Site icon Vistara News

Road Accident: ಸಪ್ತಪದಿ ತುಳಿದ ಹತ್ತೇ ದಿನಕ್ಕೆ ಮಸಣ ಸೇರಿದ ನವ ದಂಪತಿ; ಭೀಕರ ಅಪಘಾತದಲ್ಲಿ ಸಾವು

Newlywed couple killed in road accident in belagavi

ಬೆಳಗಾವಿ: ಜಿಲ್ಲೆಯ ಮೂಡಲಗಿ ತಾಲೂಕಿನ ಹಳ್ಳೂರು ಗ್ರಾಮದ ಬಳಿ ಕಾರು ಹಾಗೂ ಟ್ಯಾಂಕರ್ ಮುಖಾಮುಖಿ ಡಿಕ್ಕಿಯಾಗಿ ನವ ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಭೀಕರ ರಸ್ತೆ ಅಪಘಾತ (Road Accident) ನಡೆದಿದ್ದರಿಂದ ಸಪ್ತಪದಿ ತುಳಿದ ಹತ್ತೇ ದಿನಕ್ಕೆ ನವ ದಂಪತಿ ಮಸಣ ಸೇರಿದ್ದಾರೆ.

ಮಹಾರಾಷ್ಟ್ರ ಮೂಲದ ಇಂದ್ರಜಿತ್ ಮೋಹನ್ ಡಮ್ಮನಗಿ (27), ಕಲ್ಯಾಣಿ ಇಂದ್ರಜಿತ್ ಡಮ್ಮಣಗಿ (24) ಮೃತರು. ನವ ದಂಪತಿ ಶನಿವಾರ ಕಾರಿನಲ್ಲಿ ಬಾದಾಮಿಯ ಬನಶಂಕರಿ ದೇವಿ ದರ್ಶನ ಪಡೆದು ಮರಳಿ‌ ಮನೆಗೆ ತೆರಳುವಾಗ ನಿಪ್ಪಾಣಿ- ಮುದೋಳ ರಾಜ್ಯ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಕಾರು ಹಾಗೂ ಟ್ಯಾಂಕರ್ ಮುಖಾಮುಖಿ ಡಿಕ್ಕಿಯಾಗಿದ್ದರಿಂದ ಇಬ್ಬರೂ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಮೂಡಲಗಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಧಾರವಾಡದ ವೆಂಕಟಾಪುರದಲ್ಲಿ ಬಾಲಕಿ ಮೇಲೆ ಅತ್ಯಾಚಾರ; ಪೋಕ್ಸೊ ಕೇಸ್‌ ದಾಖಲು

ಧಾರವಾಡ: ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ಬಾಲಕಿ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರ (Molestation Case) ಎಸಗಿದ ಪ್ರಕರಣ ನಡೆದಿದೆ. ಮನೆ ಎದುರು ವಾಸವಿರುವ 16 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸೆಗಲಾಗಿದೆ. ಮಾರುತಿ ಕರಿ (30) ಎಂಬಾತ ಈ ಕೃತ್ಯ ಎಸಗಿದ್ದಾನೆ. ವೆಂಕಟಾಪುರ ಗ್ರಾಮದ ಸುಡಗಾಡ ಸಿದ್ದರ ಕಾಲೋನಿ ನಿವಾಸಿಯಾಗಿರುವ ಈತ ಅತ್ಯಾಚಾರ ನಡೆಸಿದ್ದಾರೆ.

ಇದನ್ನೂ ಓದಿ | Cow slaughter : ಕಸಾಯಿಖಾನೆಗೆ ಜಾನುವಾರು ಸಾಗಿಸುತ್ತಿದ್ದ ಕ್ಯಾಂಟರ್‌ ಮೇಲೆ ದಾಳಿ, ವಾಹನದಲ್ಲಿದ್ದ ವ್ಯಕ್ತಿ ಸಾವು

ಬಾಲಕಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿ ಅತ್ಯಾಚಾರ ನಡೆಸಿದ್ದಾನೆ. ಸ್ಟೇಷನರಿ‌ ವ್ಯಾಪಾರಿಯಾಗಿರುವ ಮಾರುತಿ ಈ ದೌರ್ಜನ್ಯ ಎಸಗಿದ್ದಾನೆ. ಬಾಲಕಿ ಪೋಷಕರು ಗರಗ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಆರೋಪಿ ವಿರುದ್ಧ ಪೋಕ್ಸೊ ಅಡಿ ಪ್ರಕರಣವನ್ನು ದಾಖಲು ಮಾಡಿಕೊಳ್ಳಲಾಗಿದೆ.

ಮೊಬೈಲ್‌ನಲ್ಲಿ ಸ್ಟೇಟಸ್‌ ಹಾಕಿ ಆತ್ಮಹತ್ಯೆ ಮಾಡಿಕೊಂಡ ಯುವಕ

ನೆಲ್ಯಾಡಿ: ಯುವಕನೊಬ್ಬ ಮೊಬೈಲ್‌ನಲ್ಲಿ ಸ್ಟೇಟಸ್ (Whatsapp status)ಹಾಕಿ ಮನೆ ಸಮೀಪದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಚ್ಲಂಪಾಡಿ ಗ್ರಾಮದಲ್ಲಿ ಮಾರ್ಚ್‌ 30ರ ಮಧ್ಯರಾತ್ರಿ ನಡೆದಿದೆ. ಇಚ್ಲಂಪಾಡಿ ಗ್ರಾಮದ ಮೊಂಟೆತ್ತಡ್ಕ ನಿವಾಸಿ ರೆನೀಶ್ (27) ಮೃತ ಯುವಕ. ಈತನ ತಂದೆ ಕೆಲವು ವರ್ಷದ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದು ತಾಯಿ ಅನಾರೋಗ್ಯದಿಂದ ಮೃತಪಟ್ಟಿದ್ದರು. ಈತನ ಸಹೋದರ ಮೂರು ವರ್ಷದ ಹಿಂದೆ ಮಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಇದನ್ನೂ ಓದಿ | Drowned in Reservoir: ಶ್ರೀನಿವಾಸ ಸಾಗರ ಜಲಾಶಯದಲ್ಲಿ ಮುಳುಗಿ ಇಬ್ಬರು ಯುವತಿಯರು ಸೇರಿ ಮೂವರ ಸಾವು

ರೆನೀಶ್ ಮನೆಯಲ್ಲಿ ಒಬ್ಬಂಟಿಯಾಗಿ ವಾಸವಾಗಿದ್ದು, ವಿದ್ಯುತ್ ಲೈನ್ ಕೆಲಸಕ್ಕೆ ಹೋಗುತ್ತಿದ್ದ. ಮಾ.30ರಂದು ರಾತ್ರಿ ಪಕ್ಕದ ಉಣ್ಣಿಕೃಷ್ಣನ್ ನಾಯರ್ ಎಂಬುವವರ ಮನೆಯಲ್ಲಿ ಊಟ ಮಾಡಿ, ಕೇರಂ ಆಡಿ ಮನೆಗೆ ಹೋಗಿದ್ದ. ಮಧ್ಯರಾತ್ರಿ 12 ಗಂಟೆ ವೇಳೆಗೆ ಆತ್ಮಹತ್ಯೆ ಮಾಡಿಕೊಳ್ಳುವುದರ ಬಗ್ಗೆ ಮೊಬೈಲ್‌ನಲ್ಲಿ ಸ್ಟೇಟಸ್ ಬರೆದುಕೊಂಡು ಮೊಬೈಲ್ ಸ್ವಿಚ್ಡ್ ಆಫ್ ಮಾಡಿದ್ದ. ಈತನ ಸ್ಟೇಟಸ್ ನೋಡಿದ್ದ ಬೆಂಗಳೂರಿನಲ್ಲಿರುವ ಗೆಳೆಯರು ಉಣ್ಣಿಕೃಷ್ಣನ್‌ರವರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದರು. ಅವರು ರೆನೀಶ್ ಮನೆಗೆ ತಲುಪುವುದರೊಳಗೆ ಆತ ಮರಕ್ಕೆ ನೇಣುಬಿಗಿದುಕೊಂಡಿದ್ದ. ತಕ್ಷಣ ಹಗ್ಗ ಬಿಚ್ಚಿ ಪುತ್ತೂರಿನ ಆಸ್ಪತ್ರೆಗೆ ಕರೆ ತರಲಾಯಿತಾದರೂ ಆ ವೇಳೆಗೆ ಆತ ಮೃತಪಟ್ಟಿದ್ದ ಎಂದು ವರದಿಯಾಗಿದೆ.

Exit mobile version