ಬಾಗಲಕೋಟೆ: ಹೆಣ್ಣು ಮಕ್ಕಳು ಎಲ್ಲರನ್ನೂ ಮೀರಿಸಿ ದೊಡ್ಡ ಮಟ್ಟದ ಸಾಧನೆ ಮಾಡುವ, ಸಮಾಜದಲ್ಲಿ ಉನ್ನತ ಸ್ಥಾನಮಾನ ಪಡೆಯುತ್ತಿರುವ ಈ ಕಾಲದಲ್ಲೂ ಹೆಣ್ಣು ಮಗು ಹುಟ್ಟಿದರೆ ಅದು ಹೊರೆ ಎಂದು ಭಾವಿಸಿ ಎಸೆದುಬಿಡುವ ಅನಾಗರಿಕತೆ ಮುಂದುವರಿದಿರುವುದು (Inhuman behaviour) ಅಚ್ಚರಿಯಾದರೂ ಸತ್ಯ, ಬಾಗಲಕೋಟೆಯಲ್ಲಿ (Bagalakote news) ಇಂಥಹುದೊಂದು ಅಮಾನವೀಯ ಘಟನೆ ನಡೆದಿದ್ದು, ಶೂರ್ಪಾಲಿ ಗ್ರಾಮದಲ್ಲಿ ನವಜಾತ ಹೆಣ್ಣು ಶಿಶುವನ್ನು (Newborn Child) ಪಾಪಿಗಳು ಕಬ್ಬಿನ ಹೊಲದಲ್ಲಿ (Child abondoned in field) ಎಸೆದು ಹೋಗಿದ್ದಾರೆ.
ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಶೂರ್ಪಾಲಿಯಲ್ಲಿ ಶನಿವಾರ ಬೆಳಗ್ಗೆ ಈ ಘಟನೆ ಬಯಲಿಗೆ ಬಂದಿದೆ. ಈ ಭಾಗದಲ್ಲಿ ಮಳೆಯಾಗಿ ಕಬ್ಬು ನಾಟಿ ನಡೆದು ಮೆಲ್ಲಗೆ ಅದು ಚಿಗುರೊಡೆಯುತ್ತಿದೆ. ಈ ಹೊಲದ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದ ಕೆಲವರಿಗೆ ಮಗು ಅಳುವ ಸದ್ದೊಂದು ಕೇಳಿಸಿದೆ.
ಇಲ್ಲಿ ಯಾರ ಮಗು ಎಂದು ರಚ್ಚೆ ಹಿಡಿದು ಅಳುತ್ತಿರುವ ಮಗುವಿನ ಅಳುವಿನ ಧ್ವನಿ ಅರಸಿ ಹೊರಟವರಿಗೆ ಅಲ್ಲೊಂದು ನವಜಾತ ಶಿಶು ಕಂಡಿದೆ. ಮಗು ಇನ್ನೂ ಹಸಿಹಸಿಯಾಗಿಯೇ ಇದ್ದು, ಅದಕ್ಕೆ ಬಟ್ಟೆ ಹೊದಿಸಲಾಗಿದೆ. ನೀರಿನಿಂದ ಒದ್ದೆಯಾಗಿರುವ ನೆಲದಲ್ಲಿ ಹಸಿ ಮಣ್ಣಿನಲ್ಲೇ ಮಗುವನ್ನು ಪಾಪಿಗಳು ಬಿಟ್ಟುಹೋಗಿದ್ದರು.
ಕೂಡಲೇ ಸ್ಥಳೀಯ ಯುವಕರು ಮಗುವನ್ನು ಅಲ್ಲಿಂದ ರಕ್ಷಣೆ ಮಾಡಿ ನಂತರ ಜಮಖಂಡಿ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಈ ಮಗುವನ್ನು ಈಗ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಾಂತ್ವನ ಕೇಂದ್ರಕ್ಕೆ ಹಸ್ತಾಂತರ ಮಾಡಲಾಗಿದೆ.
ನವಜಾತ ಶಿಶುವನ್ನು ಎಸೆದುಹೋದವರ ವಿರುದ್ಧ ಗ್ರಾಮಸ್ಥರ ಹಿಡಿಶಾಪ ಹಾಕುತ್ತಿದ್ದಾರೆ. ಹೆಣ್ಣು ಮಗು ಎಂಬ ಕಾರಣಕ್ಕೆ ಮಗು ಬಿಟ್ಟುಹೋಗಿರುವ ಶಂಕೆ ಇದ್ದು, ಇನ್ನೂ ಇಂಥ ಘಟನೆಗಳು ನಡೆಯುತ್ತಿರುವುದು ನಮ್ಮ ಊರಿಗೇ ಅಪಮಾನ ಎಂದು ಹೇಳಿದ್ದಾರೆ. ಆದರೆ, ಇದು ಹೆಣ್ಣು ಮಗು ಎಂಬ ಕಾರಣಕ್ಕಾಗಿ ಪರಿತ್ಯಜಿಸಿ ಹೋದ ಮಗುವೇ ಅಥವಾ ಅಕ್ರಮ ಗರ್ಭದಿಂದ ಹುಟ್ಟಿದ ಮಗುವನ್ನು ಏನು ಮಾಡಬೇಕು ಎಂದು ತಿಳಿಯದೆ ತಾಯಿಯೊಬ್ಬಳು ಅಸಹಾಯಕತೆಯಿಂದ ಮಾಡಿದ ಕೃತ್ಯವೇ ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ.
ಜಮಖಂಡಿ ಪೊಲೀಸ್ ಠಾಣಾ ವ್ಯಪ್ತಿ ಘಟನೆ ನಡೆದಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಇಬ್ಬರು ಮಕ್ಕಳ ಜತೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ;ಬದುಕುಳಿದ ಗಂಗೋತ್ರಿ
ಚಿಕ್ಕಬಳ್ಳಾಪುರ: ತಾಯಿಯೊಬ್ಬಳು ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆಗೆ (Self Harming) ಯತ್ನಿಸಿದ್ದು, ಅಮ್ಮ ಮತ್ತು ಒಬ್ಬ ಮಗಳು ಪ್ರಾಣ (Mother and daughter dead) ಕಳೆದುಕೊಂಡಿದ್ದರೆ, ಒಬ್ಬ ಮಗಳು ಈಜಿ ದಡ ಸೇರಿ (One girl survived) ಬದುಕುಳಿದಿದ್ದಾಳೆ.
ಚಿಕ್ಕಬಳ್ಳಾಪುರ ತಾಲೂಕಿನ (Chikkaballapura News) ಸೇಟ್ ದಿನ್ನೆ ಬಳಿ ಈ ಘಟನೆ ನಡೆದಿದ್ದು, 5 ವರ್ಷದ ಹೆಣ್ಣು ಮಗು ಶ್ರೀನಿಧಿ ಹಾಗೂ ತಾಯಿ ನಾಗಮ್ಮ (39) ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಏಳು ವರ್ಷದ ಮಗು ಗಂಗೋತ್ರಿ ನೀರಿನಲ್ಲಿ ಮುಳುಗುವಾಗ ಭಯವಾಗಿ ಕೈಕಾಲು ಬಡಿದು ಈಜಿ ದಡ ಸೇರಿ ಬದುಕುಳಿದಿದ್ದಾಳೆ.
ನಾಗಮ್ಮ ಅವರಿಗೆ ಎಂಟು ವರ್ಷದ ಹಿಂದೆ ಮದುವೆಯಾಗಿದ್ದು, ಮನೆಯಲ್ಲಿ ನಿತ್ಯ ಜಗಳ ಆಗುತ್ತಿತ್ತು ಎಂದು ಹೇಳಲಾಗುತ್ತಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮನನೊಂದಿದ್ದ ಆಕೆ ತನ್ನ ಇಬ್ಬರು ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದರು.
ಈ ನಡುವೆ ಅವರು ಮನೆಯಲ್ಲಿ ಯಾರಿಗೂ ಗೊತ್ತಿಲ್ಲದಂತೆ ಜಮೀನಿನ ಮಧ್ಯಭಾಗದಲ್ಲಿರುವ ದೊಡ್ಡ ಬಾವಿಯ ಬಳಿಗೆ ಬಂದಿದ್ದರು. ಅಲ್ಲಿ ತನ್ನ ಇಬ್ಬರೂ ಮಕ್ಕಳನ್ನು ಬಾವಿಗೆ ತಳ್ಳಿ ತಾನೂ ಹಾರಿದ್ದರು. ಪುಟ್ಟ ಮಗು ಮತ್ತು ತಾಯಿ ಮೃತಪಟ್ಟರು.
ಈ ನಡುವೆ, ಈ ಯಾವ ವಿಚಾರಗಳೂ ಗೊತ್ತಿಲ್ಲದ ಏಳು ವರ್ಷದ ಗಂಗೋತ್ರಿ ಒಮ್ಮಿಂದೊಮ್ಮೆಗೆ ಬಾವಿಗೆ ಬಿದ್ದಾಗ ಭಯಗೊಂಡಿದ್ದಳು. ಅಲ್ಲೇ ಕಾಲು ಬಡಿದಾಡಿಕೊಂಡು ಅತ್ತಿತ್ತ ಓಡಾಡಿದ್ದಾಳೆ.
ಇದು ಮೆಟ್ಟಿಲುಗಳಿರುವ ದೊಡ್ಡ ಬಾವಿ. ಗಂಗೋತ್ರಿ ಕಾಲು ಬಡಿಯುತ್ತಾ ಆ ಮೆಟ್ಟಿಲುಗಳ ಕಡೆಗೆ ಬಂದು ಆ ಮೆಟ್ಟಿಲು ಹತ್ತಿ ಮೇಲೆ ಬಂದು ಬೊಬ್ಬೆ ಹೊಡೆದಿದ್ದಾಳೆ. ಆಗ ಊರಿನ ಜನರಿಗೆ ವಿಷಯ ಗೊತ್ತಾಗಿದೆ.
ಕೂಡಲೇ ಅವರೆಲ್ಲ ಓಡೋಡಿ ಬಂದು ಇಣುಕಿದಾಗ ತಾಯಿ ಮತ್ತು ಮಗು ಸಾವನ್ನಪ್ಪಿದರು. ಈ ನಡುವೆ ಅಗ್ನಿಶಾಮಕ ದಳ ಹಾಗು ಇತರರು ಸೇರಿ ಶವವನ್ನು ಮೇಲಕ್ಕೆ ಎತ್ತಲಾಯಿತು.
ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು, ತನಿಖೆ ನಡೆಯುತ್ತಿದೆ. ಗಂಡನ ಮನೆಯವರ ವಿಚಾರಣೆ ನಡೆಯುತ್ತಿದೆ.