Site icon Vistara News

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ; 3 ಆರೋಪಿಗಳ ಪತ್ತೆಗೆ ನಗದು ಬಹುಮಾನ ಘೋಷಿಸಿದ ಎನ್‌ಐಎ

NIA Notice

ಮಂಗಳೂರು: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ (Praveen Nettaru) ಮೂವರು ಆರೋಪಿಗಳ ಪತ್ತೆಗೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) 2 ಲಕ್ಷ ರೂ. ಬಹುಮಾನ ಘೋಷಣೆ ಮಾಡಿದೆ. ಆರೋಪಿಗಳಾದ ಅಬ್ದುಲ್ ನಾಸೀರ್, ನೌಷದ್‌ ಹಾಗೂ ಅಬ್ದುಲ್ ರಹಮಾನ್ ಸುಳಿವು ನೀಡಿದವರಿಗೆ ನಗದು ಬಹುಮಾನ ನೀಡುವುದಾಗಿ ಎನ್‌ಐಎ ತಿಳಿಸಿದೆ.

ಒಟ್ಟು ಮೂರು ರಿವಾರ್ಡ್ ವಾಂಟೆಡ್ ನೋಟಿಸ್ ಪ್ರಕಟಿಸಲಾಗಿದೆ. ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಚೌಡ್ಲಿ ಕಾನ್ವೆಂಟ್ ರೋಡ್ ನಿವಾಸಿ, ಆರೋಪಿ ನಂ.22 ಅಬ್ದುಲ್ ನಾಸೀರ್, ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಪೊಯ್ಯಗುಡ್ಡೆಯ ನಿವಾಸಿ, ನಂ.23 ನೌಷದ್‌ ಹಾಗೂ ಸೋಮವಾರಪೇಟೆ ತಾಲೂಕಿನ ಕಲಕಂದೂರ್ ಗ್ರಾಮದ ನಿವಾಸಿ, ಆರೋಪಿ ನಂ.24 ಅಬ್ದುಲ್ ರಹಮಾನ್ ಪತ್ತೆಗಾಗಿ ನಗದು ಬಹುಮಾನ ಘೋಷಿಸಲಾಗಿದೆ. ಇವರು ನಿಷೇಧಿತ ಪಿಎಫ್‌ಐ ಸಂಘಟನೆಯ ಸದಸ್ಯರಾಗಿದ್ದಾರೆ.

ಇದನ್ನೂ ಓದಿ | Tiger Nail : ನವಿಲು ಗರಿ ಬಳಸಬಹುದು ಎಂದ ಈಶ್ವರ ಖಂಡ್ರೆ; ದರ್ಗಾ, ಮಸೀದಿಗಳಿಗಿಲ್ಲ ಕಾನೂನು ತೊಡಕು

2022ರ ಜುಲೈ 26 ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರನ್ನು, ಅವರ ಕೋಳಿ ಅಂಗಡಿ ಬಳಿಯೇ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ಪ್ರಕರಣದಲ್ಲಿ ಹಲವರ ಬಂಧನವಾಗಿದ್ದು, ಉಳಿದವರಿಗಾಗಿ ಎನ್‌ಐಎ ಹುಡುಕಾಟ ನಡೆಸುತ್ತಿದೆ.

ರಕ್ತ ಚಿಮ್ಮುವಂತೆ ಗುಂಪುಗಳ ನಡುವೆ ಹೊಡೆದಾಟ ಬಡಿದಾಟ!

ಕಲಬುರಗಿ: ಇತ್ತೀಚೆಗೆ ಗುಂಪು ಘರ್ಷಣೆಗಳು ಹೆಚ್ಚಾಗುತ್ತಿದ್ದು, ಕೆಲವೆಡೆ ಪುಡಿ ರೌಡಿಗಳ ಅಟ್ಟಹಾಸ ಹೆಚ್ಚಾಗಿದೆ. ಕಲಬುರಗಿಯ ಕಮಲಾಪುರ ತಾಲೂಕಿನ ಹರಕಂಚಿ ಗ್ರಾಮದಲ್ಲಿ ಎರಡು ಗುಂಪುಗಳ ಮಧ್ಯೆ ಮಾರಾಮಾರಿಯೇ (Assault Case) ನಡೆದಿದೆ. ಪರಿಣಾಮ ಹರಕಂಚಿ ಗ್ರಾಮದಲ್ಲಿ ಪ್ರಕ್ಷುಬದ್ಧ ವಾತಾವರಣ ನಿರ್ಮಾಣವಾಗಿದೆ.

ಘಟನೆಯಲ್ಲಿ ಜಗದೇವಪ್ಪ ಶಂಕರ ಕ್ವಾಟನೂರ (45) ಎಂಬುವವರು ಗಂಭೀರ ಗಾಯಗೊಂಡಿದ್ದಾರೆ. ಹರಕಂಚಿ ಗ್ರಾಮದ ರೌಡಿಶೀಟರ್‌ ಶಂಕರ ಪರಮೇಶ್ವರ ನಾಯ್ಕೋಡಿ ಹಾಗೂ ಮಾಣಿಕಪ್ಪ ಶಾಮರಾವ ನಾಯಕೋಡಿ ಗುಂಪಿನಿಂದ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ: Husband Torture : ಪತ್ನಿಗೆ ಕಚ್ಚಿ, ಸಿಗರೇಟ್‌ನಿಂದ ಮೈ-ಕೈ ಸುಟ್ಟಿರುವ ಸೈಕೋ ಪತಿ!

ಮೆಹಬೂಬ ಸುಬಾನಿ ಸಂದಲ ನಡೆಯುತ್ತಿದ್ದ ವೇಳೆ ಜಗದೇವಪ್ಪ ಶಂಕರ ಸಹಚರರು ಜಾತಿ ನಿಂದನೆ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಗುಂಪು ಘರ್ಷಣೆ ನಡೆದು ಹಲ್ಲೆ ನಡೆಸಿದ್ದಾರೆ. ಘಟನೆ ಸಂಬಂಧ ಮಹಾಗಾಂವ ಪೊಲೀಸ್‌ ಠಾಣೆಯಲ್ಲಿ 7 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ.

ಚೂರಿ ಇರಿತ, ಮೂವರು ಗಂಭೀರ

ಮಂಗಳೂರು: ಚೂರಿ ಇರಿತದಿಂದ ಮೂವರು ಗಂಭೀರ ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮೆಲ್ಕಾರ್‌ನಲ್ಲಿ ಗುರುವಾರ ರಾತ್ರಿ 9 ಗಂಟೆ ಸುಮಾರಿಗೆ ನಡೆದಿದೆ. ಶಾರದೋತ್ಸವ ವೇಳೆ ಹುಲಿ ವೇಷದ ಎರಡು ತಂಡಗಳ ನಡುವೆ ಗಲಾಟೆ ನಡೆದಿತ್ತು.

ನಂತರ ತಣ್ಣಗಾಗಿದ್ದ ಗಲಾಟೆ ಮುಂದುವರಿದು ಮೂವರಿಗೆ ಚೂರಿ ಇರಿಯಲಾಗಿದೆ. ದೇವದಾಸ್, ಸಂದೀಪ್, ಶಂಕರ್‌ ಎಂಬುವವರು ಗಾಯಗೊಂಡಿದ್ದಾರೆ. ಈ ಮೂವರು ಮೆಲ್ಕಾರ್‌ನ ಬೋಳಂಗಡಿ ನಿವಾಸಿಗಳಾಗಿದ್ದು, ಗಾಯಾಳನ್ನು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ. ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version