ಪರಪ್ಪನ ಅಗ್ರಹಾರ (ಬೆಂಗಳೂರು): ಅಂದು ಜನವರಿ ಒಂದು. ಅವರೆಲ್ಲ ಹೊಸ ವರ್ಷದ ಸಂಭ್ರಮವನ್ನು (New year tragedy) ಅದ್ಧೂರಿಯಾಗಿ ಆಚರಿಸಿದ್ದರು. ಜತೆಗೆ ಗೆಳೆಯನೊಬ್ಬನ ಹುಟ್ಟುಹಬ್ಬ ಬೇರೆ. ಹಾಗಾಗಿ ಖುಷಿ ದುಪ್ಪಟ್ಟಾಗಿತ್ತು. ಆದರೆ, ಈ ಸಂಭ್ರಮ ಹೆಚ್ಚು ಕಾಲ ಉಳಿಯಲಿಲ್ಲ. ಯಾಕೆಂದರೆ, ಒಂದು ಸಣ್ಣ ಇಯರ್ ಫೋನ್ ವಿಚಾರದಲ್ಲಿ ಅವರ ಮಧ್ಯೆ ಜಗಳ ನಡೆದು ಒಬ್ಬನ ಸಾವೇ ಸಂಭವಿಸಿದೆ.
ಈ ಘಟನೆ ನಡೆದಿರುವುದು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯ ದೊಡ್ಡ ನಾಗಮಂಗಲದಲ್ಲಿ. ಆವತ್ತು ಹುಟ್ಟುಹಬ್ಬ ಇದ್ದದ್ದು ರಜನೀಶ್ ಎಂಬಾತನದ್ದು. ಕೊಲೆಯಾಗಿದ್ದು ಕಾರ್ತಿಕ್ (೨೭) ಎಂಬ ಯುವಕನದ್ದು.
ಹಾಗಿದ್ದರೆ ಅಲ್ಲಿ ಏನೇನಾಯ್ತು?
ರಜನೀಶ್, ಕಾರ್ತಿಕ್, ರವಿ ಮತ್ತು ಇತರ ಇಬ್ಬರು ಎಲ್ಲರೂ ಫ್ರೆಂಡ್ಸ್. ಕಾರಣ ವೃತ್ತಿಯಲ್ಲಿ ಎಲ್ಲರೂ ಪೈಂಟಿಂಗ್ ಕೆಲಸ ಮಾಡಿಕೊಂಡಿದ್ದರು. ಅವರು ಕೆಲಸ ಮಾಡುತ್ತಿದ್ದದ್ದು ದೊಡ್ಡನಾಗಮಂಗಲದ ಬಾಲಾಜಿ ಕನ್ಸ್ಟ್ರಕ್ಷನ್ ಸೈಟ್ ನಲ್ಲಿ.
ಉತ್ತರ ಪ್ರದೇಶ ಮೂಲದ ರಜನೀಶ್ ತನ್ನ ಬರ್ತ್ ಡೇ ಮತ್ತು ಹುಟ್ಟುಹಬ್ಬವನ್ನು ಜತೆಯಾಗಿ ಆಚರಿಸೋಣ ಎಂದು ಸ್ನೇಹಿತರನ್ನು ತಾವೆಲ್ಲ ಕೆಲಸ ಮಾಡುವ ಸೈಟಿಗೆ ಆಹ್ವಾನಿಸಿದ್ದ. ನಿರ್ಮಾಣ ಹಂತದ ಕಟ್ಟಡದಲ್ಲಿ ಪಾರ್ಟಿ ಎಲ್ಲ ಚೆನ್ನಾಗಿಯೇ ನಡೆದಿತ್ತು. ಎಣ್ಣೆ ಪಾರ್ಟಿಯೂ ಜೋರಾಗಿತ್ತು.
ಈ ನಡುವೆ ಪಾರ್ಟಿ ಮುಗಿಸಿ ಎಲ್ಲರೂ ನಿದ್ದೆ ಮಾಡೋಣ ಎಂದು ಎದ್ದರು. ಅಲ್ಲಲ್ಲಿ ಮಲಗಿಕೊಂಡರು. ಬರ್ತ್ ಡೇ ಬಾಯ್ ರಜನೀಶ್‌ಗೆ ರಾತ್ರಿ ಮಲಗುವಾಗ ಕಿವಿಗೆ ಇಯರ್ ಫೋನ್ ಹಾಕಿಕೊಂಡು ಮಲಗುವ ಅಭ್ಯಾಸ. ಆದರೆ, ಎಚ್ಚರವಾಗಿ ನೋಡುವಾಗ ಇಯರ್ ಫೋನ್ ಇರಲಿಲ್ಲ. ಎಲ್ಲಿ ಹೋಯ್ತು ಎಂದು ಸಿಕ್ಕಾಪಟ್ಟೆ ಸಿಟ್ಟಿಗೆದ್ದ.
ಎಲ್ಲ ಕಡೆ ಹುಡುಕಿದಾಗ ಕೊನೆಗೆ ಅದು ಸಿಕ್ಕಿದ್ದು ಕಾರ್ತಿಕ್‌ನ ಕಿವಿಯಲ್ಲಿ. ಆಗ ಉಳಿದೆಲ್ಲರಿಗೂ ಸಿಟ್ಟುಬಂತು. ಯಾಕೆ ಇಯರ್ ಫೋನ್ ಇಟ್ಕೊಂಡಿದಿಯಾ ಎಂದು ಕೇಳಿ ಅವರು ಆತನ ಮೇಲೆ ಮುಗಿಬಿದ್ದು ಥಳಿಸಿದರು. ಬಳಿಕ ಅವರೆಲ್ಲರೂ ನಿದ್ದೆ ಹೋದರು.
ಬೆಳಗ್ಗೆ ಏಳಲ್ಲೇ ಇಲ್ಲ ಕಾರ್ತಿಕ್!
ಈ ನಡುವೆ, ಬೆಳಗ್ಗೆ ಎದ್ದು ನೊಡಿದಾಗ ಕಾರ್ತಿಕ್ ಇನ್ನೂ ಎದ್ದಿರಲಿಲ್ಲ. ಆಗ ಆತಂಕಿತರಾದ ಅವರು ತಾವು ಕೆಲಸ ಮಾಡುತ್ತಿದ್ದ ಸೈಟ್‌ನ ಮೇಸ್ತ್ರಿಗೆ ಮಾಹಿತಿ ನೀಡಿ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಅಷ್ಟೊತ್ತಿಗಾಗಲೇ ಕಾರ್ತಿಕ್ ರಾತ್ರಿಯ ಹೊಡೆತಗಳಿಂದಾಗಿ ಪ್ರಾಣವನ್ನೇ ಕಳೆದುಕೊಂಡಿದ್ದ. ಹಾಗಂತ ಗೆಳೆಯರು ನೇರವಾಗಿ ಬಾಯಿ ಬಿಡಲಿಲ್ಲ. ವಿಚಾರಣೆ ನಡೆಸಿದ ಪರಪ್ಪನ ಅಗ್ರಹಾರ ಪೊಲೀಸರಿಗೆ ಅಸಲಿ ಸಂಗತಿ ತಿಳಿಯಿತು.
ಸದ್ಯ ರಜನೀಶ್ ಮತ್ತು ರವಿಯನ್ನು ಬಂಧಿಸಿರುವ ಪೊಲೀಸರು ನಾಪತ್ತೆಯಾದ ಇನ್ನಿಬ್ಬರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | Murder case | ಗುಟ್ಕಾ ಗಲಾಟೆ ಕೊಲೆಯಲ್ಲಿ ಅಂತ್ಯ: ಕುಡಿದ ಮತ್ತಿನಲ್ಲಿ ತಲೆಗೆ ಕಲ್ಲು ಎತ್ತಿ ಹಾಕಿ ಮರ್ಡರ್!