Site icon Vistara News

New Year Celebration: ನಶೆ ಏರಿದೆ… ಮಿತಿ ಮೀರಿದೆ! ರಾಜಧಾನಿಯ ನ್ಯೂ ಇಯರ್‌ ಸೆಲೆಬ್ರೇಷನ್‌ ಹೀಗಿತ್ತು!

new year1

ಬೆಂಗಳೂರು: ಒಂದು ಕೊಲೆ, ಬ್ರಿಗೇಡ್‌ ರಸ್ತೆ, ಚರ್ಚ್‌ ಸ್ಟ್ರೀಟ್‌ ಮುಂತಾದ ಕಡೆ ಕುಡಿದು ಕುಣಿದು ಚಿತ್ತಾಗಿ ಮನೆ ದಾರಿ ಯಾವುದು ಅಂತಲೇ ತಿಳಿಯದೇ ಬಿದ್ದುಕೊಂಡಿದ್ದವರನ್ನು ಮನೆಗೆ ತಲುಪಿಸಲು ತಿಣುಕಾಡಿದ ಪೊಲೀಸರು, ಮತ್ತೇರಿ ಮೈಮೇಲಿನ ಪ್ರಜ್ಞೆಯಿಲ್ಲದೇ ಬೀದಿ ಬದಿ ಕುಳಿತಿದ್ದ ಯುವಕ- ಯುವತಿಯರು, ಬಟ್ಟೆ ಹರಿದುಕೊಂಡು ಹುಚ್ಚಾಟ ನಡೆಸಿದ ಪಡ್ಡೆಗಳು, ಕಾನೂನು ಸುವ್ಯವಸ್ಥೆ ಕಾಪಾಡಲು ಒದ್ದಾಡಿದ ಆರಕ್ಷಕರು- ರಾಜಧಾನಿಯ ನೂತನ ವರ್ಷಾಚರಣೆ (New Year Celebration) ಹೀಗೆ ಕಂಡು ಬಂತು.

ಶ್ರೀನಿವಾಸನಗರದಲ್ಲಿ ಪಾರ್ಟಿ ಮುಗಿಸಿದ ಬಳಿಕ ಸ್ನೇಹಿತರಿಂದಲೇ ಒಬ್ಬಾತನ ಕೊಲೆಯಾಗಿದೆ. ಉಳಿದ ಕಡೆ ಸಣ್ಣಪುಟ್ಟ ಚಕಮಕಿ, ಘರ್ಷಣೆ, ಪೊಲೀಸರಿಂದಿಗೆ ವಾಗ್ವಾದಗಳೊಂದಿಗೆ ಹೊಸ ವರ್ಷಾಚರಣೆ ನಡೆಸಲಾಯಿತು. ಜನಜಂಗುಳಿ ಸೇರಿದ ಹಲವು ಕಡೆ ಪುಂಡರು ಯುವತಿಯರ ಜತೆ ಅಸಭ್ಯವಾಗಿ ವರ್ತಿಸಿದುದೂ ಕಂಡುಬಂತು. ಕೆಲವು ಯುವಕರು ಅಂಗಿ ಹರಿದುಕೊಂಡು ರಂಪಾಟ ನಡೆಸಿದರೆ, ಇನ್ನು ಕೆಲವು ಯುವತಿಯರು ಸಹ ಏನೇನೂ ಕಡಿಮೆಯಿಲ್ಲದಂತೆ ವರ್ತಿಸಿದರು.

ನಿನ್ನೆ ಮಧ್ಯರಾತ್ರಿಯ ನ್ಯೂ ಇಯರ್‌ ಸೆಲೆಬ್ರೇಶನ್‌ಗೆ ಬ್ರಿಗೇಡ್‌ ರಸ್ತೆ, ಚರ್ಚೆ ಸ್ಟ್ರೀಟ್‌, ಎಂಜಿ ರಸ್ತೆ ಮುಂತಾದ ಕಡೆ ಯುವಜನತೆಯ ಭಾರಿ ಸಂದೋಹ ಕಂಡುಬಂತು. ಎಂಜಿ ರೋಡ್, ಬ್ರಿಗೇಡ್ ರೋಡ್, ಕೋರಮಂಗಲ ಬಳಿ ಪಾರ್ಟಿ ಮುಗಿಸಿ ಫುಲ್ ಟೈಟಾಗಿ ಬೀದಿ ಬದಿ ಬಿದ್ದಿದ್ದ ಕೆಲ ಯುವಕ-ಯುವತಿಯರನ್ನು ಆಂಬ್ಯುಲೆನ್ಸ್ ಮೂಲಕ ಪೊಲೀಸರು ಆಸ್ಪತ್ರೆಗೆ ಶಿಫ್ಟ್ ಮಾಡಬೇಕಾಯಿತು. ಸುಮಾರು 50ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗೆ ಶಿಫ್ಟ್ ಮಾಡಿದರು. ಇನ್ನು ಕುಡಿದು ತೂರಾಡುತ್ತಿದ್ದ ಹಲವು ಯುವಕ-ಯುವತಿಯರನ್ನು ಅವರವರ ಮನೆ- ಪಿಜಿ- ಹಾಸ್ಟೆಲ್‌ ತಲುಪಿಸುವುದಕ್ಕೂ ಪೊಲೀಸರೇ ವ್ಯವಸ್ಥೆ ಮಾಡಬೇಕಾಯಿತು.

ಚರ್ಚ್‌ ಸ್ಟ್ರೀಟ್‌ನಲ್ಲಿ ಕುಡಿದು ಮತ್ತಳಾದ ಯವತಿಯೊಬ್ಬಳ ರಂಪಾಟವನ್ನು ನಿಯಂತ್ರಿಸಲು ಮಹಿಳಾ ಪೊಲೀಸರು ಪರದಾಡಿದರು. ತನ್ನ ಸ್ನೇಹಿತನೊಂದಿಗೆ ಆಕೆ ಪಬ್‌ಗೆ ಬಂದಿದ್ದು, ಅಮಲೇರಿದ ಬಳಿಕ ರಂಪಾಟ ಶುರು ಮಾಡಿದಳು. ಇನ್ನು ಹಲವರು ಪುಂಡರು ಚರ್ಚ್ ಸ್ಟ್ರೀಟ್‌ನಲ್ಲಿ ಯುವತಿಯರೊಂದಿಗೆ ಅಸಭ್ಯವಾಗಿ ವರ್ತಿಸಲು ಮುಂದಾದಾದ ಪೊಲೀಸರು ಲಾಠಿ ಬೀಸಿ ಅವರನ್ನು ಚದುರಿಸಿದರು. ಕುಡಿದು ಮತ್ತರಾದ ಹಲವರು ಅವಾಚ್ಯ ಶಬ್ದಗಳ ನಿಂದಿಸಿಕೊಂಡು ನೂಕಾಟ ತಳ್ಳಾಟ ನಡೆಸಿದ್ದು ವರದಿಯಾಗಿದೆ.

ಕೋರಮಂಗಲದ ಒಂದು ಪಬ್‌ನಲ್ಲಿ ಕನ್ನಡ ಸಾಂಗ್ ವಿಚಾರವಾಗಿ ಜಗಳ ಹತ್ತಿಕೊಂಡಿತು. ಕೋರಮಂಗಲ ಪಬ್ ಸ್ಟ್ರೀಟ್‌ನಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡರು. ರಸ್ತೆಯಲ್ಲಿ ನೂಕುನುಗ್ಗಲು ಕಂಡುಬಂತು. ಇಲ್ಲಿ ಅಸ್ವಸ್ಥಗೊಂಡು ಕುಸಿದು ಬಿದ್ದ ಯುವತಿಯೊಬ್ಬಳನ್ನು ವುಮೆನ್ ಸೇಫ್ಟಿ ಐಲ್ಯಾಂಡ್‌ಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಯಿತು.

ಮಧ್ಯರಾತ್ರಿಯ ಬಳಿಕವೂ ಕುಡಿದ ಅಮಲಿನಲ್ಲಿ ಬೀದಿ ತಿರುಗುತ್ತಿದ್ದವರನ್ನು ಪೊಲೀಸರು ಸುರಕ್ಷತಾ ದೃಷ್ಟಿಯಿಂದ ಒತ್ತಾಯಪೂರ್ವಕವಾಗಿ ಕಳಿಸಬೇಕಾಯಿತು. ಕೆಲವರು ಕುಡಿದ ಅಮಲಿನಲ್ಲಿ ಪೊಲೀಸರ ಜೊತೆ ವಾಗ್ವಾದ ನಡೆಸಿದರು.

ಬೆಳಗ್ಗಿನ ಜಾವದವರೆಗೂ ಹೊಸವರ್ಷ ಸೆಲೆಬ್ರೇಷನ್ ಹಿನ್ನೆಲೆಯಲ್ಲಿ ಇಂದು ಮುಂಜಾನೆ ಎಂಜಿ ರೋಡ್, ಬ್ರಿಗೇಡ್ ರೋಡ್‌ನಲ್ಲಿ ಕಸದ ರಾಶಿಯೇ ಬಿದ್ದಿತ್ತು. ಚರ್ಚ್ ಸ್ಟ್ರೀಟ್‌ನಲ್ಲಿ ಚಪ್ಪಲಿಗಳ ರಾಶಿ ಬಿದ್ದಿದ್ದು, ಎರಡು ಲೋಡ್ ಚಪ್ಪಲಿಗಳನ್ನು ಬಿಬಿಎಂಪಿ ಸಿಬ್ಬಂದಿ ಕೊಂಡೊಯ್ದರು. ಕೆಲವು ಖಾಸಗಿ ಸಂಸ್ಥೆಯ ಸಿಬ್ಬಂದಿಯವರು ಸ್ವಯಂಪ್ರೇರಿತವಾಗಿ ಸ್ವಚ್ಚತೆಗೆ ಮುಂದಾದರು. ಬೆಳಗ್ಗಿನ ಜಾವ ಮೂರು ಘಂಟೆಯಿಂದಲೇ ಸ್ವಚ್ಚತೆ ಆರಂಭಿಸಿದರೂ ಮುಕ್ತಾಯವಾಗಲಿಲ್ಲ.

ಇದನ್ನೂ ಓದಿ: New Year Celebration : ಪ್ರವಾಸಿ ತಾಣಗಳಲ್ಲಿ ನೈಟ್‌ ಪಾರ್ಟಿಗೆ ನಿರ್ಬಂಧ; ಗಿರಿಧಾಮಗಳು ಬಂದ್‌

Exit mobile version