅವಕಾಶ ಇದ್ದು ಹೊಸ ವರ್ಷವನ್ನು ಸಂಭ್ರಮದಿಂದ ಕಳೆಯಬಹುದಾಗಿದೆ.
ಮುತ್ತತ್ತಿ, ಬಲಮುರಿ ಫಾಲ್ಸ್‌ಗೆ ಪ್ರವಾಸಿಗರ ನಿರ್ಬಂಧ
ಮಂಡ್ಯದ ಕಾವೇರಿ ನದಿ ದಂಡೆಯಲ್ಲಿ ಹೊಸ ವರ್ಷಾಚರಣೆ ಸಂಭ್ರಮಕ್ಕೆ ಬ್ರೇಕ್ ಹಾಕಲಾಗಿದೆ. ಪ್ರಸಿದ್ಧ ಪ್ರವಾಸಿ ತಾಣಗಳಾದ ಮುತ್ತತ್ತಿ ಹಾಗೂ ಬಲಮುರಿಗೆ ಪ್ರವಾಸಿಗರ ನಿರ್ಬಂಧ ಹೇರಲಾಗಿದೆ. 2 ದಿನಗಳ ನಿಷೇಧಾಜ್ಞೆ ಹೇರಿ ಮಳವಳ್ಳಿ ಮತ್ತು ಶ್ರೀರಂಗಪಟ್ಟಣ ತಹಸೀಲ್ದಾರ್ ಆದೇಶ ಹೊರಡಿಸಿದ್ದಾರೆ. ಮಳವಳ್ಳಿ ತಹಸೀಲ್ದಾರ್ ಎಂ.ವಿಜಯಣ್ಣ ಹಾಗೂ ಶ್ರೀರಂಗಪಟ್ಟಣ ತಾಲೂಕಿನ ತಹಸೀಲ್ದಾರ್ ಶ್ವೇತಾ ರವೀಂದ್ರ ಆದೇಶ ಹೊರಡಿಸಿದ್ದಾರೆ. ಡಿ.31 ರ ಬೆಳಗ್ಗೆ 6 ಗಂಟೆಯಿಂದ ಜ. 1 ರ ಮಧ್ಯರಾತ್ರಿ 12ರ ವರೆಗೆ ನಿಷೇಧ ಮಾಡಲಾಗಿದೆ.
ಬಂಡೀಪುರ ಕಾರ್ಟೇಜ್, ಗೆಸ್ಟ್ ಹೌಸ್ ಪ್ರವೇಶಕ್ಕೆ ನಿರ್ಬಂಧ
ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿರುವ ಅರಣ್ಯ ಇಲಾಖೆಯ ಕಾರ್ಟೇಜ್, ಗೆಸ್ಟ್ ಹೌಸ್‌ಗೆ ಪ್ರವೇಶ ನಿರ್ಬಂಧ ಹಾಕಲಾಗಿದೆ. ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತಾರಣ್ಯಕ್ಕೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ಶನಿವಾರ ಭಾನುವಾರ ರೂಮ್‌ಗಳು ಸಾರ್ವಜನಿಕರಿಗೆ ಅಲಭ್ಯವಾಗಿರಲಿದೆ. ಹೊಸ ವರ್ಷದ ಮೋಜು ಮಸ್ತಿ ಹೆಸರಿನಲ್ಲಿ ಪರಿಸರಕ್ಕೆ ಧಕ್ಕೆಯಾಗಬಾರದೆಂಬ ಕಾರಣಕ್ಕೆ ರೂಮ್ ಬಂದ್ ಮಾಡಲಾಗಿದೆ. ಆದರೆ ಪ್ರವಾಸಿಗರಿಗೆ ಎಂದಿನಂತೆ ಸಫಾರಿ ಇರಲಿದ್ದು, ಕೋವಿಡ್ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಬಂಡೀಪುರ ಸಿಎಫ್ ರಮೇಶ್ ಕುಮಾರ್ ಮನವಿ ಮಾಡಿದ್ದಾರೆ.
ಚಾಮುಂಡಿಬೆಟ್ಟಕ್ಕೂ ಪ್ರವೇಶವಿಲ್ಲ
ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಹೊಸ ವರ್ಷ ಆಚರಣೆಗೆ ಬ್ರೇಕ್ ಹಾಕಲಾಗಿದೆ. ಚಾಮುಂಡಿಬೆಟ್ಟ ಪ್ರವೇಶಕ್ಕೆ ಸಾರ್ವಜನಿಕರಿಗೆ ನಿರ್ಬಂಧ ಹೇರಲಾಗಿದೆ. ಶನಿವಾರ (ಡಿ.31) ರಾತ್ರಿ 9 ಗಂಟೆಯಿಂದ 2023ರ ಜನವರಿ 1ರ ಬೆಳಗ್ಗೆ 5 ಗಂಟೆಯವರೆಗೆ ನಿರ್ಬಂಧ ವಿಧಿಸಿ ಮೈಸೂರು ಪೊಲೀಸ್ ಕಮಿಷನರ್ ರಮೇಶ್ ಬಾನೋತ್ ಆದೇಶಿಸಿದ್ದಾರೆ. ಚಾಮುಂಡಿಬೆಟ್ಟದ ವ್ಯೂ ಪಾಯಿಂಟ್ ಬಳಿ ಹೆಚ್ಚು ಜನ ಸೇರುವುದರಿಂದ ಮುಂಜಾಗ್ರತಾ ಕ್ರಮವಾಗಿ ನಿರ್ಬಂಧ ವಿಧಿಸಲಾಗಿದೆ. ಚಾಮುಂಡಿ ಬೆಟ್ಟದ ನಿವಾಸಿ, ಸಿಬ್ಬಂದಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಇದೆ.
ದೇವರಾಯನದುರ್ಗ, ನಾಮದಚಿಲುವೆಯೂ ಬಂದ್
ತುಮಕೂರಿನ ಪ್ರವಾಸಿ ತಾಣಗಳಾದ ದೇವರಾಯನದುರ್ಗ, ನಾಮದಚಿಲುಮೆ, ಬಸದಿಬೆಟ್ಟದಲ್ಲಿ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ ಹಾಕಲಾಗಿದೆ. ಡಿಸೆಂಬರ್ 31ರಂದು ಬೆಳಗ್ಗೆ 8 ಗಂಟೆಯಿಂದ ಜನವರಿ 2ರ ಬೆಳಗ್ಗೆ 8 ಗಂಟೆವರೆಗೆ ಸಾರ್ವಜನಿಕ ಪ್ರವೇಶವನ್ನು ನಿಷೇಧಿಸಲಾಗಿದೆ. ಹೊಸ ವರ್ಷಾಚರಣೆ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಜನರು ಗುಂಪು ಗುಂಪಾಗಿ ಸೇರುವುದರಿಂದ ವನ್ಯಜೀವಿಗಳಿಗೆ ತೊಂದರೆಯಾಗಲಿದೆ ಎಂದು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಜತೆಗೆ ದೇವರಾಯನದುರ್ಗದಲ್ಲಿ ತಿರುವಿನ ರಸ್ತೆಗಳು ಹೆಚ್ಚಾಗಿ ಇರುವುದರಿಂದ ಅಪಘಾತ ಸಂಭವಿಸುವ ಸಾಧ್ಯತೆ ಇದೆ. ಮಾತ್ರವಲ್ಲದೆ ಹೊಸ ವರ್ಷಾಚರಣೆ ನೆಪದಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆಯುವ ಸಾಧ್ಯತೆಯೂ ಇದೆ. ಕೆಲವರು ಮದ್ಯಪಾನ ಮಾಡಿ ಜಾಲಿರೈಡ್ ನೆಪದಲ್ಲಿ ವಾಹನ ಚಲಾಯಿಸುವುದರಿಂದ ನಾಗರಿಕರಿಗೆ, ಉಳಿದ ಸಂಚಾರಿಗಳಿಗೆ ತೊಂದರೆಯಾಗುವುದಲ್ಲದೆ, ಅಪಘಾತವಾಗಿ ಸಮಸ್ಯೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲಾಡಳಿತ ಈ ಜಾಗಗಳಲ್ಲಿ ಸೆಲೆಬ್ರೇಷನ್ ನಡೆಸಲು ಬ್ರೇಕ್ ಹಾಕಿದೆ.
ಇದನ್ನೂ ಓದಿ | New Year 2023 | ಹೊಸ ವರ್ಷಾಚರಣೆಗೆ ಕೆಲವೇ ಗಂಟೆಗಳು ಬಾಕಿ, ಬೆಂಗಳೂರಿನಲ್ಲಿ ಸಕಲ ಸಿದ್ಧತೆ, ಬಂದೋಬಸ್ತ್