Site icon Vistara News

New Year Celebration : ಪ್ರವಾಸಿ ತಾಣಗಳಲ್ಲಿ ನೈಟ್‌ ಪಾರ್ಟಿಗೆ ನಿರ್ಬಂಧ; ಗಿರಿಧಾಮಗಳು ಬಂದ್‌

Nandi hills

ಬೆಂಗಳೂರು: ನಂದಿ ಬೆಟ್ಟವೂ (Nandi Hills) ಸೇರಿದಂತೆ ಗಿರಿಧಾಮಗಳಿಗೆ‌, ಪ್ರವಾಸಿ ತಾಣಗಳಿಗೆ (Tourist Place) ಹೋಗಿ ನೈಟ್‌ ಪಾರ್ಟಿ ಮೂಲಕ ಹೊಸ ವರ್ಷಾಚರಣೆ (New Year Celebration) ಮಾಡುವ ಯುವಜನರ ಆಸೆಗೆ ತಣ್ಣೀರು ಬಿದ್ದಿದೆ. ಯಾಕೆಂದರೆ, ರಾಜ್ಯದ ಬಹುತೇಕ ಎಲ್ಲ ಗಿರಿಧಾಮಗಳನ್ನು, ಪ್ರವಾಸಿ ತಾಣಗಳನ್ನು ಡಿಸೆಂಬರ್‌ 31ರ ಸಂಜೆಯಿಂದಲೇ ಬಂದ್‌ ಮಾಡಲಾಗುತ್ತಿದೆ. ಈ ತಾಣಗಳಲ್ಲಿ ಪಾರ್ಟಿ ಮಾಡಿ ಏನಾದರೂ ಅನಾಹುತ ಸಂಭವಿಸಿದರೆ ಎಂಬ ಕಾರಣಕ್ಕೆ ಜಿಲ್ಲಾಡಳಿತಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡಿವೆ.

ಚಿಕ್ಕಬಳ್ಳಾಪುರದ ನಂದಿ ಬೆಟ್ಟಕ್ಕೆ ಸಂಜೆಯಿಂದಲೇ ಪ್ರವೇಶ ನಿಷೇಧ

ಡಿಸೆಂಬರ್‌ 31ರ ರಾತ್ರಿ ಚಿಕ್ಕಮಗಳೂರು ಜಿಲ್ಲೆಯ ನಂದಿ ಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್ ಹಾಕಲಾಗಿದೆ. ಇಲ್ಲಿ ರಾತ್ರಿ ಜನರು ಬರುವಂತಿಲ್ಲ. ಮಾತ್ರವಲ್ಲ, ಗಿರಿಧಾಮದಲ್ಲಿರುವ ಅತಿಥಿ ಗೃಹಗಳನ್ನು ಸಹ ಬಂದ್‌ ಮಾಡಲಾಗುತ್ತಿದೆ. ಹೊಸ ವರ್ಷದ ಹುಮ್ಮಸ್ಸಿನಲ್ಲಿ ಕುಡಿದು ತೂರಾಡಿ ಅಹಿತಕರ ಘಟನೆಗಳು ನಡೆಬಹುದಾದ ಹಿನ್ನೆಲೆ ನಂದಿಗರಿಧಾಮ ಬಂದ್ ಮಾಡಲಾಗಿದೆ. ಡಿಸೆಂಬರ್‌ 31ರ ಸಂಜೆ ಆರು ಗಂಟೆಯಿಂದ ಜನವರಿ 1ರ ಬೆಳಗ್ಗೆ ಆರು ಗಂಟೆಯವರೆಗೆ ನಂದಿ ಸಂಪೂರ್ಣ ಬಂದ್ ಆಗಿರಲಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ ಎನ್ ರವೀಂದ್ರ ಆದೇಶ ಮಾಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಗ್ರಾಮಾಂತರ ಜಿಲ್ಲೆಯ ಹಲವು ಪ್ರದೇಶಗಳಿಗೆ ನಿರ್ಬಂಧ ಹೇರಲಾಗಿದೆ. ಡಿಸೆಂಬರ್ 31 ರಿಂದ ಜನವರಿ 01 ರ ಮಧ್ಯರಾತ್ರಿ ವರೆಗೂ ನಿಷೇಧ ಅನ್ವಯವಾಗುತ್ತದೆ ಎಂದು ಬೆಂಗಳೂರು ಗ್ರಾಮಾಂತರ ಡಿಸಿ ಶಿವಶಂಕರ್ ಆದೇಶ ಹೊರಡಿಸಿದ್ದಾರೆ.

ನೆಲಮಂಗಲದ ಶಿವಗಂಗೆ ಬೆಟ್ಟ, ದೊಡ್ಡಬಳ್ಳಾಪುರದ ಮಾಕಳಿ ಬೆಟ್ಟ, ಆವತಿ ಬೆಟ್ಟ ನಂದಿ ಬೆಟ್ಟದ ತಪ್ಪಲಿನಲ್ಲಿ ಮೋಜು ಮಸ್ತಿ ಮಾಡುವುದಕ್ಕೆ ನಿಷೇಧ ವಿಧಿಸಲಾಗಿದೆ.

ತುಮಕೂರು ಜಿಲ್ಲೆಯಲ್ಲೂ ನಿರ್ಬಂಧವಿದೆ

ತುಮಕೂರಿನ ಪ್ರವಾಸಿ ತಾಣಗಳಿಗೆ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಿ ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ಆದೇಶ ಹೊರಡಿಸಿದ್ದಾರೆ.

ದೇವರಾಯನದುರ್ಗ, ನಾಮದಚಿಲುಮೆ, ಬಸದಿ ಬೆಟ್ಟಕ್ಕೆ ಡಿಸೆಂಬರ್‌ 31ರ ಬೆಳಗ್ಗೆ 8 ಗಂಟೆಯಿಂದ ಜನವರಿ 2ರ ಬೆಳಗ್ಗೆ 8 ಗಂಟೆವರೆಗೆ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಲಾಗಿದೆ. ಇಲ್ಲಿನ ಬಸದಿ ಬೆಟ್ಟಕ್ಕೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಹೀಗೆ ಬಂದಾಗ ಕಾನೂನು ಬಾಹಿರ ಚಟುವಟಿಕೆಗಳನ್ನು ಮಾಡುವ ಸಾಧ್ಯತೆ ‌ಇರುತ್ತದೆ. ಬೆಟ್ಟದ ರಸ್ತೆಗಳಲ್ಲಿ ತಿರುವುಗಳು ಹೆಚ್ಚಾಗಿದ್ದು ಅಪಘಾತಗಳು ನಡೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿದ ನಿಷೇಧ ಹೇರಿದೆ. ಕಾನೂನು ನಿಯಮ ಉಲ್ಲಂಘಿಸಿದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: New Year 2024: ಹಿಂದೂಗಳ ಹೊಸ ವರ್ಷಾರಂಭ ಜ.1ರಿಂದ ಅಲ್ಲ! ಹಾಗಾದರೆ ಯಾವಾಗ?

ಮಂಡ್ಯದ ಕೆಆರ್‌ಎಸ್‌ ಹಿನ್ನೀರು ಪ್ರದೇಶಕ್ಕೆ ನಿರ್ಬಂಧ

ಮಂಡ್ಯ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಹೊಸ ವರ್ಷಾಚರಣೆ ಮಾಡುವ ಪ್ಲ್ಯಾನ್‌ ಮಾಡಿದ್ದವರಿಗೆ ಜಿಲ್ಲಾಡಳಿತ ಶಾಕ್ ನೀಡಿದೆ. ಮಂಡ್ಯ ಜಿಲ್ಲಾಧ್ಯಂತ ಪ್ರವಾಸಿತಾಣಗಳಿಗೆ ನಿರ್ಬಂಧ ಹೇರಲಾಗಿದೆ. ಡಿ. 31ರ ಸಂಜೆ 6 ಗಂಟೆಯಿಂದ ಜ.1ರ ಸಂಜೆ 6ಗಂಟೆವರೆಗೆ ನಿರ್ಬಂಧ ಜಾರಿಯಲ್ಲಿ ಇರಲಿದೆ ಎಂದು ಮಂಡ್ಯದಲ್ಲಿ ಎಸ್ಪಿ ಯತೀಶ್ ಹೇಳಿದ್ದಾರೆ.

ಜಿಲ್ಲೆಯ ಶ್ರೀರಂಗಪಟ್ಟಣದ ತಾಲೂಕಿನ ಕೆ ಆರ್ ಎಸ್ ನ ಹಿನ್ನೀರು, ಕರಿಘಟ್ಟ, ಬಲಮುರಿ, ಎಡಮುರಿ ಸೇರಿದಂತೆ ವಿವಿಧ ಸ್ಥಳಗಳಿಗೆ ವಿಧಿಸಲಾಗಿದೆ. KRS ಹಿನ್ನೀರು ಸೇರಿದಂತೆ ನದಿ ತೀರಗಳಲ್ಲಿ ಹೊಸ ವರ್ಷಾಚರಣೆ ಮಾಡದಂತೆ ಸೂಚನೆ ನೀಡಲಾಗಿದೆ. ಮಳವಳ್ಳಿ ತಾಲೂಕಿನ ಮುತ್ತತ್ತಿ ಅರಣ್ಯ ಪ್ರದೇಶಕ್ಕೂ ನಿರ್ಬಂಧ ಹೇರಲಾಗಿದೆ. ಯಾವುದೇ ಅಹಿತಕರ ಘಟನೆ ಜರುಗದಂತೆ ಪೊಲೀಸರು ಕಟ್ಟೆಚ್ಚರ ವಹಿಸಲಾಗಿದೆ.

ಇದೇ ವೇಳೆ ರಾಜ್ಯದ‌ ಎಲ್ಲ ಪ್ರಮುಖ ನಗರಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

Exit mobile version