Site icon Vistara News

NHM Workers Protest: 48 ಗಂಟೆಯೊಳಗೆ ಕೆಲಸಕ್ಕೆ ಹಾಜರಾಗಿ; ಎನ್‌ಎಚ್‌ಎಂ ಒಳಗುತ್ತಿಗೆ ನೌಕರರಿಗೆ ಸರ್ಕಾರ ಎಚ್ಚರಿಕೆ

#image_title

ಬೆಂಗಳೂರು: ಮುಷ್ಕರ ನಿರತ ಗುತ್ತಿಗೆ-ಹೊರಗುತ್ತಿಗೆ ನೌಕರರಿಗೆ ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕರು (NHM) 48 ಗಂಟೆಯೊಳಗೆ ಕೆಲಸಕ್ಕೆ ಹಾಜರಾಗಿ ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಲು ಸಿದ್ದರಾಗಿ ಎಂದು ನೋಟೀಸ್‌ ಜಾರಿ ಮಾಡಿದ್ದಾರೆ.

ಎನ್‌ಎಚ್‌ಎಂ (NHM Workers Protest) ಅಡಿ ಕರ್ತವ್ಯ ನಿರ್ವಹಿಸುತ್ತಿರುವ‌ ಗುತ್ತಿಗೆ-ಹೊರಗುತ್ತಿಗೆ ನೌಕರರು ಕಾಯಂ ಹಾಗೂ ವೇತನ ಹೆಚ್ಚಳ ಮಾಡುವಂತೆ ಒತ್ತಾಯಿಸಿ, ಫ್ರೀಡಂ ಪಾರ್ಕ್‌ನಲ್ಲಿ ನಡೆಸುತ್ತಿರುವ ಪ್ರತಿಭಟನೆ ಮಾ.17ಕ್ಕೆ 33ನೇ ದಿನ ಪೂರೈಸಿದೆ. ಮಣಿಪುರ, ಒಡಿಶಾ, ರಾಜಸ್ಥಾನ, ಪಂಜಾಬ್‌ ಹಾಗೂ ಹಿಮಾಚಲ ಪ್ರದೇಶಗಳಲ್ಲಿ ಈಗಾಗಲೇ ಎನ್‌ಎಚ್‌ಎಂ ನೌಕರರನ್ನು ಕಾಯಂ ಮಾಡಲಾಗುತ್ತಿದೆ. ರಾಜ್ಯದಲ್ಲೂ ಈ ಕೆಲಸ ಮಾಡಬೇಕೆಂದು ಒತ್ತಾಯಿಸಿದ್ದಾರೆ.

ರಾಜ್ಯ ಆರೋಗ್ಯ ಇಲಾಖೆ ಹೇಳುವುದೇನು?

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮವು 2005ರಿಂದ ಜಾರಿಯಲ್ಲಿದ್ದು ಇದು ಕೇಂದ್ರ ಸರ್ಕಾರದ ಪ್ರಾಯೋಜಿತ ಕಾರ್ಯಕ್ರವಾಗಿದೆ. ಇದು Mission Mode Project ಆಗಿರುವುದರಿಂದ ನಿಗದಿಪಡಿಸಿದ ಉದ್ದೇಶ ಹಾಗೂ ಗುರಿಗಳು ಸಫಲವಾದ ನಂತರ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ. ಈ ಬಗ್ಗೆ ಕೇಂದ್ರ ಸರ್ಕಾರವು ತಿರ್ಮಾನಿಸುವುದರಿಂದ ಇದು Time Bound ಕಾರ್ಯಕ್ರಮವಾಗಿರುತ್ತದೆ. ಈ ಯೋಜನೆಯಲ್ಲಿ ಸುಮಾರು 53 ಕಾರ್ಯಕ್ರಮಗಳು ರಾಜ್ಯದಲ್ಲಿ ವಿವಿಧ ಹಂತದಲ್ಲಿ ಜಾರಿಯಲ್ಲಿರುತ್ತವೆ.

ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮದಲ್ಲಿ ಒಳಗುತ್ತಿಗೆ ಆಧಾರದ ಮೇಲೆ 26,943 ಮತ್ತು 3,631 ಹೊರಗುತ್ತಿಗೆ ಒಟ್ಟು 30,574ಕ್ಕೂ ಹೆಚ್ಚು ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಒಳಗುತ್ತಿಗೆ ನೌಕರರ ಸಂಘವು ವಿವಿಧ ಬೇಡಿಕೆಗಳ ಕುರಿತು ಫ್ರೀಡಂ ಪಾರ್ಕ್‌ನಲ್ಲಿ ಮುಷ್ಕರವನ್ನು ಮಾಡುತ್ತಿದ್ದಾರೆ. ಅವರ ಬೇಡಿಕೆಗಳ ಕುರಿತು ಶ್ರೀನಿವಾಸಾಚಾರಿ ವರದಿ ನೀಡಿರುವ ಪ್ರಮುಖ ಬೇಡಿಕೆಯಾದ ವೇತನದಲ್ಲಿ 15% ಹೆಚ್ಚಳ ಮಾಡುವ ಬಗ್ಗೆ ಸರ್ಕಾರವು ಮಾರ್ಚ್‌ 4ರಂದು ಆದೇಶ ಹೊರಡಿಸಿದೆ. ಉಳಿದ ಬೇಡಿಕೆಗಳ ಬಗ್ಗೆ ಪರಿಗಣಿಸುವುದಾಗಿ ಆಶ್ವಾಸನೆ ನೀಡಿದ್ದರೂ ಸಹ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ.

ಆರೋಗ್ಯ ಇಲಾಖೆಯು ತುರ್ತು ಸೇವೆ ಒದಗಿಸುವ ಇಲಾಖೆಯಾಗಿದ್ದು, ಅದರಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಒಂದು ತಿಂಗಳಿನಿಂದ ಪ್ರತಿಭಟನೆಯನ್ನು ಮುಂದುವರೆಸುತ್ತಿದೆ. ಇದರಿಂದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ಧಕ್ಕೆಯುಂಟಾಗಿದೆ. ಆದ್ದರಿಂದ NHM ಸಿಬ್ಬಂದಿ ಪ್ರತಿಭಟನೆಯನ್ನು ವಾಪಸ್ಸು ಪಡೆದು 48 ಗಂಟೆಯೊಳಗೆ ಕರ್ತವ್ಯಕ್ಕೆ ಹಾಜರಾಗಲು ಸೂಚಿಸಿದೆ. ಇಲ್ಲವಾದಲ್ಲಿ ಅವರ ಮೇಲೆ ಅವಶ್ಯಕ ಕಾನೂನು ಕ್ರಮ ಜರುಗಿಸುವ ಕುರಿತು ಎಚ್ಚರಿಕೆ ನೋಟೀಸ್‌ ನೀಡಲು ಸೂಕ್ತ ಕ್ರಮವಹಿಸಲು ಆಯಾ ಜಿಲ್ಲಾ ಆರ್‌ಸಿಎಚ್‌ ಅಧಿಕಾರಿಗಳಿಗೆ ಆದೇಶ ಹೊರಡಿಸಿದೆ.

ಇದನ್ನೂ ಓದಿ: Puneeth Rajkumar: ʼಅಪ್ಪು ಎರಡು ವರ್ಷದ ಮಗುʼ: ನಮಿಸಿದ ಪುನೀತ್‌ ಪುತ್ರಿ, ರಾಘವೇಂದ್ರ ರಾಜ್‌ಕುಮಾರ್‌

ನೋಟಿಸ್‌ಗೂ ಬಗ್ಗುವುದಿಲ್ಲ

ಎನ್‌ಎಚ್‌ಎಂ ನಿರ್ದೇಶಕರ ಎಚ್ಚರಿಕೆ ನೋಟಿಸ್‌ಗೆ ಪ್ರತಿಕ್ರಿಯಿಸಿರುವ ಸಂಘದ ರಾಜ್ಯಾಧ್ಯಕ್ಷ ವಿಶ್ವಾರಾಧ್ಯ ಎಚ್‌ ಯಮೋಜಿ ಅವರು, ʻʻಇಲಾಖೆಯವರು ನೋಟಿಸ್‌ ನೀಡುವುದು ಅವರ ಕರ್ತವ್ಯ. ಅವರು ಕೊಡಲಿ. ಆದರೆ ನಾವು ನಮ್ಮ ಬೇಡಿಕೆ ಈಡೇರಿಸುವವರೆಗೂ ಪ್ರತಿಭಟನೆಯನ್ನು ಮುಂದುವರಿಸುತ್ತೇವೆ. ಈಗಾಗಲೇ ಹಲವು ಜಿಲ್ಲೆಗಳಲ್ಲಿ ಸಂಕಲ್ಪ ಪಾದಯಾತ್ರೆ ನಡೆಯುತ್ತಿದೆ. ಅದನ್ನೂ ಮುಂದುವರಿಸಿದ್ದೇವೆʼʼ ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version