ಶಿವಮೊಗ್ಗ: ಹೊಸ ವರ್ಷದ ಸಂಭ್ರಮಾಚರಣೆಯ ಅತಿರೇಕವೊಂದು ಪ್ರಾಣವನ್ನೇ (New year tragedy) ಬಲಿ ಪಡೆದಿದೆ. ಉದ್ಯಮಿಯೊಬ್ಬರು ತನ್ನ ವೈಭವೋಪೇತ ಮನೆಯಲ್ಲಿ ದೊಡ್ಡ ಪಾರ್ಟಿ ಅರೇಂಜ್ ಮಾಡಿದ್ದಾರೆ. ಒಂದು ಕಡೆ ಹೊಸ ವರ್ಷ, ಇನ್ನೊಂದು ಕಡೆ ಮಗನ ಹುಟ್ಟುಹಬ್ಬದ ಸಂಭ್ರಮ/ ಎಲ್ಲರೂ ಖುಷಿಯಿಂದ ನಲಿದಿದ್ದಾರೆ. ಇನ್ನೇನು ೧೨ ಗಂಟೆ ಬಾರಿಸುತ್ತದೆ ಎನ್ನುವಾಗ ವ್ಯಕ್ತಿ ತನ್ನ ಕೋವಿ ತಂದು ಆಕಾಶಕ್ಕೆ ಗುರಿ ಇಟ್ಟು ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಿಸಲು ಮುಂದಾಗಿದ್ದಾರೆ. ಆದರೆ, ಗನ್‌ಗೆ ಬುಲ್ ಲೋಡ್ ಮಾಡುವಾಗಲೇ ಅದು ಸಿಡಿದು ಮನೆಗೆ ಬಂದಿದ್ದ ಯುವಕನಿಗೆ ತಾಗಿದೆ. ಗಂಭೀರವಾಗಿ ಗಾಯಗೊಂಡ ಯುವಕನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದು ಆತ ಬಚಾವಾಗಿದ್ದಾನೆ. ಆದರೆ, ಇತ್ತ ಗುಂಡು ಹಾರಿಸಿದ ವ್ಯಕ್ತಿಯೇ ಜೀವ ಕಳೆದುಕೊಂಡಿದ್ದಾರೆ.
ಘಟನೆ ನಡೆದಿರುವುದು ಶಿವಮೊಗ್ಗ ವಿದ್ಯಾನಗರದಲ್ಲಿ. ಇಲ್ಲಿನ ಗೋಪಾಲ್ ಗ್ಲಾಸ್ ಹೌಸ್ ಮಾಲೀಕ ಮಂಜುನಾಥ್ ಓಲೇಕರ್ (೫೫) ಸಾಕಷ್ಟು ಶ್ರೀಮಂತರು. ದೊಡ್ಡ ಶಾಪ್, ದೊಡ್ಡ ಅರಮನೆಯಂಥ ಮನೆ. ಅವರು ತಮ್ಮ ಮನೆಯಲ್ಲಿ ಶನಿವಾರ ರಾತ್ರಿ ಮಗ ಸಂದೀಪ್ (೩೦) ಅವರ ಹುಟ್ಟುಹಬ್ಬದ ಆಚರಣೆಗೆ ಸಿದ್ಧತೆ ನಡೆಸಿದ್ದರು, ಜತೆಗೆ ನ್ಯೂ ಇಯರ್ ಪಾರ್ಟಿ. ಮನೆಯಂಗಳದಲ್ಲೇ ಪೆಂಡಾಲ್ ಹಾಕಿ ಪಾನೀಯ, ಊಟದ ವ್ಯವಸ್ಥೆ ಮಾಡಿದ್ದರು.
ಪಾರ್ಟಿಗಾಗಿ ಸಂದೀಪನ ಗೆಳೆಯರು ಮತ್ತು ನಗರದ ನಾಲ್ಕು ಕುಟುಂಬಗಳು ಆಗಮಿಸಿದ್ದವು. ಸಂಭ್ರಮಚಾರಣೆಯಲ್ಲಿದ್ದ ಮಂಜುನಾಥ್ ಅವರು ಮನೆಯಲ್ಲಿದ್ದ ಡಬಲ್ ಬ್ಯಾರೆಲ್ ಗನ್ ತೆಗೆದುಕೊಂಡು ರಾತ್ರಿ ಹನ್ನೆರಡು ಗಂಟೆಗೆ ಸರಿಯಾಗಿಏರ್ ಫೈರ್ ಮಾಡಿ 2023ನ್ನು ಸ್ವಾಗತಿಸಲು ಮುಂದಾಗಿದ್ದಾರೆ. ಗಾಳಿಯಲ್ಲಿ ಫೈರ್ ಮಾಡಲು ಗನ್‌ಅನ್ನು ಅಡ್ಡಲಾಗಿ ಹಿಡಿದು ರೌಂಡ್ಸ್ ತುಂಬುತ್ತಿದ್ದಾಗ ಎದುರು ಇದ್ದ ಮಗನ ಸ್ನೇಹಿತ ವಿದ್ಯಾನಗರದ ವಿನಯ್ (30) ಎಂಬುವವನಿಗೆ ಆಕಸ್ಮಿಕ ವಾಗಿ ಹೊಟ್ಟೆಗೆ ಗುಂಡು ತಗಲಿದೆ. ಆತನನ್ನು ನಗರದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.
ಫೈರ್ ಮಾಡಿದ ಮಂಜುನಾಥ್ ಓಲೇಕಾರ್ ಹೆದರಿದಾಗ ಅವರಿಗೆ ಹೃದಯಾಘಾತವಾಗಿ ಆಸ್ಪತ್ರೆಗೆ ದಾಖಲು ಮಾಡಲು ಕರೆದುಕೊಂಡು ಹೋಗುತ್ತಿದ್ದಾಗ ಮರಣ ಹೊಂದಿದ್ದಾರೆ. ಮಂಜುನಾಥ್ ಅವರ ಬಳಿ ಡಬ್ಬಲ್ ಬ್ಯಾರೆಲ್ ಗನ್ ಲೈಸೆನ್ಸ್ ಇತ್ತು ಎಂಬುದು ತಳಿದು ಬಂದಿದೆ. ಕೋಟೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ | New year tragedy | ಹೊಸ ವರ್ಷದ ಪಾರ್ಟಿ: ಕುಡಿತದ ಮತ್ತಿನಲ್ಲಿ ಸ್ನೇಹಿತರಿಂದಲೇ ಯುವಕನ ಬರ್ಬರ ಕೊಲೆ