Site icon Vistara News

New year tragedy | ಕಟ್ಟಡದಿಂದ ಕಟ್ಟಡಕ್ಕೆ ಜಂಪ್‌ ಮಾಡಲು ಹೋಗಿ ಆಯತಪ್ಪಿ ನೆಲಕ್ಕೆ ಬಿದ್ದು ಯುವಕ ಮೃತ್ಯು

Bapi odisha building jump

ಬೆಂಗಳೂರು: ಕುಡಿತದಿಂದ ತೂರಾಡೋದು ಮಾತ್ರವಲ್ಲ, ಹಾರಾಡೋ ಫೀಲಿಂಗ್‌ ಕೂಡಾ ಇರುತ್ತದೆ ಅಂತ ಎಲ್ರೂ ಹೇಳ್ತಾರೆ. ಇದನ್ನು ಪ್ರಯೋಗ ಮಾಡಲು ಹೋಗಿ ಯುವಕನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ಹೊಸ ವರ್ಷದ ಹಿನ್ನೆಲೆಯಲ್ಲಿ (New year tragedy) ಟೆರೇಸ್‌ನಲ್ಲಿ ಕುಳಿತು ಕುಡಿದು ಮತ್ತೇರಿಸಿಕೊಂಡಿದ್ದ ಯುವಕ ಪಕ್ಕದ ಬಿಲ್ಡಿಂಗ್‌ಗೆ ಹಾರುವ ಸೂಪರ್‌ ಮ್ಯಾನ್‌ ಕನಸು ಕಂಡಿದ್ದಾನೆ. ಹಾಗೆ ಹಾರಲು ಹೋಗಿ ಮೂರನೇ ಮಹಡಿಯಿಂದ ನೆಲಕ್ಕೆ ಬಿದ್ದು ಮೃತಪಟ್ಟಿದ್ದಾನೆ.

ಘಟನೆ ನಡೆದಿರುವುದು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಕೊಟ್ಟಿಗೆಪಾಳ್ಯ ಸಮೀಪ‌.
ಒಡಿಶಾ ಮೂಲದ ಯುವಕ ಬಾಪಿ ಕಾಟನ್‌ ಬಾಕ್ಸ್‌ ತಯಾರಿ ಮಾಡೋ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಆತನಿಗೆ ಹೊಸ ವರ್ಷವನ್ನು ಹಬ್ಬದಂತೆ ಆಚರಿಸಬೇಕು ಎನ್ನುವ ಹುಮ್ಮಸ್ಸಿತ್ತು. ಜತೆಗೆ ಸಾಹಸಿಕ ಚಟುವಟಿಕೆಗಳಲ್ಲೂ ಆಸಕ್ತಿ ಹೆಚ್ಚು.

ಮಧ್ಯರಾತ್ರಿಯ ಹೊತ್ತು ಒಬ್ಬನೇ ಇದ್ದನೋ, ಬೇರೆ ಯಾರಾದರೂ ಜತೆಗಿದ್ದರೋ ಗೊತ್ತಿಲ್ಲ. ಅಂತೂ ಒಂದು ಕಟ್ಟಡದಿಂದ ಇನ್ನೊಂದು ಕಟ್ಟಡಕ್ಕೆ ಹಾರಬಹುದು ಅನಿಸಿದೆ. ಹಾಗೆ ಹಾರಿಯೇ ಬಿಟ್ಟಿದ್ದಾನೆ. ಈ ಕಡೆಯಿಂದ ಹಾರಿದ್ದಾನೆ. ಆ ಕಡೆ ತಲುಪಿಲ್ಲ. ಆಯತಪ್ಪಿದ ಆತ ಎರಡು ಕಟ್ಟಡಗಳ ನಡುವಿನ ಸಣ್ಣ ಜಾಗದಲ್ಲಿ ದಡಬಡನೆ ಬಡಿಯುತ್ತಾ ನೆಲಕ್ಕೆ ಬಿದ್ದಿದ್ದಾನೆ. ಕೆಳಕ್ಕೆ ಬಿದ್ದ ಆತನನ್ನು ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಪ್ರಾಣ ಮಾತ್ರ ಉಳಿದಿಲ್ಲ.

ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರಿನ ಪಬ್‌, ಬಾರ್‌ಗಳಲ್ಲಿ ಮಹಡಿಯ ಬಾಗಿಲು ತೆರೆಯಲೇಬಾರದು, ಯಾರಿಗೂ ಟೆರೇಸ್‌ಗೆ ಹೋಗಲು ಬಿಡಬಾರದು ಎಂದು ಪೊಲೀಸರು ಸೂಚನೆ ನೀಡಿದ್ದರು. ಆದರೆ, ಮನೆ ಮನೆಗೆ ರಕ್ಷಣೆ ನೀಡೋದು ಹೇಗೆ ಸಾಧ್ಯ?

ಇದನ್ನೂ ಓದಿ | New year tragedy | ಗಾಳೀಲಿ ಹಾರಿಸಿದ ಗುಂಡು Misfire ಆಗಿ ಯುವಕನಿಗೆ ಗಾಯ: ಗುಂಡು ಹಾರಿಸಿದ ಉದ್ಯಮಿ ಹೃದಯಾಘಾತಕ್ಕೆ ಬಲಿ

Exit mobile version