Site icon Vistara News

Kidnap | ಹುಡುಗಿ ಕಡೆಯ ವಿರೋಧದ ನಡುವೆ ಮದುವೆ, ಠಾಣೆ ಗೇಟಿಂದಲೇ ಸಿನಿಮಾ ಸ್ಟೈಲಲ್ಲಿ ನವವಿವಾಹಿತರ ಕಿಡ್ನ್ಯಾಪ್

Marriage

ಚಿಕ್ಕಬಳ್ಳಾಪುರ: ಅವರಿಬ್ಬರು ಬಾಲ್ಯದ ಸ್ನೇಹಿತರು. ಜೀವನದಲ್ಲಿ ಬೆಳೆಯುತ್ತಾ ಒಬ್ಬರಿಗೊಬ್ಬರು ಗಾಢವಾಗಿ ಪ್ರೀತಿಸಿದರು. ಆದರೆ, ಮದುವೆಗೆ ಹುಡುಗಿ ಪೋಷಕರ ವಿರೋಧವಿತ್ತು. ಇಷ್ಟಾದರೂ ಶುಕ್ರವಾರ (ಅಕ್ಟೋಬರ್‌ ೨೧) ಬೆಳಗಿನ ಜಾವ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದರು. ಮದುವೆಯಾಗಿ ಇನ್ನೇನು ರಕ್ಷಣೆ ಕೋರಿ, ಪೊಲೀಸ್ ಠಾಣೆ ಮೆಟ್ಟಿಲು ಹತ್ತಬೇಕು ಎನ್ನುವಷ್ಟರಲ್ಲೇ ಹುಡುಗಿಯ ಕಡೆಯವರು ಪೊಲೀಸ್ ಠಾಣೆ ಗೇಟ್‌ಗೆ ಬ್ಯಾರಿಕೇಡ್ ಹಾಕಿ, ಕಾರಿನಲ್ಲಿದ್ದ ಹುಡುಗಿಯನ್ನು ಎಳೆದುಕೊಂಡು ಹೋಗಿದ್ದಾರೆ. ಈ ಘಟನೆ ನಡೆದಿರುವುದು ಚಿಕ್ಕಬಳ್ಳಾಪುರದಲ್ಲಿ.

ಆಕೆಯ ಹೆಸರು ನಯನಾ, 20 ವರ್ಷ ವಯಸ್ಸು. ಬಿಎಸ್ಸಿ ಪದವೀಧರೆ. ಚಿಕ್ಕಬಳ್ಳಾಪುರ ನಗರದ ವಾಪಸಂದ್ರ ನಿವಾಸಿ. ವರನ ಹೆಸರು ರಾಮು. ವಯಸ್ಸು 22 ವರ್ಷ. ಚಿಕ್ಕಬಳ್ಳಾಪುರ ನಗರದ ಟೌನ್ ಹಾಲ್‌ ನಿವಾಸಿ.

ಇಬ್ಬರೂ ಪ್ರೌಢ ಶಾಲೆಯಿಂದಲೇ ಸ್ನೇಹಿತರು. ಕಾಲೇಜು ಮೆಟ್ಟಿಲು ಹತ್ತುತ್ತಿದ್ದಂತೆ ಇಬ್ಬರ ನಡುವೆ ಗಾಢ ಪ್ರೀತಿ ಹುಟ್ಟಿತು. ಇಬ್ಬರದೂ ಒಂದೇ ಜಾತಿ ಆಗಿದ್ದರೂ ಇವರಿಬ್ಬರ ಪ್ರೀತಿಯ ಮದುವೆಗೆ ನಯನಾ ಮನೆಯಲ್ಲಿ ವಿರೋಧ ವ್ಯಕ್ತಪಡಿಸಿದರು.

ಆದರೆ, ನಯನಾ ಮತ್ತು ರಾಮು ಮಾತ್ರ ಜೀವನಪೂರ್ತಿ ಜತೆಯಾಗಿಯೇ ಇರಬೇಕು ಎಂದು ನಿರ್ಧರಿಸಿದ್ದರು. ಇಬ್ಬರೂ ಮನೆ ಬಿಟ್ಟು ಬಂದು ಶುಕ್ರವಾರ ಬೆಳಗ್ಗೆ ದೇವಸ್ಥಾನವೊಂದರಲ್ಲಿ ಸ್ನೇಹಿತರ ಸಮ್ಮುಖದಲ್ಲಿ ಮದುವೆಯಾದರು. ಈ ನಡುವೆ, ನಯನಾಳ ತಂದೆ ಶ್ರೀನಿವಾಸ್ ಅವರು ತಮ್ಮ ಮಗಳು ಕಾಣೆಯಾದ ಬಗ್ಗೆ ಚಿಕ್ಕಬಳ್ಳಾಪುರ ಮಹಿಳಾ ಠಾಣೆಗೆ ದೂರು ನೀಡಿದರು.

ಇತ್ತ ನವ ವಿವಾಹಿತರು ಕಾರಿನಲ್ಲಿ ಪೊಲೀಸ್ ಠಾಣೆಗೆ ಬರುತ್ತಿದ್ದರು. ಇನ್ನೇನು ಠಾಣೆ ಮೆಟ್ಟಿಲು ಹತ್ತಬೇಕು ಎನ್ನುವಷ್ಟರಲ್ಲಿ ನಯನಾ ಸಂಬಂಧಿಕರು ಪೊಲೀಸ್ ಠಾಣೆಯ ಗೇಟ್‌ಗೆ ಬ್ಯಾರಿಕೇಡ್ ಹಾಕಿ, ಕಾರಿನಲ್ಲಿದ್ದವರನ್ನು ಕಿಡ್ನಾಪ್ ಮಾಡಿದ್ದಾರೆ.

ಇದಾದ ಬಳಿಕ ಪೊಲೀಸರು ಕಾರ್ಯಾಚರಣೆಗೆ ಇಳಿದು ಕಾರನ್ನು ಬೆನ್ನಟ್ಟಿ ಸಂಜೆಯ ಹೊತ್ತಿಗೆ ಹುಡುಗ-ಹುಡುಗಿಯನ್ನು ಠಾಣೆಗೆ ಕರೆತಂದಿದ್ದಾರೆ. ಠಾಣೆಯ ಹೊರಗಡೆ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದಾರೆ.

ಹುಡುಗನ ಜತೆಗೇ ಹೋಗುತ್ತೇನೆ ಎಂದ ಹುಡುಗಿ
ನವ ವಿವಾಹಿತ ಜೋಡಿ ಇಬ್ಬರೂ ವಯಸ್ಕರಾಗಿದ್ದು, ಕಾನೂನು ಪ್ರಕಾರ ತಮ್ಮಿಷ್ಟದಂತೆ ಮದುವೆಯಾಗಿದ್ದಾರೆ. ರಕ್ಷಣೆ ಕೋರಿ ನವ ಜೋಡಿ ಮಹಿಳಾ ಠಾಣೆಗೆ ಬರುತ್ತಿದ್ದಾಗ ಪೊಲೀಸ್ ಠಾಣೆ ಗೇಟ್ ನಲ್ಲಿ ದೊಡ್ಡ ಡ್ರಾಮಾ ನಡೆದಿದೆ.
ಈ ನಡುವೆ ಹುಡುಗಿ ಕಡೆಯವರು ಇಬ್ಬರನ್ನೂ ಅಪಹರಿಸಿಕೊಂಡು ಹೋಗಿ ಚೆನ್ನಾಗಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಇದರ ಮಧ್ಯೆ ಮನೆಯವರ ಭಾವನಾತ್ಮಕ ಡ್ರಾಮಾ ಕೂಡಾ ನಡೆದಿದೆ.

ಮನೆಯವರ ಮುಂದೆ ಹುಡುಗಿ ಕೂಡಾ ತಾನು ಹುಡುಗನನ್ನು ಬಿಟ್ಟು ಬರುವುದಾಗಿ ಹೇಳಿದ್ದಾಳೆ ಎನ್ನಲಾಗಿದೆ. ಆದರೆ, ಯಾವಾಗ ಠಾಣೆಗೆ ಕರೆದುಕೊಂಡು ಬಂದರೋ ಹುಡುಗಿ ಉಲ್ಟಾ ಹೊಡೆದಿದ್ದಾಳೆ. ತಾನು ಬದುಕಿದರೂ ಸತ್ತರೂ ರಾಮು ಜತೆಗೇನೇ ಎಂದು ಹೇಳಿದ್ದಾಳೆ. ಈ ಹೇಳಿಕೆಯನ್ನು ದಾಖಲಿಸಿಕೊಂಡ ಪೊಲೀಸರು ಆಕೆಯನ್ನು ಹುಡುಗನ ಜತೆಗೇ ಕಳುಹಿಸಿದ್ದಾರೆ.

ಇದನ್ನೂ ಓದಿ | Attempt to Kidnap | ವಿಜಯಪುರದಲ್ಲಿ ಅಪ್ರಾಪ್ತನ ಅಪಹರಣಕ್ಕೆ ಯತ್ನ

Exit mobile version